Monday, August 20, 2012

ಚರಗಿ ಕಿ ಜೈ ಹೋ



                                                                      ಚರಗಿ ಕಿ ಜೈ ಹೋ





ಅಕ್ಟೋಬರ್ ಒಂದು ೧೯೮೪ ,ಇಂದಿರಾಗಾಂಧಿ ಹತ್ತೆಯಾದ ದಿನ. ನಾನಾಗ ಬಾಗಲಕೋಟೆಯಲ್ಲಿ ಕಲಿಯುತಿದ್ದೆ.  ಕೋಮು ದಳ್ಳುರಿಯಿಂದ ಹೊತ್ತಿ ಉರಿಯಲಾರಂಭಿಸಿತು ಕೋಟೆ ಆಗ. ಒಂದು ವಾರ ಪೂರ್ತಿ ಕರ್ಫ್ಯೂ. ಕರ್ಫ್ಯೂನ ಕರಾಳತೆ ಅರಿವಾದದ್ದೆ ಆಗ. ಆಗಿಗೂ, ಇಗಿಗೂ ಬದಲಾವಣೆ ಬೇಕಾದಷ್ಟಾಗಿದೆ - ಚರಗಿ ತಂಬಿಗೆಗಳು ಹೋಗಿ ಎಲ್ಲೆಡೆ ಸುಲಭ ಶೌಚಾಲಯಗಳು ಬಂದಿವೆ. ನಿಷ್ಕ್ರಿಯ ಮೆದಳು ಸೈತಾನನ ಅಂಗಳವಾದರೆ, ಕ್ರಿಯೆಯಿಲ್ಲದ ಕೈಗಳು ಹಟವಾದಿಯ ಅಂಗಗಳು. ಕಾಲ ಬದಲಾಗಿದೆ -ಕೈ ಕೆಸರಾದರೆ ಬಾಯಿ ಮೊಸರು ಹೋಗಿ ಕೆಸರಾದ ಕೈಯನ್ನೇ ಮೊಸರಲ್ಲಿ ಅದ್ದಿ ಅದನ್ನು ಭೂತಗನ್ನಡಿಯಲ್ಲಿ ತೋರಿಸಿ ಮೊಸರೆ ಕೆಟ್ಟದ್ದು ಎಂದು ತೋರಿಸುವ ಚಟ ಹೆಚ್ಚಾಗುತ್ತಿದೆ. ಸಂತೆಗೆ ಮೂರುದ್ದದ ದಾರ ಹೊಸೆಯುವವರು ಅಗಣಿತರಾಗಿದ್ದಾರೆ, ಇದರಲ್ಲಿ ಎಲ್ಲರೂ ಶಾಮಿಲು - ಮಾಧ್ಯಮಗಳು, ರಾಜಕಾರಣಿಗಳು ಬಿಡಿ ನಮ್ಮಂತೆ ಬರೆದು ತೀಟೆ ತಿರಿಸಿಕೊಳ್ಳುವವರು ಕೂಡಾ. ನನಗನಿಸುವ ಮಟ್ಟಿಗೆ ಇದಕ್ಕಿರುವ ಪರಿಹಾರ ಖಾಲಿ ಕೂತ ಕೈಗಳಿಗೆ ನಿಯತ್ತಿನ ಕೆಲಸ ಕೊಡುವದು. ಕಷ್ಟದ ಒಂದು ಚಿಕ್ಕ ಗೆರೆ ಎಳೆದು ಅದನ್ನು ಕಮ್ಮಿ ಮಾಡುವ ಒಂದು ದಾರಿ ಎಂದರೆ ಅದರ ಪಕ್ಕ ಅದಕ್ಕಿಂತ ಉದ್ದನೆ ಗೆರೆ ಎಳೆಯುವದು. ನಿನ್ನೆ, ಮೊನ್ನೆ ಇಡಿ ಉತ್ತರ ಭಾರತದಲ್ಲಿ ವಿದ್ಯುತ್ತ ಕೈ ಕೊಟ್ಟಾಗ ಯಾರಾದರು ತಮಗೆ ಮಿಸ್ ಆದ ಸಿರಿಯಲ್ಗಳ ಬಗ್ಗೆ , ನೋಡಲಾಗದ ಒಲಿಂಪಿಕ್ಸ್ ಬಗ್ಗೆ, ಕುಡಿಯಲಾಗದ ತಣ್ಣನೆ ನೀರಿನ ಬಗ್ಗೆ ಚಕಾರವೆತ್ತಿದರಾ? ಮುಖ ಗಂಟಿಕ್ಕದೆ, ತಿಣೂಕಾಡದೆ ಇದು ಸಮಸ್ಯಗೆ ಪರಿಹಾರವಾಗಬಲ್ಲದೆ ನೋಡಿ.

ಭಾರತದ ಯಾವುದೊ ಒಂದು ಹಳ್ಳಿ. ಬಾಗಿಲು , ಖಿಡಕಿ ಮುಚ್ಚಿ  ಪಡಸಾಲೆಯಲ್ಲಿ ಕುಳಿತು ಮುಖ ಕಿವುಚುತ್ತಿರುವವನೊಬ್ಬ, ಇನ್ನೊಬ್ಬಾ ಈಗ ತಾನೇ ಎದ್ದಂತಿದ್ದಾನೆ.

ಅಂವ - ಬಂದದ್ರಿ ಸರ.
ಇಂವ - ಬಂದಿದ್ರ ಹೋಗಿ ಬಾರಲಾ.
ಅಂವ- ಇಲ್ರಿ ಸರ ಇವತ್ತ ಬಂದದ್ರಿ.
ಇಂವ - ಇವತ್ತ್ಯಾಕೋ ದಿವಸಾ ಬಂದಿರ್ತದಲ್ಲೋ?
ಅಂವ- ಹೌದು ಬಿಡ್ರಿ ಸರ, ಆದರ ಇವತ್ತ್ಯಾಕೋ ಸ್ಟ್ರಾಂಗ್ ಬಂದದ್ರಿ.
ಇಂವ - ಸ್ಟ್ರಾಂಗ್ ಬಂದಿದ್ರ ಇಲ್ಲ್ಯಾಕೋ ಕುಂತಿ? ಗಡಾನ ಹೋಗಿ ಬಾರಲಾ.
ಅಂವ- ಇಲ್ರಿ ಸರ , ಇವತ್ತಾ ಭಾಳ ಸ್ಟ್ರಾಂಗ್ ಬಂದ ಐತ್ರಿ ಸರ.
ಇಂವ  -ಅಲ್ಲಲೇ ಭಾಳ ಸ್ಟ್ರಾಂಗ್ ಅಂತಿ, ಇಲ್ಲೀ ಮಾಡ್ಕೋತಿ ಏನ ಮತ್ತ? ಹೋಗು ಓಡು.
ಅಂವ- ಅಲ್ರಿ ಸರ ಬಂದ ಅಂದಮ್ಯಾಗ ಹೊರಗ ಹೆಂಗ್ರಿ ಹೊಕ್ಕಿರಿ?
ಇಂವ- ಹೊರಗ ಹೋಗದ ಏನ? ಮನೆ ಒಳಗ ಮಾಡಕೊಂತಿ ಏನ?
ಅಂವ- ಅಲ್ರಿ ಸರ , ಎಷ್ಟ ಸಾರಿ ಹೊಡ್ಕೋ ಬೇಕು - ಹೊರಗ ಬಂದ ಐತ್ರಿ ಸರ್.
ಇಂವ- ಹೊರಗ ಬಂದ ಬಿಡ್ತಾಲೆ ಮಗನ? ಅವ್ವಾಗಿಂದ ಬಡ್ಕೊಳಾಖತ್ತಿನಿ, ಗಡಾನೆ ಹೋಗಿ ಬಾರಲೇ ಅಂತಾ. ಹಿಡ್ಕೊಂಡು ಕುಂದರ್ತಿ. ಪಟಕ್ಕನ ಹೋಗಾಕ ಏನ ಧಾಡಿ ನಿನಗ ಅಂತ?
ಅಂವ- ಹಂಗಲ್ರಿ ಸರ, ಹೊರಗ ಬಂದ ಅಂದ್ರ ಮುಷ್ಕರ, ಮುಷ್ಕರಾ ಐತ್ರಿ ಸರ.
ಇಂವ- ಹೊರಗ ಬರುದು ಮುಷ್ಕಿಲ ಅಂತ ಮನ್ಯಾಗ ಮಾಡ್ಕೋತಿ ಏನಲೇ, ಎಡ್ಡ ವರ್ಷದ ಕೂಸ ಆಗಿಯೆನ ಮಗನ, ಬೇಕಾದರ ಅಮೆರಿಕಾದ ಕೂಸಗೊಳಗತೆ  ಒಂದ್ ಹೆತಗಂಬಳಿಯರ ಸುತಗೋ.
ಅಂವ- ಏ ನಿಮ್ದು, ಅದೇನೋ ಅಂತಾರಲ್ಲಾ - ಯಾವಾಗ್ಲೂ ವಿಚಾರ ಉಲ್ಟಾನ ಹೊಡಿತೈತಿ. ಹೊರಗ ಬಂದ ಅಂದ್ರ 'ಕರ್ಫ್ಯೂ' ಹಾಕ್ಯಾರಿ.
ಇಂವ- ಓ ಆ ಬಂದ ಹೇಳಾಖತ್ತಿ ಏನಲೇ?
ಅಂವ- ಇಷ್ಟೋತನಾ ಅದೇ ಹೆಳಾಖತ್ತಿನಿ ಸರ. ನೀವ ಅವಾಗಿಂದ  ಅಂದ ಅಂದ ನಾ  ಹೇಳಿ ಹೇಳಿ ಇಗ ಖರೇನ ಹೇಲ ಬಂದ ಬಿಡ್ತ ನೋಡ್ರಿ ಸರ , ಏನ್ಮಾಡುದು?
ಇಂವ- ಮಾಡುದೆನ, ನಡಿ ನದಿ ಕಡಿಗ , ಚರಗಿ ತೊಗೊಂಡು , ನಾನ ಬರ್ತೀನಿ.
ಅಂವ- ಅಲ್ರಿ ಬಂದ್ನ್ಯಾಗ ಬಂದ್ರ ಹೆಂಗ್ರಿ ಮಾಡುದು?
ಇಂವ- ಬಂದ ಅಂತೇನ ಬಂದದ್ದು ಹೊಟ್ಯಾಗ ಇಟ್ಕೊಂಡು ಕೂಡಾಕ್ಕಾ ಆಗ್ತದ ಏನಲೇ? ನಡಿಲೆ ಹೊರಕಡಿಗೆ.
ಅಂವ- ಅಲ್ರಿ ಸರ , ಹೊರಗ ಗದ್ದಲ, ಪದ್ದಲ ಸುರು ಆಗಿ ಕಲ್ಲ ಪಲ್ಲ ಬಿಳಾಕತ್ರ ಗತಿ ಏನ್ರಿ ?
ಇಂವ- ಏ ಅದಕ್ಕಾ ಯಾಕ ಇಚಾರ ಮಾಡ್ತಿ? ಅವೇ ಕಲ್ಲಾ ಯೂಸ ಮಾಡಿ ಮುಕಳಿ ಒರಸಿಗೊಂಡ್ರಾಯಿತು ನಡಿ ಅಂತೀನಿ.
ಅಂವ- ಏನ್ಮತಾಡ್ತಿರಿ? ಕಲ್ಲ ತೊಗೊಂಡು ಯ್ಯಾವರ ಕುಂಡಿ ವರಶ್ಗೋತಾನೆನ್ರಿ?
ಇಂವ- ಅಲ್ಲಲೇ, ಅಂಥಾ ಟೈಮ ಬಂದ್ರ , ಕಲ್ಲ ಏನ. ಕಳ್ಳಿ ಕಳ್ಳಿ - ಪಾಪಾಸ ಕಳ್ಳಿ ಯಿಂದೂ ವರಶಗೋಬೇಕಾಗ್ತೈತಿ ನಡಿಲೆ.
ಅಂವ- ಹೋಗಾಕ ಏನ ತಕರಾರ ಇಲ್ರಿ, ಆದ್ರ ಬಂದಗಾಗಿದ್ದು ಬಂದ ಅಂದ ಕುಳ್ಲೇ ಬಂದ ಆಗೈತಿ ನೋಡ್ರಿ.
ಇಂವ- ಏ ಎಷ್ಟ ಅಂಜತಿಲೆ? ಏನ ಅವರಿಗೂ ಬರಂಗಿಲಾ ಏನಲೇ? ಹೊಟ್ಟಿ ಕೊಟ್ಟ ದೇವರನ ಕುಂಡಿನೂ ಕೊಟ್ಟಿರ್ತಾನಲೇ ಎಲ್ಲಾರಿಗೂ.
ಅಂವ- ಇಲ್ರಿ ಸರ , ಅವರದ ಡಾಯೆಟ್ಟು ಗಿಯೆಟ್ಟು ಬ್ಯಾರೆ ಆಕ್ಕೈತ್ರಿ ಸರ, ಅವರು ಉಪಾಸ ಗಿಪಾಸ ಮಾಡಿ ತಡಕ್ಕೊಂತಾರು.
ಇಂವ- ತಮ್ಮಾ ಇಲ್ಲೇ ನೋಡು ನೀ ತಪ್ಪೋದು. ಏನ್ಮಾಡಿದ್ರು ಮುಂಜ ಮುಂಜಾನೆ ಹೋಗಬೇಕು ನೋಡು. ಇಲ್ಲಾಂದ್ರ ಏನ ಕೆಲಸಾ ಮಾಡೋಕು ಸಾಧ್ಯಾ ಇಲ್ಲಾ ಅಂತೇನಿ. ಪರಪಂಚದಾಗ ಏನರ ತಡಕ್ಕೊಬಹುದು, ಇದ ಬಂದ್ರ ಮಾತ್ರ ಡ್ಯಾಮ ಒಡಧಂಗ ನೋಡು. ತಡ್ಯಾಕ ಸಾಧ್ಯನ ಇಲ್ಲಾ. ಅದ ಆಗಿ ಮುಗಿಯೋ ಮಟಾ ಯಾರ ಯಾವದು ಇಚಾರ ಮಾಡಾಕ ಸಾಧ್ಯಾನ ಇಲ್ಲಾ . ನಡಿಲೆ ಇನ್ನಾ ಭಾಳ ಹೊತ್ತು ತರಬೋದು ಬ್ಯಾಡ.
ಅಂವ- ಏನ ಫಜೀತಿ ಮಾಡಸ್ತಿರಿ ಸರ ನೀವು, ಅದೇ ಅದೇ ಮಾತಾಡಿ ತಡಕ್ಕೊಳ್ಳಲಾರಧಂಗ ಮಾಡಿ ಬಿಟ್ರಿ -- ನಡೀರಿ , ಹೋಗುವಾ.
ಇಂವ-  ಅಲ್ನೋಡಲೇ, ಎಲ್ಲಾರೂ ಹ್ಯಾಂಗ ಒಂದಾಗಿ ಸಾಮರಸ್ಯದಲೇ ಕುಂತಾರ - ಅದೇನೋ ಅಂತರಲಾ - ಎಲ್ಲಾರೂ ಒಂದಾಗಿ ನಾವು, ಕುಂತು ಮಾಡಿದಾಗ ಚೆನ್ನು...
ಅಂವ- ಹಾಂ - ಅರಾಮಾತ ನೋಡ್ರಿ ಈಗ. ಅದಕ್ಕ ನಮ್ಮ ಹಿರ್ಯಾರು ಹೇಳಿದ್ದು - ಹೊರಗ ಹೋಗಿ ಎದರಾ ಬದರಾ ಕುಂತ್ರ ಎಲ್ಲಾ ಇಸ್ಸ್ಯುಗಳು ಬಗಿ ಹರಿತಾವ ಅಂತ.
ಇಂವ- ಹೌದಲೇ ಇ ತೊದರೆದ್ದು ಸಮಸ್ಯಾ ಏನ ಅಂದ್ರ ಇದದ್ದಕಿಂತ ಅದರ ನೆರಳ ದೊಡ್ದದ ಮಾಡಿ ತೋರಸ್ತೈತಿ, ಅದಕ್ಕ ಬರೆ ನೆರಳ ನೋಡಿ ಮೂಲಾ ಅಳಿಬ್ಯಾಡದು ನೋಡು.
ಅಂವ, ಇಂವ, ಬ್ಬರು - ಚರಗಿ ಕಿ ಜೈ ಹೋ!