Wednesday, April 16, 2014

ಕಬಳಿಸೋ ಮಗನ ಕಬಳಿಸು

                ಕಬಳಿಸೋ ಮಗನ ಕಬಳಿಸು

ಹೂ, ಗಿಡ, ಹಣ್ಣು, ಹಕ್ಕಿಯಿಂದ ಕಲಿಲಿಕ್ಕೆ ಸಾಧ್ಯ ಇಲ್ಲಾ
ಅದ ಅಂತ ಹೇಳಿದವರ ಬಾಯಿ ಮೊದಲ ಹೊಲಿ.
ಮುಗಿಲು,ಮೋಡ,ಚಂದ್ರ,ಸೂರ್ಯ ಇವೆಲ್ಲಾ
ನಾಲಾಯಕ್ಕ ಅವತರ ಗೂಡಾ ನಡಿಬ್ಯಾಡ-ಫಾಯ್ದಾ ಇಲ್ಲಾ.
ನದಿಯಂತ, ಮೇಘಚುಂಬಿ,ಗುಡಿ,ಗುಂಡಾರಂತ ಎಲ್ಲಾ ಸುಳ್ಳು
ಆತ್ಮ, ಮೋಕ್ಷ, ನರಕ, ಸ್ವರ್ಗ ಎಲ್ಲಾ ಪೂರಾಕೆಪೂರಾ ಮೇಡಪ್ಪು.
ಇರಬಿ ನೋಡಿ ಕೆಲಸ ಕಲಿಲಿಕ್ಕಾಂಗಗಿಲ್ಲಾ.
ಗಡಿಯಾರಾ ನೋಡಿ ಬದಕು ನಿಖರಾಗಂಗಿಲ್ಲಾ.
ಅದು ಇದು ಅವರಿವರು ಬರೆದಿದ್ದು ಓದಿ
ಸಾಧನಿ ಮಾಡುದು ಅಶಕ್ಯ ಐತಿ ತಿಳ್ಕೊ ಮಗನ.

ನಮ್ದು ಮಿಡ್ಲ ಕ್ಲಾಸು -ಯಾವಾಗ್ಲೂ ಖಾಲಿ ಅರ್ಧಾ ಗ್ಲಾಸು.
ಅವುಡಗಚ್ಚಿ ಓದು ಮಗನ – ಅದ ನಿನ್ನ ರಹದಾರಿ
ಇನ್ನೊಂದು ದಾರಿ ಯಾರು ತೋರಿಸಿಲ್ಲಾ ಇನ್ನೂನು.
ಹೊಡಿ,ಬಡಿ,ರಕ್ತಾ ಸುರಿಸ್ಲಾರ್ದ ಏನಾದರೂ ಮಾಡ್ಲಿಕ್ಕಾದ್ರ
ಮಾಡು-ಡೌಟೈತಿ ನನಗೇನೋ, ಆದ್ರೂ ಒಂದ್ಸಾರಿ ನೋಡು.
ಹೆಂಗರ ಮಾಡಿ ಮ್ಯಾಲೆ ಬರಬೇಕು ಮಗನ.
ಮರಿಬ್ಯಾಡ ನ್ಯೂಟನನ ಕಥಿ
ಎಷ್ಟು ತುಳಿತಿಯೋ ಅಷ್ಟು ಪುಟಿತಿ.
ಎಲ್ಲಾರ ಅಂಡಿಗೆ ಕಟ್ಟಿ ಐರನ್ ಉಂಡಿ
ನೀ ಮಡಿಕೋ ನಿನ್ನದೊಂದೆ ಧುಮಕು ಕೊಡಿ.

ಕಂಡದ್ದು ತಿನ್ನು, ಸಿಕ್ಕದ್ದು ಕುಡಿ-ಸಿಕ್ಕವರ ಜೋಡಿ
ಫಸ್ಟ ಮುವತ್ತರಾಗ ರಿಚ್ಚೆಸ್ಟ ಲಿಸ್ಟನ್ಯಾಗ ಹೆಸರ ಜಡಿ.
ನೆಕ್ಷ್ಟ ಮುವತ್ತರಾಗ ನೀ ಕುಂಡಿ ಊರಿದ್ದು, ನಿಂತದ್ದು
ಎದ್ದದ್ದು, ಮಲಗಿದ್ದು ಆಗಬೇಕು – ಸುದ್ದಿಯೋ ಸುದ್ದಿ.
ಹುಚ್ಚೆದ್ದು ಮುಗಿ ಮುಗಿದು ಬೀಳಬೇಕು ಪರಪಂಚದ
ಮೂಲೆ ಮೂಲೆ ಮಂದಿ, ನೀ ತಗದರ ಬಾಯಿ -
ಟಕ ಟಕಾ ತಗಿಬೇಕು ಬಿಲಿಯನ ಕಿವಿ.
ಎತ್ತಿದರ ನೀ ನಿಂದೊಂದು ಬಟ್ಟೂ
ಕೋಟಿ ಜನ ನಿಲ್ಲಬೇಕು ಬಿಟಗೊಂಡು ಬಟ್ಟು.
ಆಗ್ಬೇಕು ನಡದದ್ದ ಹಾದಿ – ಬಂಗಾರ ನಿನ್ನ ಲದ್ದಿ.

ಮುಂದಿನ ಮುವತ್ತು ಕುಂತಿ ಹಂಗ, ಖಬರಗೇಡಿ,
ಅಪ್ಪಾ, ಅವ್ವಾ, ಬಂಧು, ಹೇಣತಿ-ಮಕ್ಕಳ ಮರಿ.
ಜಗತ್ತಿನ್ಯಾಗ ಏನೆನೈತಿ ಅದರ್ಮ್ಯಾಗ ನಿನ್ನ ಹಕ್ಕೈತಿ
ಕಬಳಿಸು ಏನೂ ಉಳಿಸದಂಗ-ನಿರಂಕುಶಮತಿಯಾಗು.
ಸ್ವಂತೊದ್ಧಾರ ಆಗಿರಲಿ ನಿನ್ನ ಮಂತ್ರೊದ್ಧಾರ
ಢರಕಿ ಬರ್ಲಿ ಹಂ ಅಹಂ ಅಂತ ಢುಸಕಿ ಹೊಡ್ದೊಡದು.
ಹಾರ್ಟನ್ಯಾಗಿಲ್ಲ ಭಾವಾ, ಮೆದುಳಾಗಿಲ್ಲ ಮೋಹಾ -
ಇರ್ಬೇಕು ಜಿಟ್ಟೀಯ ಹುಳದಂಗ-ತಿನ್ಕೋತ ಸುತ್ತಲಿಂದು
ಏನಾರ ಉಳಿಸಿದ್ಯಾದ್ರ ನೋಡು ನನ್ಮ್ಯಾಲಾಣಿ
ನೀ ಹೋಗುಕ್ಮೊದ್ಲು ಹೋಗೀರ್ಬೇಕು ಹ್ಯೂಮ್ಯಾನಿಟಿ.

'ಅವಧಿ' ಯಲ್ಲಿ ಪ್ರಕಟಿತ --
http://avadhimag.com/2014/04/16/%E0%B2%A8%E0%B2%AE%E0%B3%8D%E0%B2%A6%E0%B3%81-%E0%B2%AE%E0%B2%BF%E0%B2%A1%E0%B3%8D%E0%B2%B2-%E0%B2%95%E0%B3%8D%E0%B2%B2%E0%B2%BE%E0%B2%B8%E0%B3%81-%E0%B2%AF%E0%B2%BE%E0%B2%B5%E0%B2%BE%E0%B2%97/