ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು
ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ
ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ
ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ
ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು
ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಅನಿಲ ತಾಳಿಕೋಟಿ ಬರೆದ ಕವಿತೆ.
ಮೊರೆತದ ಪ್ರೀತಿ
ರಾತ್ರಿಯಲ್ಲಂತೂ ಕಾಡಿಯೇ ಕಾಡುವೆ ದಿನದಲ್ಲಾದರೂ ಬಿಡು ಸಡಿಲ ಉಷೆಯಲ್ಲಾದ ಚಿಕ್ಕ ಸಂಗತಿಗಳೇ ನಿಷೆ ಕಳೆದೊಡನೆ ತತ್ತಿ ಒಡೆದು ಗೆರಿಗೆದರಿ ಆಗಸಕೆ ನೆಗೆದು ತೇಲುವ ಸ್ವಚ್ಚಂದ ಹಕ್ಕಿ ಹಕ್ಕಿಲ್ಲದವನ ಗೋಳು ಇದೆ ಹಕ್ಕಿಯಂತೆ ಹಾರಲಾರದು ರಾತ್ರಿಯಲಿ ಇದು ಬರಿ ಮನದ ಹಾದರ.
ಪ್ರೀತಿಗೇನು ಕೊರತೆ? ತೋಡಿದರು ಉಕ್ಕದ ವರತೆ ಅಗಣಿತ ತಾರೆಗಳ ಹುದುಗಿಸಿಟ್ಟ ಸಮುದ್ರ ಮೇಲೆಂದು ತೇಲಿ ಬಾರದ ಮುತ್ತು ರತ್ನ ಕುಳಿತು ನೋಡಿದರೆ ಕಾಲಿಗೆ ಬಂದೆರೆಚುವ ಸಿಂಪೆ, ಚಿಪ್ಪು ಕಸ ಕಡ್ಡಿ, ದಾಹಕೆ ಲೆಕ್ಕಕ್ಕಿಲ್ಲದ ಶ್ರೀಮಂತಿಕೆ ತಟಗು ನೀರಿಗೂ ಅಗಿಯಬೇಕು, ಸೋಸಬೇಕು, ಶೋಧಿಸಬೇಕು ಸಿಕ್ಕಿತೆ ಮುತ್ತೆ? ಮುತ್ತಿಗೂ, ಪ್ರೀತಿಗೂ ಏನೀ ನಂಟು? ತತ್ತಿಗೂ ಹಕ್ಕಿಗೂ ಬಿಡಿಸಲಾಗದ ಗಂಟು.
ನಾನೋ ಬಲಿಷ್ಠ ರೆಕ್ಕೆಯ ವೈನತೆಯನಲ್ಲಾ ಆಳಕ್ಕಿಳಿದು, ಉಸಿರು ಬಿಗಿ ಹಿಡಿದು ಗೊತ್ತಿಲ್ಲಾ ಅರೆ ಒಡೆದ ಮೊಟ್ಟೆಯಿಂದ ಹೊರಬಂದ ಹೆಳವನು ಅಲ್ಲಾ ಹೊರಲಾರೆ ದೊರೆಯ, ಹೊರದಿರಲಾರೆ ಕೊಳೆಯ ಹುಟ್ಟಿದೆ, ಓದಿದೆ, ಬೆಳದೆ, ಓದುತ್ತ ಬೆಳದೆ ಅಲ್ಲಲ್ಲಿ ಬಸವಳಿದು ಅಳಿಯದೆ ಉಳಿದೆ ಹೆಚ್ಚಿನದೇನು? ಏನೂ ಇಲ್ಲದೆಯೂ ಇರುವುದೆಲ್ಲಾ ತುಡಿತದಾಚೆಗೂ ಸಾಧ್ಯವೇ ಇರಲು ಹೃದಯಾ? ಒಂದು 'ಹನಿ' ಗೆ ಕಾದು ಕುಳಿತು ಸವಕಳಿಯಾಗಿ ಹೋಗುವ ಮುತ್ತು ನಿನ್ನ ಶಂಖ ಕೊರಳ ಬಿಗಿದಪ್ಪಿದ ತಾಳಿಯ ಗುರುತು.
|
4 comments:
ಅನಿಲರೆ,
ನಿಮ್ಮ ಈ ಕವನ ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ. ಅವುಗಳನ್ನೆಲ್ಲ ಅನುಭವಿಸುತ್ತ ಓದುವುದು, ಖುಶಿಯನ್ನು ನೀಡುತ್ತದೆ. ಅಭಿನಂದನೆಗಳು. ಓದಲು ಉತ್ತಮ ಕವನ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ಸುನಾಥರೆ,
ಧನ್ಯವಾದಗಳು.
-ಅನಿಲ
ಕರಿ ಟೋಪಿ ಹಳೇ ಉತ್ತರ ಕನ್ನಡ ಮಂದಿಯ ಅದೂ ಬೇಂದ್ರೆಯವರ ಟ್ರೇಡ್ ಮಾರ್ಕ್.
ಮೊರೆತದ ಪ್ರೀತಿ ಹಲವು ವೈಶಿಷ್ಟ್ಯಗಳ ಕವನ. ನನಗೆ ಮೆಚ್ಚುಗೆಯಾಯಿತು.
ನನ್ನ ಬ್ಲಾಗಿಗೂ ಸ್ವಾಗತ.
www.badari-poems.blogspot.com
ಬದರಿನಾಥರೆ,
ಧನ್ಯವಾದಗಳು. ಖಂಡಿತ - ನಿಮ್ಮ ಬ್ಲಾಗೂ ನೋಡುತ್ತಿರುತ್ತೇನೆ ಅಗಾಗಾ.
-ಅನಿಲ
Post a Comment