ಯಾರು ಹಿತವರು ಮೂವರೊಳಗೆ
ಯಾರು ಹಿತವರು ಮೂವರೊಳಗೆ
ಯಾರು ಹಿತವರು ಮೂವರೊಳಗೆ
ಯಾರು ಹಿತವರು ಮೂವರೊಳಗೆ?:ಅನಿಲ ತಾಳಿಕೋಟಿ ಪ್ರಹಸನ ![]() |
||||||||
ಬುಧವಾರ, 9 ಮೇ 2012 (03:59 IST)
|
||||||||
ಹೇಳಿಬಿಡಬೇಕು. ಮೊನ್ನೆ ಮೊನ್ನೆವರೆಗೂ ಬಸು ಅಂದ್ರ ಯಾರು ಅಂತ ಗೊತ್ತಿರಲಿಲ್ಲ. ಒಂದು ತಿಂಗಳ ಹಿಂದ ಅನಸ್ತದ, ಮುಂಜಾ ಮುಂಜಾನೆ ಗೊತ್ತಿಲ್ಲದ ಸಂಖ್ಯೆಯಿಂದ ಬಂದ ಕರೆ. ಮೊದಲು ಇಂಗ್ಲಿಷ್ನಲ್ಲಿ ಉಲಿದ ನಂತರ ಪಕ್ಕಾ ಬಾಗಲಕೂಟ ಭಾಶ್ಯಾದಾಗ "ನಾನು ನಿಮ್ಮ ಚಡ್ಡಿ ದೋಸ್ತ ಗುರುಸಿದ್ದನ ಕಡೀ ಬ್ರದರ್ರಿ, ಇಲ್ಲೇ ನ್ಯೂಜರ್ಸಿಗೆ ಬಂದು ಒಂದು ವರ್ಷಾ ಆತು, ಬಹಳಾ ದಿವಸದಿಂದಾ ಮಾತಾಡಬೇಕು ಅಂತಿದ್ದೆ, ಆಗಿರಲಿಲ್ಲ ನೋಡ್ರಿ. ಇವತ್ತು ಇಲ್ಲೇ ಯಾರೋ ನಿಮ್ಮ ಫ್ರೆಂಡು ಸಿಕ್ಕಿದ್ದ್ರು, ನಿಮ್ಮ ನಂಬರ ಸಿಕ್ಕತ ನೋಡ್ರಿ ಸರ" ಕೇಳಿ ಬಹಳ ಖುಶಿಯಾಯಿತು. ನಾನು, ಗುರ್ಯಾ ಭಾರಿ ಮನಗಂಡ ಫ್ರೆಂಡ್ಸ್ ಆಗಿದ್ವಿ ಬಾಗಲಕೊಟ್ಯಾಗ ಆರನೆತ್ತೆ ಮಟಾ, ಕೂಡಿ ಮಾಡಲಾರದ ಕೆಲಾಸನ ಇಲ್ಲಾ ಆವಾಗ. ಬಿಸಿಲಾಗ ಯಾರರ ಮನಿಗ ಬಂದಕುಳ್ಳ ನಮ್ಮವ್ವಗ ಪಾನಕಕ್ಕ ಲಿಂಬಿಹಣ್ಣು ಬೇಕಾಗತಿದ್ದು. ಒಂದ್ರುಪಾಯಾಗ ನಾಲ್ಕು ನಿಂಬಿ ಹಣ್ಣು ಬರ್ತಿದ್ವು, ಗುರ್ಯಾನ ನನಗ ಹೆಂಗ ಒಂದ್ರುಪಾಯಾಗ ನಾಲ್ಕು ಲಿಂಬಿಹಣ್ಣು ಅಲ್ಲದ ಸ್ವಲ್ಪ ಬಾರಿಹಣ್ಣು ಅಥವಾ ಕವಳಿಕಾಯಿ ಅಥವಾ ಕಡ್ಲಿಕಾಯಿ ಸೂಡು ಕೊಳಬಹುದು ಅಂತಾ ತೋರಿಸಿದ್ದಾ. ಅವಾಗಿಂದ ಅಂವಾ ನನಗ ಖರೇನ ಗುರು ಆಗಿಬಿಟ್ಟಿದ್ದ. ನಾಲ್ಕನೆತ್ತೇನೋ, ಐದೆನೆತ್ತೇನೋ ಇದ್ದಾಗ ಅನಿಸತ್ತದ. ಒಂದು ಸೋಡಾ ಬಾಟಲಿ, ಒಂದಿಷ್ಟು ಅಂಟು ಎಲ್ಲಿಂದೋ ತೊಗೊಂಡು, ಒಂದ ದಿವಸ "ನಡಿಲೇ ಹೊಳಿ ಕಡಿಗೆ, ಮಾಂಜಾ ಮಾಡ್ಕೊಂಡು ಬರುಣ, ಮೆಹಬೂಬ ಬರಾಕತ್ತಾನ" ಅಂದಾ ಗುರ್ಯಾ. ಮಾಂಜಾ ಧಾರಾ ಅವಾಗ ಬರಿ ಮುಸಲರ copyright ಆಗಿತ್ತು. ಘಟಪ್ರಭಾ ನದಿ ದಂಡ್ಯಾಗ ಕೂತು, ದೊಡ್ಡ ತೂತಿನ ಕಲ್ಯನ್ಯಾಗ ಸೋಡಾ ಬಾಟಲಿ ಒಂದೊದ ಒಡದು ಒಡದು ಪುಡಿ ಪುಡಿ ಮಾಡಿದಿವಿ. ಆ ಸಂಣಕಿನ ಗ್ಲಾಸ್ಸಿನ ಪುಡಿಗೆ, ಅಂಟೆಲ್ಲಾ ಸೇರಿಸಿ ಒಂಥರಾ ರಾಡಿ ಮಾಡಿದಿವಿ. ಅದನ್ನು ತೊಗೊಂಡು ಧಾರಕ್ಕ ಹೆಂಗ ಮೆತ್ತಬೇಕೋ ತಿಳಿಲಿಲ್ಲಾ. 'ಗುರ್ಯಾ, ಇದನ್ನ ಏನರ ಕೈಲೆ ಹಿಡಿದರ, ಮಗನ ಮೂರ ತಿಂಗಳ ಬರಿ ಗ್ಲಾಸ್ಸ್ ತಗೆಯೋದರೋಳಗ ಹೋಗತೈತಿ, ಎಲ್ಲದಾನ ಮೆಹಬೂಬ?' 'ಏ ಅವಂಗ ೧೦ ಗೋಟಿ ಕೊಡ್ತೀನಿ ಅಂತ ಹೇಳಿನಿ, ಬರತಾನನಿಂದರ ಅಂವ ಈಗ' 'ಅಲ್ಲಲೇ, ಹತ್ತು ಗೋಟಿಗೆ ಅಂವ ಯಾಕ ಕೈ ಹರ್ಕೊತಾನ? ಸುಮ್ಕ ನಿಂಗ ಮಬ್ಬ ಮಾಡಲಿಕ್ಕೆ ಹೇಳಿರಬೇಕು' 'ಏ, ಅವರಣ್ಣ ಪಟಾ ಮಾಡೋದ್ರೋಳಗ ಭಾರಿ ಅದಾನ, ನೋಡಿ ಇಲ್ಲೂ ಹೆಂಗ ಎಲ್ಲ ಪಟಾ ಕಾಸ್ಟಾ ಮಾಡತಾನ. ಇಂವಾ ಮಾಂಜಾ ಮಾಡುದ್ರೋಗ ಎಕ್ಷಪರ್ಟ' ದೂರದಲ್ಲಿ ಮೆಹಬೂಬ ಬರುತ್ತಿದಿದ್ದು ಕಂಡಿತು. ಕೈಯಲ್ಲಿ ಏನೋ ಹಿಡಿದುಕೊಂಡು ಬಂದ, ಅವನಿಗಿಂತ ಮೊದಲು ಅವನ ಧರ್ಮೆಂದ್ರನ ಹಾಡಿನ ದ್ವನಿ.ನನ್ನನ್ನು ಕಂಡವನೇ ಹೇಳಿದಾ 'ಆನ್ಯಾ, ತು ಒಂದು ಗಾನಾ ಬರದ ಕೊಟ್ರೆ , ನಂದು ಮಾಂಜಾ ಹೇಳತೈತಿ, ನಹಿತೋ ನಹಿ' 'ಏನ ಗಾನಾ?' 'ವಹಿ, ಶೋಲೆ ಕಾ 'ಏ ದೋಸ್ತಿ ...' ಪೂರಾ ಲಿಖನಾ ಮಾಂಗತಾ' 'ಹುಂ ಬರದ ಕೊಡ್ತೀನಿ ತೊಗೋ ಅಮ್ಯಾಗ' 'ಔರ ಏಕ, ಮೇರಾ ಬಾಹಿಕಾ ಪತಂಗಪೆ ಕಾಸ್ಟಾ ನಹಿ ಲಗಾನೇಕಾ' ತನ್ನದನ್ನು ಕಾಯ್ದು ಕೊಳ್ಳುವ ಇರಾದೆಯೋ? ಅಣ್ಣನ ಒದೆತದ ಹೆದರಿಕೆಯೋ? ತನ್ನೆಲ್ಲಾ ನಿಬಂಧನೆ ಒಟ್ಟೊಟ್ಟಿಗೆ ಹೇಳಿದ್ದು ನಮಗಿಬ್ಬರಿಗೂ ಸೇರಲಿಲ್ಲಾ. ಏನೂ ಹೇಳದೆ ನಿನ್ನ ಕರಾಮತ್ತು ತೋರಿಸು ನೋಡುವಾ ಎನ್ನುವಂತೆ ನಿಂತೆವು. ![]() ಎಲ್ಲಿತ್ತೋ ಅವನ ಕೈಯಲ್ಲಿ- ಸಟ್ಟಕ್ಕನೆ ಬಾಳೆಎಲೆಗೆ ಕಟ್ಟುವ ನಾರಿನಂತಹ ಉರುಟು ದಾರ ತೆಗೆದ. ನಾಲ್ಕೈದು ಪೀಸು ಬಾಳೆಎಲೆಯ ತುಂಡುಗಳನ್ನು ಕೈಯಲ್ಲಿ ಹರವಿಕೊಂಡು ನಾರಿನಿಂದ ಅವನ್ನು ಕಟ್ಟಲು ಹೇಳಿದಾ. ಅದರ ಮೇಲೆ ಎರಡು ಕರ್ಚಿಫ್ ಬಿಗಿದು ಕಟ್ಟಿಕೊಂಡ. ಇಲ್ಲಿವರೆಗೂ ನಾವು ವಿಚಾರ ಮಾಡಲು ಆಗದಂತಹದು. ನೋಡುತ್ತಾ ನಿಂತ ನಮಗೆ ಆಜ್ಞಾಪಿಸಿದ, 'ಓ ದಾಘಾ ಉದರ ಭಾಂದೋ, ಗಟ್ಟಿ ಪಕಡಕೆ ಬೈಟ ಆನ್ಯಾ ತು, ಚೋಡನಾ ಮತ' ಆ ವರ್ಷದ ಎಲ್ಲಾ ಪಟಗಳನ್ನು ಕಾಸ್ಟಾ ಮಾಡಿದ್ದೂ ನಾವೇ- ಇಂತಹವೇ ಎಸ್ಟೋ ಘಟನೆಗಳ ಸಖ್ಯ ನಂದು , ಗುರ್ಯಾಂದು. 'ಗುರುಸಿದ್ದಾ ಎಲ್ಲ್ಯದಾನೋ ಇಗ?' ಕೇಳಿದೆ ನಾನು ಬಸುಗೆ. 'ಏ ಅಲ್ಲೇ ಕೊಟ್ಯಾಗ ನಮ್ಮ ಕಿರಾಣಿ ಅಂಗಡಿ ನಡಸ್ತಾನ್ರಿ, ಇಗ ಚೊಲೋ ಆಗೈತಿ- ನವನಗರದಾಗೂ ಒಂದು ಅಂಗಡಿ ಹಾಕ್ಕ್ಯಾನ್ರಿ' ಹೇಳಿದ ಬಸು. ತುಂಬಾ ಆಪ್ತವಾಗಿಬಿಟ್ಟ ಬಸು ಬಂದ ಒಂದೆರಡು ತಾಸಿನ್ಯಾಗ. ಸಾಫ್ ಸೀದಾ ಮನುಷ್ಯ. ವರಶಾನುಗಟ್ಟಲೆ ಗೊತ್ತಿದ್ದವರು ಕೂಡಾ ಹಚ್ಚಗೊಳ್ಳಲಾರದಸ್ಟು ಕ್ಲೋಸ ಆದಾ ಬಸು. ಒಂದ ಹನಿ ನಯ, ನಾಜೂಕ ಇಲ್ಲ. ಒಳಗೊಂದು ಹೊರಗೊಂದು ಇಲ್ಲಾ. ನಮ್ಮೂರಾಗ ಹಿಂತವರಿಗೆ 'ಕುಂಡಿ ಮ್ಯಾಗಿನ ಗೆರಿ ಸದಾ ತೋರಿಸಿ ಬರೋವರು' ಅಂತಿದ್ರು. ಇಗ ಇಲ್ಲಿ ಕೆಲವೊಬ್ಬರು ಹಾಕಿಕೊಳ್ಳುವ ಪ್ಯಾಂಟು ನೋಡಿದರೆ ಪುಷ್ಠ ದರ್ಶನಕ್ಕೆ ಹಾಕಿಕೊಳ್ಳುತ್ತಾರೆ ಅದು ಬೇರೆ ವಿಷಯ.ಮುಂಜಾನೆ ಆರಕ್ಕ ಗ್ರೆಹೌಂಡ ಬಸ್ಸಿನಿಂದ ಬಂದಾವ, ಎಂಟು ಆಗುದ್ರೋಳಗ ತಾ ಬಂದಿದ್ದ ಉದ್ದೇಶ ಬಿಡಿಸಿ ಹೇಳಿದ. 'ಸರ್ರ, ನನಗೂ ಈಗ ೨೭ ಆತ್ರಿ. ನಾನೇ ನಮ್ಮನ್ಯಾಗ ಕಡಿಯಂವ. ನನಗಂತೂ ಇಲ್ಲೇ ಇರೂ ಇಚ್ಚಾ ಐತಿ, ಮುಂದಿಂದು ಇಶ್ವರ ನೋಡಕೊಂತಾನು. ಇಲ್ಲಿ ಬಂದಾಗಿಂದ ಅಮೇರಿಕಾದಾಗ ನಿಮ್ಹಂಗ ಸೆಟ್ಟಲ ಆದ ಮಂದಿ ದಿವಸಾ ಹೆಂಗ ಕಳಿತಾರ ಅಂತ ನೋಡ್ಬೇಕಾಗಿತ್ತ್ರಿ'. 'ಕರ್ರೆಕ್ಟ್ ಟೈಮಿಗೆ ಬಂದಿ ಬಿಡು, ಶನಿವಾರ ನಂದು ಫುಲ್ ಲೋಡೆಡ್ ಇರ್ತದ- ಇವತ್ತ ಎಲ್ಲಾ ಕಡೆ ಕರ್ಕೊಂಡ ಹೋಗ್ತೀನಿ' ಎಂದೆ. ಇವತ್ತು ಮೊದಲು ಡಾಕ್ಟರ್ ಮಹಾದೇವ ಅವರ ಮನೆಗೆ ಹೋಗಬೇಕು, ಹೋಗುವಾಗ ಹಂಗೆ ಮಗರಾಜ ಚಿನ್ನುನನ್ನು ಬಾಸ್ಕೆಟ್ ಬಾಲಗೆ ಡ್ರಾಪ್ ಮಾಡಬೇಕು. ಆಮೇಲೆ ಚಿನ್ನುನ್ನ ಮನೆಗೆ ಬಿಟ್ಟು ಅಕ್ಕನ ಮಗಳು ಅನಿತಾಳನ್ನು ಡಾನ್ಸ್ ಕ್ಲಾಸ್ಗೆ ಕರ್ಕೊಂಡು ಹೋಗಬೇಕು. ಅಲ್ಲಿಂದ ಒಂದು ಕುಯಿಕ್ಕ ಸ್ಟಾಪು ವಾಲ್ಮಾರ್ಟಗೆ. ವಾಪಸ್ಸು ಬರ್ತಾ 'ನನ್ನು'ನ್ನ ಮನೆಗೆ ಬಿಟ್ಟು ಸಾಫ್ಟ್ವೇರ್ ರಾಜಾ ಶಂಕರ ಮನೆಗೆ. ಮಧ್ಯಾನ್ಹ ಎಲ್ಲಿಗಾದರೂ ಇಂಡಿಯನ ಉಟಕ್ಕೆ ಹೋಗುವ- ಬರ್ತಾ ಹಂಗೆ ಒಂದು ರೌಂಡು ನಿನಗೆ duke ಗಾರ್ಡನ್ನು, downtown ಸುತ್ತಾಡಿಸುತ್ತೇನೆ. 'ನನಗ ಊರು ನೋಡುದಕ್ಕಿಂತ ಮಂದಿನ ನೋಡುದು ಮುಖ್ಯ' ಅಂದ ಬಸು. 'ಯಾಕೋ ಮಾರಾಯ' ಅನಬೇಕೆಂದವನು 'ಸರಿ ಬಿಡು' ಎಂದೆ. ಹುಡುಗ ಏನೋ ಸ್ಕೆಚ ಹಾಕ್ಕೊಂಡೆ ಬಂದಾನ ಅನಿಸ್ತು. ಹೊರಗ ಬಂದ ಕೂಡ್ಲೆ, 'ಒಂದ್ನಿಮಿಷ ನಿಂದ್ರಿ, ಒಂದ್ರೌಂಡು ಮನೆಸುತ್ತ ನೋಡ್ತೀನಿ ಅಂದ', 'ಏ, ಚೊಲೋ ಮೆಂಟೈನ್ ಮಾಡಿರಿ ಲಾನು-ಇಲ್ಲೆಲ್ಲಾ ಮನಿಗಳು ಅಂದಾಜ ಎಸ್ಟಾಗಬಹುದ್ರಿ ಅಂದ?'. 'ಬ್ಯಾರೆ ಬ್ಯಾರೆ ಟಾಯಿಪು ಅವಾ, ಎಲ್ಲಾ ರೆಂಜು ಅವಾ' ಮೊಘಮ್ಮಾಗಿ ಉತ್ತರ ಕೊಟ್ಟೆ. ಅಷ್ಟಕ್ಕೆ ಬಿಡ್ತಾನ ಬಸು 'ಅಲ್ರಿ, ಒಂದು ೬೦೦ ರಿಂದ ಮಿಲ್ಲಿಯನ್ ತನಾ ಇರ್ಬೇಕಲ್ಲ್ರಿ ಇವು. ಮನೆಗಳ ಸೈಜು, ಕಟ್ಟಿದ ಸ್ಟೈಲು ನೋಡಿದ್ರ?' ಅಂದ. 'ಅಸ್ಟಗ್ತಾವ' ಮಾತಿನ ವರಸೆ ಬದಲಿಸುತ್ತ ಹೇಳಿದೆ, 'ನಿನಗ ನಮ್ಮ ಡಾಕ್ಟರ್ ಮಹಾದೇವ ಮನೆ ತೋರಸ್ತಿನಿ, ಮೂರು ಮಿಲ್ಲಿಯನ ಕೊಟ್ಟು ಮೊನ್ನೆ ತೊಗೊಂಡಾರ. ಬೆಂಗಳೂರ ಅರಮನೆ ಇಧಂಗ ಅದ ಒಳಗ/ಹೊರಗ'. ಅಷ್ಟರಲ್ಲಿ ಹುಲ್ಲೆಲ್ಲ ಕತ್ತರಿಸಿ, ಎಡ್ಜ ಎಲ್ಲ ಟ್ರಿಮ್ ಮಾಡಿ ಬಂದ ನಮ್ಮ ಲೋಪೆಜ್- ಅವನಿಗೆ ೩೫ ಡಾಲರ್ ಕೊಟ್ಟಿದ್ದನ್ನು ನೋಡುತ್ತಿದ್ದಾ ಬಸು. ಯಾಕೋ ಎಲ್ಲದರಲ್ಲೂ ತಲೆ ಹಾಕ್ತಾನಲ್ಲಪ್ಪ ಎನಿಸಿತು. "ಇಂವಾ, ಎರಡ್ಮೂರು ತಾಸು ಮಾಡಿರಬೇಕಲ್ಲ ಕೆಲಸ?' ಎಂದ. 'ಹೌದು ಬಸು, ಒಂದೇರಡು ತಾಸರೆ ಹಿಡಿತದ- ಅವಂಗ ತಾಸಿಗೆ ಹತ್ತೋ ಹದೆನೈದು ಆಗ್ತದ' ಬಸುಗೆ ಏನೆಲ್ಲಾ ವಿಷಯ ತಿಳಕೋಬೇಕು ಎಂಬುವದು ಸ್ವಲ್ಪ ಸ್ವಲ್ಪ ಅರ್ಥ ಆಗಿದ್ದರಿಂದ ಹೇಳದೆ ಇದ್ದರೆ ಬಿಡುವವನಲ್ಲ ಎಂದು ಗೊತ್ತಾಗಿದ್ದರಿಂದ ಹೇಳಿದೆ. 'ಬೇಕಿದ್ರ ನೋಟ್ ಡೌನ್ ಮಾಡ್ಕೋ ಮುಂದ ಉಪಯೋಗಬರ್ತದ'. ನನ್ನ ಮಾತಿನ್ನು ಮುಗಿದಿರಲಿಲ್ಲ ,ಸಟ್ಟಕ್ಕನ iphoneನ್ಯಾಗಿನ notesನ್ಯಾಗ ಏನೋ ಗೀಚಿಕೊಂಡಾ. ಇನ್ನಿವಂಗ ಹಿಡಿಯವರೇ ಇಲ್ಲಾ ಅನಸ್ತು- ಎಲ್ಲಾನು iphone ನ್ಯಾಗ ಭರ್ತಿ ಮಾಡ್ಕೋತಾನ ಅನಸ್ತು 'ಏನಪಾ, ೩೨ GB ಐತಿ ಏನು?' 'ಹೌದ್ರಿ, ಮತ್ತ ಕ್ಲೌಡು ನ್ಯಾಗು ಮಡಗ್ತೀನಿ' ಅಂದ. 'ಅಲ್ಲೋ, ಬಸು- ಏನ ಮಾಡ್ತಿ ಅಷ್ಟ ತೊಗೊಂಡು?' 'ಸರ, ಏನೇ ಡಿಸಿಜನ ತೊಗೋ ಬೇಕಾದರೂ ನಾ ಹತ್ತ ಸರ್ತೆ ಅಂಕಿಸಂಖ್ಯಾ ನೋಡೇ ಅಮ್ಯಾಗ ಇಪ್ಪತ್ತ ಸರ್ತೆ analyze ಮಾಡೇ ಮುಂದ ಹರಿತಿನ್ರಿ' ಅಂದ. 'ಹಿಂಗಾದ್ರ ನಿಂದ ಲಗ್ನ ಅಧಂಗ ಅದ ತೊಗೋ, ನೀ ಜಿಂದಗಿಭರ analyst ಆಗಿ ಕುಂದರ್ತಿ' ಅಂದೆ ನಾನು. 'ಅದು ಒಂದ ಕಾರಣ ಐತ್ರಿ ...' ಇನ್ನು ಏನೋ ಹೇಳವನಿದ್ದ ಬಸು. ಅಸ್ಟರಲ್ಲಿ 'ಪಪ್ಪಾ, ವೀ ಅರ ಗೆಟ್ಟಿಂಗ್ ಲೇಟ್' ಎಂದ ಮಗರಾಜ ಚಿನ್ನು. ![]() ಸ್ವಯಂ ಸೇವಕ ಕೋಚುಗಳು- ದುಡ್ಡು ಕೊಡಬೇಕಿಲ್ಲ'. ಸ್ವಲ್ಪ ಆಶ್ಚರ್ಯವಾದಂತಿತ್ತು ಬಸುಗೆ. 'ಆಗಳೇ, ಏನೋ ಹೇಳ್ಬೇಕು ಅಂತ ಹೊಂಟಿದೆಲ್ಲ ಏನದು?', ವ್ಯಾನಿನಲ್ಲಿ ನಲ್ಲಿನ ಸಿ.ಡಿ. ಬದಲಿಸುತ್ತ ಕೇಳಿದೆ. 'ಯಾರು ಹಿತವರು ಇ ಮೂವರೊಳಗೆ ....' ದಾಸರ ಪದ ಹೊರಬರುತ್ತಿತ್ತು ಸ್ಪಿಕರ ಗಳಿಂದ. 'ಓ ಇದೆ ಮಾತ ಆಡಬೇಕಾಗಿತ್ತು' ಖುಷಿಯಿಂದ ಹೇಳಿದ ಬಸು. 'ಇ ತಿಂಗಳ ಕೊನೆಗೆ ಊರಿಗೆ ಹೊಂಟಿನಿ, ಬೇಕಾದಷ್ಟು ಕನ್ಯಾ ನೋಡಿ ಇಟ್ಟು ಬಂದೀನಿ. ಎಲ್ಲಾ ಪೂರಾ ಅನ್ಯಾಲಿಸಿಸ್ ಮಾಡಿ ಕಡಿಕ ಬರೋಬ್ಬರಿ ಮೂರ ಮನಸಿನಾಗ ಉಳದಾವ- ಊರಿಗೆ ಹೋದ ಕುಳ್ಲೇ ಅವು ಮೂರೂ ಇನ್ನೊಂದು ಸಾರಿ ನೋಡಿ ಮದುವೆ ಮುಗಿಸಿಕೊಂಡು ಕರಕೊಂಡ ಬರಂವ.' ಬಸುನ ಲೆಕ್ಕಾಚಾರ ವಿಚಿತ್ರ ಅನಿಸಿದರು ಭಾರಿ ವ್ಯಾವಹಾರಿಕ ಆಗಿದ್ದು ನೋಡಿ ಮಜಾ ಅನಿಸಿತು, ಅದನ್ನು ಅಂವ ಹೇಳು ರೀತಿನೂ ಸಾಫಾಸೀದಾ ಇದ್ದುದಕ್ಕೋ ಏನೋ ಇನ್ನೂ ಕೆದಕಿ ಕೇಳಬೇಕೆನಿಸಿತು. 'ಅಲ್ಲಾ ಬಸು, ಅಳದು ಸುರುದು ಮೂರು ಪಸಂದ ಮಾಡಿ ಇಟ್ಟಿಯಲಾ, ಏನ ಅಂಥ ವಿಶೇಷ ಅವಾ ಆ ಮೂವರೊಳಗ?' 'ಒಬ್ಬ್ಯಾಕಿ ಮೊನ್ನೆ ಮೊನ್ನೆ ಹುಬ್ಬಳಿ KMC ಯಿಂದ ಮೆಡಿಕಲ್ ಮುಗಿಸ್ಯಾಳ್ರಿ, ನೋಡ್ಲಿಕ್ಕೆ ಸುಮಾರ ಇದ್ದಾಳ. ಮನೆತನದಿಂದೂ ಓಕೆ, ಓಕೆ ಇದ್ದಾರ್ರಿ. ಎರಡೆನೆಯಕಿ ಬಿಜಾಪುರದಿಂದ ಕಂಪೂಟರ ಸಾಯನ್ಸ ನ್ಯಾಗ ಇಂಜನಿಯರಿಂಗ ಮುಗಿಸಿ, ಬೆಂಗಳೂರಿನ್ಯಾಗ ಕೆಲಸಾ ಮಾಡ್ತಾಳ್ರಿ, ಅಕಿನೂ ನೋಡ್ಲಿಕ್ಕೆ ಸುಮಾರ, ಮನೆತನಾ ಎವರೆಜ ಐತ್ರಿ. ಇನ್ನ ಮೂರ್ನೆದಕಿ ಬಿಕಾಂ ಆಗ್ಯಾಳ್ರಿ. ಹಾಡ, ಡ್ಯಾನ್ಸು, ಸಂಗಿತಾ, ನಾಟಕದಾಗ ಎತ್ತಿದ ಕೈರಿ. ಮೂರ್ನಾಕು ಭಾಷ್ಯ ಸರಳ ಮಾತಾಡ್ತಾಳ. ನೋಡ್ಲಿಕ್ಕು ಚಂದ ಆದಾಳ್ರಿ, ಹೈದಾರಾಬಾದದಾಗ ಎಲ್ಲೋ ಕೆಲಸ ಮಾಡ್ತಾಳ್ರ. ನಾ ಆಗಳೇ ಹೇಳಿದ್ನೆಲ್ಲಾ, ನಾ ಅಂತೂ ಅಮೆರಿಕಾದಾಗ ವಸ್ತಿ ವಗ್ಯಂವ, ಈಗ ನೋಡ್ರಿ ನೀವು ,ವೈನಿ ಇಬ್ರು ಕೆಲಸ ಮಾಡ್ತ್ರಿ, ಅದಕ್ಕ ಮನಿ, ಮನೀ ಮಾಡ್ಕೊಂಡು ಆರಾಮ ಇದ್ದಿರಲ್ರಿ' ಇಂವಾ ಯಾಕೋ ನಮ್ಮ ಬುಡಕ್ಕ ಬತ್ತಿ ಹಚ್ಚಿಲಿಖತ್ತಾನಲ್ಲ ಅನಸ್ತು ಒಂದ್ನಿಮಿಷ. 'ಅಂದ್ರ ನೀನು ಡಾಕ್ಟೋರೋ, ಇಲ್ಲಾ ಸ್ವಾಫ್ಟ್ವೆರೋ ಕನ್ಯಾ ಪಸಂದ ಮಾಡ್ತಿ ಅನಸ್ತದ ನಂಗಂತೂ', ಏನೋ ಹೇಳವನಿದ್ದ ಬಸು, ಅಷ್ಟರಲ್ಲಿ ಡಾಕ್ಟರ್ ಮಹಾದೇವ ವಸತಿ ಸಮುಚ್ಚಯದ security ಗೇಟ್ ಹತ್ರ ಬಂದಿದ್ವಿ. ಹೊರಗಡೆ ಗಾರ್ಡ ಇರುವ ಮನೆಗಳು ನಮ್ಮುರಲ್ಲಂತೂ ಬೆರಳೆಣಿಕೆಯಷ್ಟು ಮಾತ್ರ. ಅಲ್ಲಿರುವವು ಐದೋ, ಆರೋ ಮನೆಗಳು- ಎಲ್ಲಾ ಕನಿಷ್ಠ ೩-೪ ಮಿಲಿಯಂನಿನವು. ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಮನೆಗೆ ಹೋದಾಗ ಹೊರಗಡೆ ನಿಂತ ನಾಲ್ಕು ಗಾರ್ಡುಗಳು, ಸ್ವಿಮ್ಮಿಂಗ್ ಪೂಲಿಗೊಬ್ಬ, ಕ್ಲಬ್ ಹೌಸಿಗೊಬ್ಬ, ರೆಸಾರ್ಟ್ ಆಫೀಸ್ ಹತ್ತಿರೊಬ್ಬ ಗನ್ನು ಹಿಡಿದ ಗಾರ್ಡು ನೋಡಿ ನನ್ನ ಮಗ ದಂಗಾಗಿ ಹೋಗಿದ್ದ, ಈ ದೇಶದಲ್ಲಿ ಗಾರ್ಡಿರೋ ಮನೆಗಳ ನೋಡಿಲ್ಲಾತ ಪಾಪ. ಗಾರ್ಡಗೆ ನನ್ನ ಪರಿಚಯ ಪತ್ರ ತೋರಿಸಿ ಒಳ ಹೊಕ್ಕೆವು. ಡಾಕ್ಟರ್ ಬಹಾಳುರು ಬಹಳ ಗಡಿಬಿಡಿಯಲ್ಲಿದ್ದರು, ಅವರಿಗೆ ಕೊಡಬೇಕಾಗಿದ್ದ ಕಾಗದ ಪತ್ರ ಕೊಟ್ಟೆ. ಬಸುಗೋ ಮನೆಯಲ್ಲ ನೋಡುವಾಸೆ. 'ಡಾಕ್ಟರೆ, ನಿಮ್ಮ ಹೊಸ ಮಿಡಿಯ ಮಹಲು ಇವರಿಗೆ ತೋರಿಸಬೆಕೆಂದಿದ್ದೆ, ನಡಿತದಲ್ಲಾ ಒಂದೈದ್ನಿಮಿಷ?'. 'ನಡಿತದ, ನಡಿತದ' ನಿರ್ವಾಹವಿಲ್ಲದೆ ಹೇಳಿದರವರು 'ಏನಿಲ್ಲ, ನಮ್ಮ ಏಕ್ತಾಂದು ಸ್ಪೆಶಲ ಡಾನ್ಸ್ ಕ್ಲಾಸ್ ಅದ, ನಿಮಗೊತ್ತಲ್ಲ ಆಕಿ ಡಾನ್ಸ್ ಟಿಚರು- ಐದು ನಿಮಿಷ ತಡಾ ಆದ್ರ ಟರಾಪರಾ ಶುರು ಹಚಗೊತಾಳ- ನಮ್ಮಕಿ ಅಂತು ಇಕಿದು ಆರಂಗೆಟ್ರಂ ಆದ್ರ ಸಾಕು, ಆ ಟೀಚರಿಗೊಂದು ದೊಡ್ಡ ನಮಸ್ಕಾರ ಹಾಕುಣು ಅಂತ ಕೂತಾಳ- ಇಗ, ನಮ್ಮಾಕಿ ಜಸ್ಟ್ ಕಾಲ್ ಮಾಡಿದ್ಲು. ಏನೋ ವೀಡಿಯೊ ಕ್ಯಾಮೆರಾ ಬೇಕಂತ. ಅಧಂಗ ಅದೇನೋ itune ಮಾಡಿ ಕೊಡಬೇಕಂತ ಡಾನ್ಸ್ ಟಿಚರಗ, ನಿಮ್ಮ ಹೆಲ್ಪ್ ಬೇಕಾಗಬಹುದು ಅದಕ್ಕ'. 'ಓ ಅಗತ್ಯವಾಗಿ' ಹೇಳಿದೆ, ಹಾಗೆ ಬಸುನ ಮೇಲೆ ಕರೆದುಕೊಂಡು ಹೋಗುತ್ತಾ ಅವನ ಕಿವಿಯಲ್ಲಿ ಉಸುರಿದೆ 'ಇಬ್ರು ಡಾಕ್ಟರ ಆದ್ರ ಇದ ನೋಡು ಫಜೀತಿ'- ಬಸು ಮುಂಚಿನಂತೆ, ಮಿಂಚಿನಂತೆ iphone ನ್ಯಾಗ note ಮಾಡ್ಕೊತಾನಂತ ಗೊತ್ತಿದ್ದೇ ಆ ಮಾತು ಹೇಳಿದೆ. ನಮ್ಮಲ್ಲಿ ಮೂರನೆ ಫ್ಲೋರನ್ಯಾಗ ಮೀಡಿಯಾ ರೂಂ ನೋಡಿದ್ದ ಬಸು- ಇಲ್ಲಿ ಪೂರಾ ಮಿಡಿಯಾ ಮಹಲ ನೋಡಿ ದಂಗಾದ. ಮ್ಯಾಲಿಂದ ನೋಡಿದರ ಕೊರೆದ ಇಟ್ಟಂಗ ಕಾಣಿಸೋ ಪೂಲು, ಕೂತ್ರ ನಿದ್ದಿ ಹತ್ತುವಂತಹ ಆಸನಗಳು, ಕೈ ಚಾಚಿದರ ಸಿಗೋ ವೈನ ಬಾಟಲಿಗಳು, ಎಲ್ಲಾ ನಿಟಾಗಿದ್ದವು. ಡಾನ್ಸ್ ಟಿಚರ ಮ್ಯಾಲಿನ ಸಿಟ್ಟು ಡಾಕ್ಟರ ನಮ್ಯಾಲೆ ತೋರ್ಸ್ಯಾರು ಅನ್ಕೊಂಡು ಬಸುನ ಎಳ್ಕೊಂಡು ಅಲ್ಲಿಂದ ಹೊರಟೆ. 'ಬಸು, ಒಂದ್ರೌಂಡು ಸ್ಟಾರ್ ಬಕ್ಕ್ಸ್ ಕಾಫಿ ಹೀರೂಣ ಏನು?' 'ಏ ಬ್ಯಾಡ್ರಿ ಸರ, ಆಗಳೇ ಅಕ್ಕಾರು ಮನ್ಯಾಗ ಕೊಟ್ಟಾರಲಾ- ನಾ ಸ್ಟಾರ್ ಬಕ್ಕ್ಸ್ ಕುಡಿಯುದು ಕಂಪನಿ ಕರ್ಚ್ನ್ಯಾಗ ಮಾತ್ರ' 'ಇದ ನೋಡು ನನಗ ಭಾರಿ ಪಸಂದ ಆಗುದು- ಇದ್ದದ್ದ ಇದ್ದಂಗ ಹೇಳ್ತಿ ನೋಡು- ಇದ ಒಂದು ಮಾತ್ರ ಜಿಂದಗಿ ಇರು ಮಟಾ ಚೇಂಜ್ ಆಗಬ್ಯಾಡಾ' 'ಏ, ಇಲ್ರಿ ಸರ, ನಮ್ಮ ಬಾಗಲಕೋಟ ಮಂದಿ ಸಿಂಪ್ಲಿ ಸರಳರಿ, ಇ ಫೆಸಬುಕ್ ಕಾಲದವರಗತೆ ಮ್ಯಾಲೆ ಮ್ಯಾಲೆ ಜಿಲೇಬಿ ತಿನಸವರಲ್ರಿ. ಅದಕ್ಕ ನಮ್ಮ ಅಣ್ಣ, ನಾ ಏನ ಮಾಡಿದ್ರು ನಿಮ್ಮ ಗುಡಾ ಒಂದ ಸರ್ತಿ ಮಾತ ಆಡಿದ ಮ್ಯಾಲೆ ಡಿಸೈಡ ಮಾಡಾಕ ಹೇಳ್ಯಾನ್ರಿ- ನಿವ ಅಂದ್ರ ಅವಂಗ ಭಾರಿ ಅಭಿಮಾನ್ರಿ' ![]() ಕಳೆದ ಹದಿನೈದು ವರುಷದಲ್ಲಿ ಒಂದು ಸಾರಿಯೂ ಗುರ್ಯಾನೊಂದಿಗೆ ಮಾತನಾಡದ ನನ್ನ ಮೇಲೆ ನನಗೆ ಜಿಗುಪ್ಸೆ ಎನಿಸಿತು. ಮೊನ್ನೆ ಹೊದಾಗಲಾದರು ಭೇಟಿ ಯಾಗಬಹುದಿತ್ತೇನೋ? ಒಣ ಹಮ್ಮು, ಬಿಗುಮಾನ ಎಲ್ಲಾ ಬದಿಗೆ ಸರಿಸಿ ಒಗೆದುಬಿಡಬೇಕು. ಈ ಒಣ ಹಮ್ಮಿನ ಪ್ರತಿಷ್ಠೆಯ ಅನಿಷ್ಟ ಅನಾಯಾಸವಾಗಿ ಅಂತ್ಯವಾಯಿತು. ಹಾಟ್, ನೋ ಹಾಟ್ ನಂಥ ಎಡಬಿಡಂಗಿ ಮೂಲವಾಗಿಟ್ಟುಕೊಂಡ, ಬರಿ ತೋರಿಕೆಗಾಗಿ ಹುಟ್ಟಿಕೊಂಡ ಫೆಸಬುಕ್ನಲ್ಲಿ ತಿಳಿಯಾದ, ಸ್ಪಟಿಕದಂತಹ ಮನೋಹರವಾದದ್ದು ಇರಲು ಸಾಧ್ಯವೇ? ಅಥವಾ ಕೆಸರಿನ ಕಣ್ಣು, ಮಲಿನವಾದ ಮನಸ್ಸು ತುಂಬಿ ತುಳುಕಾಡುವಾಗ ಮುಗ್ಧತೆ ಎಲ್ಲ ಮುಸುಕಾಗಿ, ಮಗುವಿನ ಮನಸಿನವರೆಲ್ಲಾ 'ಮಬ್ಬ' ಎಂದು ಕರೆಸಿಕೊಳ್ಳುವಂತಾಗುವದೇ? ಮೊದಲು ನೋಡಿದಾಗ, ಮಾತಾಡಿದಾಗ ಬಸು ಎಷ್ಟು ಮಬ್ಬು ಎನಿಸಿರಲಿಲ್ಲವೇ? ಬಸುನೊಂದಿಗೆ ಎಲ್ಲಾ ಮುಕ್ತವಾಗಿ ಹಂಚಿಕೊಳ್ಳಬೇಕೆನಿಸಿತು. 'ಬಸು, ನಿ ಬರೇ ಸರಳ ಅಷ್ಟೇ ಅಲ್ಲಾ , ಭಾರಿ ಪ್ರಾಕ್ಟಿಕಲ್ ಆದ್ಮಿ ಅದಿ ನೋಡು'. 'ಹೌದ್ರಿ ಸರ, ನಮ್ಮ ಅಜ್ಜ ಮುಂಜಾನೆದ್ದು ಮಲ್ಲಪ್ಪಣ್ಣಾವರ ಕಡೆ ಹದಿನಾಲ್ಕು ರೂಪಾಯಿ ಇಸ್ಕೊಂಡು ಪ್ಯಾಟಿಗೆ ಹೋಗಿ, ದಲ್ಲಾಳಿಗಳ ಜೋಡಿ ಗುದ್ದಾಡಿ, ಇಡಿ ದಿವಸ ಒದ್ದಾಡಿ, ಎರಡೋ, ಮೂರೋ ರೂಪಾಯಿ ತೊಗೊಂಡ ಬರ್ತಿದ್ದರಂತ್ರಿ ಸಂಜಿಕ. ನಮ್ಮಪ್ಪ ಅದನ್ನ ನಮಗ ದಿನಾ ಹೇಳ್ತಿದ್ದ. ಅಲ್ಲಿಗೆ ಅವರ roi ಎಷ್ಟ ಆಯ್ತ್ರಿ? ಬಂಡವಾಳ ಇಲ್ಲದ ದಿವಸಾ ಬದುಕು, ದೊಡ್ಡ ಸಂಸಾರ ಸಾಕಿದ್ದು ನೋಡಿದ್ರ ಅವರ ಛಲ ನನ್ನೊಳಗೂ ಹನಿ ಹನಿಯಾಗಿ ಇಳಿದು ಬಂದೈತಿ ಅನಸ್ತೈತಿ, ಅದಕ್ಕ ಖಾಲಿ. ಫಾಲತು ಒಳಗಾ ರೊಕ್ಕ ಹಾಕಲಿಕ್ಕೆ ಮನಸು ಬರಂಗಿಲ್ರಿ' 'ಅಂದ್ರ ಆಲ್ರೆಡಿ ಎಲ್ಲಾ ವಿಚಾರ ಮಾಡಿಯೇ ಇಲ್ಲಿ ದಯಮಾಡಿಸಿ ಅನ್ನು' 'ಹೌದ್ರಿ ಸರ, ಮೂರ ತಿಂಗಳಿಂದ ಇದೆ ತಲೆ ತಿನ್ನಾಕತ್ಹದ್ರಿ, ಬ್ಯಾರೆ ಎಲ್ಲಾ ನಾ ಪಟಾ ಪಟಾ ಮಾಡಿ ಒಗಿತಿನ್ರಿ- ಆದ್ರ ಇ ಮೂರೂ ಕನ್ಯಾದಾಗ ಯಾವದು ಪಸಂದ ಮಾಡಬೇಕು ಅನ್ನುದ ಮುಶ್ಕಿಲ್ ಆಗ್ಯದ' 'ಈಗ ಸಧ್ಯಕ್ಕ ಯಾವದು ಅನಸ್ತೈತಿ?' 'ನನಗೇನೋ ಇ ದೇಶದಾಗ ಕೆಲಸದ ಗತಿ ನೋಡಿದ್ರ ಡಾಕ್ಟರೋ , ಸಾಫ್ಟವೆರೋ ಸೇಫ್ ಅನಸ್ತದ್ರಿ- ಅದಕ್ಕ ನಿಮದು ಅಭಿಪ್ರಾಯ ಕೇಳಬೇಕ ಅನಿಸಿದ್ರಿ' ಮತ್ತೆ ಕಲ್ಮಶಶೂನ್ಯ ಮನಸಿನ ಬಸುವಿನ ಉತ್ತರ. ಇನ್ನೂ ಏನೋ ಹೇಳುವವನಿದ್ದೆ- ಅಸ್ಟರಲ್ಲಿ ಮನೆ ಬಂತು. ಮಗ ಇಳಿದ , ಅಕ್ಕನ ಮಗಳು ಅನಿತಾ ಏರಿದಳು ವ್ಯಾನು. 'ಇದನ್ನು ನೋಡ್ಕೊಂಡು ಬಿಡು ಬಸು, ಇ ದೇಶದಾಗ ವೀಕೆಂಡ್ ಬಂತಂದ್ರ ಸಾಕು, ಮಕ್ಕಳ ಕ್ಲಾಸು ಒಂದ ಆದ ಮ್ಯಾಲೆ ಒಂದು- ನಾವು ಸಣ್ಣವರಿದ್ದಾಗ ಏನೇನು ಕಲಿಲಿಕ್ಕೆ ಸಿಕ್ಕಿದಿಲ್ಲೋ ಅದೆಲ್ಲಾ ನಮ್ಮ ಮಕ್ಕಳ ಮುಖಾಂತರ ಮಾಡ್ಲಿಕ್ಕೆ ನೋಡ್ತೆವಿ. ಅವು ಮ್ಯಾಥ್ ಹಿಡಕೊಂಡು, ಮೃದಂಗ ದ ತನಕ, ಭರತನಾಟ್ಯ ಹಿಡಕೊಂಡು ಬ್ಯಾಲೆತನಕ, ಸ್ವಾಕರ ಹಿಡಿದು ಸ್ಟಾಕ ತನಕ ಎಲ್ಲಾನು ಕಲಿಬೇಕು, ಎಲ್ಲಾದ್ರೋಳಗು ಮಿಂಚಬೇಕು ಅವರು. ಪಾಪ ಬಾದಾಮಿಯಿಂದ ಹಿಡಿದು ಬೋಸ್ಟನ ತನಕ ಎಲ್ಲಾ ಗೊತ್ತಿರಬೇಕು ಅವಕ್ಕ ಅನ್ಕೊತಿವಿ. ನಾ ಏನರೆ ಅವಕ್ಕ ಮಾಂಜಾ ದಾರಕ್ಕ ನಾವು ಎಷ್ಟು ಟೈಮ ವೇಸ್ಟ್ ಮಾಡಿದ್ವಿ ಅಂತ ಹೇಳಿದ್ರ ನಂಬಗಿಲ್ಲ ಅವು. ಎಂಟೋ, ಹತ್ತೋ ವರುಷದವರಿದ್ದಾಗ ಒಬ್ಬೊಬ್ಬರೇ ನದಿ ದಂಡಿಗೆ ಹೋಗಿ ಆಡಲಿಕ್ಕೆ ಇಲ್ಲೇನೋ, ನಮ್ಮ ದೇಶದಾಗ ಸಾಧ್ಯ ಇಲ್ಲೋ ಏನೋ ಇಗ. ಎಲ್ಲದಕ್ಕೂ ಅಪ್ಪ, ಅವ್ವಾ ಇರಬೇಕು ಜೋಡಿಗೆ'. ಅದನ್ನ್ಯಾಕ ಐಫೋನ್ ನ್ಯಾಗ ಬರ್ಕೊಂಡನೋ ಬಸು. ಅಂತು ಭಾರಿ ಡಿಟೇಲಿನ ಮನಶ್ಯಾ ಇಂವ. 'ಮಾಮಾ, ಇವತ್ತು ಅಲ್ರೆಡಿ ಒಂದನೇ ತಾರೀಖು, ಚೆಕ ಕೊಡಬೇಕು ಡಾನ್ಸ್ ಟಿಚರಿಗೆ' ಅನಿತಾ ನೆನಪಿಸಿದಳು. 'ಓಕೆ, ಎಷ್ಟು ಶನಿವಾರ ಇ ತಿಂಗಳಲ್ಲಿ? ನಾಲ್ಕು ತಾನೇ, ನಾಲ್ಕು ಟೈಮ್ಸ್ ೨೫ ಆಲ್ವಾ?' 'ಇಲ್ಲಾ, remember ಹೋದವಾರ ಎಕ್ಷ್ತ್ರಾ ಕ್ಲಾಸ್ ತೊಗೊಂಡಿದ್ದು, india fest ಗೆ ಅದಕ್ಕೆ ೨೫, ಮತ್ತ ಡ್ರೆಸ್ಸಗೆ ೩೫ ಅದ ಅಲ್ಲದ ಅವತ್ತು ಅಳತ್ತಮ ಟೀಚರ ಕೊಟ್ಟಿದ್ಲು ಅದಕ್ಕೊಂದು ೫, ಸೊ ಟೋಟಲ್ ೧೬೫ ಕೊಡಬೇಕು' ಪಾಪ ಬಸುಗ ಟೈಪ್ ಮಾಡಲಾಗದಸ್ಟು ಮಾಹಿತಿ. 'ಅಲ್ಲಾ, ಅನಿತಾ, ಇಂಡಿಯಾಕ್ಕ ಹೋದಾಗ ಅಳತ್ತಮ ೨೦ ರೂಪಾಯಿಗೆ ಒಂದರಂಗ ಹತ್ತು ತಂದಿದೆಲ್ಲ? ಅದಕ್ಕ ೫ ಡಾಲರಾ?' 'ಆರ ವೀ ಇನ್ ಇಂಡಿಯಾ?' ಅನಿತಾಳ ಸಿದ್ಧ ಉತ್ತರ. 'ಆಮ್ಯಾಲೆ ಒಂದು ನೋಟ್ ಬರೆದ ಕೊಡಬೇಕು' 'ಏನು ಅಂತ?' 'ಅದೇ, ಇನ್ಮ್ಯಾಲೆ ದಿವಸಾ ಹದಿನೈದು ನಿಮಿಷ ಡಾನ್ಸ್ ಪ್ರಾಕ್ಟಿಸ ಮಾಡಸ್ತಿವಿ ಮನ್ಯಾಗ ಅಂತ' ತಲಿ ಖರಾಬ ಅಗ್ಲಿಖತ್ತು, ಬಸುಗ ಹೇಳಿದೆ 'ನಿನಗೆ ಮನಿಗೆ ಹೋದಮ್ಯಾಲೆ ತೋರಸ್ತಿನಿ ಇಕಿ ಡಾನ್ಸ್ ಟಿಚರ ಇಮೇಲ್. ಅದರೊಳಗ ೧೭ ಪಾಯಿಂಟ್ ಆದಾವ. ಎಲ್ಲಿ ಕಾರ ಪಾರ್ಕ್ ಮಾಡಬೇಕು ಹಿಡ್ಕೊಂಡು, ಫೀಸ್ ಕೊಡದಿದ್ರ ಆಗು ಫೈನು, ಯಾವತ್ತ ಅವರ ಕ್ಲಾಸ್ ನೋಡ್ಲಿಕ್ಕೆ ಹೋಗಬಹುದು, ಏನೇನು ಮಾಡ್ಬೇಕು, ಬಿಡಬೇಕು ಅಂಬೋ ದೊಡ್ಡ ಲಿಸ್ಟ್ ಅದ' 'ಅಲ್ರಿ ಇಷ್ಟು ನಿಭಂದನಾ ಹೆಂಗ್ರಿ?' 'ಅದಪ್ಪ, ಡಿಮಾಂಡು ಜಾಸ್ತಿ ಇದ್ದು, ಸಪ್ಪ್ಲೈ ಕಮ್ಮಿ ಇದ್ದ್ರ ಆಗುದು. ಆಗಲೇ ಹೇಳಿದೆನೆಲ್ಲ, ಅಮೆರಿಕಾದಾಗ ಎಲ್ಲೇ ಹೋಗು. ಮನ್ಯಾಗ ಹುಡಿಗ್ಯಾರಿದ್ರ ಅಂದ್ರ ಗ್ಯಾರಂಟಿ ಭರತನಾಟ್ಯನೋ, ಇನ್ಯಾವದು ಒಂದು ಡಾನ್ಸ ಕ್ಲಾಸಿಗೆ ಹೋಗ್ತಾ ಇರ್ತಾರ' ''ಇದು , ನೀವು ನಿಮ್ಮ ಟೈಮನ್ಯಾಗ ಮಾಡ್ಲಿಕ್ಕಾಗದ್ದ ಕೆಟೆಗೊರಿಯೊಳಗ ಬರ್ತದೆನ್ರಿ?' 'ಕರ್ರೆಕ್ಟ ಹೇಳಿದೆ ನೋಡು' 'ಮಾಮಾ, ಇದೊಂದು ಶೀಟು ಸೈನ್ ಮಾಡು' ಅನಿತಾ ಪೇಪರ್ ಮುಂದೆ ತಳ್ಳಿದಳು 'ಏನಿದು?' 'ಅದೇ, ಮೊನ್ನೆ ಟಿಚರು ಇಮೇಲ್ ಕಳಿಸಿದ್ದಳಲ್ಲ? ಬಿದ್ರ, ಎದ್ರ ಏನೇ ಅದ್ರು ಡಾನ್ಸ ಸ್ಟುಡಿಯೋದವರ ಜವಾಬ್ದಾರಿ ಅಲ್ಲ ಅಂತ, ಇದು ಪ್ರತಿ ವರುಷ ರಿನಿವ ಮಾಡಿ ಕೊಡಬೇಕಂತ' ಅದನ್ನು ಸೈನ್ ಮಾಡಿ ಕೊಟ್ಟಾಯಿತು. 'ಕನ್ನಡದಕಿ ಏನ್ರಿ' ಕೇಳಿದ ಬಸು 'ಕನ್ನಡ, ತೆಲಗು, ತಮಿಳ, ಹಿಂದಿ ಎಲ್ಲ ಬರತೈತಿ- ಸಕಲ ಕಲಾವಲ್ಲಭೆ ಅಂತ ಹೇಳ್ಕೊತಾಳ, ನೋಡಿದ್ರ ಆಂಧ್ರಾದಕಿ ಅನಸ್ತಾಳ' ಅಲ್ಲೇ ಸ್ಟುಡಿಯೋ ಹೊರಗೆ ಮ್ಲಾನ ಮುಖ ಹೊತ್ತು ನಿಂತಿದ್ದರು ಡಾಕ್ಟರ್ ಮಹಾದೇವರ ಮಡದಿ. ಅವರನ್ನು ಬಸುಗೆ ಪರಿಚಯಿಸುತ್ತಾ ಹೇಳಿದೆ 'ಡಾಕ್ಟರ್ ಉಮಾ, ನಿಮ್ಮನೆಗೆ ಹೋಗಿದ್ವಿ ಆಗಳೇ, ಬಂದು ಹೋದರೆನ್ರಿ ನಿಮ್ಮ ಯಜಮಾನರು?' 'ಬಂದು ವೀಡಿಯೊ ಕ್ಯಾಮೆರಾ ಕೊಟ್ಟ ಹೋದರು, ಟಿಚರ್ರಿಗೆ ನಮ್ಮ ಹುಡಿಗಿದು ಡ್ರೆಸ್ ಮತ್ತೊಮ್ಮೆ ಚೆಕ್ ಮಾಡಬೇಕಂತ, ಅದಕ್ಕ ತರಲಿಕ್ಕೆ ಹೋಗ್ಯಾರ' ಬಸುಗೆ ಹೇಳಿದೆ 'ಇವತ್ತು ನೀನು ಪುಣ್ಯ ಮಾಡಿ ನೋಡು, ತಿಂಗಳ ಮೊದಲನೇ ಕ್ಲಾಸ್, ಬೇಕಂದ್ರ ಹೋಗಿ ಟಿಚರ ಮುಖ ದರ್ಶನ ಮಾಡಿ ಬರಬಹುದು' ಒಳಗಡೆ ಹೋದ್ವಿ, ಇರುವ ನಾಲ್ಕೇ ನಾಲ್ಕು ಹಳೆ ಜಮಾನದ ಖುರ್ಚಿಗಳು, ಓಬಿರಾಯನಕಾಲದ ಒಂದು ನಾಲ್ಕು ಮ್ಯಾಗಝಿನಗಳು. ಒಂದು ಬದಿ ನಟರಾಜನ ಮೂರ್ತಿ, ಇನ್ನೊಂದು ಬದಿಯಲ್ಲಿ ಒಂದು ವೀಣೆ, ನಡುವೆ ವಿರಾಜಮನಿಯಾಗಿರುವ ತೀಕ್ಷ್ಣ ಕಣ್ಣಿನ ಕಪ್ಪು ವರ್ಣದ ಟಿಚರ. ಕೈ ಕಟ್ಟಿಕೊಂಡು ನಿಂತ ಆರೆಂಟು ಮಾತಾ, ಪಿತಗಳು ಎಂದಿನಂತೆ ಡಾನ್ಸ್ ಟಿಚರ ಯಾರನ್ನೋ ತರಾಟೆಗೆ ತೆಗೆದುಕೊಳ್ಳುತ್ತಾ ಇದ್ದಳು 'ಎರಡು ವರುಷದಿಂದ ಬರ್ತಾ ಇದ್ದೀಯ, ಇನ್ನು ಅರಮಂಡಿ ಸರಿಯಾಗಿ ಬರೋದಿಲ್ಲವೆ?' ಈ ಕಡೆ ತಿರುಗಿ ಸಟಕ್ಕನೆ ನನ್ನ ಮಿತ್ರ ಗಿರೀಶನ ಮೇಲೆ ಇಂಗ್ಲಿಷಿನಲ್ಲಿ ಹರಿಹಾಯ್ದಳು 'ಗಿರೀಶ, ನಿಮಗೆ ಡ್ರೆಸ್ ತಂದು ತೋರಿಸಿ ಎಂದು ಹೇಳಿರಲಿಲ್ಲವೇ ಮೊನ್ನೆ?' 'ಹೌದು ಶುಭಾ, ಆದರೆ ನಾನು ಟ್ರಾವೆಲ್ ಮಾಡ್ತಾ ಇದ್ದೆ, ತರಲಾಗಲಿಲ್ಲ'. ಸಟ್ಟಕ್ಕನೆ ಬಂತು ಇನ್ನೊದು ಬಾಣ 'ಅಲ್ಲಾ, ನಿಮ್ಮ ಒಬ್ಬರಿಂದ ಇನ್ನುಳಿದ ಏಳು ಹುಡಗಿಯರಿಗೆ ಎಷ್ಟೊಂದು ತೊಂದರೆ , ಇಗಲೇ ಹೋಗಿ ತೋಗುಂಡು ಬನ್ನಿ' ಮರುಮಾತಾಡದೆ ಹೊರನಡೆದ ಗಿರೀಶ. ಒಂದು ಕ್ಲಾಸ್ಸಿನಲ್ಲಿ ೮ ಮಕ್ಕಳು, ಮುಖದ ಮೇಲೆ ಗಂಭೀರ ಮುದ್ರೆ ಯಾವಾಗ ಕ್ಲಾಸ್ ಮುಗಿದು ಹೊರಹೊಗುತ್ತೆವೋ ಎಂಬ ದುಗುಡ ಹೊತ್ತಂತಹ ಮುಖಗಳು. ![]() 'ಟಿಚರ್ರು, ಸ್ಟುಡಿಯೋನೂ ರೆಂಟ್ ಮಾಡ್ತಾರೆನು?' ಕೇಳಿದ ಬಸು 'ಹೌದು ಅನಸ್ತೈತಿ' ಹೇಳಿದೆ ನಾನು ಪುಣ್ಯಾಕ್ಕ ತಾಸಿಗೆ ಎಷ್ಟು ಅಂತ ಕೇಳಲಿಲ್ಲಾ. ಉತ್ತರ ಗೊತ್ತಿದ್ದೇ ಕೇಳಲಿಲ್ಲ ಅನಸ್ತದ. 'ಟಿಚರು ಭಾರಿ ಸ್ಟ್ರಿಕ್ಟ್ ಇದ್ದಾರೇನು ?' 'ಹುಡುಗರ ಮೋತಿ ನೋಡಿದ್ರ ಅನಸ್ತದ- ಅದೇನೋಪ್ಪ ಡ್ಯಾನ್ಸು ಕಲಿಯೋವಾಗ ಯಾವಾಗಲು ಸೀರಿಯಸ್ ಇರಬೇಕೋ ಏನೋ? ನಾವಂತೂ ಡ್ಯಾನ್ಸು/ಪಾನ್ಸು ಕಲ್ತಿಲ್ಲ, ಅವ್ರು ಕಲಿಸಿದ್ದ ಖರೆ ಇವ್ರು ಕಲಿತಿದ್ದ ಖರೆ" 'ಈ ಭರತನಾಟ್ಯ ಇಂಥವ ಅಳಿಲಿಕ್ಕ/ಎಷ್ಟು ಕಲ್ತಾರ ಅಂತ ನೋಡ್ಲಿಕ್ಕೆ ಏನರ ಸಂಸ್ಥಾ ಅವ ಏನ?' 'ಈ ಅಂಥವೆಲ್ಲ ಏನು ಇಲ್ಲ. ಪಿಯನೋ ಕಲಸವರಾದ್ರ ಏನೋ 'guild' ಏನೋ ಮಾಡ್ಕೊಂಡಾರ, ಇವರಿಗೆ ಅಂಥದೆಲ್ಲ ಏನ ಇಧ್ಹಂಗ ಇಲ್ಲ' 'ಬ್ಯಾರೆ ಬ್ಯಾರೆ ಯೇಜಿನ ಹುಡ್ಗ್ಯಾರನ ತೊಗೋತಾರ ಅಲ್ಲೇನು? ಅಂದಾಜು ಎಷ್ಟು ಹುಡ್ಗ್ಯಾರಿರಬಹುದು ಟಿಚರ ಹತ್ರ?' 'ಒಂದು ಹದಿನೈದು ಬ್ಯಾಚರ ಅವ ಅನಸ್ತದ- ಒಂದೊದು ಬ್ಯಾಚ ನ್ಯಾಗ ಏಳೋ, ಎಂಟೋ ಗ್ಯಾರಂಟಿ' ಬಸುನ ಬ್ರಹ್ಮಾಂಡ ಪ್ರಶ್ನೆ ಎಲ್ಲಿ ಟಿಚರಗೆ ಕೇಳಿಸಿ ನನ್ನ ಮಾನ ಮೂರಾಬಟ್ಟೆ ಆದೀತು ಅನಸ್ಲಿಖತ್ತು, 'ನಡಿ ಒಂದ್ರೌಂಡು ಇಲ್ಲೇ ಶಂಕರನ ಮನೆಗೆ ಹೋಗಿ ಬರುಣು' ಎನ್ನುತ್ತಾ ಬಸುನ ಹೊರಗೆ ಎಳ್ಕೊಂಡು ಬಂದೆ. ಇನ್ನು ಸ್ವಲ್ಪ ಹೊತ್ತು ಇದ್ದು, ಇನ್ನೊಂದು ನಾಲ್ಕ ಮಂದಿಗೆ ಒಂದ ಎಂಟು ಪ್ರಶ್ನೆ ವಗೆಯೋ ಇರಾದಾ ಇತ್ತು ಅನಸ್ತದ ಬಸುಗ, ನಿರ್ವಾಹ ಇಲ್ಲದೆ ನಡೆದ. ಕಾರು ಪಾರ್ಕಿಂಗ್ ಇಂದ ಹೊರಬರ್ತಿರಬೇಕಾದರೆ ಮತ್ತೇನೋ ನೋಟ್ ಮಾಡ್ಕೊಂಡ ಬಸು. 'ಶಂಕರ ಅಂದ್ರ ಯಾರು?' 'ಅವರು ಇಲ್ಲಿನ ಕನ್ನಡ ಸಂಘದ ಅದ್ಯಕ್ಷರು- ಸ್ವಂತ ಸಾಫ್ಟ್ವೇರ್ ಕಂಪನಿ ಮಡ್ಕೊಂಡಾರು -ಒಂದೇನೋ ಡಾಕುಮೆಂಟ್ ಕೊಡಬೇಕಾಗೈತಿ' ಶಂಕರ ಮನೇಲೆ ಇದ್ರು, ಅದು ಇದು ಮಾತಾಡಿ ಕಾಫಿ ಹಿರಿದ್ವಿ. ಯಾಕೋ ಏನೋ ಬಸು ಜಾಸ್ತಿ ಏನು ಕೇಳಲಿಲ್ಲ, ಗಿಚಿಕೊಳ್ಳಲಿಲ್ಲ. ಬರಿ standard ಪ್ರಶ್ನೆಗಳಾದ 'ಬಂದು ಎಷ್ಟು ವರ್ಷ ಆತು? ಎಲ್ಲಿ ಕೆಲಸ?' ಇಂತಹದೆ ನಾಲ್ಕು ಪ್ರಶ್ನೆಗಳು. 'ಶಂಕರ ಭಾರಿ photographer ಬಸು, ಕೆಲವೊಂದು ಅವಾರ್ಡು ಬಂದಿವೆ' ಹೇಳಿದೆ ನಾನು ಏನೋ ತೋರಿಸಬೇಕೆಂದು ಏಳುತ್ತಿದ್ದ ಶಂಕರ ಮೊಬೈಲ್ ಅಲಾರ್ಮ್ ಮೆಸೇಜ್ ನೋಡುತ್ತಾ 'ಓ, ನಾನು ಹೋಗಿ ನನ್ನ ಮಗಳನ್ನು ಅವಳ ಭಾಂಗ್ರಾ ಕ್ಲಾಸಿನಿಂದ ಕರೆದುಕೊಂಡು ಬರಬೇಕು' 'ಶಂಕರ್, ಅವಳು ಮುಂಚೆ ಭರತನಾಟ್ಯಕ್ಕೆ ಹೋಗ್ತಾ ಇದ್ದಳಲ್ಲ ಅದು ಮುಗಿಯಿತೇ?' ಕೇಳಿದೆ ನಾನು. 'ಅಯ್ಯೋ, ಅದು ಮುಗಿಯದ ಕಥೆ -ನಾಲ್ಕೈದು ವರುಷ ಮಾಡಿದ ಮೇಲೆ ಯಾಕೋ ಅವಳಿಗೆ ಅದರಲ್ಲಿ ಆಸಕ್ತಿ ಹೋಯಿತು, ಈಗ ಭಾಂಗ್ರಾ ತಲೆಯಲ್ಲಿ ಬಂದಿದೆ' ಸರಿ ಅಲ್ಲಿಂದ ಹೊರಟಿವಿ ವಾಪಸ್ಸು ಡ್ಯಾನ್ಸ ಕ್ಲಾಸ್ ಕಡೆಗೆ. ಹೆಚ್ಚು ಕಮ್ಮಿ ಮುಗಿಯಲು ಬಂದಿತ್ತು ಅನಿತಾಳ ಡ್ಯಾನ್ಸ ಕ್ಲಾಸ. ಈ ಸಾರಿ ಒಳಗೆ ಬಂದ ಬಸು ಬರಿ ಸ್ಟುಡಿಯೋದ ತುಂಬೆಲ್ಲ ಹಾಕಿದ ಕನ್ನಡಿಗಳನ್ನು, ಇಟ್ಟಿದ್ದ ಕುರ್ಚಿಗಳನ್ನು, ಇನ್ನೊಂದು ಬಾಗಿಲಾಚೆ ಇದ್ದ office ಕೋಣೆಯನ್ನು ನೋಡುತ್ತಲಿದ್ದ. ವಾಪಸ್ಸು ಮನೆಗೆ ಬಂದಾಗ ಮಡದಿ ಹೊರಗಡೆ ಉಟಕ್ಕೆ ಹೋಗಲು ರೆಡಿ ಆಗಿ ನಿಂತಿದ್ದಳು. ಭಾರತೀಯ ಉಪಹಾರಮಂದಿರಗಳಾದ ಉಡುಪಿ, ಟಾವರ್, ಜ್ಹೈಕಾ ನಾ ಯಾವದಕ್ಕೆ ಎಂದು ಒಂದೆರಡು ನಿಮಿಷ ಮಾತಾಡಿದ ಮೇಲೆ ತಂದೂರ್ ಇಂಡಿಯಾ ಕ್ಕೆ ಹೋದೆವು. ಕಂಠಮಟಾ ಬಡಿದ ಮೇಲೆ ನಮ್ಮೂರಿನ ಸುತ್ತ ಮುತ್ತಲ್ಲ ಸುತ್ತಾಡಿಸಿದೆ ಬಸುಗೆ. ಯಾಕೋ ಅಷ್ಟು notedown ಮಾಡಿಕೊಳ್ಳಲಿಲ್ಲ ಬಸು. ಕ್ಲೌಡೂ ತುಂಬಿಹೊಗಿರಬೇಕೆನೋ ಅಂದುಕೊಂಡೆ. ಮನೆಗೆ ಬರೋದರಲ್ಲಿ ರಾತ್ರಿ ತುಂಬಾ ತಡವಾಗಿದ್ದರಿಂದ ಬಸುನ ಜೊತೆ ಜಾಸ್ತಿ ಮಾತನಾಡಲಾಗಲಿಲ್ಲ. ಮರುದಿನ ಬೆಳಗ್ಗೆ ಬೇಗ ಎದ್ದು ಬಸ್ಸಿಗೆ ಬಿಡುವಾಗ ಬಸು ಹೇಳಿದ 'ಬಹಳ ಚೊಲೋ ಆತ ನೋಡು ನಿಮ್ಮಲ್ಲಿಗೆ ಬಂದದ್ದು , ನನ್ನ ತಲೆ ಕೊರಿತಿದ್ದ ದೊಡ್ಡ ಪ್ರಶ್ನೆಗೆ ಬೇಕಾದ ಉತ್ತರಕ್ಕ ಮಾಹಿತಿ ಸಿಕ್ತ ನೋಡು' 'ಅಂದ್ರ ಉತ್ತರ ಇನ್ನು ಸಿಕ್ಕಿಲ್ಲ ಅನ್ನು' 'ಬರೆ ಡಾಟಾ ಕ್ರೂಡಿಕರಿಸಿದರ ಫಾಯದಾ ಇಲ್ಲಾ, ಅದನ್ನ ಆರದು ಕುಡಿದು ಅಪ್ಲೈ ಮಾಡ್ಕೊಬೇಕು'. ಮುಂಜಾ ಮುಂಜಾನೆ ಯಾಕೋ ಬಸುನ ಲಾಜಿಕಗೆ ಅಷ್ಟು ತಲೆ ಕೆಬರಿಕೊಂಡು ಅರ್ಥ ಮಾಡಿಕೋಬೇಕು ಅನಿಸಲಿಲ್ಲ. 'ಇವತ್ತೊಂದು ದಿವಸ ಇದ್ದು ನಾಳೆ ಸೋಮವಾರ ಹೋಗಬಹುದಿತ್ತು ಬಸು' ಅಂದೇ 'ಏ, ಇವತ್ತು ಹೋಗಿ ಒಂದು ನಾಲ್ಕೈದು ತಾಸು ಮೀಟರ್ ಓಡಿಸಿದರ, ಮುಂದಿನ ತಿಂಗಳು ಇಂಡಿಯಾ ಕ್ಕ ಹೋಗಲಿಕ್ಕೆ ಅನಕೂಲ ಆಗ್ತದ- ನಾ ನಿಮಗ ಗ್ಯಾರಂಟಿ ಫೋನ್, ಇಮೇಲ್ ಮಾಡ್ತೀನಿ' ಇದಾದ ಎರಡು ತಿಂಗಳ ತನಕ ಬಸುನ ಪತ್ತೇನ ಇಲ್ಲಾ. ಇಂಡಿಯಾ ಕ್ಕ ಹೋಗಿ ಇನ್ನೊಂದು ಡಜನ್ ಕನ್ಯಾ ನೋಡ್ಲಿಕತ್ತಿರಬೇಕು, ಕ್ಲೌಡ ನ್ಯಾಗ ಕ್ಯಪಾಸಿಟಿ ಜಾಸ್ತಿ ಮಾಡ್ಕೊಂಡು ಎನಲೈಜ ಮಾಡ್ಕೊತ ಕೂತಿರಬೇಕು ಅಂದು ಕೊಂಡೆ. ಒಂದು ಶನಿವಾರ ಮುಂಜಾನೆ ಬಂತು ಬಸುನ ಕ್ವಾಲ. 'ಸಾರೀ ಸರ ,ಬಹಳ ದಿವಸಾ ಆತು ಫೋನ್ ಮಾಡ್ಲಿಕ್ಕಗಿರಲಿಲ್ಲ, ಬಹಳ ಬಿಜಿ ಯಾಗಿದ್ದೆ, ಮೊನ್ನೆ ಇಂಡಿಯಾಯದಿಂದ ಬಂದೆ. ಮದುವೆ ಮಾಡ್ಕೊಂಡು ಅಕಿನ್ನು ಕರ್ಕೊಂಡೆ ಬಂದೆ' 'ಓ ಗುಡ್, ಗುಡ್' ಹುಡುಗಿ ಯಾರು ಅಂತ ಬಾಯಿವರೆಗೂ ಬಂದಿದ್ದು ಹೊರಬರುಕ ಮುಂಚೆ, ಬಸು ಹೇಳಿದ 'ನಿಮ್ಮಲ್ಲಿ ಬಂದಾಗ ನಾ ಕಲೆಕ್ಟ ಮಾಡಿದ ವಿಷಯ ಎಲ್ಲ ಭಾರಿ ಉಪಯೋಗ ಆತ ನೋಡು, ನನ್ನ ಜಿಂದಗಿನ ಸೆಟ್ಟಲ ಆತು' ಬಸು ಇಗ ಏಕವಚನಕ್ಕ ಇಳಿದಿದ್ದ ನೋಡಿ ಖುಷಿಯಾಯಿತು. 'ಅದೆಲ್ಲ ಆಮ್ಯಾಲೆ ಹೇಳುವಂತಿ- ಆ ಮೂರರೋಳಗ ಯಾರ್ನ ಮಾಡ್ಕೊಂಡಿ ಹೇಳು' 'ನಿನ ಗೆಸ್ಸ ಮಾಡು ನೋಡುಣು?' 'ನನಗೇನೋ ಡಾಕ್ಟರನ ಆಗಿರ್ತಿ ಅನಸ್ತದ, ನಿ ಭಾರಿ ಪ್ರಾಕ್ಟಿಕಲ್ ಮನಷ್ಯ' 'ಅಲ್ಲೇ ನೋಡು, ಬ್ಯಾರೆಯವರಿಗೂ, ನನಗೂ ಇರೋ ಫರಕು- ನಾ ಫುಲ್ಲ ಅನಲೈಜ ಮಾಡೇ ಗೀತಾ ನ ಲಗ್ನ ಮಾಡ್ಕೊಂಡೆ' 'ಗೀತಾ ಅಂದ್ರ ಅದೇ, ಬಿಜಾಪುರು, ಬಿ.ಇ, ಹುಡಗಿ ಏನು ?' 'ಅಲ್ಲ, ಅಲ್ಲಾ, ಗೀತಾ ಅಂದ್ರ ಕಲಾ ಪರಿಣಿತೆ, ಹಾಡು, ಡಾನ್ಸು, ನಾಟಕ, ಪಿಯಾನೋ, ಬರೆಯೋದು ಎಲ್ಲದ್ರೋಳಗು ಎಕ್ಸ್ ಪರ್ಟ' 'ಅವಕಾಶ ಸಿಕ್ಕ್ರ ಬ್ಯಾಲೇನು ಕಲಿಯಬಲ್ಲ ಬಾಲೆ ಅನಬಹುದು' 'ಬ್ಯಾಲೆ ಒಂದ ಯಾಕ? ಸಾಲ್ಸಾ, ರುಂಬಾ ಏನ ಬೇಕಾದರು ಕಲಿಬಹುದು , ಬೇಸ್ ಭದ್ರ ಇದ್ರ' 'ಭೇಶ ಬಸು, ಆ ಬೇತಾಳನ ಕಥಿಗತೆ ನಿ ಎಲ್ಲಾನು ಸಸ್ಪೆನ್ಸ ಇಡಬ್ಯಾಡಾ ಫುಲ್ಲ ಎಲ್ಲಾ ಬಿಡಿಸಿ ಹೇಳು' 'ಅದಕ್ಕ ಪುರುಸೊತ್ತು ಇದ್ದಾಗ ಫೋನ್ ಮಾಡಿನಿ - ಏನ ಪ್ರಶ್ನೆ ಅದಾವು ಎಲ್ಲಾನು ಕೇಳು' ಹೇಳಿದ ಬಸು 'ಓಕೆ, ಮೊದಲನೇ ಪ್ರಶ್ನೆ- ದಾಸರು ಕೇಳಿದಂಗ ಯಾರು ಹಿತವರು ಇ ಮೂವರೊಳಗೆ- ಯಾಕ ಮೆಡಿಕಲ್ಲು, ಸಾಫ್ಟ್ ವೆರು ಎರಡು ಬಿಟ್ಟು ಕಲಾ ಬಲ್ಲಕಿನ ಕಟಗೊಂಡೆ?' 'ಮೊದಲನೇ ಪ್ರಶ್ನೆ ಇಷ್ಟು ಗಂಭೀರ ಆದ್ರ ಹೆಂಗ? ಉತ್ತರ ಉದ್ದ ಅದ, ಸ್ವಲ್ಪ ನಿಧಾನಿಸಿಗೊಂಡು ಕೇಳಿಸಿಕೋ. ನಿನಗ ಗೊತ್ತ ಅದ- ನಂದಂತೂ ಲವ್ ಮ್ಯಾರೇಜ್ ಅಲ್ಲಾ, ಲವ್ ಮಾಡಿದವರಿಗೆ ಇನ್ನೊಬ್ಬರನ ಮಣಸೋದ ಹೆಂಗ ಅಂತ ಗೊತ್ತಿರತೈತಿ ಅಥವಾ ಹಂಗ ಅವರು ತಿಳಕೊಂಡಿರ್ತಾರು. ಸೊ ನನ್ನ ಕೇಸನ್ಯಾಗ ಅದು ಅಪ್ಲೈ ಆಗುದಿಲ್ಲ. ಇನ್ನು ಮೂರೂ ಕನ್ಯಾ ಇಕ್ವಲ ಅಂತ ಹಿಡ್ಕೋ- ಅಲ್ಲ್ಯೆ ಬಂದದ್ದು ಫಜೀತಿ, ನಿಮ್ಮುರಾಗ ಮಹಾದೇವ ಗಂಡ ಹೆಂಡತಿ ಇಬ್ರು ಡಾಕ್ಟರು, ಶಂಕರ, ಗಿರೀಶ ಮಿಕ್ಕ ಇನ್ನೊಂದು ೯೦% ಸಾಫ್ಟ್ ವೆರು, ನಿನ್ನು ಇನಕ್ಲುಡು ಮಾಡ್ಕೋ ಬೇಕಾರ -ಎಲ್ಲಾರು ಸಾಲ್ಕ ಡ್ಯಾನ್ಸ ಟಿಚರ ಮುಂದ ರೊಕ್ಕ ಕೊಟ್ಟು ಕೈ ಕಟ್ಗೊಂಡು ನಿಂತಿದ್ದ ನೋಡಿದ ಕೂಡ್ಲೇ ನನಗ- ಯುರೇಕಾ ಮೊಮೆಂಟ ಆತು. ಮುಂದೆ ಏನಿದ್ರು ಬರೇ ಕಲ್ಲೆಕ್ಟ್ ಮಾಡಿದ ಡಾಟಾ ತಾಳೆ ಹಾಕೋ ಕೆಲಸ ಒಂದೇ ಉಳಿದಿದ್ದು' 'ಅಲ್ಲೋ ಬಸು ಕೊಡು ಬರೆಯುವವರಿಗೂ, ಕಲಾ ಬಲ್ಲವರಿಗೂ ಹೆಂಗ ಕಂಪೇರ ಮಾಡ್ಲಿಕ್ಕಾಗತೈತಿ?' 'ಅಲ್ಲೇ ನೋಡು ನೀನು ಎಡುವುದು- ಅಜ್ಜಾ ಹಾಕಿದ ಮರಕ್ಕ ಅಂತಾರಲ್ಲ -ನಿನ ನೋಡು- ಒಂದ ಹುಡಗಿಗೆ ಇಪ್ಪತೈದರ್ಹಂಗ ಲೆಕ್ಕ ಹಾಕು , ಒಂದು ಬ್ಯಾಚ್ ನ್ಯಾಗ ೮ ಹುಡಿಗ್ಯಾರಾದ್ರ- ತಾಸಿಗೆ ೨೦೦ ಡಾಲರ ಆತು. ಇಪ್ಪತ್ತ ವರ್ಷದಿಂದ ಧಂಧಾ ಮಾಡವರಿಗೂ ಇಲ್ಲಾ ಅಷ್ಟು ಬಿಲ್ಲ ರೇಟು' 'ಅಲ್ಲೋ ಬಸು, ಡಾಕ್ಟರ್ ಆಮದಾಣಿ ಮುಂದ ಡ್ಯಾನ್ಸರ ಆಮದಾಣಿ ಹೆಂಗ ಕಂಪೇರ ಆಕ್ಕೈತಿ?' ಸೋಲೋಪ್ಪಿಕ್ಕೋಳ್ಳಲಾಗದೆ ಕೇಳಿದೆ 'ಏನ ಹೇಳಿದೆ ಈಗ- ಡಾಕ್ಟರ್ ಆಗಬೇಕಂದ್ರ ಎಷ್ಟು ವರ್ಷ ತಲೆ ಕೆಡಿಸಿಗೋಬೇಕು- ಆಮ್ಯಾಲೆ ಲಗ್ನರ ಯಾಕ ಆಗಬೇಕು- ರಸ ಎಲ್ಲಾ ಹಿಂಡಿ ಹಿಪ್ಪಿ ಆದ ಮ್ಯಾಲೆ? ಅದು ಇಗ ಓಬಾಮ ಬ್ಯಾರೆ ಎಲ್ಲಾರಿಗೂ ಸರಿ ಸಮಾನ ಆರೋಗ್ಯ ಅಂದಮ್ಯಾಗ ಡಾಕ್ಟರು ಕಂಡಂಗ ಅದ. ಅದು ಅಲ್ಲದೆ ಡಾಕ್ಟರು ಹೆಂಡ್ತಿ ಅಂದ್ರ ಎಲ್ಲಾ ಕೆಲಸ ನನ್ನ ಮ್ಯಾಗ ಬಿಳ್ತೈತಿ. ಆ ಇನ್ಸೂರೆನ್ಸ್, ಮಾಲಪ್ರಾಕ್ಟಿಸ ಕಿರಕಿರಿ- ಓದಿ ಇಲ್ಲೂ ಅಲಬಾಮದಲ್ಲಿ ಅಪಾನವಾಯು ಸ್ಟೋರಿ -ಪೇಷಂಟ ಹುಂಸ ಹೋಡದ್ರು ಡಾಕ್ಟರಗೋಳು ತುಟಿ ಪಿಟಕ ಅನ್ನದ ಕೆಲಸ ಮಾಡ ಬೇಕಾಗತೈತಿ -ಒಂದ ಎರಡ ಅದರ ರಗಳಿ. ಫುಲ್ಲ ಕಂಪರೆಟಿವ ಸ್ಟಡಿ ಡಾಟಾ ಐತಿ ನನ್ನ ಬಲ್ಲೆ. ಬೇಕಂದ್ರ ಒಂದು ಒಂದು ರಿಸರ್ಚ್ ಪೇಪರ್ ಬರದ ಒಕಾಟತಿನಿ ಅದರ ಮ್ಯಾಲೆ' 'ಅಲ್ಲೋ ಬಸು ನಿನಗ ಡಾಕ್ಟರ ಮನಿನು ತೋರ್ಸಿದ್ನಲ್ಲ?' 'ಡಾಕ್ಟರದು, ನಿಂದು ಮನೆ, ಮನಿ ಎಲ್ಲಾ ನೋಡಿನಿ ತೊಗೋ. ನಿ ಡ್ಯಾನ್ಸ ಟಿಚರ ಮನೆ ತೋರ್ಸಲಿಲ್ಲ ಇರಲಿ -ಆದ್ರ ನಾನು ಕೌಂಟಿ ರೆಕೊರ್ಡ ನೋಡಿದೆ, ಬರಿ ಸ್ಟುಡಿಯೋ ಅಷ್ಟೇ ಅಲ್ಲಾ ಪೂರ ಬಿಲ್ಡಿಂಗ ಟಿಚರ ಹೆಸರ ಮ್ಯಾಗ ಐತಿ- ಆ ಟಿಚರ ಓಡಿಸೋ ಕಾರಿಂದು ಪಿಕ್ಚರ ಐತಿ ನನ್ನ ಬಲ್ಲೆ, ನಿನ್ನ ವ್ಯಾನಕ್ಕಿಂತ ಭಾರಿ ಮಸ್ತ್ ಐತಿ' ಬೆಕ್ಕಸ ಬೆರಗಾದೆ, ತಡ್ಕೊಳ್ಳಾಕ್ಕಾಗದೆ ಕಿರುಚಿದೆ 'ಬಸು ಟಿಚರು ಬರಿ ವಿಕೆಂಡಿಗೆ ಮಾತ್ರ ಕ್ಲಾಸ್ಸು ತೊಗೊಳ್ಳುದು 'ದ್ಯಾಟ್ಸದ ಹೋಲ ಪಾಯಿಂಟ್ ' ಕೂಲಾಗಿ ಹೇಳಿದ ಬಸು 'ಒಂದ್ಸಾರಿ ಹೋಗಿ ನೋಡು ಪುರಾ ವೀಕ ಸ್ಟುಡಿಯೋ ರೆಂಟ ಕೊಡ್ತಾಳ. ROI ಅಂದ್ರ ಗೊತ್ತಿಲ್ಲ ಏನು? ಕಡಿಮಿ ಕೆಲಸ ಜಾಸ್ತಿ ಗಳಿಕೆ- ಸಿಂಪಲ್, ನಿ ಒಂದು ವಾರದಾಗ ಗಳಿಸುದು ಆಕಿ ಒಂದು ವಿಕೆಂಡಿಗೆ ಗಳಸ್ತಾಳ- ತಿಳಕ್ಕೋ' ರೊಕ್ಕಾ ಕಂಪೇರ ಮಾಡಿ ಈ ನನ್ನ ಮಗನ ಜೋಡಿ ಗುದ್ದ್ಯಾಡುದ್ರೋಳಗ ಅರ್ಥ ಇಲ್ಲ ಅನಸ್ತು, ಬ್ಯಾರೆ ಏನರ ಅಡ್ಡ ಹಾಕಬೇಕು 'ಅಲ್ಲೋ ಬಸು ಬರಿ ರೊಕ್ಕ ಬಂದ್ರ ಆತ ಏನು? ಒಂದು ಇಜ್ಜತು ಇರಬೇಕೋ ಬ್ಯಾಡೋ ?' 'ಅತ್ಲಾಗ ಹೋಗ ಬ್ಯಾಡ ನಿ, ನೀವೆಲ್ಲ ಜಿ ಹುಜೂರ ಅಂತ ಕೈ ಕಟಗೊಂಡು ನಿಂತದ್ದ ನೋಡಿದ್ರ ಗೊತ್ತಾಗ್ತೈತಿ- ಯಾರಿಗೆ ಜಾಸ್ತಿ ಇಜ್ಜತ ಐತಿ ಅಂತ' 'ಅಲ್ಲೋ ಇದು ಎಷ್ಟು ದಿವಸ ಅಂತ ನಡಿತೈತಿ? ಟೈಮು ಹೊಧಂಗ ಈ ಧಂಧಾ ಹಿಂಗ ಇರತೈತಿ ಏನ" 'ಎಪ್ಪ, ನಿನ್ನ ಧಂಧಾ ನೋಡ್ಕೋ, ಇವತ್ತ ಇದ್ದ್ರ ನಾಳೆ ಇರತೈತೋ ಇಲ್ಲೋ ಗ್ಯಾರಂಟಿ ಇಲ್ಲಾ- ಆಕಿ ಕಡೆ ನೋಡಿ ಏನ, ಎಷ್ಟು ಹೊಸ ಹೊಸ ಬ್ಯಾಚ್ ಆದಾವ ಅಂತ? ಈಗಂತೂ ಗುಳೆ ಹೊಂಟಂಗ ಮಂದಿ ಬರತೈತಿ ಇಲ್ಲೆ' 'ಎಸ್ಟ್ ಅಂದ್ರು ಡ್ಯಾನ್ಸ ಟಿಚರ ಸಾಫ್ಟ್ ವೆರ ನಷ್ಟು ಹೊಳೆನ್ಗಿಲ್ಲಾ ಬಿಡೋ' 'ಹಿಂದಿ ರಾಜಕುಮರಂದು ಒಂದು ಡಯಲಾಗು ಹೇಳ್ತೀನಿ ತೊಗೋ , ಒಬ್ಬ ರಾಜಕಾರಣಿಗೆ ಒಬ್ಬ ಪೋಲಿಸ್ ಆಫೀಸರ್ ಹೇಳ್ತಾನ -ಮಗನ ನಾ ಯಾವಾಗ ಬೇಕಂದ್ರ ಆವಾಗ ರಾಜಕಾರಣಿ ಆಗಬಲ್ಲೆ ಆದ್ರ ಇ ಜನ್ಮದಾಗ ನಿ ಪೋಲಿಸ್ ಆಫೀಸರ್ ಆಗಾಕ ಸಾಧ್ಯ ಇಲ್ಲ ಅಂತ. ಹಂಗ ಈ ಸಾಫ್ಟ್ ವೇರ ಯಾ ನನ್ನ ಮಗ ಬೇಕಾದ್ರೂ ಕಲಿಬಹುದು ಯಾವಾಗಬೇಕಾದ್ರೂ.' ಮೆಟ್ಟು ತೊಗೊಂಡು ಹೊಡ್ಕೊಳ್ಳು ಹಂಗಾತು, ಇಷ್ಟಾಗ್ಯದ ಇನ್ನೊಂಚೂರು ಜಗ್ಗೆ ಬಿಡೋಣ ಅನಿಸ್ತು. 'ಅಲ್ಲೋ ಬಸು 'ವಿಕೆಂಡು ಎಲ್ಲೂ ಹೋಗಲಿಕ್ಕೆ ಬರಂಗಿಲ್ಲಾ ನೋಡು ನಿನಗ ಹಿಂಗಾದರ' 'ನಿವರ ಕಡದು ಹೋಗೋದು ಅಷ್ಟರೊಳಗ ಅದ ಬಿಡು- ನೀವು ರೊಕ್ಕ ಕೊಟ್ಟು ಬರಾಕ ಹೋಗ್ತಿರಿ, ನಾವು ಕುಂತು ಎಣಿಸಾಕ ಹೋಗ್ತಿವಿ. ವಿಕೆಂಡು ಬಗ್ಗೆ ಹೇಳಬೇಕಂದರ, ನೀವು ಒಂದು ಡಾಲರ್ ಉಳಿತದ ಅಂದ್ರ ೧೦ ಮೈಲು ಹೋಗತಿರಿ ಒಂದು ಡೀಲ್ ನೋಡ್ಲಿಕ್ಕೆ, ಸೊ ವಿಕೆಂಡ ಸುಮ್ಮನ ಫಾಲತು ಓಡ್ಯಾಡತಿರಿ' 'ಅಂದ್ರು ಲಗ್ನ, ಮದುವಿ ಅಂದ್ರ ಏನ ಬರೇ ವ್ಯವಹಾರ ಮಾಡಿಧಂಗ ಮಾಡಿದ್ರ ಹೆಂಗೋ? ಸ್ವಲ್ಪರೆ ಪ್ರೀತಿ, ಪ್ರೇಮಾ ಬೇಕೋ ಬ್ಯಾಡೋ? ನಿನಗ ಆಕಿಗ ಲೈಕು ಆಗಬೇಕೋ ಬ್ಯಾಡೋ?' ಹೆಂಗಾದರೂ ಮಾಡಿ ಮಾನಸಿಕವಾಗಿಯಾದರು ಬಸುನ ಬಗ್ಗಿಸಬೇಕೆಂದು ನುಡಿದೆ 'ಆ ವಾದಕ್ಕೆ ಏನು ಹುರುಳ ಇಲ್ಲ ಅಂತ ನಿನಗೂ ಗೊತ್ತೈತಿ, ನಂಗು ಗೊತ್ತೈತಿ. ಪ್ರೀತಿ, ಪ್ರೇಮಾ ಎಲ್ಲಾ ಲಗ್ನ ಆದ್ಮ್ಯಾಲು ಮಾಡಬಹುದು. ಆಗಳೇ ಹೇಳಿದ್ನೆಲ್ಲ ಏನೋ ನನ್ನ ನಸಿಬು ಚೊಲೋ ಇತ್ತು.ಎಲ್ಲ ಇನ್ಫಾರ್ಮಶನ್ ಸಿಕ್ಕ ಆದ ಮ್ಯಾಲೆ ಮದುವೆ ಆತು, ಇಲ್ಲಂದ್ರ ಭಾಳ ಮಂದಿಗತೇ ಲಗ್ನ ಆದ ಮ್ಯಾಲೆ ಎಲ್ಲಾ ವಿಷಯ ಗ್ವಾಳೆ ಹಾಕ್ಕೊಂಡು ಏನ ಉಪಯೋಗ ಅದ?' 'ಅಂದ್ರ ನಿ ಬಾರೆ ರೊಕ್ಕಾ ನ ಮುಖ್ಯ ಅಂತಿ ಏನು?' 'ಹಂಗೆಲ್ಲೇ ಅಂದಿನಿ ನಾನು? ಇದ್ದ ಅವಕಾಶದಾಗ ಒಳ್ಳೆಯದನ್ನ ಆರಿಸಿಕೊಳ್ಳುದು ಶ್ಯಾಣ್ಯಾತನ ಹೌದೋ ಅಲ್ಲೋ? ಅದು ಅಲ್ಲದ, ನಿಂಗೊತೈತೋ ಇಲ್ಲೋ ಇ ಡ್ಯಾನ್ಸು, ಹಾಡು ಹುಡಿಗ್ಯಾರ ಔಟ್ಲುಕ್ಕು ಬ್ಯಾರೆ ಅವರ್ಕಿಂತಾ ಚೊಲೋ ಇರತೈತಿ' ಔಟ್ಲುಕ್ಕು ಅಂದ್ರ ಏನಪ ಮಗನೆ ಅಂತ ಕೇಳಲಿಲ್ಲ, 'ನಿ ಹೇಳುದು ಖರೆ ಇರಬಹುದು, ಅದ್ರು ನಿ ಬರೇ ನಮ್ಮಲಿದು ನೋಡಿ ಇಂತಾ ಡಿಸಿಜ್ಯನ್ ತೊಗೊಂಡಿ ಅನಸಂಗಿಲ್ಲ ನನಗ ಯಾಕೋ?' 'ಈಗ ಕರೆಕ್ಟ್ ಪ್ರಶ್ನೆ ಕೇಳಿದೆ ನೋಡು. ನಿಮ್ಮಲಿಂದ ಬಂದ ಕುಳ್ಲೇ, ಇಲ್ಲೂ ಒಂದ ನಾಲ್ಕ ಕಡೆ ಚೆಕ ಮಾಡಿದೆ, ನಿಮ್ಮಲಿಕಿಂತಾ ಇಲ್ಲಿ ಅವರ ಧಂಧಾ ಜೋರ ಅದ. ಮೊದಲ ಮೊದಲ ಸ್ವಲ್ಪ ವರ್ಷ ಅಂತು ಇ ಮಕ್ಕಳ ಮರಿಗಳ ಜೋಡಿ ಮನ್ಯಾಗ ಇರಬೇಕಾಗತೈತಿ, ಅಲ್ಲಿಗೆ ಡೇಕೆರ ರೋಕ್ಕಾನು ಉಳಿತದ. ಅಲ್ಲದ ಎಷ್ಟು ಫ್ಲೆಕ್ಷಿಬಲ್ ಇರ್ತದ ಅವರ ಸ್ಕೆಡ್ಯೂಲು, ಮಕ್ಕಳ ಮ್ಯಾಲು ಟಾಯಮ ಹಾಕಬಹುದು- ಎಲ್ಲಕಿಂತ ದೊಡ್ಡದು ನನ್ನ ಪ್ರಕಾರ ಅಂದ್ರ ಅವರಿಗಿರೋ ಕಿಮ್ಮತ್ತು, ಬೇರೆ ಯಾರಿಗೂ ಇಲ್ಲಾ ಅನಸ್ತೈತಿ. ಹೊಟ್ಟಿ ತುಂಬಿದಮ್ಯಾಗ ಮನುಶ್ಯಾಗ ಏನೆರ ಬ್ಯಾರೆ ಮಾಡಬೇಕು ಅನಸ್ತೈತಿ- ಇದಕ್ಕಿಂತ ಮಾಡ್ಲಿಕ್ಕೆ ಚೊಲೋ ಯಾವದೈತಿ ಹೇಳು' 'ಅಂದ್ರೆ, ಗುರು ಶಿಷ್ಯ ಪರಂಪರೆ ಬಗ್ಗೆ ಹೇಳಾಕತ್ತಿ ಏನು?' 'ಹೌದು, ಬೇಕಂದ್ರ ಅದು ಮಾಡಬಹುದು. ರವಿಶಂಕರ ಆಶ್ರಮಕ್ಕ ಹೋಗಿ ನೋಡಿ ಬರುಅಷ್ಟು ಮಂದಿ ಮಣಿಪಾಲ ಆಸ್ಪತ್ರೆಗೋ, ವಿಪ್ರೊ ಆಫಿಸೋ ನೋಡಾಕ ಹೋಗ್ತಾರೆನು? ಕಲೆ ಯೋಳಗಿರೋ ಬದುಕು, ಅದೂ ರೊಕ್ಕಾನು ಮಾಡ್ಕೊಂಡು ಇರಬಹುದು ಅಂದ್ರ ನಂದು ವಿನ್ ವಿನ್ ಅನಸ್ತೈತಿ' ಬಸು ಕಿ ಜೈ ಹೋ ಎಂದು ಕೂಗಬೇಕೆನಿಸಿತು. 'ಆತ ಬಿಡು, ಇಷ್ಟು ಕನ್ವಿನ್ಸಿನ್ಗಾಗಿ ಯಾರು ಯಾರಿಗೂ ಹೇಳಿರಲಿಕಿಲ್ಲ- ಮಧು ಚಂದ್ರಕ್ಕ ಮತ್ತ ಬಸ್ಸ ಹಿಡಕೊಂಡು ಇತ್ಲಾಗ ಏನರ ಬರು ಪ್ಲಾನ ಅದ ಏನ?' 'ಏ ಅದೆಲ್ಲ ಹಳೆ ಕಥಿ ಆತು, ಇಲ್ಲೆ ಬೆಸ್ಟ್ ಮಧು ಚಂದ್ರ ಆತ ನೋಡ್ರಿ ದೊಡ್ಡ ಸೇಬಿನ್ಯಾಗ (Newyork). ಎಲ್ಲ ಕಡೆ ಓಡ್ಯಾಡಿದಿವಿ, ಹಂಗ ಉದ್ಯಾವನದ ರಾಜ್ಯದಾಗ ಕೆಳಮನೆ ಇರೋ ಮನೇನು ನೋಡಿವಿ ಮೊನ್ನೆ. ನೀ ಇಷ್ಟು ಹೆಲ್ಪ ಮಾಡಿದಕ್ಕ ನಿನಗ ಒಂದು ಒಳ್ಳೆ ಅವಕಾಶ ಕೊಡ್ತೀನಿ' 'ಏನಪಾ ಅದು ಬಸು ?' ![]() 'ವಿಚಾರ ಏನ ಮಾಡುದು, ಈಗ ಹೇಳ್ತೀನಿ ತೊಗೋ, ROM ಅಂತ ಇಟ್ಟ ಬಿಡು ಕ್ಯಾಚಿ ಆಗಿರ್ತದ' 'ROM ಅಂದ್ರ' 'Return On Marriage ಅಂಧಂಗ, ROI ಇಧಂಗ ಇದು' 'ಆದ್ರ ಮಂದಿಗೆ ಏನ ಅಂತ ಹೇಳಬೇಕು?' 'ಅದೆನ ಬಿಡು, Renaissance Of Mind ಅಂತ ಹೇಳು ಎಲ್ಲಾನು ಕವರ್ ಆಗ್ತದ ಅದರಾಗ' ಬಸು ಬಿಲಕುಲ್ ಖುಷ ಆದ. |
||||||||
ಪುಟದ ಮೊದಲಿಗೆ | ||||||||
![]() | ||||||||
| ||||||||
|
|