ಕಂಭಕ್ಕಾತು ನಿಲ್ಲುವದಿಲ್ಲ
ಅನಿಲ ತಾಳಿಕೋಟಿ
ಮೊದಲಾದರೆ ನೀ ಬರುವಪರಿಮಳವದೆಂತೋ ಪತ್ತೆ ಹಚ್ಚಿ
ಇದ್ದೊಂದ ಪೌಂಡ್ಸ ಪೌಡರನ
ಒಂದೆರಡು ಗ್ರಾಂಗಳ ಮೆತ್ತಿ
ನಗುವರಳಿಸಿ ನಾ ಕಾಯುತ್ತಿದ್ದೆ.
ಕಾಯದ ಪ್ರಭಾವವೋ ಗಾಯದ್ದೋ
ಈಗೀಗ ಕಂಭಕ್ಕಾತು ನಿಲ್ಲುವದಿಲ್ಲ
ಕಮ್ಮಿಯಾಗಿರುವದು ಕಂಭಗಳೇನಲ್ಲ
ಎನ್ನುವದ ನೀ ಅರಿಯದವಳೇನಲ್ಲ
ಸಂಧಿಗೊಂದಿಗಳಲ್ಲಿ ಆಕಸ್ಮಿಕವಾಗಿ
ಸಂದಿಸುತ್ತಿದ್ದದ್ದು ನಿನಗೂತ್ತೆಂಬುವದು ನನಗೊತ್ತು.
ಕಳ್ಳ ಬೆಕ್ಕು ನಿನ್ನ ಕುಡಿನೋಟಕ್ಕೆ ಸೊಕ್ಕು
ಬೀದಿ ನಾಯಿಯಾಗಿ ಸುತ್ತಿದ್ದು
ಛಪ್ಪನ್ನಾರು ಊರುಗಳಿಗೆಲ್ಲ ಗೊತ್ತು
ಮಜವಿತ್ತು, ಮುದವಿತ್ತು ಹೂರಿ
ನೋಟಗಳ ಹೊಯ್ದಾಟ ಚೆಲುವಾಗಿತ್ತು
ತಂಗಾಳಿ ಕೂಟ ನಮ್ಮೂಟ
ಮಟ ಮಟ ಮಧ್ಯಾಹ್ನಗಳ ಮಸ್ತಾಗಿಸುತ್ತಿತ್ತು.
ಆ ತಿರುವುಗಳು ಮರೆಯಾಗಿವೆ
ನಿನ್ನ ಕರುಳಬಳ್ಳಿಗಳ ದಿಕ್ಕು ಬದಲಾಗಿವೆ
ಮರೆಯೆಂದರೆ ಮರೆಯಲ್ಹೆಂಗೆ
ಮೇರೆಯಿಲ್ಲದ ನುಗ್ಗಿ ಬರುವ ತೊರೆ
ನೆರೆ ಮುಗಿದಾದ ಮೇಲೆ ಬರೀ ನೊರೆ
ನಾರಿ ನಾರೀ ನೀನಾರೇ ನಾರೀ ನಾರೀ
ಎನದಿರು ಸೋ ಸ್ವಾರಿ ಸ್ವಾರೀ ರೀ ಸ್ವಾರೀ
ಮಾಗಿ ಮೆರೆಯುತ್ತಿದ್ದಿದ್ದೆಲ್ಲಾ
ಬಾಗಿ ಬೆಂದು ಮರೆಯಾಗಿವೆ
ಪರಿಚಿತ ದಾರಿಯಲ್ಲಿ ಅಪರಿಚಿತರ
ಪಾತ್ರ ಪ್ರಪಂಚ ಮುಂದುವರಿಯುತ್ತಿದೆ.
ಕಂಭಕ್ಕಾತು ನಿಲ್ಲುವದಿಲ್ಲ