Monday, August 20, 2012

ಚರಗಿ ಕಿ ಜೈ ಹೋ



                                                                      ಚರಗಿ ಕಿ ಜೈ ಹೋ





ಅಕ್ಟೋಬರ್ ಒಂದು ೧೯೮೪ ,ಇಂದಿರಾಗಾಂಧಿ ಹತ್ತೆಯಾದ ದಿನ. ನಾನಾಗ ಬಾಗಲಕೋಟೆಯಲ್ಲಿ ಕಲಿಯುತಿದ್ದೆ.  ಕೋಮು ದಳ್ಳುರಿಯಿಂದ ಹೊತ್ತಿ ಉರಿಯಲಾರಂಭಿಸಿತು ಕೋಟೆ ಆಗ. ಒಂದು ವಾರ ಪೂರ್ತಿ ಕರ್ಫ್ಯೂ. ಕರ್ಫ್ಯೂನ ಕರಾಳತೆ ಅರಿವಾದದ್ದೆ ಆಗ. ಆಗಿಗೂ, ಇಗಿಗೂ ಬದಲಾವಣೆ ಬೇಕಾದಷ್ಟಾಗಿದೆ - ಚರಗಿ ತಂಬಿಗೆಗಳು ಹೋಗಿ ಎಲ್ಲೆಡೆ ಸುಲಭ ಶೌಚಾಲಯಗಳು ಬಂದಿವೆ. ನಿಷ್ಕ್ರಿಯ ಮೆದಳು ಸೈತಾನನ ಅಂಗಳವಾದರೆ, ಕ್ರಿಯೆಯಿಲ್ಲದ ಕೈಗಳು ಹಟವಾದಿಯ ಅಂಗಗಳು. ಕಾಲ ಬದಲಾಗಿದೆ -ಕೈ ಕೆಸರಾದರೆ ಬಾಯಿ ಮೊಸರು ಹೋಗಿ ಕೆಸರಾದ ಕೈಯನ್ನೇ ಮೊಸರಲ್ಲಿ ಅದ್ದಿ ಅದನ್ನು ಭೂತಗನ್ನಡಿಯಲ್ಲಿ ತೋರಿಸಿ ಮೊಸರೆ ಕೆಟ್ಟದ್ದು ಎಂದು ತೋರಿಸುವ ಚಟ ಹೆಚ್ಚಾಗುತ್ತಿದೆ. ಸಂತೆಗೆ ಮೂರುದ್ದದ ದಾರ ಹೊಸೆಯುವವರು ಅಗಣಿತರಾಗಿದ್ದಾರೆ, ಇದರಲ್ಲಿ ಎಲ್ಲರೂ ಶಾಮಿಲು - ಮಾಧ್ಯಮಗಳು, ರಾಜಕಾರಣಿಗಳು ಬಿಡಿ ನಮ್ಮಂತೆ ಬರೆದು ತೀಟೆ ತಿರಿಸಿಕೊಳ್ಳುವವರು ಕೂಡಾ. ನನಗನಿಸುವ ಮಟ್ಟಿಗೆ ಇದಕ್ಕಿರುವ ಪರಿಹಾರ ಖಾಲಿ ಕೂತ ಕೈಗಳಿಗೆ ನಿಯತ್ತಿನ ಕೆಲಸ ಕೊಡುವದು. ಕಷ್ಟದ ಒಂದು ಚಿಕ್ಕ ಗೆರೆ ಎಳೆದು ಅದನ್ನು ಕಮ್ಮಿ ಮಾಡುವ ಒಂದು ದಾರಿ ಎಂದರೆ ಅದರ ಪಕ್ಕ ಅದಕ್ಕಿಂತ ಉದ್ದನೆ ಗೆರೆ ಎಳೆಯುವದು. ನಿನ್ನೆ, ಮೊನ್ನೆ ಇಡಿ ಉತ್ತರ ಭಾರತದಲ್ಲಿ ವಿದ್ಯುತ್ತ ಕೈ ಕೊಟ್ಟಾಗ ಯಾರಾದರು ತಮಗೆ ಮಿಸ್ ಆದ ಸಿರಿಯಲ್ಗಳ ಬಗ್ಗೆ , ನೋಡಲಾಗದ ಒಲಿಂಪಿಕ್ಸ್ ಬಗ್ಗೆ, ಕುಡಿಯಲಾಗದ ತಣ್ಣನೆ ನೀರಿನ ಬಗ್ಗೆ ಚಕಾರವೆತ್ತಿದರಾ? ಮುಖ ಗಂಟಿಕ್ಕದೆ, ತಿಣೂಕಾಡದೆ ಇದು ಸಮಸ್ಯಗೆ ಪರಿಹಾರವಾಗಬಲ್ಲದೆ ನೋಡಿ.

ಭಾರತದ ಯಾವುದೊ ಒಂದು ಹಳ್ಳಿ. ಬಾಗಿಲು , ಖಿಡಕಿ ಮುಚ್ಚಿ  ಪಡಸಾಲೆಯಲ್ಲಿ ಕುಳಿತು ಮುಖ ಕಿವುಚುತ್ತಿರುವವನೊಬ್ಬ, ಇನ್ನೊಬ್ಬಾ ಈಗ ತಾನೇ ಎದ್ದಂತಿದ್ದಾನೆ.

ಅಂವ - ಬಂದದ್ರಿ ಸರ.
ಇಂವ - ಬಂದಿದ್ರ ಹೋಗಿ ಬಾರಲಾ.
ಅಂವ- ಇಲ್ರಿ ಸರ ಇವತ್ತ ಬಂದದ್ರಿ.
ಇಂವ - ಇವತ್ತ್ಯಾಕೋ ದಿವಸಾ ಬಂದಿರ್ತದಲ್ಲೋ?
ಅಂವ- ಹೌದು ಬಿಡ್ರಿ ಸರ, ಆದರ ಇವತ್ತ್ಯಾಕೋ ಸ್ಟ್ರಾಂಗ್ ಬಂದದ್ರಿ.
ಇಂವ - ಸ್ಟ್ರಾಂಗ್ ಬಂದಿದ್ರ ಇಲ್ಲ್ಯಾಕೋ ಕುಂತಿ? ಗಡಾನ ಹೋಗಿ ಬಾರಲಾ.
ಅಂವ- ಇಲ್ರಿ ಸರ , ಇವತ್ತಾ ಭಾಳ ಸ್ಟ್ರಾಂಗ್ ಬಂದ ಐತ್ರಿ ಸರ.
ಇಂವ  -ಅಲ್ಲಲೇ ಭಾಳ ಸ್ಟ್ರಾಂಗ್ ಅಂತಿ, ಇಲ್ಲೀ ಮಾಡ್ಕೋತಿ ಏನ ಮತ್ತ? ಹೋಗು ಓಡು.
ಅಂವ- ಅಲ್ರಿ ಸರ ಬಂದ ಅಂದಮ್ಯಾಗ ಹೊರಗ ಹೆಂಗ್ರಿ ಹೊಕ್ಕಿರಿ?
ಇಂವ- ಹೊರಗ ಹೋಗದ ಏನ? ಮನೆ ಒಳಗ ಮಾಡಕೊಂತಿ ಏನ?
ಅಂವ- ಅಲ್ರಿ ಸರ , ಎಷ್ಟ ಸಾರಿ ಹೊಡ್ಕೋ ಬೇಕು - ಹೊರಗ ಬಂದ ಐತ್ರಿ ಸರ್.
ಇಂವ- ಹೊರಗ ಬಂದ ಬಿಡ್ತಾಲೆ ಮಗನ? ಅವ್ವಾಗಿಂದ ಬಡ್ಕೊಳಾಖತ್ತಿನಿ, ಗಡಾನೆ ಹೋಗಿ ಬಾರಲೇ ಅಂತಾ. ಹಿಡ್ಕೊಂಡು ಕುಂದರ್ತಿ. ಪಟಕ್ಕನ ಹೋಗಾಕ ಏನ ಧಾಡಿ ನಿನಗ ಅಂತ?
ಅಂವ- ಹಂಗಲ್ರಿ ಸರ, ಹೊರಗ ಬಂದ ಅಂದ್ರ ಮುಷ್ಕರ, ಮುಷ್ಕರಾ ಐತ್ರಿ ಸರ.
ಇಂವ- ಹೊರಗ ಬರುದು ಮುಷ್ಕಿಲ ಅಂತ ಮನ್ಯಾಗ ಮಾಡ್ಕೋತಿ ಏನಲೇ, ಎಡ್ಡ ವರ್ಷದ ಕೂಸ ಆಗಿಯೆನ ಮಗನ, ಬೇಕಾದರ ಅಮೆರಿಕಾದ ಕೂಸಗೊಳಗತೆ  ಒಂದ್ ಹೆತಗಂಬಳಿಯರ ಸುತಗೋ.
ಅಂವ- ಏ ನಿಮ್ದು, ಅದೇನೋ ಅಂತಾರಲ್ಲಾ - ಯಾವಾಗ್ಲೂ ವಿಚಾರ ಉಲ್ಟಾನ ಹೊಡಿತೈತಿ. ಹೊರಗ ಬಂದ ಅಂದ್ರ 'ಕರ್ಫ್ಯೂ' ಹಾಕ್ಯಾರಿ.
ಇಂವ- ಓ ಆ ಬಂದ ಹೇಳಾಖತ್ತಿ ಏನಲೇ?
ಅಂವ- ಇಷ್ಟೋತನಾ ಅದೇ ಹೆಳಾಖತ್ತಿನಿ ಸರ. ನೀವ ಅವಾಗಿಂದ  ಅಂದ ಅಂದ ನಾ  ಹೇಳಿ ಹೇಳಿ ಇಗ ಖರೇನ ಹೇಲ ಬಂದ ಬಿಡ್ತ ನೋಡ್ರಿ ಸರ , ಏನ್ಮಾಡುದು?
ಇಂವ- ಮಾಡುದೆನ, ನಡಿ ನದಿ ಕಡಿಗ , ಚರಗಿ ತೊಗೊಂಡು , ನಾನ ಬರ್ತೀನಿ.
ಅಂವ- ಅಲ್ರಿ ಬಂದ್ನ್ಯಾಗ ಬಂದ್ರ ಹೆಂಗ್ರಿ ಮಾಡುದು?
ಇಂವ- ಬಂದ ಅಂತೇನ ಬಂದದ್ದು ಹೊಟ್ಯಾಗ ಇಟ್ಕೊಂಡು ಕೂಡಾಕ್ಕಾ ಆಗ್ತದ ಏನಲೇ? ನಡಿಲೆ ಹೊರಕಡಿಗೆ.
ಅಂವ- ಅಲ್ರಿ ಸರ , ಹೊರಗ ಗದ್ದಲ, ಪದ್ದಲ ಸುರು ಆಗಿ ಕಲ್ಲ ಪಲ್ಲ ಬಿಳಾಕತ್ರ ಗತಿ ಏನ್ರಿ ?
ಇಂವ- ಏ ಅದಕ್ಕಾ ಯಾಕ ಇಚಾರ ಮಾಡ್ತಿ? ಅವೇ ಕಲ್ಲಾ ಯೂಸ ಮಾಡಿ ಮುಕಳಿ ಒರಸಿಗೊಂಡ್ರಾಯಿತು ನಡಿ ಅಂತೀನಿ.
ಅಂವ- ಏನ್ಮತಾಡ್ತಿರಿ? ಕಲ್ಲ ತೊಗೊಂಡು ಯ್ಯಾವರ ಕುಂಡಿ ವರಶ್ಗೋತಾನೆನ್ರಿ?
ಇಂವ- ಅಲ್ಲಲೇ, ಅಂಥಾ ಟೈಮ ಬಂದ್ರ , ಕಲ್ಲ ಏನ. ಕಳ್ಳಿ ಕಳ್ಳಿ - ಪಾಪಾಸ ಕಳ್ಳಿ ಯಿಂದೂ ವರಶಗೋಬೇಕಾಗ್ತೈತಿ ನಡಿಲೆ.
ಅಂವ- ಹೋಗಾಕ ಏನ ತಕರಾರ ಇಲ್ರಿ, ಆದ್ರ ಬಂದಗಾಗಿದ್ದು ಬಂದ ಅಂದ ಕುಳ್ಲೇ ಬಂದ ಆಗೈತಿ ನೋಡ್ರಿ.
ಇಂವ- ಏ ಎಷ್ಟ ಅಂಜತಿಲೆ? ಏನ ಅವರಿಗೂ ಬರಂಗಿಲಾ ಏನಲೇ? ಹೊಟ್ಟಿ ಕೊಟ್ಟ ದೇವರನ ಕುಂಡಿನೂ ಕೊಟ್ಟಿರ್ತಾನಲೇ ಎಲ್ಲಾರಿಗೂ.
ಅಂವ- ಇಲ್ರಿ ಸರ , ಅವರದ ಡಾಯೆಟ್ಟು ಗಿಯೆಟ್ಟು ಬ್ಯಾರೆ ಆಕ್ಕೈತ್ರಿ ಸರ, ಅವರು ಉಪಾಸ ಗಿಪಾಸ ಮಾಡಿ ತಡಕ್ಕೊಂತಾರು.
ಇಂವ- ತಮ್ಮಾ ಇಲ್ಲೇ ನೋಡು ನೀ ತಪ್ಪೋದು. ಏನ್ಮಾಡಿದ್ರು ಮುಂಜ ಮುಂಜಾನೆ ಹೋಗಬೇಕು ನೋಡು. ಇಲ್ಲಾಂದ್ರ ಏನ ಕೆಲಸಾ ಮಾಡೋಕು ಸಾಧ್ಯಾ ಇಲ್ಲಾ ಅಂತೇನಿ. ಪರಪಂಚದಾಗ ಏನರ ತಡಕ್ಕೊಬಹುದು, ಇದ ಬಂದ್ರ ಮಾತ್ರ ಡ್ಯಾಮ ಒಡಧಂಗ ನೋಡು. ತಡ್ಯಾಕ ಸಾಧ್ಯನ ಇಲ್ಲಾ. ಅದ ಆಗಿ ಮುಗಿಯೋ ಮಟಾ ಯಾರ ಯಾವದು ಇಚಾರ ಮಾಡಾಕ ಸಾಧ್ಯಾನ ಇಲ್ಲಾ . ನಡಿಲೆ ಇನ್ನಾ ಭಾಳ ಹೊತ್ತು ತರಬೋದು ಬ್ಯಾಡ.
ಅಂವ- ಏನ ಫಜೀತಿ ಮಾಡಸ್ತಿರಿ ಸರ ನೀವು, ಅದೇ ಅದೇ ಮಾತಾಡಿ ತಡಕ್ಕೊಳ್ಳಲಾರಧಂಗ ಮಾಡಿ ಬಿಟ್ರಿ -- ನಡೀರಿ , ಹೋಗುವಾ.
ಇಂವ-  ಅಲ್ನೋಡಲೇ, ಎಲ್ಲಾರೂ ಹ್ಯಾಂಗ ಒಂದಾಗಿ ಸಾಮರಸ್ಯದಲೇ ಕುಂತಾರ - ಅದೇನೋ ಅಂತರಲಾ - ಎಲ್ಲಾರೂ ಒಂದಾಗಿ ನಾವು, ಕುಂತು ಮಾಡಿದಾಗ ಚೆನ್ನು...
ಅಂವ- ಹಾಂ - ಅರಾಮಾತ ನೋಡ್ರಿ ಈಗ. ಅದಕ್ಕ ನಮ್ಮ ಹಿರ್ಯಾರು ಹೇಳಿದ್ದು - ಹೊರಗ ಹೋಗಿ ಎದರಾ ಬದರಾ ಕುಂತ್ರ ಎಲ್ಲಾ ಇಸ್ಸ್ಯುಗಳು ಬಗಿ ಹರಿತಾವ ಅಂತ.
ಇಂವ- ಹೌದಲೇ ಇ ತೊದರೆದ್ದು ಸಮಸ್ಯಾ ಏನ ಅಂದ್ರ ಇದದ್ದಕಿಂತ ಅದರ ನೆರಳ ದೊಡ್ದದ ಮಾಡಿ ತೋರಸ್ತೈತಿ, ಅದಕ್ಕ ಬರೆ ನೆರಳ ನೋಡಿ ಮೂಲಾ ಅಳಿಬ್ಯಾಡದು ನೋಡು.
ಅಂವ, ಇಂವ, ಬ್ಬರು - ಚರಗಿ ಕಿ ಜೈ ಹೋ!

Wednesday, July 25, 2012

ಅಡಿಗರ ರಾಮನವಮಿಯ ಕುರಿತು

ಕೆಂಡಸಂಪಿಗೆಯಲ್ಲಿ ಪ್ರಕಟಿತ-July 25, 2012

ಅಡಿಗ - ರಾಮನವಮಿಯ ದಿವಸ


ಅಡಿಗರ ರಾಮನವಮಿಯ ಕುರಿತು ಅನಿಲ ತಾಳಿಕೋಟಿ    
ಅನಿಲ ತಾಳಿಕೋಟಿ
ಬುಧವಾರ, 25 ಜುಲೈ 2012 (04:22 IST)
(ಚಿತ್ರ: ಕೆ.ಜಿ. ಸೋಮಶೇಖರ)
ಇದು ಕಾವ್ಯ ಅರಿಯುವ ಬಗೆಗಿನ ನನ್ನ ಪ್ರಥಮ ಪ್ರಯತ್ನ. ಮೊದಲು ಕಾವ್ಯ ಕೊಟ್ಟು ಅದರ ಬಗ್ಗೆ ಬರೆಯಬೇಕೋ ಅಥವಾ ಬರೆದು ಕೆಳಗೆ ಕಾವ್ಯ ಕೊಡಬೇಕೋ ಎನ್ನುವದರಿಂದಲೇ ಇದಕ್ಕೆ ನಾನೆಂಥ ಹೊಸಬನೆಂಬುವದು ಗೊತ್ತಾಗುತ್ತದೆ. ನಾನು ಕಾವ್ಯ ಗಂಭಿರವಾಗಿ ಆಸ್ವಾದಿಸಲು ಆರಂಭಿಸಿದ್ದೆ ಇತ್ತೀಚಿಗೆ. ಇದು ನನ್ನದೆ ಪರಿಭಾಷೆಯಲ್ಲಿ ಅಡಿಗರ 'ರಾಮನವಮಿಯ ದಿವಸ' ಕಾವ್ಯವನ್ನು ಹಿಡಿದಿಡುವ ಪ್ರಯತ್ನ. ಪ್ರಯತ್ನ ಒಂದೇ ಫಲ ಕೊಡುವ ಸಾಧನ ಎಂಬ ನಂಬಿಕೆಯಿಂದ ಮಾಡುತ್ತಿರುವ ಅಲ್ಪಮತಿಯ ಪುಟ್ಟ ಹೆಜ್ಜೆ.
ರಾಮನವಮಿಯ ದಿವಸ ಎಂದ ತಕ್ಷಣ ಪುರುಷೋತ್ತಮ ರಾಮನ ಬಗ್ಗೆ ಏನು ಬರೆದಿರಬಹುದು ಎಂಬ ಉತ್ಕಟ ಭಾವತೀವ್ರತೆ ಉಂಟಾಗುತ್ತದೆ. ಕವಿಯೊಬ್ಬನ ಅಸದಳ ಸಾಧ್ಯತೆಗಳ ನೋಟದಕ್ಕಿಸಲು ಮನ ಹವಣಿಸುತ್ತದೆ. ಚೆಸ್ಸ್ ಆಡುವಾಗ ಆಗುವಂತೆ, ಅದು ಎಂದಿಗೂ ಒಂದೇ ನೇರದಲ್ಲಿ, ತಿರುಗಿ ಹೋದ ಪಥದಲ್ಲಿ ಮತ್ತೆ ಮತ್ತೆ ಚಲಿಸಲಾರದು, ಚಲಿಸಬಾರದು. ನನ್ನ ಪರಿಧಿಯಲ್ಲಿ ಹೇಳುವದಾದರೆ ೭೦-೮೦ರ ದಶಕದ ಗಣಕಕ್ರಮ ವಿಧಿಭಾಷೆ -ಫೋರಟ್ರಾನ್ ಅಥವಾ ಪ್ಯಾಸ್ಕಲನಲ್ಲಿದಂತೆ ಒಂದು, ಅದಾದ ಮೇಲೆ ಅದರ ಮೇಲೇ ಅವಲಂಬಿಸಿದ ಇನ್ನೊಂದು ಸರಣಿಯಂತೆ ಹೋಗಲಾರದ್ದು. ಆಧುನಿಕ ತಂತ್ರಾಶದಂತೆ ಹಿಂದೆಮುಂದೆ ಚಲಿಸುತ್ತ ನಮ್ಮ ಮನೋಅಭಿಲಾಷೆಗಳಿಗೆ ಸ್ಪಂದಿಸುತ್ತಾ, ಯಾವದೋ ಭಾವನೆ ಸ್ಪುರಿಸುತ್ತ, ಎಲ್ಲಿಗೆಲ್ಲಿಗೋ ಕೊಂಡೊಯುತ್ತಾ -ಮೇಲೆ, ಕೆಳಗೆ ಜೀಕುತ್ತ -ಮತ್ತೆ, ಮತ್ತೆ ಓದುವಂತೆ ಮಾಡುತ್ತಾ, ಪ್ರತಿಬಾರಿ ಓದಿದಾಗಲೂ ಏನೋ ಒಂದು ಹೊಳಪು ಕಾಣುತ್ತಾ ಕಾಡುವದು- ಒಳ್ಳೆಯ ಕಾವ್ಯ. ಹಾಗೆಯೇ ಪ್ರತಿಯೊಂದು ಶಬ್ದವೂ ಸ್ವಯಂಶಕ್ತಿಶಾಲಿಯಾಗಿ ಮಿಂಚುತ್ತ, ಅಕ್ಕಪಕ್ಕದ ಶಬ್ದಗಳ ಗತಿ, ಆಳವನ್ನು ಹಿಗ್ಗಿಸುತ್ತ -ಒಂದು ಸಂಪೂರ್ಣ ವಾಕ್ಯ ಸ್ಪುರಿಸುವ ವಾಕ್ಯರ್ಥವನ್ನು ಸಾರ್ಥಕ ಮಾಡುತ್ತಾ ಸಾಗಬೇಕು. ಒಂದು ವಾಕ್ಯ, ಇನ್ನೊಂದನ್ನು ಮೇಲೆ ಚಿಮ್ಮುತ್ತ -ಅನುಮೋದಿಸುತ್ತ, ಕೆಳಕ್ಕೆ ನೂಕುತ್ತ -ವಿರೋಧಿಸುತ್ತಾ ಒಂದು ವಾದ್ಯಗೋಷ್ಠಿಯಲ್ಲಿ ಸುಲಲಿತಗೊಂಡಿರುವ ಸಂಗೀತದಂತೆ, ಪ್ರತಿವಾದ್ಯವು ತಾನೇತಾನಾಗಿ ಸ್ವಯಂಪ್ರಕಾಸಿಸಲು ಸಾಧ್ಯವಿದ್ದರೂ, ಇನ್ನೊಂದಕ್ಕೆ ಸಾಥಿಕೊಡುತ್ತಾ -ಅದರ ಮಡಿಲಲ್ಲಿ ಇದು ನಲಿಯುತ್ತ, ಇದರ ಮಡಿಲಿಂದ ಅದು ಧುಮಕುತ್ತಾ ಗಮ್ಯಕ್ಕೆ ತಲ್ಪಿಸುವಂತಿರಬೇಕು. ಕೇಳುಗ ಕಳೆದುಹೋಗುವಂತೆ -ಓದುಗನನ್ನು ಚಕಿತಗೊಳಿಸುತ್ತ ಹೋಗಬೇಕು. ಅದು ಚೆಲುವಾದ ಕಾವ್ಯ.

ರಾಮ ಎಂದಾಕ್ಷಣ ನನಗೆ ಕುತೂಹಲ, ಮನಸು ಆಗಲೇ ಅಸಂಖ್ಯ ತೆರನಾಗಿ ಯೋಚಿಸಲಾರಂಭಿಸುತ್ತದೆ. ರಾಮನವಮಿಯ ದಿವಸ ಎಂದತಕ್ಷಣ ಪುರುಷೋತ್ತಮ ರಾಮನ ಬಗ್ಗೆ ಏನು ಬರೆದಿರಬಹುದು ಎಂಬ ಉತ್ಕಟ ಭಾವತೀವ್ರತೆ ಉಂಟಾಗುತ್ತದೆ. ಒಂದು ಆದರ್ಶದ ಅಭಿಜಾತ ಪುರುಷೋತ್ತಮ- ಇಲ್ಲಿ ಹುಟ್ಟಿನಿಂದ ಕೇಳಿದ, ಓದಿದ ದೇವತೆ, ಅವತಾರದ ರಾಮ. 'ಅಪ್ಪಾ ತಪ್ಪಾಯಿತು, ದೇವರೇ, ನೀನೆ ಎಲ್ಲಾ, ಕಾಪಾಡಪ್ಪ' ಎನ್ನೋ ಅಭಿಪ್ರಾಯದ ರಾಮ. ಇನ್ನೊಂದು ಸ್ವಲ್ಪಕಮ್ಮಿ (ಅಥವಾ ಮೇಲು) ಮಟ್ಟದ್ದು -ವಾಲ್ಮೀಕಿ, ತುಳಸಿದಾಸ, ಕುವೆಂಪು, ಬೇಂದ್ರೆ ಬರೆದಿರಬಹುದಾದಂತಹ ರಾಮ- ಗಾಂಧೀಜಿಯ ಆದರ್ಶದ, ನಮ್ಮೆಲ್ಲರ ಅಂತಿಮ ಗುರಿಯ, ಸಾರ್ಥಕ್ಯದ ರಾಮ. ನನ್ನ ಪರಿಧಿಯಲ್ಲಿ ಇದು ಉಷ್ಣಬಲ ವಿಜ್ಞಾನ (thermo dynamics)ದಲ್ಲಿ 'ಕಾರ್ನಾಟಸೈಕಲ' ಇದ್ದಂತೆ- ಪರಿಪೂರ್ಣತೆಯತ್ತ ಪಯಣಿಸುವ, ಮಾನವ ಮೂಲದ ಉದ್ದೇಶ. ಅದು ತಲುಪಲು ಸಾಧ್ಯವಾಗದೆಂಬ ಅರಿವು ಇದ್ದರೂ, ನನ್ನಿಂದ ಆಗಬಹುದೇನೋ ಎಂಬ ತುಡಿತ. ಸೃಷ್ಟಿಶೀಲತೆಯ ನಮ್ಮ ನಿರಂತರ ಉತ್ಕ್ರಾಂತಿಯ ಪ್ರತಿಪಾದಕತೆ ಇದರಲ್ಲಿ ಇರಬಹುದೇ ಎಂಬ ಆಶೆ.
ಇನ್ನೊಂದು ನ್ಯುರಾನು ಅಷ್ಟರಲ್ಲಿ ಇದು ಈ ಯುಗದ (೫೦, ೬೦ ವರುಷದ ಹಿಂದಿನದ್ದಾದರೂ) ಒಬ್ಬ ಒಳ್ಳೆಯ ವ್ಯಕ್ತಿಯಲ್ಲಿನ ಹುಳಕು ಎತ್ತಿ ತೋರುವಂತಹದೋ? ಎನ್ನುವಂತಹದು- ಪೋಲಂಕಿಯವರ ರಾಮ, ರಾವಣದ ಧಾಟಿಯದೋ ಎಂಬ ಪ್ರಶ್ನೆ. ಅಥವಾ ಗಲಗಲಿ ಪಂಢರಿನಾಥಾಚಾರ್ಯರಂತೆ ವಸ್ತುನಿಷ್ಠವಾದದ್ದೂ? ಮತ್ತೆ ಪ್ರಶ್ನೆ ಪ್ರಶ್ನೆ. ಅಷ್ಟರಲ್ಲಿ ಕೆಳಗೇನೋ ಸದ್ದು, ಎಲ್ಲೋ ರಿಂಗಾಗುತ್ತಿರುವ ಫೋನು. ಮಗನೋ, ಮಗಳೋ? ಆಟವೋ? ಜಗಳಾಟವೋ? ಮಾಡಬೇಕಾದ ಆಕ್ವಾಲು, ಬಿಡಬೇಕಾದ ಇಚಟ, ಕಿತ್ತೊಗೆಯಬೇಕಾದ ಈ ಮೈಭಾರ- ಎಗೆರೆಗರಿ ಬರುವ ಇಂತಹ ನೂರು ಯೋಚನೆಗಳು- ಮನಸು ಅದ್ಭುತ ಎಂದವನ ಮೂರ್ಖತನ, ಮನಸು ಎಂದರೆ ಬೆಳವಣಿಗೆ ಕುಂಠಿತವಾದ, ವಿಕಾಸಪಥದಲ್ಲಿ ಇನ್ನೂ ಎಳಸಾಗಿರುವ ಬಾಬತೋ ಏನೋ? ನಿಜವಾಗಿಯೂ ಮನಸು ಅಷ್ಟು ಮುಂದುವರೆದಿದ್ದರೆ ಸದ್ಯಕ್ಕೆ ಬೇಡವಾದದನ್ನೆಲ್ಲಾ ಒಂದೆಡೆ ಕೂಡಿ ಹಾಕಿ ಬರಿ ಒಂದನ್ನೇ (ಒಂದಕ್ಕೆ ಎಷ್ಟು ನ್ಯುರಾನುಗಳು ಸಾಕು?) ಬಳಸಿ -ಚಕ ಅಂತ ಓದಿ ಮುಗಿಸಿಬಿಡಬಾರದೆ? ನೋಡಿದ ಅಸಂಖ್ಯಾತ ವೈಜ್ಞಾನಿಕ ಕಲ್ಪನಾ ಚಿತ್ರಕಥೆಗಳೆಲ್ಲಾ ನೆನಪಾಗ್ತಾ ಇವೆ. ನವ್ಯಕ್ಕೂ, ಈಗಿನದಕ್ಕೂ ಏನೂ ವ್ಯತ್ಯಾಸ? 'ಪಿತೃಹತ್ಯೆ' ಮಾಡಲೇಬೇಕಾದ ಕವಿಯೊಬ್ಬ, ಅವರೇ ಏಕೆ ಯಾವದೇ ಲೇಖನ, ಲೇಖಕ- ಮನಸಲ್ಲಿದ್ದಿದ್ದನ್ನು ಅಂತೆಯೇ ಬರೆಯಬಲ್ಲನೆ? ಓದುಗನಿಗೆ ತಲುಪಿಸಬಲ್ಲನೆ? ಅಸಲಿಗೆ ನಾನು ಓದುತ್ತಿರುವದಾದರು ಯಾಕೆ? ಇದನ್ನು ಈ ಮುಂಚೆ ಯಾವಾಗಲೋ ಓದಿದ್ದೇನೆ. ಇದರ ಬಗ್ಗೆಯ ಒಳ್ಳೊಳ್ಳೆಯ ವಿಮರ್ಶೆ ಒಳ್ಳೊಳ್ಳೆಯ ವಿಮರ್ಶಕರಿಂದ ಓದಿದ್ದೇನೆ -ಯಾವಾಗಲೋ ಹಿಂದೆ. ಅದರ ಪ್ರಭಾವ ಎಷ್ಟು ಆಗುವದೋ? ಆದರೆ ನನ್ನ ಅಭಿಪ್ರಾಯ ನನಗೆ ಅಲ್ಲವೇ? ಇನ್ನೊಂದು ಇಪ್ಪತ್ತು ವರುಷದ ಮೇಲೆ 'ರಿಟೈರ' ಆದಮೇಲೆ ಓದೋಣವೇ? ಸರಿ ಆಗ ಇನ್ನೊಮ್ಮೆ ಓದಿ, ಮತ್ತೊಮ್ಮೆ ಬರೆದು ನೋಡಬೇಕು ಏನೆನಿಸುತ್ತೋ ಎಂದು. ರಾಮ 'ನವಮಿ' ಏಕೆ? ಗಾಂಧೀಜಯಂತಿ ಎನ್ನುತ್ತೇವೆ ಅಲ್ಲವೇ? ಜಯಂತಿಗೂ, ನವಮಿಗೂ ಸಂಭಂದವಿಲ್ಲ. ಅಂದರೆ ರಾಮ 'ಜಯಂತಿ' ಎನಬಹುದೇ? 'ಸುಮ್ಮಕೂತು, ಓದೋ, ನಿನಗೆ ಓದುದು ಬಿಟ್ಟ ಏನ ಬ್ಯಾರೆ ಕೆಲಸಾ ಹೇಳ್ಯದ?' ಬಾಲ್ಯದ ಅಮ್ಮನ ನೆನಪು. ಅಬ್ಬಬ್ಬಾ- ಮನಸಿನ ಕೊನೆಯ ಕೋಣೆಯ ಕದವಿಕ್ಕಿದೆ. ಈಗ ನಿಮಗರಿವಾಗಿರಬಹುದು ಇದು ಒಬ್ಬ ಅತಿ ಸಾಮಾನ್ಯನ ಪ್ರಯತ್ನ ಎಂದು, ನಿಸ್ಸಂದೇಹವಾಗಿಯೂ ನೀವು ಸರಿ.
ಮೊದಲು ಕವನದ ಮೇಲೆ ಪೂರ್ತಿ ಕಣ್ಣು ಆಡಿಸೋಣ. ೧೧ ನುಡಿ (stanza), ಪ್ರತಿಯೊಂದರಲ್ಲಿ ನಾಲ್ಕು ಸಾಲುಗಳು, ಪರವಾಗಿಲ್ಲ, ದೊಡ್ದದೆನಲ್ಲಾ.
೧. ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ
ಪಾನಕ, ಪನಿವಾರ, ಕೋಸಂಬರಿ;
ಕರಬೂಜಸಿದ್ದೋಟುಗಳ ಹೋಳು, ಸೀಕರಣೆ;
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ;
೨. ಕಾದುಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ-
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು:
ಮಣ್ಣೊಡೆದು ಹಸುರು ಹೂ ಹುಲ್ಲುಮುಳ್ಳು.
೩. ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆ ಹನಿಸೇಕ:
ಅಶ್ವಥ್ಥದ ವಿವರ್ತ ನಿತ್ಯಘಟನೆ;
ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು
ಕಾರ್ಯಕಾರಣದೊಂದ ಪೂರ್ವ ನಟನೆ.
೪. ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್ವಿ ಮಾನವನೇರಿ ಕೊಂಚ ದೂರ
ತೇಲಿಮಣ್ಣಿಗೆ ಮರಳಿ,ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕವಿಕಾರ.
೫. ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯಕೂರ್ಮವರಾಹ ಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈಕಡೆದ ನೋಟ:
೬. ಕೌಸಲ್ಯೆ ದಶರಥರ ಪುತ್ರಕಾಮೇಷ್ಟಿ ಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲಚಕ್ರ
ಆಸ್ಫೋಟಿಸಿತ್ತು ಸಿಡಿತಲೆ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ;
೭. ಬೆಳ್ಳಂಬೆಳಕಿನಲ್ಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಲೆವ ರಾಜಹಂಸ;
ಅಂತರಂಗದ ಸುರಳಿ ಬಿಚ್ಚಿ ಸರ್ಚಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ
೮. ಸಂಕಲ್ಪಬಲದ ಜಾಗರಣೆ; ಕತ್ತಲಿನೆಡೆಗೆ
ಕಣೆ;ದಂಡಕಾರಣ್ಯಕ್ಕೆ ಹಗಲ ದೊಣ್ಣೆ;
ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೆ ಮುಟ್ಟೆನೆ೦ಬುಡಾಫೆ.
೯. ವಿಜೃಂಭಿಸಿತು ರಾಮಬಾಣ; ನಿಜ, ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ;
ಕತ್ತರಿಸಿದರೆ ಬೆಳೆವ; ಬೆಳೆದು ಕತ್ತಿಗೆ ಬರುವ
ಅನಾದಿ; ಕೋದ೦ಡ ದ೦ಡವೂ ಹೀಗೆ ದ೦ಡ;
೧೦. ಅಥವಾ ಚಕ್ರಾರಪ೦ಕ್ತಿ; ಚಕಮಕಿ ಕಲ್ಲನುಜ್ಜುತ್ತ
ಕೂತುಕೊ೦ಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕ೦ಪಿಸುತ್ತ.
೧೧. ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?
೧. ಪಾನಕ, ಕೋಸಂಬರಿ- ತಟ್ಟಂತ ಮನಸು ಬಾಗಲಕೋಟೆಯ ಕೊತ್ತಲೇಶ ದೇವಸ್ಥಾನಕ್ಕೆ ಓಡುತ್ತದೆ. ಪೂಜೆ ಮಾಡುತ್ತಿದ್ದ ಅಪ್ಪನ ನೆನಪು. ಚೈತ್ರ ಮಾಸ, ಶುಕ್ಲ ಪಕ್ಷದ ನವಮಿ- ಒಂಭತ್ತನೇ ದಿನದ 'ಫೀಷ್ಟು' ಅಲ್ಲವೇ? ಸರಿ, ಸರಿ. ಅರ್ಥವಾಗುತ್ತದೆ. 'ವ್ಯಕ್ತಮಧ್ಯ', ಗಡಚಾಗಿದೆ- ಎಲ್ಲಿಯೋ ಓದಿದ್ದು, ಯಾರೋ ಹೇಳಿದ್ದು ಅಲ್ಲವೇ ಅತ್ತ ದೇವರೂ ಅಂತ ಹಿಡಿದುಕೊಳ್ಳದೆ, ಇತ್ತ ಹುಲುಮಾನವ ಎಂದು ಕೊಳ್ಳದೆ- ಸಾಮಾನ್ಯ ರಾಮ ಎಂದುಕೊಳ್ಳುವದು. ಹೌದಾ ಹಾಗೆ ಹೇಳಿದ್ದಾ ಅವರು ಅಥವಾ ನಾನು ಬರಿ ಅಷ್ಟೇ ಅರ್ಥ ಮಾಡಿಕೊಂಡಿದ್ದೆನಾ? ಎಲ್ಲಿ ಹೇಳಿದ್ದು ಅವರು? ಮತ್ತೆ ಯಾವಾಗಲಾದರು ಓದಬೇಕು. ಯಾವ ಬುಕ್ಕ ಅದು- ತರಿಸಬಹುದೇ ಭಾರತದಿಂದ? 'ಇನ್ನೊಮ್ಮೆ ಬುಕ್ಕ ತರಿಸುವದಾದರೆ ನನಗೆ ಹೇಳಬೇಡಾ, ಈಗ ಬ್ಯಾಗೇಜು ತುಂಬಾ ಲಿಮಿಟೆಡ್' ಎಂದು ಹೇಳಿದಾ ಗೆಳತಿ. ಸರಿ ಸರಿ -ಸಾಮಾನ್ಯನೊಬ್ಬನ ಹುಟ್ಟುಹಬ್ಬದ ಆಚರಣೆ -ಮಧ್ಯ ಎಂದಿರುವದಕ್ಕೆ 'ಮಧ್ಯಮ ಪಾಂಡವ', 'ಮಿಡ್ಡಲ ಆರ್ಡರ್ ಬ್ಯಾಟ್ಸ್ಮನ'. ಸರಿ ಹನ್ನೊಂದರಲ್ಲಿ ಒಬ್ಬನಾದರೂ ಸ್ವಲ್ಪ ಪ್ರಮುಖ ವ್ಯಕ್ತಿ ಅನ್ಕೊಳ್ಳೋಣ- ಕೇಕ ಬದಲಿ ಪಾನಕ, ಕೋಸಂಬರಿ ಇತ್ಯಾದಿ. ಕರಬೂಜ, ಸೀಕರಣೆ ಗೊತ್ತು, ಸಿದ್ದೋಟು ಹೋಳು ಮಾಡಿ ತಿನ್ನಬಹುದಾದ ಹಣ್ಣು ಅಷ್ಟು ಸಾಕು -ಕೇಕಿನ ಜೊತೆ ಆರೋಗ್ಯಕರ ಫಲಗಳು ಸರಿಯೇ. ಶಬರಿ- ವಿ. ಸೀತಾರಾಮಯ್ಯನವರ-ಕಾಯುವದನ್ನೇ ಕಾಯಕವಾಗಿಸಿಕೊಂಡು ರಾಮನಿಗಾಗಿ ಎಂದಿನಿಂದಲೋ ಕೂತವಳು. ಮೊದಲನೆಯದು ಪರವಾಗಿಲ್ಲಾ ಅರ್ಥವಾಯಿತು. ನಾನೇನೂ ರಾಮಾಯಣ ಅರಗಿಸಿ ಕುಡಿದಿಲ್ಲ, ವೃತ್ತಿಯಿಂದ ಅಧ್ಯಾಪಕನೋ/ವಿಮರ್ಶಕನೂ ಅಲ್ಲ, ಸಾಧಾರಣನಾದ, ಒಬ್ಬಾ ಅನಿವಾಸಿ ಸಾಫ್ಟ್ವೇರ್ ಇಂಜಿನಿಯರ್. ಮುಂದೆ ನೆಗೆಯೋಣ.
೨. ನೆಲದೊಳಗೆ ಅಡಗಿ ಕುಳಿತ ಕಿಡಿ, ಅಂಥಿಥದಲ್ಲಾ ಮೂಲಭೂತವಾದ, ಪ್ರಾಥಮಿಕ ಜೀವಧಾತುವಿನಿಂದಾದದು. ಮೊನ್ನೆ ತಾನೇ ಓದಿದ ತೊಲ್ಪಾಡಿಯವರ ಮೂಲಾಧಾರ, ಸಹಸ್ರಾರದ ಸುಂದರ ವ್ಯಾಖ್ಯಾನಗಳು -ಬರೆದಿಟ್ಟಿದ್ದು ತೆರೆದು ನೋಡಬೇಕು. ಕುಂಡಲಿನಿ, ಯೋಗಕ್ಕೆ ಸಂಬಂಧಿಸಿದ್ದು. ಚಿನ್ಮಯಾನಂದದ, ಪರಮಸುಖದ, ಕಲ್ಯಾಣಕರ ಹೊಳಹು. ಮೇಲಕ್ಕೆ ಹರಿದು ಹೋಗುವ ಚೈತನ್ಯ. ಎಲ್ಲೆಡೆ ಚಾಚಿರುವ ಅದ್ಭುತ, ರಮ್ಯ ಶಕ್ತ ತರಂಗದ ಕ್ಷೇತ್ರ. ಎಂದೋ ಕೂತ ಬೀಜ, ಅಂಕುರಗೊಂಡು -ಜಗನಿಯಮ ಪಾಲಿಸಲು ಹೊರಬಂದಿದ್ದು -ಹುಲ್ಲು ಮುಳ್ಳು ತದ್ಭವ ವಸ್ತುಗಳಿವು. ಸೀತೆಯ ಬಗ್ಗೆ ಹೇಳುತ್ತಿದ್ದಾರೆಯೇ? ಯಾಕೋ ಸಂದೇಹ ಒಂದು ರೌಂಡು ಪೂರ್ತಿ ಕವನ ಮತ್ತೊಮ್ಮೆ ಓದಿದೆ. ಸಿಕ್ಕು ಸಿಗದಂತಹ ಸಾಲುಗಳು- ಸವಾಲುಗಳು ಬೇಕಿಲ್ಲದಿದ್ದರೆ 'ನಕ್ಷತ್ರ' ಓದಬಹುದು -ನಿರ್ಧರಿಸಿಯಾಗಿದೆ ಅದಕ್ಕಿಂತ ಮೇಲಾಗಿ ಏನೋ ಖುಷಿಯಾಗುತ್ತಿದೆ. ಪರಿಪೂರ್ಣ ವ್ಯಕ್ತಿಯ ಉಲ್ಲೇಖಕ್ಕಾಗಿ ಬಳಸುತ್ತಿರಬಹುದೇ? ವಿಶ್ವಮಾನವ-ಪುರುಷೋತ್ತಮ.
೩. ಮಳೆ ಹನಿ, ಅಂದುಕೊಂಡತೆ ಇದೆ. ಅಶ್ವಥ್ಥ ಹೆಮ್ಮರ. 'ಓ ಮಳೆ, ಮಳೆ ದೇಹದೊಳಗೆ ಪ್ರಾಣವಾಗೋ ಹೂವಿನಾ ಮಳೆ'. ಕಿಡಿ ಆದಮೇಲೆ ಮಳೆ ಸ್ವಲ್ಪ ಸ್ವಲ್ಪ ತಿಳಿಯುತ್ತಲಿದೆ. ಇದು ನಿತ್ಯದ ಘಟನೆಯಾದರೂ ಚಿರನೂತನ. ಗೊಮ್ಮಟೇಶನ ಪ್ರತಿಮೆ. ಅಪ್ರತಿಮ ತ್ಯಾಗದ, ದೃಢತೆಯ, ಅಚಲತೆಯ ಸಂಕೇತ. ಕಾರ್ಯ-ಕಾರಣ, ನಿಸ್ಸಂದೇಹವಾಗಿಯೂ ದಿನಯೂ ಘಟಿಸುವದಲ್ಲಾ -ಇದು ಅಪುರ್ವಾ -ಮುಂದೆ ಬರಲಿರುವದ್ಯಾವದಕ್ಕೋ ತಳಕು ಹಾಕಿಕೊಂಡಿರುವದು. ಪುರುಷೋತ್ತಮನಿಗೆ ಸಾಟಿಯಾದದು. ನಿತ್ಯ ಘಟನೆಯಾಗುವದು ಯಾಕೆ ಅಪೂರ್ವ ನಟನೆ? ಅಲ್ಲದೆ ಮತ್ತೇನು! ಶಿಲಿಂಧ್ರವೊಂದು, ಇರುವೆಯ ನೆತ್ತಿ ಒಡೆದು ತನ್ನ ಬದುಕು ಕಟ್ಟಿಕೊಳ್ಳುವದು -ಘಟನೆಯೋ?ನಟನೆಯೋ? ಎಷ್ಟಿಲ್ಲಾ ಇಂತಹ ಬೆರಗುಗಳು ಜಗದಲ್ಲಿ.
೪. ಅಂತೂ ನಾಲ್ಕನೆಯದ್ದೂ ಒಮ್ಮಿಂದೊಮ್ಮೆಲೆ ಜೆಟ್, ರಾಕೆಟ್ಟ ಎನ್ನುತ್ತಿದೆ. ಇದು ನನಗೆ ಸುಲಭವಾಗಲೇ ಬೇಕು- ಇಷ್ಟು ದಿನ ಯಂತ್ರ-ತಂತ್ರ ಶಾಸ್ತ್ರ ಓದಿದ್ದೇನು ಬರಿ ತಮಾಷೆಗಾ? ಒಂದೊದೆ ಕಳಚುತ್ತಾ, ಭಾರ ಕಮ್ಮಿ ಮಾಡಿಕೊಳ್ಳುತ್ತ ಹೋಗುತ್ತಿರುವದು. ಮಾನವನ ಅಪ್ರತಿಮ ಸಾಧನೆ. ಅಂತರಿಕ್ಷ  ಅಂತಿಮ ಸರಹದ್ದು ಅಲ್ಲವೇ? ನಮ್ಮೆಲ್ಲಾ ದೇವರುಗಳ ರೆಸಿಡೆನ್ಸ ಅಲ್ಲಿಯೇ ಅಲ್ಲವೇ? ಅಂತಹದು ನೆಲಕ್ಕೆ ತೆಕ್ಕೆ ಬೀಳುವದು -ಅದರಲ್ಲಿ ಉನ್ನತಿ ಕಾಣುವದು. ಬಾಲದಲ್ಲಿ ಉರಿ ಉಗಳುತ್ತಾ, ಕೆಟ್ಟ ಕಾಮನೆಗಳನ್ನು ಸುಡುತ್ತಾ ಮೇಲೆ ಮೇಲೆ ಚಿಮ್ಮುವದು. ಮೇಲಿನ ಮೋಡದ ಸಹಸ್ರಾರಕ್ಕಿಗ ಅರ್ಥ ಹೊಳೆಯುತ್ತಿದೆ. ಚಂದ್ರನಿಗೆ ಹೋಗಿ ತಲುಪಿ ತೆಜೋಪುಂಜನಾಗು, ಅತಿ ಬೇಡಾ ಆದೀತು ವಿಕಾರಾ. ಪರವಾಗಿಲ್ಲಾ ಚಿತ್ರ ಸ್ವಲ್ಪ ಸ್ವಲ್ಪವಾಗಿ ನಿಚ್ಚಳವಾಗುತ್ತಿದೆ. ರಿಧಮ್ಮಿಕ್ಕಾಗಿ ಈಜಾಡುತ್ತಿರುವ ಅನುಭವ.
೫. ಐದನೆಯದಕ್ಕೆ ಹೋಗೋಣ. ಈಗ ರಾಕೆಟ್ಟಿನಿಂದಾ ವೇದೋಪನಿಷದಿಗೆ ಲಂಗೆ. ಮತ್ಸ್ಯಕೂರ್ಮವರಾಹಾದಿ ಅವತಾರಗಳಿಂದ ಹಂತ ಹಂತವಾದ ಲೋಕ ವಿಕಾಸ ಅಲ್ಲವೇ? ಏಳನೆಯವನಲ್ಲವೇ ಶ್ರೀ ರಾಮಾ? ತ್ರೇತಾಯುಗದ ಬೆಳವಣಿಗೆ ವಾಮನನಿಂದ, ಪರಶುರಾಮನಾಗಿ ಮೈ ತಳೆದ ರಾಮ. ಭವ್ಯ ಸಂಸ್ಕೃತಿಗೆ ಬುನಾದಿಯಾದ ಬೆಳವಣಿಗೆಗಳು.  ಹಿಂದುರುಗಿ ನೋಡಿ ಅಥವಾ ದುರ್ಬಿನು ಹಿಡಿದು ನೋಡಿದರೂ ಮೆಚ್ಚಲೆಬೇಕಾದ, ಮೆಲುಕು ಹಾಕಲೇಬೇಕಾದ ವ್ಯವಸ್ಥಿತ ಬೆಳವಣಿಗೆಗಳಿವು. 'ಹುತ್ತಗಟ್ಟಿದ' -ಇಲ್ಲಿವರೆಗೂ ಏನೋ ಬರಬೇಕಾಗಿದ್ದು ಇದೇನಾ? ಅಲ್ಲಾ, ಇದು ಅತಿ ಸುಲಭ -ಹುತ್ತದಲ್ಲಿ ಕೂತ್ತಿದ್ದವನು ವಾಲ್ಮೀಕಿ ,ಕಾವ್ಯದಲ್ಲಿ ಅವನ ಬರುವು,ಇರುವು -ತಿರುವಲ್ಲವೇ ಅಲ್ಲಾ. ಆತ ಕಡೆದ ಮೂರ್ತಿ ರಾಮ. ವಾಲ್ಮಿಕೆಯ ನಿರ್ಮಾಣ, ಸೃಷ್ಟಿ, ಕೊಡುಗೆ ಈ ಧರೆಗೆ. ಮೇಲೆ ಹೇಳಿದ ಗೊಮ್ಮಟ್ಟನಿಗೆ ಸಿಕ್ಕಿತು ಇಗೊಂದು ನೆಲೆ.
೬. ಚೆನ್ನಾಗಿ ಹೋಗ್ತಾ ಇದೆ ಆದರೂ ಏನೋ ತಿಳಿಯದ, ಯಾಕೋ ಇನ್ನೂ ಏನೋ ಬರಬೇಕಾದದ್ದು ಬಂದಿಲ್ಲ ಎಂಬ ಭಾವನೆ. ರಾಮನ ಜನನ, ಯಾಗ ಮಾಡಿ ಪಡೆದುಕೊಂಡದ್ದು. ಇದೇನಾ ಸ್ಪೆಷಲ್ಲು? ಇಲ್ಲಾ, ಆ ಕಾಲದಲ್ಲದು ಸಾಮಾನ್ಯ. ಎಲ್ಲಾ ಮಹಾತ್ಮರ ಹುಟ್ಟಿನ ಹಿಂದು ಏನನ್ನು ಕಲ್ಪಿಸಬಹುದು. ಇಲ್ಲೇನು ಆಕಾಶ ಗರ್ಭ ಸೀಳಿ, ದೇವನ ನುಡಿ ಮೊಳಗಿ ರಾಮ ಭುವಿಗೆ ಅವತರಿಸಲಿಲ್ಲ. ರಾಮನ ಹುಟ್ಟು ಸರ್ವ ಸಾಮಾನ್ಯ ಆ ನಿಟ್ಟಿನಲ್ಲಿ. ಹಠಾತ್ತಾಗಿ ತಾಗಿದ್ದೇನು? ಅಂದರೆ ಸಾಮಾನ್ಯ ರಾಮ ರಾಮನಾದದ್ದು ಯಾವದೋ ಘಟನೆಯಿಂದ ಕಾಲಚಕ್ರದ ಗತಿಯಲ್ಲಿ. ಮತ್ತೆ  ರೋಕೆಟ್ಟಿನ ಮರುಕಳಿಕೆ- ಈ ಬಾರಿ ಮೇಲೆ ಮೇಲೆ ಹೋದ ವಿವರಣೆ ಅಲ್ಲಾ. ಒಂದು ಬಿರುಸಿನ ಕುಳ್ಳಿಯಲ್ಲಿ ಎಲ್ಲಾ ಮದ್ದನ್ನು ತುಂಬಿ, ಬತ್ತಿ ಸಡಿಲಿಸಿದ್ದಾಗಿದೆ-ಸಿಡಿಯಬೇಕಷ್ಟೇ. ತೇಜಃಪುಂಜವಾದ ಆಸ್ಪೋಟ. ಮಣ್ಣು ಎಂದಾಕ್ಷಣ ಸೀತೆಯೇ? ಮಣ್ಣು ಮತ್ತೆಲ್ಲವೂ ಅಲ್ಲವೇ? ಮಣ್ಣಿಗಾಗಿಯೇ ಅಲ್ಲವೇ ನಮ್ಮೆಲ್ಲಾ ಹೋರಾಟ? ಆದಿ ಮಾನವನಿಂದ ಹಿಡಿದು -ಅಲೆಕ್ಷಾ೦ಡರನ ದಾಟಿ. ಶಿವಧನಶು ಮುರಿದ ರಾಮ ಸೀತೆಯ ಪಡೆದು ಶ್ರೀರಾಮನಾಗಿದ್ದು, ಈ ನೆಲದ, ಸಾಂಸ್ಕೃತಿಕ ಗಟ್ಟಿತನದ ಪ್ರತೀಕ. ಮೋಹನದಾಸನಲ್ಲಿ ಸ್ವಾತಂತ್ರ್ಯದ ಮೂಲಭೂತ ಹೊಕ್ಕಿ ಮಹಾತ್ಮನಾಗಿಸಿದ ಬಗೆ. ಮೇಲೆಲ್ಲೋ ತೇಲಾಡಿ ಆಸ್ಪೋಟಿಸಿದ ರೋಕೆಟ್ಟಲ್ಲಾ ಇದು- ಇಲ್ಲಿಯೇ ಭೂಮಿಯ ಮೇಲೆ ಸಾಮಾನ್ಯವಾಗಿ, ಸರಳವಾಗಿ ಹೊರಟಿದ್ದು ಸಡನ್ನಾಗಿ ಮೂಲದ ಸೆಳೆತದಲ್ಲಿ, life, liberty, pursuit of happiness ನಂತೆ ಸ್ಥಳಾಂತರಿಸಲು ಶಕ್ಯವಿಲ್ಲದ ಋಜು (inalienable right) ನಂತೆ ಗಟ್ಟಿಯಾಗಿದ್ದು ಅಂಟಿಕೊಂಡಾಗ ಬೆಳೆದ ವಿಶ್ವಮಾನವತೆ, ಮಹಾಪುರುಷನ ಪ್ರಥಮ ಬೆಳವಣಿಗೆ.
೭. ಇದೀಗ ಮುಂದುವರಿಯಲೇ ಬೇಕು. ನೂರಾರು ಹಾಯಿದೋಣಿಗಳು ಅಸ್ತವ್ಯಸ್ತವಾಗಿ ಬಿದ್ದಿವೆ ಕಡಲ ಮಡಿಲಲ್ಲಿ. ರಾಜಹಂಸನ, ಪರಮಹಂಸನ ಅಗತ್ಯವೀಗ. ಮೇಲಿನ ಸಹಸ್ರಾರ, ಮೂಲಾಧಾರಕ್ಕೀಗ ಆಧ್ಯಾತ್ಮದ ಹಂಸನ ಆಗಮನ. ಅಸತ್ಯದಿಂದ, ಸತ್ಯವನ್ನು ಎಳೆದು ತೆಗೆಯುವ, ಶೋಷಕರನ್ನು, ಸುಲಿಯುವರನ್ನು, ವಂಚಕರನ್ನು ಬಗ್ಗಿಸುವ, ಬಗ್ಗಿಸಲೆಬೇಕಾದ, ನಿತ್ಯ ನಿಯಮಗಳನ್ನು ಮತ್ತೆ ಮತ್ತೆ ನಿರ್ವಹಿಸುವ ಅಗತ್ಯತೆ. ಕೊಳೆತು ಹೊಗುತ್ತಿರುವ ಸಮಾಜ, ಮಲಿನವಾಗುತ್ತಿರುವ ಮನಸುಗಳು, ಅಸತ್ಯದ ಕೊಡೆಯಾಸರೆಯಲ್ಲಿ ನಲಗುತ್ತಿರುವ, ನಡಗುತ್ತಿರುವ ಸತ್ಯದ ಬಿಡುಗಡೆ. ಕಲಬೇಡಾ, ಕೊಲಬೇಡಾ, ಹುಸಿಯ ನುಡಿಯಬೇಡಾ ಎಂಬಂತಹ ಶುದ್ಧಿ, ಅಂತರಂಗಕ್ಕೂ ಹಾಗು ಬಹಿರಂಗಕ್ಕೂ. ಇದನ್ನು ಹುಡಕುವದು ಸುಲಭದ್ದೆ? ಬೇಕಿದಕೆ ಸರ್ಚ್ಲೈಟನಂತಹ ಅಂತಃಚಕ್ಷು. ಇದೆ ರಾಮನ ಕಥೆ. ಸತ್ಯಕ್ಕಾಗಿ, ನಂಬುಗೆಗಾಗಿ ಹೋರಾಟ. ಹುಡುಕಬೇಕು, ಕೇಳಬೇಕು ಸತತ -ಸಿಗುವುದಾಗ ನಿನಗ ಎನ್ನುತ್ತಾನೆ ಮ್ಯಾಥ್ಯು ಹಳೆಯ ಒಡಂಬಡಿಕೆಯಲ್ಲಿ. ಕಟ್ಟಬೇಕು ಸೈನ್ಯ, ಬಡಿದಾಡ ಬೇಕು, ಬೆಳೆಸಬೇಕು ಸುವ್ಯವಸ್ಥೆಯ.
೮. ಮನಸು ಮಾಡಬೇಕು. ಸತ್ಯ ಏನೆಂದು, ಹೋರಾಟ ಏಕೆಂದು ಅರಿವಿರಬೇಕು. ಬದಲಾವಣೆ ಏಕೆಂದು ಗೊತ್ತಿದ್ದರೆ ಬದಲಾದ ಮೇಲೂ, ಮತ್ತೆ ಮತ್ತೆ ಬದಲಾದುದೇಕೆಂದು ಬವಣಿಸಬೇಕಾಗಿಲ್ಲಾ. if men were angeles ಎಂದ ಮ್ಯಾಡಿಸನ ಮಾತು ನೆನಪಿರಬೇಕು -ಅದಕ್ಕೆ ಸಂಕಲ್ಪ ಬೇಕು, ದೃಢತೆ, ನಂಬಿಕೆ ಭದ್ರವಾಗಿರಬೇಕು. ಜಾಗರಣೆ ಎಂದರೆ ಎಚ್ಚರದ ಸ್ಥಿತಿ. ಹೋರಾಟ, ಜಯ ಒಂದು ನಿಟ್ಟಿನಲ್ಲಿ ಸುಲಭ. ಅದನ್ನು ಇಟ್ಟುಕೊಳ್ಳುವದು ಕಷ್ಟ. 'ಇಟ್ಟುಕೊಳ್ಳಲು ನಿಮ್ಮಿಂದ ಸಾಧ್ಯವಾದರೆ ನಿಮಗೆ ಸಿಕ್ಕೀತು ಗಣತಂತ್ರ' ಎಂದ ಫ್ರಾಂಕ್ಲಿನನ ಉತ್ತರದಂತೆ. ನಾಲ್ಕು ಗೋಡೆಯುರಳಿಸಿ, ನಾಕೆಂಟು ಜನರ ಹತಮಾಡಿ ಪಡೆವ ಸರಳ ವಿಜಯವಲ್ಲವಿದು. ಅತಿ ಭಯಂಕರ ಕತ್ತಲೆಯ ಸೋಲಿಸುವ ಯತ್ನವಿದು. ಅದಕ್ಕೆ ಬಲವಾದ ಕಾರಣ ಬೇಕು- ಅದಕ್ಕಿಂತ ಮಿಗಿಲಾಗಿ ಒಳತಿನ ನಂಬುಗೆ ಬೇಕು. ಉತ್ತುವ ಮಣ್ಣನ್ನೇ ಕದ್ದೊಯುವವರ, ಭೂದೇವಿಯ ಮಗಳ ಮೈ ಬಯಸುವವನ ಊರಿಗೆ ಕೊಳ್ಳಿ ಹಚ್ಚುವ ಹುಮ್ಮಸ್ಸು ಬೇಕು. ಇಲ್ಲಿ ಬರಿ ನನ್ನ ವಸ್ತು ಕದ್ದೊಯ್ದ ಅದಕೆ ಶಿಕ್ಷೆ ಕೊಡಬೇಕು ಎಂಬ ಇರಾದೆಯಿಲ್ಲಾ. ಆ ಕತ್ತಲೆಯನ್ನು ತೊಡೆದು ಹಾಕಬೇಕು ಎಂದೆಂದಿಗೂ, ಮತ್ತೆಂದು ಚಿಗುರದ ಹಾಗೆ -ಇನ್ನೊಮ್ಮೆ, ಇನ್ನೊಬ್ಬ ಆ ಬಗ್ಗೆ ಯೋಚಿಸದ ಹಾಗೆ ಮಾಡುವಂತೆ ಭಯಂಕರ ಶಿಕ್ಷೆ. ಸತ್ಯದ ಜಯ ಅದು ಅನಾದಿ, ಅಮಲು ಇತ್ತೀಚಿನದು. ಗೆದ್ದ ಮೇಲೆ ಬರುವ ದರ್ಪ, ಮರೆತುಹೋಗುವ ಆದರ್ಶಗಳು ಅಥವಾ ಬದಲಾಗುವ ನಿಯಮಗಳು. ಯಾರದೋ ಮಾತು-ಹೋರಾಟ ಮಾಡಿದ ಮೂಲ ಕಾರಣವೇ ಮರೆಯಾಗಿ ವಿಜೃಂಭಿಸುವ ಬೌದ್ಧಿಕ ದಿವಾಳಿತನ. ಯಾವ ಯಾವದೋ ತೆವಲಿಗೆ ತೆಕ್ಕೆ ಬಿದ್ದು, ಪ್ರಾಣ ಪಣವಿಟ್ಟು ಹೋರಾಡಿದ ಮೌಲ್ಯಗಳ ಮರೆತು ಬಿಡುವ ಚಟ.
೯. ರಾಮನ ಗೆಲವು ಶತಸಿದ್ದ. ಅದು ಸೃಷ್ಟಿ ನಿಯಮ. ಆದರೆ ಆದರೆ ಅಡಿಗರ ಗುರು ಬೇಂದ್ರೆ ಒಂದೆಡೆ ಹೇಳುತ್ತಾರೆ. ಬೆಳಕಿನ ಒಂದು ಸಣ್ಣ ಚುಕ್ಕೆ ಸಾಕು ಕತ್ತಲೆಯನ್ನು ದಿಕ್ಕೆಟ್ಟು ಓಡಿಸುವದಕ್ಕೆ, ಆದರೆ ಕತ್ತಲೆಯನ್ನು ಸೋಲಿಸ ಹೋಗುವದು ಬೆಳಕಿನ ಹುಂಬತನ -ಶತ ಶತಮಾನ ಕಳೆದರು ಕತ್ತಲೆಯನ್ನು ಸೋಲಿಸಲು ಬೆಳಕಿನ ಪ್ರಯತ್ನ ವ್ಯರ್ಥ. ರಕ್ತ ಬೀಜಾಸುರನಂಥಹದು ಕತ್ತಲೆಯ ಕಂದರು. ನೂರೆಂಟು ಟಿಸಿಲೊಡೆದು, ಪರಿವರ್ತಿತರಾಗಿ, ವಿಕಾರ ರೂಪಾಂತರ ಹೊಂದಿ ಅಸಂಖ್ಯ ರೂಪದಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಲೇ ಇರುವಂಥದು. ಸತ್ಯ, ಧರ್ಮಗಳ ತತ್ವಗಳೆಲ್ಲಾ ಕಾಲಕ್ಕೆ ತಕ್ಕಂತೆ ಬದಲಾಗಿ, ವ್ಯವಸ್ಥೆ ಸಮತೂಕ ಸ್ಥಿತಿಯಿಂದ ದೂರ ದೂರ ಸರಿಯುತ್ತ ಇನ್ನೆಲ್ಲೋ ಕೇಂದ್ರವನ್ನು ನೂಕುತ್ತಾ ಮತ್ತೊಂದು ವ್ಯವಸ್ಥೆಗೆ ನಾಂದಿಯಾಗುವದು. ಪರಿಪೂರ್ಣತೆ ಎಂಬುವದೆ ಅಸಂಭವ, ಅದು perpetual motion machine ನಂತೆ ಎಂದಿದಿಗೂ ಮುಟ್ಟಲಾಗದ್ದು- ಮುಟ್ಟಿದರೆ ಮುಂದೇನು ಎಂಬುವದು ಅದಕ್ಕೆ ಕಾರಣವಲ್ಲದಲ್ಲಾ. ಇದು ಮಾತ್ರ ನಿತ್ಯ ಸತ್ಯ. ಸಾವು, ನೋವು ಎಷ್ಟು ಸತ್ಯವೋ ಅಷ್ಟೇ ಸತ್ಯ ಗೊಲವಿರುವರೆಗೂ -ಗೋಳುಹೊಯ್ಯುಕೊಳ್ಳುವವರು ಇರುವದು. ರಾವಣನೋ, ಹಿಟ್ಲರನೋ, ಲಾಡೆನೆನ್ನೋ ಯಾವದೋ ಒಂದು ರೂಪಾ. ಒಳ್ಳೆಯ ಅವತಾರವಾಗಬಹುದಾದರೆ ಕೆಟ್ಟದ್ದು ಆಗಲೇಬೇಕು -ಅದು ಜಗ ನಿಯಮ. ಇಲ್ಲದಿದ್ದರೆ ತಂಬು, ಟೆಂಟು ಕಿತ್ತೊಗೆದು -ಕಪ್ಪುರಂದ್ರವಾದೆವು ನಾವು. ಆಯಾ ರೋಗಕ್ಕೆ ಅದೇ ಮದ್ದು ಬೇಕಾದಂತೆ ಆಯಾ ಕಾಲಕ್ಕೆ ಅವೇ ಬಾಣಗಳು ಬೇಕು. ರಾಮಬಾಣ ಈಗಿನ ನಮ್ಮ ಹೊಲಸು, ಗಬ್ಬೆದ್ದು ಹೋಗಿರುವ ಭ್ರಷ್ಟ ವ್ಯವಸ್ಥೆಗೆ ಯಾವದಕ್ಕೂ ಸಾಲದು. ಆ ಬಾಣದ ಮೊನೆಯ ಮೇಲೆ ಬೆಳೆದು ನಿಂತ ಕ್ರೂರಿಗಳಿವರು, ವಿಷ ಕುಡಿದು, ಕುಡಿಸಿ ತೃಪ್ತರಾಗಿ ಬಿಗುತ್ತಿರುವವರಿಗೆ ಬೇಕು ಮತ್ತೊಂದು ಅವತಾರ ಅಥವಾ ಆವಿಷ್ಕಾರ.
ಇಲ್ಲಿಯವರೆಗೂ ನನಗೆ ಇದು ಅದ್ಭುತವಾದರೂ, ಏನೋ ಮಿಸ್ಸಿಂಗು. ಅದೇ ಸಂಭವಾಮಿ ಯುಗೇ ಯುಗೇ ಎಂದವನ ಬರುವಿನ ನಿರೀಕ್ಷೆಯೇ? ಇದನ್ನು ಸಾವಿರ ಸಾವಿರ ಸಾರಿ, ನೂರಾರು ಕವಿಗಳು ಹಾಡಿ, ಹರಸಿ ಆಗಿದೆ. ಇನ್ನೂ ಪಂಚ ಲೈನ್ ಬಂದಿಲ್ಲವೇ?
೧೦. ಇಲ್ಲಿ ಅಪ್ರತಿಮ ಕೊಂಕಿದೆ. ಹೆಪ್ಪುಗಟ್ಟಿದ ನೋವಿದೆ. ಅನನ್ಯ ಸೂಕ್ಷ್ಮತೆ ಇದೆ. ನಾನು ಕಾಯುತ್ತಿದ್ದ ಘಳಿಗೆ ಇದು -ನಿಸ್ಸಂದೇಹ. ಗಾಢ ಕತ್ತಲೆಯ ಕೂಪದಲ್ಲಿ ಕುಳಿತವನೋಬ್ಬನ, ನಮ್ಮ, ನಿಮ್ಮಂಥವನ ಆಶೆ, ಆಕಾಂಕ್ಷೆ ಇದೆ. ಅದೇ ತಳದಲ್ಲಿ, ಸ್ಥರದಲ್ಲಿ ಅಪನಂಬಿಕೆಯು ಇದೆ ತನ್ನ ಮೇಲೆ. ಇಲ್ಲಿವರೆಗೂ ಸಹಿಸಿದ್ದಾಗಿದೆ -ತಿಂದು, ಕುಡಿದು ನೋಡಿಯಾಗಿದೆ. ಯಾರೊಬ್ಬರು ಬರಲಾರರು, ಅವತರಿಸಲಾರರು ಎಂಬ ತಿಳುವಳಿಕೆಯಿಂದ ಮೂಡಿದ್ದಿದು, ತಾನೇ ಸ್ವಯಂಭು ಆಗಿ ಎದ್ದೇಳಬೇಕು ಎಂಬಾ ಅರಿವಿದು. ಯಾವದೋ ಒಂದು ಕಿಡಿ ಎಲ್ಲಿಯೋ ಹತ್ತಿಕೊಳ್ಳಬೇಕು ಎಂಬ ನಿರೀಕ್ಷೆಯೂ ಇದೆ. domino effect ಆಗುತ್ತಿರುವ mideast ನಂತೆ, ಹಜಾರೆಯ ಹವಿಸ್ಸು ಬೇಕೆಂಬಾಶೆ. ತನ್ನದೇ ಸ್ವಂತದ ಚಿಕ್ಕ ಸಾಫ್ಟ್ ವೇರ್ ಕಂಪನಿಯ ಅಸ್ತಿತ್ವದ ಅಳಿವು ಉಳಿವು ಬಂದಾಗ ಜಿಗಿದು ಬರುವ ಮೇಲಧಿಕಾರಿ, ವಿಶ್ಲೇಷಕನಾಗಿ, ಪ್ರೋಗ್ರಾಮ್ಮರಾಗಿ ಆಗಿ ಕೋಡಿನಲ್ಲಿ ಒಳ ಹೊಕ್ಕು ತಲೆ ಕೆಡಿಸಿಕೊಂಡು ಕೂತಂತಿದೆ. ಇದೀಗ-ದೂರ ನಿಂತು ವರದಿ ಒಪ್ಪಿಸುವ ಸಂಜಯನ ಕೆಲಸವಲ್ಲ, ರಣರಂಗಕ್ಕೆ ತಾನೇ ಧುಮುಕಿ ಕ್ರಾಂತಿಯ ಕಹಳೆ ಮೊಳಗಿಸುವ ಕಾಲ. ಆದರು, ಆದರು ತನ್ನ ಮೇಲೆ ತನಗೆ ಸಂಪೂರ್ಣ ಭರವಸೆ ಇಲ್ಲಾ, ಇನ್ನೂ ಯಾವದೋ catalyst ನ ನಿರೀಕ್ಷೆಯಲ್ಲಿದೆ -ತಾನು ತಟಸ್ಥನಿದ್ದು ಪರರು ಬದಲಾಗಬಹುದು ಎಂಬ ತುಂಡು ನಿರೀಕ್ಷೆ ಆಳದಲೆಲ್ಲೋ ಇದೆ. ಎಲ್ಲ ಬಿಟ್ಟು ಧುಮಕುವದೋ ಅಥವಾ ತನ್ನ ಮನೆ ಉರಿಯಲಾರಭಿಸಿದ ಮೇಲೆ ನೀರಿಗೆ ಓಡುವದೋ?
೧೧. ಇನ್ನೂ ಬಗೆಹರಿದಿಲ್ಲಾ ಪ್ರಶ್ನೆ. ಯಾವದೇ ಸಮಸ್ಯಗೆ ಪರಿಹಾರ ಆರಂಭವಾಗಬೇಕಾದ್ದು ನನ್ನಿಂದಲೇ ಎಂಬ ಅರಿವು ಬಂದಾಗಿದೆ. ಪ್ರಶ್ನೆ ಇರವದು ಬೇರೆಯವರಿಗೂ ಅದೇ ಜ್ಞಾನೋದಯವಾಗಿದೆಯೇ? ಅಥವಾ ತನಗೆ ಇನ್ನೂ ಅದರ ಮೇಲೆ ನಂಬಿಕೆ ಬಂದಿಲ್ಲವೇ? ಷಟ್ಚಕ್ರ ಎಂದಿರುವದಕ್ಕೆ, ಮೇಲೆ ಸಹಸ್ರಾರ, ಹಂಸ ಬಂದಿರುವದಕ್ಕೆ ಕಾರಣವೀಗ ಹೊಳೆಯುತ್ತಿದೆ. ನನ್ನಾತ್ಮಕ್ಕೆ ಅರಿವಾದಿತೆ ಸತ್ಯವೇನೆಂದು? ಹೋರಾಟವೆಕೆಂದು? ಅಂತಿಮ ಗೆಲುವಲ್ಲಿ ಹುಟ್ಟಿತೆ ಅದಕೆ ವಿಶ್ವಾಸ? ಇಷ್ಟೊಂದು ಕೊಳೆತು ಹೋದ ನೀರಿನಲ್ಲಿಯೂ ಅರಳಬಲ್ಲದೆ ನೈದಿಲೆ? ಏರಬಲ್ಲೆವೆ ಆ ಎತ್ತರ? ತೊಳೆಯಬಲ್ಲವೇ ಮಲೀನವಾದ ಮನಸುಗಳ? ಕೊಳೆ ಕಿತ್ತೊಗೆಯಬಲ್ಲವೇ? ಜಂಹಾ ರಾಮ ಅಭಿತಕ ಹೈ ಹರ ನರಮೇ, ಸತ್ಯ, ಅಹಿಂಸೆ, ಧರ್ಮದ ಡೇರೆ ಹಾಕಬಲ್ಲೇವೆ ಎಲ್ಲೆಡೆ? ಮೋಹನ ಬಾಲರು, ರಾಧೇ ಬಾಲೆಯರು ಸುಲಿದಾಡುವರೆ ಇಲ್ಲಿ ಎಲ್ಲಾ ಮತ್ತೆ ಮತ್ತೆ? ಕರುಣೆಯೇ ಸ್ಥಾಯಿಯಾಗಿ, ಪ್ರೀತಿಯೇ ಜೀವನವಾಗಿ ನಮ್ಮಂಥ ಸಾಮಾನ್ಯರು ಏರಬಹುದೇ ಉತ್ತಮ ಪುರುಷನ ಸ್ಥಾನಕ್ಕೆ? ಪ್ರಶ್ನೆಯೊಂದಿಗೆ ಮುಗಿಯುತ್ತದೆ ಕಾವ್ಯ, ಪ್ರಶ್ನಾತೀತವಾಗಿದೆಯೇ ಕವಿಯ ಇಂಗಿತ?
ಪುಟದ ಮೊದಲಿಗೆ
 
Votes:  10     Rating: 3.5    

 ಅನಿಲ್ ತಾಳಿಕೋಟಿ , ಚೆನ್ನಾಗಿ ಬರೆದಿದ್ದಿರ , Keep writing - ಗಣೇಶ್ ಪೈ...
 ಹೊಸ ಕನ್ನಡದಲ್ಲಿ ಮಹಾಕವಿ ಎಂದರೆ ಅಡಿಗರೊಬ್ಬರೇ. ಇಂದಿಗೂ ಅವರೇ ತರುಣ ಕವಿಗಳಿಗೆ ಮಾದರಿ....
 'ಹುತ್ತಗಟ್ಟದೆ ಚಿತ್ತ' ಯಾವುದನ್ನೂ ಪ್ರಕಟಿಸಬೇಡಿ -- ನನ್ನ ಹೆಂಡತಿ ಹೇಳಿದ್ದು ಇದೆ ('ವಾರಿಧಿ' ನನ್ನ ಹೆಂಡತಿ ಅಲ್ಲಾ!). ಅದಕ್ಕೆ ನನ್ನ ಉತ್ತರ - ಹುತ್ತಗಟ್ಟುವದು ಒಂದು ವಿಕಸನ ಪ್ರಕ್ರಿಯೆ -ಒಮ್ಮೆಲೇ ಅಗುವದಲ್ಲವಲ್ಲಾ -ಅದಕ್ಕೆಂದೇ ಆ disclaimer ಹಾಕಿದ್ದು. ಇನ್ನೂ ನನ್ನ ಪ್ರಕಾರ ಇದು ಬರಿ ಕಾವ್ಯಾತ್ಮಕವಾದ ಸಾಲಷ್ಟೇ ಅಲ್ಲಾ ಇದು ಕವಿಯ/ಕವಿತೆಯ ಆತ್ಮದ ಸಾಲು ಹೌದು. ಅದನ್ನೇ ಬಿಂಬಿಸಲು ಮಾಡಿದ ಪ್ರಯತ್ನವಿದು. ಸಫಲ-ವಿಫಲ ನಿರ್ಧರಿಸಲು ಇ ಪ್ರತಿಕ್ರಿಯೆಗಳು one of the ಮಾರ್ಗಾಸ ಅಷ್ಟೇ. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. -ಅನೀಲ ತಾಳಿಕೋಟಿ...
 Re:  ಕ್ವಾಂಟಮ್ ಡಾಟ್ಸ್ ಒಂದೇ ವಾರಿಧಿ ಶರಧಿ ಸಾಗರ ಸಮುದ್ರಗಳಿಗಿಂತ ಹೆಚ್ಚು ಆಳ ಹಾಗೂ ಘನ. - sooಕ್ಷ್ಮ
 Re:  ವಾರಿಧಿ ಯಾರಿಗೂ ಹೆಂಡತಿ ಆಗಲು ಅಸಾದ್ಯ!, ವಾರಿಧಿ.., ಅದು ಸಾಗರ, ಸಮುದ್ರ, .., ಜಲನಿಧಿ...,ಆಳ ತಿಳಿದವರಿಲ್ಲ, ....ಸಾಗರ ನಮೋನಮಃ ....-ಸುಶ್ma
 ಓರ್ವ ಕವಿಯ ಶ್ರೇಷ್ಠ ಕವನವು ಓದುಗನನ್ನು ಯಾವ ರೀತಿಯಲ್ಲಿ ಆವರಿಸುತ್ತದೆ, ಪ್ರೇರೇಪಿಸುತ್ತದೆ ಎನ್ನುವುದಕ್ಕೆ ನಿಮ್ಮ ವ್ಯಾಖ್ಯಾನವು ಉತ್ತಮ ಉದಾಹರಣೆಯಾಗಿದೆ. ಅಡಿಗರ ಅನುಭವವು ನಮ್ಮೆಲ್ಲರ ಅನುಭವವೂ ಹೌದು. ನಿಮ್ಮ ವ್ಯಾಖ್ಯಾನವು ಈ ಮಾತನ್ನು ಸ್ಪಷ್ಟ ಪಡಿಸುತ್ತದೆ. ಅಡಿಗರ ಕವನಗಳ ಬಗೆಗೆ ನಿಮ್ಮಿಂದ ಇನ್ನಿಷ್ಟು ಲೇಖನಗಳನ್ನು ಪ್ರತೀಕ್ಷಿಸುತ್ತೇನೆ....
 Dear Editor, what is this exchange of meaningless comments between Sharadhi and Vaaridhi?!! Please ban both of them....
 ಅನಿಲ್ , ತುಂಬಾ ಚೆನ್ನಾಗಿದೆ , ಓದಿ ಸಂತೋಷ್ ವಾಯಿತು - ಮುಕುಂದ್ ....
 ಭಜ ಗೋವಿಂದಂ, ಭಜ ಗೋವಿಂದಂ, ಗೋವಿಂದಂ ಭಜ ಮೂಢಮತೇ ಅಂತ ದೇವರ ಪ್ರಾರ್ಥನೆ ಮಾಡಿ ಓದಿದ ಮೇಲೂ ಕವನ ಅರ್ಥವಾಯಿತೇ ಹೊರತು ಲೇಖಕರು ಏನು ಹೇಳ ಹೊರಟಿದ್ದಾರೆಂದು ಅರ್ಥವಾಗಲಿಲ್ಲ ...!!!...
 ಬಹುಷಃ ಹೀಗಾಗಿದೆ, ನೀವು ಬರೆದಿರುವ ರಾಮನೇ ಬೇರೆ, ಅಡಿಗರು ಬರೆದಿರುವ ರಾಮನೇ ಬೇರೆ!. ಯಾಕೆ ಈ ಮಾತು ಬರೆದೆ?, ಒಂದು ಉದಾಹರಣೆ ಕೊಡುತ್ತೇನೆ, ಬಹಳ ಬರೆಯಲಿಕ್ಕೆ ಸಮಯ-ಶ್ರೀಮಂತಿಕೆ ಇಲ್ಲ. "ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು" - ಇಡೀ ಕಾವ್ಯದ ಜೀವಾಳ ಇಲ್ಲಿದೆ. ಇದು ಅತ್ಯಂತ ಕಾವ್ಯಾತ್ಮಕವಾದ ಸಾಲು. ಇದು ಏಕ ಕಾಲಕ್ಕೆ ರಾಮಾಯಣದ ಕರ್ತೃ ವಾಲ್ಮೀಕಿಯನ್ನೂ, ಆತನ ಚಿತ್ತ ಹುತ್ತಗತ್ತಲು ವಲ್ಮೀಕ ಹೇಗೆ ಕಾರಣವಾಯಿತು ಎನ್ನುವುದನ್ನೂ, ಹಾಗೂ ರಾಮ ತನ್ನ ಜೀವನದ ಹಲವಾರು ಸನ್ನಿವೇಶಗಳಲ್ಲಿ (ವನಗಮನ, ಸೀತಾ ವಿಯೋಗ, ನಿರ್ಯಾಣ..ಇತ್ಯಾದಿ) ತನ್ನ ಚಿತ್ತವನ್ನು ಹುತ್ತಗಟ್ಟಿಸಿ ಹೇಗೆ ಧೀರ-ಶಾಂತ ನಾಯಕನಾದ- ಎನ್ನುವುದನ್ನು ಪ್ರತಿಫಲಿಸುವ, ಸೂಚಿಸುವ ವಾಕ್ಯ ಇದು. ಈ 'ಚಿತ್ತ ಹುತ್ತಗಟ್ಟುವ " ಪ್ರತಿಮೆ ಇದೆಯಲ್ಲ, ಇದು ಬಹಳ ಪ್ರಸಿದ್ಧವಾದುದು. ಮಾತ್ರವಲ್ಲ, ಬರಹಗಾರರಿಗೂ, ಆಧುನಿಕ ಕವಿಗಳಿಗೂ ಈ ವಾಕ್ಯ ಒಂದು ಸಂದೇಶ ಕೊಡುತ್ತದೆ. ಏನು ಸಂದೇಶ?, ಚಿತ್ತ ಹುತ್ತ ಗಟ್ಟದೇ ಯಾವುದನ್ನೂ ಪ್ರಕಟಿಸಬೇಡಿ. ಆದರೆ ಪ್ರಯತ್ನ ಒಳ್ಳೆಯದಿದೆ. - Vaaridhi...
 Re:  "Re: Vaaridhiya hesaralli pratikriyisuva mattondu vyartha prayathna! - Sharadhi" ಶರಧಿ ಹೆಸರಲ್ಲಿ ಪ್ರತಿಕ್ರಿಯಿಸಿದ ಅನಾಮಧೇಯರೇ, ಶರಧಿ/ವಾರಿಧಿಯವರ ಬರಹ, ಶೈಲಿ, ವಸ್ತು, ತೀವ್ರತೆ, ಹೀಗಿರುತ್ತೆ. ನೀವು ಈಗ ಪ್ರಯತ್ನಿಸಿದರೆ ಇನ್ನು ಐವತ್ತು ವರ್ಷಕ್ಕೆ ಅಂಥದ್ದೊಂದು ಸಾಲು ಬರೆಯಬಹುದು
 Re:  Vaaridhiya hesaralli pratikriyisuva mattondu vyartha prayathna! - Sharadhi
 ತಾಳಿಕೋಟೆಯವರೆ,ನೀವು ಖ೦ಡಿತ ಅಲ್ಪ ಮತಿಯಲ್ಲ ಎ೦ಬುದನ್ನು ನಿಮ್ಮ ಈ ಕಾವ್ಯ ಕೌತುಕದ ಶ್ರದ್ಧೆ ಸಾಬೀತುಪಡಿಸುತ್ತಿದೆ....
 Re:  ಜ್ಯೋತಿಯವರೇ, ಮತಿಯ ಬಗ್ಗೆ ತಮ್ಮಿಂದ ಸರ್ಟಿಫಿಕೆಟ್ ಪಡೆದ ಅನಿಲ್ ಅವರು ನಿಜಕ್ಕೂ ಧನ್ಯರು! -- ಚಂದಾ
 Deepest thanks for writing such an awesome article anil ...... Very beautiful.----- Chanda Sabade , Pittsburgh....
 Re:  ಅಕ್ಕನ ಪ್ರೀತಿ ತಮ್ಮನ ಮೇಲೆ ಸದಾ ಇರಲಿ.
 ಉತ್ತಮ ಪ್ರಯತ್ನ....
 "ಕರುಣೆಯೇ ಸ್ಥಾಯಿಯಾಗಿ, ಪ್ರೀತಿಯೇ ಜೀವನವಾಗಿ ನಮ್ಮಂಥ ಸಾಮಾನ್ಯರು ಏರಬಹುದೇ ಉತ್ತಮ ಪುರುಷನ ಸ್ಥಾನಕ್ಕೆ?" yes, definitely. is there any doubt? -- Sharadhi...
 Re:  "Re: Sharadhiya hesaralli pratikriyisuva mattondu vyartha prayathna! - Vaaridhi" ವಾರಿಧಿ ಹೆಸರಲ್ಲಿ ಪ್ರತಿಕ್ರಿಯಿಸಿದ ಅನಾಮಧೇಯರೇ, ಶರಧಿ/ವಾರಿಧಿಯವರ ಬರಹ, ಶೈಲಿ, ವಸ್ತು, ತೀವ್ರತೆ, ಹೀಗಿರುತ್ತೆ. ನೀವು ಈಗ ಪ್ರಯತ್ನಿಸಿದರೆ ಇನ್ನು ಐವತ್ತು ವರ್ಷಕ್ಕೆ ಅಂಥದ್ದೊಂದು ಸಾಲು ಬರೆಯಬಹುದು
 Re:  Sharadhiya hesaralli pratikriyisuva mattondu vyartha prayathna! - Vaaridhi
 ಈ ಕವಿತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಅನಂತಮೂರ್ತಿ ಬರೆದುದನ್ನು ಓದಿರಿ. ಅರ್ಥವಾಗಬಾರದೆಂದಿದ್ದರೆ ಅವರ ಶಿಷ್ಯೋತ್ತಮರು ಬರೆದದ್ದು ಓದಿ. - ಪ್ರಕಾಶ ಶೆಟ್ಟಿ...
 ಮನಮೋಹಕ ಬರಹ ,ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. 'ಸೃಷ್ಟಿಶೀಲತೆಯ ನಮ್ಮ ನಿರಂತರ ಉತ್ಕ್ರಾಂತಿಯ ಪ್ರತಿಪಾದಕತೆ...'- great article -ವಸಂತ ಭಾಗವತ...
 ಅಯ್ಯೋ! ನೀವೂ!!...
 
 
ಸಂಬಂಧಿಸಿದ ಲೇಖನಗಳು
  ವಿಕಾಸ್ ನೇಗಿಲೋಣಿ ಮಾಡಿರುವ ಜಪಾನಿ ಕವಿ ಪರಿಚಯ
  ತಿರುಮಲೇಶರು ಅನುವಾದಿಸಿದ ಹರ್ಮನ್ ಮೆಲ್ವಿಲ್ ನೀಳ್ಗತೆ
  ಭಾನುವಾರದ ವಿಶೇಷ: ಮನೋಜ್ ಪಿ. ಎಂ. ಬರೆದ ಕತೆ ‘ಕನಸು’
  ಎಂಬತ್ತೈದರ ಚಿತ್ತಾಲರ ಹನೇಹಳ್ಳಿ ಮತ್ತು ದೇವರು
  ಭಾನುವಾರದ ವಿಶೇಷ:ಕಾಮರೂಪಿ ಬರೆದ ಕಥೆ ‘ಉಪಪತ್ತಿಯೋಗ’
  ಬೆಳಗನುಟ್ಟವಳು:ನಟಿ ಭವಾನಿ ಪ್ರಕಾಶ್ ಬರೆದ ಹೊಸ ಕವಿತೆ
  ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’
  ಜ. ನಾ. ತೇಜಶ್ರೀ ಅನುವಾದಿಸಿದ ಟಾಗೋರ್ ಕವಿತೆಗಳು
  ವಾರದ ವಿಶೇಷ: ರೇಣುಕಾ ಕತೆ ‘ಎರಡು ದಡಗಳ ಒಳದನಿಗಳು’
  ಭಾನುವಾರದ ವಿಶೇಷ: ಕೆ.ವಿ.ತಿರುಮಲೇಶ್ ಬರೆದ ಕತೆ ‘ಐತ’
  ಭಾನುವಾರದ ವಿಶೇಷ: ಗಣೇಶ್ ನೆಂಪೆ ಕತೆ ‘ಗಿರಿಯಮ್ಮನ ಚೌಡಿ’
  ತಿರುಮಲೇಶ್ ಅನುವಾದಿಸಿದ ವಾಲೆಸ್ ಸ್ಟೀವನ್ಸ್ ಕವಿತೆಗಳು
  ರಶೀದ್ ಅನುವಾದಿಸಿದ ರಿಲ್ಕ್ ಕವಿತೆ
  ಶಾಂತಿ ಅಪ್ಪಣ್ಣ ಬರೆದ ಕತೆ ‘ನನ್ನ ಹಾಡು ನನ್ನದು’
  ತೇಜಶ್ರೀ ಅನುವಾದಿಸಿದ ಒತೈನೊ ಅಮಿಸಿ ಕವಿತೆ
  ರಶೀದ್ ಅನುವಾದಿಸಿದ ಹಾಫಿಝನ ಕವಿತೆ
  ಶ್ರೀಕಾಂತ್ ಪ್ರಭು ಅನುವಾದಿಸಿದ ಕಾಫ್ಕಾ ಕತೆ
  ಮದರಿಯವರ ಗೊಂದಲಿಗ್ಯಾ:ಸಿದ್ಧರಾಮ ಪುಸ್ತಕ ಪರಿಚಯ
  ರಶೀದ್ ಅನುವಾದಿಸಿದ ಒಂದು ಪುಷ್ಕಿನ್ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಬೆಳಗು’
  ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
  ತೇಜಶ್ರೀ ಅನುವಾದಿಸಿದ ಮೂರು ಯೇಟ್ಸ್ ಕವಿತೆಗಳು
  ಅಬ್ದುಲ್ ರಶೀದ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆ
  ವೇಂಪಲ್ಲಿ ಶರೀಫ್ ತೆಲುಗು ಕತೆ ‘ಪಚ್ಚೆ ರಂಗೋಲಿ’
  ಅನಸೂಯಾದೇವಿ ಬರೆದ ದಿನದ ಕವಿತೆ
  ಸುಧಾ ಚಿದಾನಂದ ಗೌಡ ಬರೆದ ದಿನದ ಕವಿತೆ
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’