Wednesday, January 29, 2014

ಮೂಕಜ್ಜನ ಸೋಲು - ಭಾಗ ೨

                                                             ಮೂಕಜ್ಜನ ಸೋಲು - ಭಾಗ ೨

 ಯಾವದೇ ಪ್ರಚಲಿತ ಸಮಸ್ಯೆಗೆ ಒಂದು ಆರೋಗ್ಯಪೂರ್ಣ ಚರ್ಚೆಯಿಂದ ಸಮಾಧಾನ ಕಂಡುಕೊಳ್ಳಬೇಕು ಅನ್ನುವದು ಮೂಲ ಉದ್ದೇಶ - ಅಂತೆಯೇ ಮುಕ್ತ ಮನಸ್ಸಿನ ಮಾತುಕಥೆ ಅಗತ್ಯವಾದದು. ಇಲ್ಲೊಂದೆರಡು ಅಗತ್ಯವಾಗಿ ಮನನವಾಗಬೇಕಾದ ವಿಷಯಗಳು. ಮನಸ್ಸು ಎಲ್ಲ ಸ್ವಭಾವಗಳಿಗೂ ಮೂಲ. ಸ್ವಭಾವ ಬೇಕಾಗಿಯೋ ಬೇಡವಾಗಿಯೋ ಸಂಸ್ಕಾರ,ಸಂಸ್ಕ್ರತಿಯಿಂದ ಪ್ರಭಾವಿತವಾಗಿರುತ್ತದೆ. ಈ ಸಂಸ್ಕ್ರತಿ ಕೂಡಾ ಮಾನವನ ಒಟ್ಟೂ ವಿಕಾಸದ ಮಜಲೆ. ಆ ನಿಟ್ಟಿನಲ್ಲಿ   ಪ್ರಪಂಚದ ಎಲ್ಲ ಸಂಸ್ಕ್ರತಿಗಳ ಮೂಲವೂ ಒಂದೆ. ಪ್ರಾಣಿ ಸಹಜ ಮೂಲ ಪ್ರವೃತ್ತಿಯಿಂದ ಸ್ವಲ್ಪ ಮೇಲೆ ಬಂದು ಸಮಾಜಮುಖಿಯಾದ ಮಾನವನ ದೃಷ್ಟಿಯಿಂದ ನೋಡಿದಾಗ ಈ ನಿಟ್ಟಿನಲ್ಲಿ ನಿಚ್ಚಳವಾಗಿ ಗೋಚರಿಸುವ ಕೆಲವು ಸತ್ಯಗಳಿವು. 

೧) ತಮ್ಮಂತಿರದ ಬೇರೆಲ್ಲರ ಬೇಕು ಬೇಡಗಳನ್ನು ಒಂದು ಸರ್ವಸಮ್ಮತ  ಚೌಕಟ್ಟಿನಲ್ಲಿ  ಗೌರವಿಸುವದು.
೨) ಎಲ್ಲ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತವಾದದ್ದು, ಲೈಂಗಿಕತೆ ಅತ್ಯಂತ ಖಾಸಗಿಯಾದದ್ದು.
೩) ಇನ್ನೊಬ್ಬರ ಹಕ್ಕು, ಅವಕಾಶ ಎಗರಿಸುವ ವ್ಯವಸ್ಥೆ ವಿರುದ್ದ ನಾವೆಲ್ಲ ಸೆಟೆದೇಳುವದು ಮಾನವೀಯತೆಯ ಲಕ್ಷಣ.
೪) ಪ್ರಕೃತಿದತ್ತವಾದ ಯಾವದೇ ವಿಷಯಕ್ಕೂ ಶಿಕ್ಷೆ ವಿಧಿಸುವ ಅಥವಾ ಹತೋಟಿಯ ಹಕ್ಕು ನ್ಯಾಯಾಲಯಗಳಿಗಿಲ್ಲ.

ನಮಗೆ ಇಲ್ಲಿಯವರೆಗೂ ಗೊತ್ತಿರುವ ಎಲ್ಲ ಮೂಲಗಳಿಂದ ನೋಡುವದಾದರೆ ಸಲಿಂಗಕಾಮ ಮನೋರೋಗವಲ್ಲ, ಅನಾರೋಗ್ಯವೂ ಅಲ್ಲ. ಸಲಿಂಗ ವಂಶ ವಾಹಿಗಳಿನ್ನು ಯಾರು ಇನ್ನೂವರೆಗೆ ಕಂಡುಹಿಡಿಯಲಾಗದಿದ್ದರೂ ಅದರ ಮೂಲ ಜೀವವಿಜ್ಞಾನದ ಸೆಲೆಯಲ್ಲಿ ಇದೆ ಎಂಬುವದು ನಿರ್ವಿವಾದ. ಸಲಿಂಗ ಕಾಮಿಗಳಿಗೂ ಎಲ್ಲರಂತೆ ಗೌರವಯುತವಾಗಿ ಬಾಳುವ ಹಕ್ಕು ಸಂವಿಧಾನದಲ್ಲಿ, ಸಮಾಜದಲ್ಲಿ ಇರಲೇಬೇಕು. ಇವೆಲ್ಲವೂ ಪ್ರಶ್ನಾತೀತವಾಗಿ ದೊರಕಲೆ ಬೇಕಾದ ಪರಭಾರೆ ಮಾಡಲಾಗದ ಹಕ್ಕುಗಳು.

 ಮೊನ್ನೆ ಓ.ಎಲ್.ನಾಗಭೂಷಣ ಅವರ ಲೇಖನವೊಂದನ್ನು ಓದುತ್ತಿದ್ದೆ. ಅದನ್ನಿಲ್ಲಿ ಈ ಸಮಸ್ಯೆಗೆ ಹೊಂದಿಸಿಕೊಂಡು ನೆನೆಪಿದ್ದಷ್ಟು  ಉದ್ದರಿಸಿದರೆ ತಪ್ಪಾಗಲಿಕ್ಕಿಲ್ಲ ಎನಿಸುತ್ತದೆ. ತೋರಿಕೆಯೇ ಧರ್ಮವಾಗಿದೆ ಈಗ. ಅಲ್ಲಮ ಹೇಳಿದಂತೆ 'ಆಚಾರವನೆ ಕಂಡರು, ವಿಚಾರವನೆ ಕಾಣರು', ಇದರ ನೇರ ಪರಿಣಾಮದ ಫಲಶ್ರುತಿಯೇ ಈ ಅತೀ ಸ್ವಾತಂತ್ರ್ಯಕ್ಕೆ, ಸ್ವೇಚ್ಛಾಚಾರಕ್ಕೆ ಕಾರಣವೇನೋ ಅನಿಸುತ್ತದೆ ಕೆಲವೊಮ್ಮೆ. ತನಗೆಲ್ಲ ಗೊತ್ತು ಎಂಬ ಅಹಂ ತನ್ನ ಅನುಭವವೆ ಅನುಭಾವವೆಂದು ತಪ್ಪಾಗಿಸಿಕೊಳ್ಳುತ್ತದೆ. ಎಲ್ಲ ಘಟನೆಗಳು, ಕಾರ್ಯಕಾರಣಗಳು ತನ್ನನ್ನು ಮೀರಿ ಇಲ್ಲ ಎಂಬ ಭಾವನೆ ಬಲವಾದಗ ಅಲ್ಲಿ ನಂಬಿಕೆ ಕಮ್ಮಿಯಾಗಿ ಅಲ್ಲೊಂದು ನಿರ್ವಾತ ಸ್ತಿತಿ ಉದ್ಭವಿಸಿ ಬಾಹ್ಯ ಒತ್ತಡಗಳು ಅದನ್ನು ಆಕ್ರಮಿಸಿಕೊಳ್ಳುತ್ತವೆ ಎಂಬ ಎಚ್ಚರ ನಮಗಿರಬೇಕಾದದ್ದು ಅತ್ಯಗತ್ಯ. ಇದನ್ನು ಇನ್ನೂ ಒಂದು ಬದಿಯಿಂದ ನೋಡಬಹುದು - ಅಲ್ಲಮನ ಮಾತಿನಂತೆ 'ತನು ಒಂದು ದ್ವೀಪ, ಮನ ಒಂದು ದ್ವೀಪ, ಆಪ್ಯಾಯನ ಒಂದು ದ್ವೀಪ'. ದೇಹ, ಮನಸು, ತೃಪ್ತಿ ಎಂಬ ಮೂರು ವೆಕ್ಟರಗಳು (vector) ಒಂದನ್ನೊಂದು ಬೇರೆ ಬೇರೆ ದಿಕ್ಕಿನಲ್ಲಿ ಹಿಗ್ಗಾ ಮುಗ್ಗಾ ಎಳೆದಾಡುತ್ತ ನಮ್ಮ ಬದುಕು ಈ ಮೂರು 'ಬಲ' ಗಳ ಒಟ್ಟೂ ಫಲಿತಾಂಶದಿಂದ ಸ್ವಯಂ ನಮ್ಮ ಅಂಕೆ ಮೀರಿ - ಯಾವ ಕ್ಷಣದಲ್ಲಿ , ಎಲ್ಲಿ ಏನು ಮಾಡುತ್ತಿದ್ದೇವೆ ಎಂಬುವದು ಕೂಡಾ ಮರೆಯಾಗಿ - ಪ್ರವಾಹಕ್ಕೆ ಸಿಕ್ಕ ತರಗಲತೆಯಂತೆ ಸುತ್ತುತ್ತಲಿದ್ದೇವೋ ಎನಿಸಬಹುದು. ತನು, ಮನ,ತೃಪ್ತಿ ಮನುಷ್ಯರ ಬಾಳನ್ನು ನಿರ್ಧರಿಸುವ ಮೂರು ಮುಖ್ಯ ಧಾರೆಗಳು - ತನುವಿನ ಬಯಕೆ ಆಶೆ, ಆಕಾಂಕ್ಷೆ , ಲೌಕಿಕವೂ, ಐಹಿಕವೂ ಆದರೆ ಮನದ್ದು ದೇವ-ಧರ್ಮದ್ದು,ನಂಬಿಕೆಯದು, ಮಾನವ ಪ್ರೇಮದ್ದು. ತೃಪ್ತಿ ವಿಚಾರ, ತರ್ಕ, ಆಧ್ಯಾತ್ಮಿಕ ಅರಿವು ಕಾಣುವ ಯತ್ನ. ಹಟಕ್ಕೆ, ಅಹಂಗೆ ಇದು ಕಾರಣ. ಇದು ಒಂದು ಥರದಲ್ಲಿ ಹೆಚ್ಚುಗೆಯಿಂದ (affluenza) ಉದ್ಭವಿಸಿದ ಸಮಸ್ಯೆಯೇ ಹೊರತು ಸಮೃದ್ಧಿಯ ಅಭಾವದಿಂದಾದದ್ದಲ್ಲ -ಅದ್ದರಿಂದಲೆ ಇದನ್ನು ಸರಿಯಾಗಿ ಗುರುತಿಸುವದು ಗುರುತರವಾದದ್ದು -ಇಲ್ಲದಿದ್ದರೆ ಪರಿಹಾರ ಅಸಾಧ್ಯ. ಎಲ್ಲದಕ್ಕೂ ದೊಡ್ಡಣ್ಣ ಅಮೆರಿಕವನ್ನು ಅನುಸರಿಸುವದರಿಂದ ಆಮದಾಗಬಹುದಾದ ಸಮಸ್ಯೆಗಳನ್ನು ನಮ್ಮ ನೆಲೆದಿಂದ, ನೆಲೆಯಿಂದ ಅರಿತುಕೊಳ್ಳುವದು ಅಗತ್ಯ. ನಮ್ಮ ದೇಹ, ಬುದ್ಧಿ, ಮನಸ್ಸುಗಳನ್ನು ತಿದ್ದಿಕೊಳ್ಳುತ್ತ, ಹೊಸದನ್ನು ತಾಳ್ಮೆಯಿಂದ ಪರಿಷ್ಕರಿಸುತ್ತಾ ನಾವೀಗ ಮುನ್ನಡೆಯಬೇಕು ಇಲ್ಲದಿದ್ದರೆ ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ ಆಗಬಹುದು ನಮ್ಮ ಪರಿಸ್ಥಿತಿ.

 ಅತೀ ಸ್ವೇಚ್ಛಾಚಾರ, ವ್ಯಕ್ತಿ ಸ್ವಾತಂತ್ರ್ಯಕ್ಕೂ - ಸ್ವಾಸ್ಥ್ಯಸಮಾಜದ ನಡುವಳಿಕೆಗೂ ನಡುವಿರುವ ತೆಳು ಗೆರೆಯನ್ನು ಕಾಲಿನುಂದುಜ್ಜಿ ಮುಕ್ತತೆಯನ್ನು ವೈಭವಿಕರಿಸುವ ಈ ಚಾಳಿ ಹೊಸದೇನಲ್ಲ.  ಯಾವದೋ ಒಂದು ಲೇಬಲ ಹಚ್ಚಿ ಸಲಿಂಗಕಾಮವನ್ನು ಮುಖ್ಯ ಧಾರೆಗೆ ಎಳೆದು ತರುವ ಪ್ರಯತ್ನ ಅವಿರತವಾಗಿ ನಡೆಯುತ್ತಲಿದೆ. ಅದರ ಹೆಚ್ಚಳವನ್ನು ಸ್ವಲ್ಪ ಮಾತ್ರವೂ ಪ್ರಶ್ನಿಸುವವರನ್ನು ಪ್ರತಿಗಾಮಿ ಎಂದೆ ಜರಿಯಲಾಗುತ್ತದೆ ಈ ಹೆಚ್ಚಳವನ್ನು ಪ್ರಶ್ನಿಸುವದು ಕೂಡಾ ನಮ್ಮ ಜವಾಬುದಾರಿಯೆ. ಮೊನ್ನೆ ಕನ್ನಡದ ಹೆಸರಾಂತ ಲೇಖಕಿಯ ಒಳ್ಳೆಯ, ಮಾನವೀಯತೆಯ ಕಥೆ ಓದುತ್ತಲಿದ್ದೆ - ಒಬ್ಬ ಅಜ್ಜ ಮೊಮ್ಮಗಳ ಮಧ್ಯದ ಆಪ್ತ ಕಥೆ. ಕೊನೆ ಮುಟ್ಟುವವರೆಗೂ  ಎಲ್ಲಿ ಆ ಅಜ್ಜನ ಇನ್ನೊಂದು ಮಗ್ಗಲು ತೋರಿಸಲು, ಲೇಖಕಿಯ ಅದ್ಭುತ ಕಾಣ್ಕೆ ತೋರಿಸಿಕೊಳ್ಳಲು, ಪ್ರಗತಿಪರವೆಂದು ಬಿಂಬಿಸಿಕೊಳ್ಳಲು ಇಲ್ಲ ಸಲ್ಲದ್ದೆಲ್ಲವನ್ನೂ ಎಳೆದು ತರಲಾಗುತ್ತದೋ ಎಂದು ಆತಂಕಿತನಾಗಿದ್ದೆ. ಎಲ್ಲಿ ಇದರಲ್ಲಿ  ಕಪೋಲಕಲ್ಪಿತ ವಿಚಾರಧಾರೆಗಳನ್ನು ನುಸಳಿಸಿ ತಮ್ಮ ದೃಷ್ಟಿಯೇ ಸರ್ವಶ್ರೇಷ್ಟ, ಮಾನವತಾವಾದಿ ಎಂದು ಬೀಗುತ್ತಾರೋ ಎಂದು ಹೆದರಿದ್ದೆ.ಅಬ್ಬಾ ಅಂತಹದೇನೂ ಇಲ್ಲವಲ್ಲ ಎಂದು ನಿಬ್ಬೆರಗಾಗಿ ನಿಸೂರಾದೆ. ಕಾರಂತರ ಮೂಕಜ್ಜಿಯಂತೆ ಎಲ್ಲ ಕಾಣುವ ದಿವ್ಯ ಚಕ್ಷುವಿನ ಸವಾಲಿದು.  ಇಲ್ಲಿನ ಸವಾಲೆಂದರೆ ಯಾವದನ್ನು ಅಕ್ಕರೆ, ಒಲವು, ಒಲುಮೆ, ವಾತ್ಸಲ್ಯ, ಮಮತೆ ಎಂದುಕೊಳ್ಳುತ್ತಿದ್ದೆವೋ ಅದನ್ನು ವ್ಯವಸ್ಥಿತವಾಗಿ ಹೊಸಕಿ ಹಾಕಿ ಎಲ್ಲದಕ್ಕೂ ನಮಗೆ ತಿಳಿಯಲೇಬೇಕಾದ ಕಾರಣವನ್ನು ಭೂತಕನ್ನಡಿ ಇಟ್ಟು ಹುಡುಕಿ ಆಹಾ ನಾನು ಹೇಳಿರಲಿಲ್ಲವೆ ಇದು ಹೀಗೆ ಎಂದು ಕುಣಿದಾಡುವ ಪರಿ -ಇನ್ನೂ ಕೆಲವರು ಇನ್ನೂ ಮುಂದುವರಿದು ಸಲಿಂಗಕಾಮವನ್ನು ಸ್ವಲ್ಪ ಪ್ರಶ್ನಿಸಿದರೂ ಕೂಡಾ ಅದನ್ನು ನಮ್ಮ ಅರಿವಿನ ಕುಂದೆಂದೂ ನೂರೋ, ಇನ್ನೂರೋ ವರುಷದ ಹಿಂದೆ ಕೂಡಾ ಹೀಗೆಯೇ ನಾವು ಅಸ್ಪೃಶ್ಯತೆಯ ಬಗ್ಗೆ, ದಾಸ್ಯದ ಬಗ್ಗೆ ತಪ್ಪು ಭಾವಿಸಿರಲಿಲ್ಲವೆ ಎಂದು ತಪ್ಪು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಇಲ್ಲಿ ನಮಗೆ ಜೊಳ್ಳನ್ನು ಗಟ್ಟಿಯಿಂದ ಬೇರ್ಪಡಿಸುವ ಎಚ್ಚರವಿರಬೇಕಾದದ್ದು ಅತ್ಯಗತ್ಯ.

 ಎಲ್ಲ ಸತ್ಯಗಳಿಗೂ ಅತ್ಯಂತ ಕಿರು ಮುಗಿತಾಯ (short shelf life) ದ ಕಾಲದಲ್ಲಿದ್ದೇವೆ ನಾವೀಗ. ನನ್ನ ದನಿಯೂ ಸಾಮಾಜಿಕ ಬಹು ಜನರ ನುಡಿಯೊಡನೆ ತಾಳೆಯಾದರೆ ಮಾತ್ರ ಸರಿ ಇಲ್ಲದಿದ್ದರೆ ತಪ್ಪಿದ ಶೃತಿಯಾಗಬಹುದು ಎನ್ನುವ ಹೆದರಿಕೆಯಲ್ಲಿ ಮಾಡಿಕೊಳ್ಳುವ ಒಪ್ಪಂದದಂತೆ ಪ್ರತಿಯೊಬ್ಬರು ಯೋಚಿಸುತ್ತಿದ್ದಾರೆ. ಇದು ಸಮಾಜಮುಖಿಯಾಗುವದರ ಜೀವಾಳ, ತಿರುಳು ಎಂಬ ಹುಸಿ ಕಲ್ಪನೆ. ಯಾರನ್ನೂ, ಯಾಕೆ ನೋಯಿಸಬೇಕು ಅಥವಾ ಯಾರನ್ನೂ ನೋವಿಸದವರ ಥರಹ ಕಾಣಿಸಿಕೊಳ್ಳುವದು ಹೇಗೆ ಎಂಬ ಹಪಾಪಿತನ. ಸಮ ಹಕ್ಕಿನ ವಿಲೋಮ ಪ್ರಯೋಗವಿದು. ಅಮೆರಿಕೆಯಲ್ಲಿ ತುಂಬಿ ತುಳುಕಾಡುವ ಬಂದೂಕಿನ ಸಮಸ್ಯೆಗೆ ಎನ.ಆರ.ಎ.(National Rifle Association) ಗಳ ತಲೆತಿರುಕ ಸಲಹೆಗಳಂತಿರುತ್ತವೆ ಇವು. ಅದಕ್ಕಾಗಿ ತಮ್ಮೆಲ್ಲ ಶಕ್ತಿಯನ್ನು ವ್ಯಯಿಸುವ, ಹಣ ಖರ್ಚು ಮಾಡುವ ಅನೇಕರಿದ್ದಾರೆ. ನೈತಿಕವಾದ ಯಾವದು ಇವರಿಗೆ ಸಲ್ಲದ್ದು - ಅದೆಲ್ಲ ಗೊಡ್ಡು ಸಂಪ್ರದಾಯ ಹಾಗೂ ಮುರಿಯಲೇ ಬೇಕಾದದ್ದಾಗಿ ಕಾಣುತ್ತವೆ ಇವರಿಗೆ. ಇವರೆಲ್ಲಾ ನೂರಕ್ಕೆ ಎಪ್ಪತ್ತರಷ್ಟು ಒಳ್ಳೆಯವರೆ, ಒಳ್ಳೆಯ ಸದುದ್ದೇಶದಿಂದ ಕೂಡಿದವರೆ -ಸಂದೇಹವಿಲ್ಲ. ಯಾವದನ್ನು ನಮ್ಮಿಂದ ತಡೆಗಟ್ಟುವದು ಅಸಾಧ್ಯವೋ ಅದರ ಬಗ್ಗೆ ತಟಸ್ಥವಾಗಿರುವದು ಜಾಣತನವಷ್ಟೆ ಅಲ್ಲ, ಅದೂ ನಮ್ಮ ಕರ್ತವ್ಯ ಕೂಡಾ ಎಂಬ ನಿಲುವಿನವರಿವರು. ಇಲ್ಲಿ ವಿವೇಚನಾ ಪ್ರಜ್ನಾವಂತಿಕೆಯೆಂದರೆನೆಂದು ಹೇಳುವದು ಕಷ್ಟವಾದರೂ ಸ್ವಲ್ಪ ಮಾತ್ರವು ವ್ಯವಹಾರ ಪ್ರಜ್ಞೆಯಿರುವವರು ಇದರ ಪಥಕರಣದ ಅಂತಿಮತೆ ಗುರುತಿಸದೆ ಇರಲಾರರು. ದೊಡ್ಡ ಬೆಳಕೆಂದು ಸೂರ್ಯನ ನಿರೂಕಿಸುತ್ತ ಇದ್ದ ಕಣ್ಣುಗಳನ್ನು ಕುರುಡಾಗಿಸಿಕೊಂಡತ್ತಲ್ಲವೆ ಇದು?  ಸ್ವಾನುಭವವನ್ನು ನಮ್ಮ ಸಂಪ್ರದಾಯಕ್ಕೆ ಒಗ್ಗಿಸುವ ಕೆಲಸವನ್ನು ನಾವು ತುರ್ತಾಗಿ ಮಾಡಬೇಕಾಗಿದೆ.

 ಅಂದ ಹಾಗೆ ಈ ಮೊದಲು ಹೇಳಿದ ಶಿಖರಭಾನು ಎಂದೂ ಯಾವ ಗುಡ್ಡ, ಬೆಟ್ಟ, ಗಿರಿ, ಪರ್ವತ ಏರಿಲ್ಲ, ಏರುವ ಇರಾದೆಯಿರುವವನು, ಯಾರೋ ಏರಿದ್ದನ್ನು ಕೇಳಿದವನು ಮಾತ್ರ.

 

2 comments:

sunaath said...

‘ಮೂಕಜ್ಜನ ಸೋಲು’ ಎನ್ನುವ ಶೀರ್ಷಿಕೆಯೇ ತುಂಬ ಅರ್ಥಪೂರ್ಣವಾಗಿದೆ. ಈ ಲೇಖನದಲ್ಲಿ ನೀವು ಪ್ರತಿಪಾದಿಸಿದ ವಿಚಾರಗಳು ಪ್ರಶಂಸನೀಯವಾಗಿವೆ. ನನಗೆ ಅನಿಸುವದೇನೆಂದರೆ ವ್ಯಕ್ತಿ ಮತ್ತು ಸಮಾಜದ ನಡುವೆ ಬಿಡಿಸಲಾಗದ ಗಂಟು ಇದೆ. ಸಮಾಜವು ವ್ಯಕ್ತಿಯ ಪರಿಪೂರ್ಣ ಅಭಿವೃದ್ಧಿಗೆ ಅವಕಾಶ ನೀಡಬೇಕು ಹಾಗು ವ್ಯಕ್ತಿಯು ಸಮಾಜವನ್ನು ಹಾಳು ಮಾಡುವಂತಹ ಯಾವುದೇ ಕಾರ್ಯವನ್ನು ಮಾಡಬಾರದು. ಈ ಒಂದು balanceನಲ್ಲಿಯೇ ವ್ಯಕ್ತಿ ಹಾಗು ಸಮಾಜದ ಹಿತ ಅಡಗಿದೆ. ವ್ಯಕ್ತಿ ಹಾಗು ಸಮಾಜಕ್ಕೆ ಸಂಬಂಧಿಸಿದಂತೆ ಕನ್‍ಫ್ಯೂಶಿಯಸ್ ಹೇಳಿದ ಮಾತೊಂದು ನೆನಪಾಗುತ್ತದೆ:
It is a crime to be poor when the country is rich; it is a sin to be rich when the country is poor!

Unknown said...

Sunaath avare,

You are absolutely right. ಅಂಧಾನುಕರಣೆಯಿಂದ ಈ ಸಮತೋಲವನ್ನು ನಾವು ಗೊತ್ತಿದ್ದು, ಗೊತ್ತಿದ್ದು -ಬೇಕೆಂದೆ ಅಲ್ಲಾಡಿಸುತ್ತಿದ್ದೆವೆ ಅನಿಸುತ್ತದೆ - as if there are not enough issues to worry about.