Saturday, December 14, 2013

ನನಸಾದ ಹುಚ್ಚ ಖೋಡಿ ಕನಸು

ಅನಿಲ್ ತಾಳಿಕೋಟಿ

ಮನಸ್ನ್ಯಾಗ ಕುಂತಾವ ನಿನ್ನವೆ ನೆನಪs
ಜೀವದಾಗ ನಿಂತಾವ ನಿನ್ನವೆ ಭಾವ
ಕಸುವಿಗೆ ಕಸುವಿನ ಕಾವ
ಹಸುವಿಗೆ ಹಸಿವಿನ ಠೇವ
ಕ್ವಾಟಿ ಕೊತ್ತಲ ಮ್ಯಾಗೆಲ್ಲ
ಮೂಡ್ಯಾವೆ ಪಾದದ ಗುರುತs
ದಾರಿಗಂಬದ ಕೆಳಗೆ ಮುರಕೊಂಡ
ಕೂತಾವೆ ಅರೆಬಿರಿದ ಕನಸs.
ಕಲೆ : ವೆಂಕಟ್ರಮಣ ಭಟ್ಟ
ನಂಬಿಕೆ ತೇರಮ್ಯಾಗ ಪ್ರೀತಿಯ ದ್ಯಾವ್ರ
ಊರವರೆಲ್ಲಾ ಕೇಕೆ ಹಾಕ್ಕೊತ ಎಳೆದಾಡಿ
ಮಾಡ್ಯಾವ್ರ ನನ್ನುಸಿರ ಭಾರ.
ತಿಳಿಯಂಗಿಲ್ಲೇನ ಅವರಿಗೂನೂ
ಪ್ರೇಮಕ್ಕ ಬ್ಯಾಡ ನೋಡ ತೇರಿನ ಭಾರ
ದುಂಬಿಗೇನ ಬಿಚ್ಚಿ ಬಿಚ್ಚಿ ಕರ್ ಕರದ
ಕೂಗ್ತಾವಾ ಹೂ ಹೂವಿನ ಗುಚ್ಚಾ
ನಾವೇನ ನವಿಲೇನ ನವಿಲ್ಯಾಕ
ಕಂಡ ಕಂಡಾಗ ಮೋಡದ ಗೂಡಾ.

ನಡಿ ಹೋಗೊಣ ಓಡಿ
ಅಂದ್ರ ಬರಾಕ ಒಲ್ಲಿ
ನಾನ ನಿನ್ನ ಅಪ್ಪಾ ಅವ್ವಾ
ಅಂದ್ರ ನಂಬಾಕ ಒಲ್ಲಿ
ಉತ್ತಿ ಬೆಳಸಿ ಕಣ್ಣಾಗ ಕಣ್ಣಿಟ್ಟು ಕಾಪಾಡಿ
ಹಗ್ಯಾಗ ಕೂಡಿಟ್ಟು ನೆಟ್ಟಾರ ದೃಷ್ಟಿ
ಖರೇ ಅದ, ಹುಳ ಹುಪ್ಪಡಿ ಹತ್ತಬಾರದು ನೋಡs
ಹೆತ್ತವರ ಅಳಲು ಅರೀದೇನ ನನಗs
ಹುಳ ಅಲ್ಲ ಹುಡಗಿ, ನಾ ನಿನ್ನ ಹಕ್ಕಿ
ಹೆಕ್ಕಿ ಹೆಕ್ಕಿ ಹಕ್ಕಿಲೆ ಹಾರಿಸಿಕೊಂಡು ಹೊಕ್ಕಿನಿ.

ರಂಗೋಲಿ ಚುಕ್ಕಿ ಮುಕ್ಕಿ ತಿಂದಾನ ಚಂದ್ರ
ಥಳಥಳಿಸಿದ ಅಂಗಳ ನೀರ ಮಳಮಳಸ್ಯಾನ ಸೂರ್ಯ
ನಿನ್ನ ಕಾಲಿಗೆಲ್ಲ ಹಚ್ಚಿನಿ ನನ್ನವ ಕಣ್ಣ
ನೆರಳಿಲ್ಲ ಬಿಸಿಲಿಲ್ಲ ನಿನ್ನ ಬಿಟ್ಟಿಲ್ಲ ನಾನs
ಹಗೇದ ಗೊಡವಿ ಸಾಕಿನ್ನ ನಿನಗ
ಹೊಲದ ಗೊಡವಿ ಬೇಕಿನ್ನ ನಿನಗ
ನೀ ನನ್ನ ಕಾಳ-ತಿಂದ ಹಾಕಂಗಿಲ್ಲ ನಿನ್ನ ಬಾಳ
ಮಾಡೇನಿ ನಿನಗೂಡ ಚಂದದ ಬಾಳ
ನೋಡಲ್ಲಿ ನಗಾಕತ್ತಾನ ನಮ್ಮ ಬಾಳ
ಹಿಗ್ಗನ್ಯಾಗ ಹಿಗ್ಗಿ ಹಳೆ ಹಗೆತನ ಮುಚ್ಚಿ
ಹೊದ್ದೆವಿ ಒಲವ ಮತ್ತ ಬಿಚ್ಚಿ ಬಿಚ್ಚಿ.

Thursday, November 14, 2013

ಹೃದಯ ಬಟ್ಟಲಲ್ಲಿ ಅವರೆ

ಹೃದಯ ಬಟ್ಟಲಲ್ಲಿ ಅವರೆ



’ಅಬಕ ಅವರೇ, ಆರಾಮಾ?’
ಕೇಳಿದಾಕ್ಷಣ, ಕಬ್ಬಿಣದ ಸರಳೊಂದ
ನಿಗಿನಿಗಿಸಿ ಮಲಗಿಸಿದೆ ನನ್ನೆದೆಯ ಮೇಲೆ
ಸಿಡಿದು ಚೂರಾಗಿ ಸಿಗಿದು ಸುಟ್ಟು ಕರಕಲಾಯ್ತು.
ಮಾತೆ, ತಾಯಿ ಕಣ್ ಬಿಟ್ಟಳು, ಮಳೆ ಸುರಿಸಿದಳು
ನನ್ಮೇಲೆ ಕೊಡೆಯಿಟ್ಟು ಸರಿದು ನಿಂತೆ ನೀ ನಸುನಗುತ
ಅಳಿದುಳಿದ ಹೃದಯದ ಚೂರು-ಪಾರು ನಾನೀಗ.

ಕಣ್ಣಕಣ್ಣಲಿಟ್ಟು ಕೈ ಕೈ ಹಿಡಿದು ಆಡಿದ ದಿನಗಳೆಷ್ಟೋ?
ಇಡಲುಂಟೆ ಲೆಖ್ಖ, ಹುಟ್ಟಿದಾರಭ್ಯ ನನಗಂಟಿದ ನಂಟ?
ನೆನಪಿದೆಯೆ ಆ ದಿನ, ಗಿರಿ ಗಿರಿ ಸುತ್ತುತ್ತಿದ್ದ
ಗಾಲಿಯಚ್ಚಿನಲಿ ಸಿಲುಕಿ ನಲುಗಿದ ನಿನ್ನ ಕೋಮಲ ಪಾದ
ಮಧ್ಯ ಬೀದಿಯಲಿ ವಿಹ್ವಲವಾಗಿ ಕಿರುಚಿದ್ದು ನೀನಾ, ನಾನಾ?
ವಾರಗಟ್ಟಲೆ ಹಚ್ಚಿ ಮಲಾಮ ನಾನಾಗಿದ್ದೆ ನಿನ್ನ ಗುಲಾಮ.

ಪುಟ್ಟ ಕೈಯಲ್ಲಿ ಎಲ್ಲಾ ಮುಚ್ಚಿಟ್ಟು ನೀ ಮಾಡಿದೆ ರಟ್ಟು ಗುಟ್ಟು.
ಓದಿದ್ದು ಪುಸ್ತಕದ ಹೊದಿಕೆ ಮಾತ್ರ ಒಳಗಿನದೆಲ್ಲಾ
ನನಗರಿವಾಗದ, ಅರ್ಥೈಸಲಾಗದ ಭಾಷೆಯ ಪ್ರಭಾವ.
ಪ್ರಭಾವಳಿಯಲ್ಲಿ ನಾ ಸುತ್ತುತ್ತಿರುವೆ ಸತ್ತಂತೆ
ಮನಸೆಲ್ಲಾ ಕೇಂದ್ರಾಭಿಗಾಮಿಯಾಗಿ ಅಂದಿನಿಂದ.

ಸುಡು ಸುಡು ನೆತ್ತಿಯ ಸೂರ್ಯ
ಬೆವರೊರಿಸಿ ನಾ ಸೇರಿದೆ ನಿನ್ನ ಗೂಡ.
ತಂಪು ತಂಪಾದ ನೆಲ
ಮತ್ತೆ ಮತ್ತೆ ಸುತ್ತಿ ಸುತ್ತಿ ಸಿಡಿಸುತಲಿರುವ ಚಕ್ರ ಫಂಖ
ಸಟ್ಟನೆ ಇಟ್ಟೆ ಡುಣ್ಣನೆಯ ಕೋಲೊಂದ
ಕಳಚಿ ಬಿದ್ದು ನಾ ಚಲಿಸುತಿಹೆ ದೂರ-ದೂರ ಬಲು ದೂರ.
ಒಂದೇ ಒಂದು ಸಾರಿ ನೋಡಲಾರೆಯಾ ಕಣ್ಣರಳಿಸಿ
ಎಲ್ಲ ಭೌತ ನಿಯಮ ಮೀರಿ
ವೃತ್ತಾಂತದಿಂದ ನಡೇದೇನು ಕೇಂದ್ರದತ್ತ
ಮೀರಲುಂಟೆ ಭೂತ ಭಾವಗಳ, ಕಳಚಲುಂಟೆ ಭಾಧ್ಯತೆಗಳ?
ಚೂರು ಚೂರುಗಳ ತೇಪಿಸಿ ವಾಂಛೆ ಆಶೆಗಳ ಲೇಪಿಸಿ
ಹಿಡಿದಿಹೆನು ಕೈಯಲಿ ಹೃದಯ ಬಟ್ಟಲು
ಬಟ್ಟ ಬಯಲಲಿ ನಿಂತ ಒಬ್ಬಂಟಿ ಬಿಕ್ಷುಕ
ನಡೆದು ಬಂದು ನೀನಿಟ್ಟೆ ಅದರಲಿ ಅವರೇ, ಅವರೆ, ಅ ವರೆ.

ನೋಯುವ ಪ್ರೀತಿ

ನೋಯುವ ಪ್ರೀತಿ


ಕರುಬುವದಿಲ್ಲ ನಾ ನನ್ನ ಭಾವನೆಗಳ ಗಾಳದಲ್ಲಿ
ಅದುಮಿಕೊಂಡ ನಿಶ್ಯಕ್ತ ವೇದನೆಗಳಲ್ಲಿ
ಗೂಡಲ್ಲೆ ಮೊಟ್ಟೆ ಒಡೆದು ಮರಿಯಾದ ಗುಬ್ಬಚ್ಚಿ
ಸಾಧ್ಯವೇ ಅಸೂಯಿಸಲು ಮಲೆಯ ಮಾಂತ್ರಿಕತೆಯ ?

ಕೊರಗುವದಿಲ್ಲ ನಾ ನಾ ರಕ್ಕಸನಿಗೆ
ಅವನಲಿಲ್ಲ ಕಾಲಕ್ಕೆ ಕರುಣೆ
ಕ್ರೌರ್ಯವೇ ಸ್ಥಾಯೀಯಾದವನಿಗೆ
ಅಂತರ್ವಾಣಿ ಕೇಳಿಸುವದದೆಂತು ?

ಮರುಗುವದಿಲ್ಲ ನಾ ನಾ ಅದೃಷ್ಟವಂತರಿಗೆ
ನೋವನ್ನುಣ್ಣದ ನೀಲಕಂಠರಿಗೆ
ಪ್ರಯತ್ನಿಸದೆ ಫಲ ಪಡೆಯುವವರಿಗೇನು ಗೊತ್ತು
ಸೋತ ಯತ್ನದಾ ಗಮ್ಮತ್ತು?

ಮರೆಯಲಾರೆ ನಾನೆಂದಿಗೂ ಈ ಸತ್ಯವ
ಅಸುಖಿಯ ಅನುಭವ ದೊಡ್ದದು ಅನನುಭವಿಗಿಂತ
ಪ್ರೀತಿಯೇ ಗೊತ್ತಿರದವನ ನೋವಿಗಿಂತ
ಮಿಗಿಲಲ್ಲವೇ ನೋಯುವ ಪ್ರೀತಿ?

ಮೂಲ: Alfred, Lord Tennyson

ನಮ್ಮ ತುಳಸಿಯ ಲಗ್ನ

ಅನಿಲ ತಾಳಿಕೋಟಿ ಅಮೇರಿಕಾದಿಂದ ಬರೆದ ‘ನಮ್ಮ ತುಳಸಿಯ ಲಗ್ನ’    
ಅನಿಲ ತಾಳಿಕೋಟಿ
ಶುಕ್ರವಾರ, 18 ಜನವರಿ 2013 (11:42 IST)

ಒಂದೆರಡು ತಿಂಗಳ ಹಿಂದೆ ಮನ್ಯಾಗ ತುಳಸಿ ಲಗ್ನ ಅಂತ ಮಾಡಿ ಒಂದೈವತ್ತು ಕುಟುಂಬ ಕರದಿದ್ದವಿ. ಅಮೇರಿಕಾದಾಗ ತಿಂಗಳಿಗೆ ಒಂದೆರಡ ಸರೆ ಅರೆ ಮಂದಿ ಮನಿಗೆ ಹೋಗಿ ಊಟಾ ಹೊಡದ ಬರಲಿಲ್ಲಾ ಅಂದ್ರ ಇವನೌನ ಇಂಡಿಯಾದಾಗ ಇದ್ದಂಗ ಅನಸ್ಲಿಕತ್ತೈತಿ. ಏನರ ಒಂದ ನೆಪ ಮಾಡ್ಕೊಂಡು ಮಂದಿನ ಕರಿತಾರ, ಮಾತಾಡತಾರ, ಊಟಾ ಮಾಡ್ತಾರ. ನವೆಂಬರ, ಡಿಸೆಂಬರದಾಗಂತೂ ಇವು ತಾರಕಕ್ಕ ಏರ್ತಾವು.
'ಇ ವರ್ಷದಾಗ ಬರೇ ಎರಡೇ  ಸರ್ತಿ ಮಂದಿನ ಕರ್ದಿವಿ, ಮತ್ತ ಡಿಸೆಂಬರನ್ಯಾಗ ಕ್ರಿಸ್ಮಸಗೆ ಕರಿತೀವಿ, ನಮ್ಮ ಹಬ್ಬಕ್ಕ ಕರಿಯೊಣು' ನವೆಂಬರ ಒಂದಕ್ಕ ಶುರು ಮಾಡಿದ್ಲು ನನ್ನ ಹೆಂಡ್ತಿ.
'ಆಲ್ಲಾ , ದೀಪಾವಳಿಗೆ ಮೂರು ಕಡೆ ಹೋಗುದು ಇಟ್ಕೊಂಡಿ. ಸೀರೆ ಉಟಕೊಂಡ್ರ, ಕಾರ ಓಡಸ್ಲಿಕ್ಕೆ  ಆಗಂಗಿಲ್ಲಾ ಅಂತಾ ನನ್ನೇ ರುಬ್ಬತಿ- ಇನ್ನ್ಯಾವಾಗ ಮಂದಿನ ಕರೀತಿ?'
'ಹಂಗ ಸುಮ್ಮ ಗೆಟ್ಟುಗೆದರ  ಮಾಡುಣು ತೊಗೋರಿ, 3ನೆ ವಾರದಾಗ'
'ನಾಲ್ಕ ದಿವಸರ ಬಿಟ್ಟ ಇದ್ರ ಗೆಟ್ಟುಗೆದರ ಮಾಡಬಹುದು, ಯಾವಾಗ್ಲೂ ಭೇಟಿ ಅಕ್ಕೊತ ಇರವರ ಜೋಡಿ ಏನ ಗೆಟ್ಟುಗೆದರ ಮಾಡ್ತಿ, ಸುಡಗಾಡು ?'
'ಬರೇ ಇಂತಾ ಮಾತ, ಏನರ ಇರ್ಲಿ , ನವೆಂಬ್ರದಾಗ ಒಂದ ಫಂಕ್ಷನ್ನ ಆಗ ಬೇಕು. ಅಡಗಿಯಕಿಗೆ ಹೇಳಿ ಇಟ್ಟಿನಿ, ಮಾಡಾಕಿ ನಾನು, ನಿಮ್ದೆನ ಗಂಟ ಹೊಕ್ತದ?'
ಗಂಟ ಬಗ್ಗೆ ಮಾತ ಬಂತ ಅಂದ್ರ ದುಡಿಯೋ ಹೆಂಡತಿ ಮುಂದ ಗಪ್ಪ ಆಗುದು ನಮ್ಮ ಪದ್ಧತಿ. 'ಆತು ಬೀಡು, ತುಳಸಿ ಲಗ್ನ ಮಾಡುಣು'.
'ಅರೆ, ವಾ ಮರ್ತೆ ಬಿಟ್ಟೆದ್ದೆ ನೋಡ್ರಿ, ತುಳಸಿ ಲಗ್ನಕ್ಕ  ಯಾರೂ ಕರ್ದಂಗ ಇಲ್ಲಾ, ಬೆಸ್ಟ್ ಐಡಿಯಾ ಕೊಟ್ಟ್ರಿ, ಇಗ ಇವೈಟ ಕಳೀಶೇ ಬಿಡ್ತೀನಿ'.
'ಇವೈಟನ್ಯಾಗ ನಿ ಏನ  ತುಳಸಿ ಲಗ್ನ ಅಂತ ಹಾಕ್ತಿ ಏನು?' ಯಾಕ ಬೇಕಾಗಿತ್ತೂ ನನಗ , ಕೇಳಿಬಿಟ್ಟೆ.
'ಹೌದು, ಇ ತುಳಸಿ ಲಗ್ನ ನಿಮಗ ಹೆಂಗ ನೆನಪ ಅದ? ಏನ ತುಳಸಿ ಅಂತಾ ಯಾರರ ಹುಡಗಿ ಇದ್ಲೇನು, ಕೊಟ್ಯ್ಯಾಗ?'
'ಅಯ್ಯ, ನಮ್ಮ ಬಾಗಲಕೊಟ್ಯಾಗ  ಆ ಕಾಲದಾಗ ಅಂತಾ ಮಾಡರ್ನ ಹೆಸರಿನವರು ಛಾಪಾ ಹೊಡದು ಹುಡಕಿದ್ರೂ  ಸಿಕ್ತಿರಲಿಲ್ಲ ಬಿಡು'
'ಹಂಗೆನಿಲ್ಲಾ, ಅವಾಗಾ ಎಂಡಮೂರಿ ತುಳಸಿ, ತುಳಸಿದಳ ಎಲ್ಲಾ ಬರದಿದ್ದಾ, ಅದೆನ ಮಾಡರ್ನ ಅಲ್ಲಾ'
'ಆತು ಬೀಡು, ಏನೋ ನಮ್ಮ ಪದ್ಧತಿದೂ ಆತು, ನಿನ್ನಾ  ಫಂಕ್ಷನ್ನಕ್ಕೂ ಸರೀ ಆತಲ್ಲಾ, ಇನ್ಯಾಕ ಕೆಬರತಿ' ತಪ್ಪ ಶಬ್ದ ಅಂದು ಮತ್ತ ಸಿಕ್ಕ ಹಾಕ್ಕೊಂಡೆ.
'ನಂಗ್ಯಾಕೋ ಡೌಟು, ಅದೆಂಗ ನಿಮ್ಮ ತಲ್ಯಾಗ ತುಳಸಿ ಲಗ್ನ ಬಂತು ತಿಳಿಸಾಕ ಬೇಕು, ಇಲ್ಲಾಂದ್ರ ಫಂಕ್ಷನ್ನ ಇಲ್ಲಾ, ನಿಮ್ಮ ಟೆನ್ನಿಸೂ ಕ್ಯಾನ್ಸಲ' ಆಟಂ ಬಾಂಬ ಒಗದ್ಲು.
'ಖರೇನ ಅಮೇರಿಕನ್ ಆಗಿ ಬೀಡು ನೀನು, ಬೇಕಿರಲಿ, ಬಿಡಲಿ- ಬಾಂಬ ಒಕಾಟೆ ಬಿಡ್ತಿ, ನಿ ಇವೈಟ ರೆಡಿ ಮಾಡು, ನಾ ಒಂದ ಪೊಯಮ ಬರ್ದು ಏನಾತ ಹೇಳ್ತೀನಿ'.
ಒಂದು ತಾಸು ಮೇಲೆ ಹೋದೆ, ಮೇಲೆ ಅಂದ್ರೆ ಎರಡನೇ ಫ್ಲೋರಿನ ಓದೂ ಖೋಲಿಗೆ - ಮಕ್ಕಳು ಮರಿಗೋಳು ಆಕಡೆ ತಲೇನೂ ಹಾಕೊದಿಲ್ಲಾ. ಅಲ್ಲೇನ ಅದ ಮಣ್ಣು , ಒಂದ ಐಪ್ಯಾಡ ಇಲ್ಲಾ , ಟಿವಿ ಇಲ್ಲಾ , ಬರೇ ಒಂದಿಷ್ಟು ಕನ್ನಡ ಪುಸ್ತಕ ಅವ, ಅವರ ಪ್ರಕಾರ.
ಒಂದ ಹಾಳಿ ಮ್ಯಾಲೆ ಉದ್ದಕ್ಕ ಒಂದು  ಪೊಯಮ ಬರ್ದದ್ದು ಕೊಟ್ಟು ,
'ನೀ ಓದ ಇದನ್ನ, ನಾ ಸ್ವಲ್ಪ ಟೆನಿಸಗ ಹೋಗಿ ಬರ್ತೀನಿ, ಅಮ್ಯಾಲ ಡಿಸ್ಕಸ್ಸ್ ಮಾಡುಣು' ಅಂತ್ಹೇಳಿ  ಉತ್ತರಕ್ಕೂ ಕಾಯಲಾರದೆ ಹೊಂಟೆ.
ಓದಲಿಕ್ಕೆ ಶುರು ಮಾಡಿದ್ಲು ನನ್ನವಳ
 ನನ್ನ ತುಳಸಿಯ ಲಗ್ನ
ನನ್ನ ಜೀವಕೋಶದ ವರ್ಣ ತಂತುಗಳು ನೀನು
ನೀ ಬೀಸಿದರೆ ಕೈ, ಏರಿತು ನನ್ನ ಮೈ ಬಿಸಿ
ಕೈ ಎತ್ತಿ ಕಲುಕಿ ಬಿಟ್ಟೆ ನನ್ನ ಹೃದಯದ ಖಿಂಡಿ
ನಿ ನೋಡ್ತಿ ಎಂತಲೇ ನಾ ಕಾಯುವದೋ
ನಾ ಕಾಯ್ತಿನಂತಲೇ ನಿ ನೋಡುವದೂ
ಎರಡೂ ಓ ಕೆ , ಬೇರೆಲ್ಲಾ ಯಾಕೇ ?
ಕೈ ಆಡಿಸಿ ನಿ ಆದೆ ಮರೆ
ಮರೆಯೆಂದರೆ ನಾ ಮರೆಯಲಿ ಹೆಂಗೆ?
ಹೊಂಗೆಯ ಟೊಂಗೆಯ ಮೇಲೆ ಕುಳಿತ ಮೈನಾದ ಮರಿ
ಗರಿ ಗರಿ ಇಸ್ತ್ರಿ ಮಾಡಿ ನೆತಾಕೀದ್ದ ಬದಾಮಿ ಎಲಿ ನನ್ನ ಮನ
ಕಲ್ಲೆಸೆದು, ಗುಲ್ಲು ಮಾಡಿ ಕದಡಿಸಿಬಿಟ್ಟೆ
ಇನ್ನೂ ಸರಿ ಸಮ ಮಾಡಲಾರೆ
ಮುಳಗುವದೊಂದೆ ಉಳಿದಿರುವ ದಾರಿ.
ಸುಳ್ಳ ಸುಳ್ಳನ ನಿ ಬರುವ ದಾರಿ ನೋಡುತಾ
ಅಪ್ಪನ ಕೆರೆ ಬದಿ ಪೋಸ್ಟ್ ಆಫೀಸನ ಹತ್ತಿರ ನಿಂತೆ
ನಿ ಕೊಟ್ಟ ಬೆಳ್ಳ ಬೆಳ್ಳಗಿನ ಬಾಲ್ ಪಾಯಿಂಟ್ ಪೆನ್ನು
ಪತ್ರ ಬರೆದಿದ್ದೆ, ಪೆನ್ನು ನಿನ್ನದೇ, ಪ್ರೇಮಿಯು ನೀನೆ
ಮತ್ತೆ ಸಂಜೆಯ ನೋವು, ತಿಳಿಯದೆ ಕಾಲು ಸರಿದಿವೆ
ನಿನ್ನ ಮನೆಯತ್ತ, ಮೊದಲು ಹೊರ ನಿಂತ ನಿನ್ನ ಅಪ್ಪ
ನೋಡಿ ನಾನಾದೆ ಬೆಪ್ಪ, ಜಲಮಹಲ ದಾಟಿ ಹೋದೆ
ಒಂದು ರೌಂಡು, ಪಾನಿ ಮಹಲ ದಾಟಿ ಬಂದೆ ಇನ್ನೊಂದು
ಸಾರಿ- ದೂರಿಂದ ಕಂಡಿತು ನಿಮ್ಮಮ್ಮನ ಸಾರಿ-
ಈ ಬಾರಿಯೂ ಮತ್ತೆ ಸ್ವಾರಿ ಸವಾರಿ.
ಕಟಕುತ್ತಿರುವ ಕಾಲ
ನಿರರ್ಥಕವಾಗಿ ಕಳೆದು ಹೋಗುತ್ತಿರುವ ತಂಗಾಳಿಯ ಸಂಜೆ
ನಿನಗೋ ಹೋಂ ವರ್ಕು, ಚಿತ್ರಗೀತೆಗಳ ಖದರು
ನನದೇಕೆ ನಿನಗೆ ಖಬರು?
ಮತ್ತೆರಡು ರೌಂಡು ಠಳಾಯಿಸಿದೆ , ಈ ಬಾರಿ
ಅಣ್ಣಂದಿರು, ಅವರಿದಿರು  ಎರಡು ಮಾತು
ಅರಸುತಿರುವ ಕಣ್ಣು -ಕಾಣದ ನೀನೆಂತ ಹೆಣ್ಣು
ಸಟ್ಟನೆ ಒಳಹೊಕ್ಕು ಮುಂಗುರಳ ಮೀಟಿ ನೋಡಿಲ್ಲಿ ಎನ್ನಲೇ?
'ಏ ನೀ  ಕಡೆಗೆ?' ಅಣ್ಣನ ದರ್ಪದ ಪ್ರಶ್ನೆ
'ನನ್ನ ಫ್ರೆಂಡ್ಸ್ ಇರೋದೆಲ್ಲಾ ಈ ಕಡೆನೇ' ಎನ್ನುತ್ತಾ
ಮತ್ತೊಂದು ಸುತ್ತು ಹೊಡೆದು ಮರೆಯಾದೆ.
ಕೇಳೀತೇ, ಕೃಷ್ಣೆಯ ತಣ್ಣನೆ ಗಾಳಿ, ರಾತ್ರಿ ಮಲಗುವ
ಮುಂಚೆಯಾದರೂ ನೋಡಲೇಬೇಕು , ನಾ ತಾಳಲಾರೆ
ಮತ್ತೊಂದು ಸುತ್ತು ನಿರ್ಮನೆಯ ಬದಿಯಿಂದ -
ಇ ಬಾರಿ ಮೇಲಂಗಿ ಕೆಳಲುಂಗಿ
ಲುಂಗಿಯ ಮೇಲೆ ಸಿಗಿಸಿದ ನಿನ್ನ ಬೆಳ್ಳನೆಯ ಪೆನ್ನು ಸಧ್ಯಕ್ಕೆ
ಅಣ್ಣ ,ಅಪ್ಪನಿಲ್ಲ - ಗತಿಗೇಡು  ನಾನು - ನೀ  ಕಾಣಲಿಲ್ಲಾ
ರಾತ್ರಿಗ್ಯಾಕೋ ಹೆಚ್ಚಿನ ಧೈರ್ಯಾ
ನಿನ್ನ ಮನೆ ಮೆಟ್ಟಿಲೇರಿ ಬಂದು ಬಿಟ್ಟಿರುವೆ
ಕಿಟಕಿಯಲ್ಲೊಂದು  ಮುಖ - ಬೆವೆತುಬಿಟ್ಟೆ ನಾನು
ಸಟ್ಟನೇ ಪೆನ್ನು ಇಟ್ಟಿದೆಲ್ಲಿ ಗೊತ್ತೇ ?
ನಿನ್ನ ತುಳಸಿ ಕಟ್ಟೆ ಯ ದೀಪದ ಖಿಂಡಿಯಲ್ಲಿ
ಬಿದ್ದೆನೋ ಎದ್ದೆನೋ ಎನ್ನುತ್ತಾ ಓಡಿದೆ
ಸಧ್ಯಾ ಬಚಾವಾದೆ.
ಆಹಾ ಬಂತು ಬಂತು ದೀಪಾವಳಿ, ನನ್ನ ದೀಪಾ
ನಿನ್ನ ಹಾವಳಿ. ತುಳಸಿ ಲಗ್ನ ನಿಮ್ಮ ಮನೆಯಲ್ಲಿ
ಮಾಡಿಸಿದ್ದು ನನ್ನಜ್ಜ ಮಹಾ ಪುರೋಹಿತ
ಅದೇ ಬಿಳಿ ಬಣ್ಣದ ಪೆನ್ನಿಂದ ನನ್ನಜ್ಜ ಬರೆಸಿದ
ಮಾತು-ಕತೆಯ ಬಾಬತ್ತು -ಇಪ್ಪತ್ತು ತೊಲ
ಬಂಗಾರ ಹೊತ್ತು ನೀನಾದೆ ಬೇರೊಬ್ಬನ ಸೊತ್ತು
ನೀನಿಲ್ಲ ನನ್ನ ಜೊತೆ ಈ ಹೊತ್ತು
ನನಗೆ ಮಾತ್ರ ಇದು ಗೊತ್ತು.
ಮನಿಗೆ ಬಂದ ಕುಳ್ಲೆ ಮಗಗ ಕರದು 'ಚಿನ್ನ್ಯಾ, 'ಲೆಗೊ' ತೊಗೊಂಡು ಒಂದು ತುಳಸಿ ಕಟ್ಟಿ ಮಾಡೆಲ್ ಮಾಡು, ಒಂದೈವತ್ತು ಇಟ್ಟಂಗಿ ತಂದ ಕೊಡ್ತೀನಿ -ಹೊರಗ ಜೋಡಸುಣಂತ'
ಖುಷ ಆಗಿ ಬಿಟ್ಟ ಮಗರಾಜ , ದಿವಸ ಬಂದ ಕುಳ್ಲೇ ಅದ ಮಾಡಿದೇನು, ಇದು ಮುಗಿಸಿದೇನು ಅಂತ ಕೇಳು ನಮಪ್ಪಾ ಇವತ್ತ ಲೇಗೋ ಆಡು, ಹೊರಗ ಕಟ್ಟಿ ಕಟ್ಟು ಅನ್ನಾ ಖತ್ತನಲ್ಲಾ ಅಂತ.
'ಇಟ್ಟಂಗಿ ಅಂದ್ರ ಏನು ?' ಅಂಗಿ ತೊಗೊಂಡು ಟೆಂಟ ಕಟ್ಟಬೇಕೆನು?' ಅಂದಾ.
'ಅಂಗಿ ಅಲ್ಲೋ, ಇಟ್ಟಂಗಿ ಅಂದ್ರ ಬ್ರಿಕ್ಸ, ಬ್ರಿಕ್ಸ'  ಅಂದೆ.
'ಓಕೆ, ಹಂಗೆ ಒಂದಿಷ್ಟು  ತೂತು ಇರೋ ಬ್ರಿಕ್ಸ ತೊಗೊಂಬಾ'
'ಯಾಕಪಾ ಅದರೊಳಗ ಏನ  ಪ್ರಣತಿ ಹಚ್ಚಿ ಇಡತಿ ಏನ ?' ಅಂದೆ.
'ಅಲ್ಲಾ, ತುತೂ ಇರೋ ಬ್ರಿಕ್ಸ್ ಬಳಸಬೇಕು ಸ್ಟ್ರಕಚರ ಸ್ಟ್ರಾಂಗ ಬೇಕಂದ್ರ'
'ಮಗನ, ಎಂಟು ವರುಶದಂವ ಇಲ್ಲಾ ಇನ್ನೂ ,ಆಗಲೇ ವಸ್ತಾರೆ ಮಾತಾಡಿಧಂಗ ಮಾತಾಡ್ತಿಯಲೋ' ಅಂದೆ, ತಳಾ -ಬುಡಾ ತಿಳಿಲಿಲ್ಲಾ ಹುಡಗಗ.
ತುಳಸಿ ಲಗ್ನ ಭರಪೂರ ಚೊಲೊ ಆತು. ಬಂದವರ ಮುಂದ ನನ್ನ ಹೆಂಡ್ತಿ ತುಳಸಿ ಲಗ್ನ ಯಾಕ ಮಾಡ್ತಾರ ಅನ್ನುದರ ಬಗ್ಗೆ  ಏನ ಹೇಳಿದ್ಲೋ ನಾ ಇನ್ನೂ ತನಕ ಕೇಳಲಿಕ್ಕೆ ಹೋಗಿಲ್ಲಾ .

ಚುಂಬಕ ಶ್ವಾನಾ -2

ಅನಿಲ ತಾಳಿಕೋಟಿ ಶ್ವಾನಪುರಾಣ ಚುಂಬಕ ಶ್ವಾನಾ ಎರಡನೇ ಕಂತು    
ಅನಿಲ ತಾಳಿಕೋಟಿ
ಬುಧವಾರ, 3 ಅಕ್ಟೋಬರ್ 2012 (04:30 IST)

ಮೂರು ವರುಷದ  ಹಿಂದಿನ ಬೇಸಿಗೆಯಲ್ಲಿ  ಎನಿಸುತ್ತದೆ ,ಮಕ್ಕಳಿಗೆಲ್ಲ ರಜೆ. ಎಲ್ಲಿಯೋ ಹೋಗುತ್ತಿರಬೇಕಾದರೆ ನನ್ನವಳು ನಡೆಸುತ್ತಿದ್ದ ಕಾರನ್ನು ಚಕ್ಕನೆ ಒಂದು ಹಳೆಯ, ನಿರ್ಜನ ಮನೆಯೆದರು ನಿಲ್ಲಿಸಿದಳು. ಅವಳೆಂದು ಮೊದಲೇ GPS ನೋಡದೆ, ಗಮ್ಯ ತಾಣ ತಲಪುವ ಮೊದಲೇ ಬೇರೆಲ್ಲೂ ನಿಲ್ಲಿಸುವವಳಲ್ಲ. ಅದೂ ಹೋಗಿ ಹೋಗಿ ಹಳೆ, ನಿರ್ಜನ ಮನೆ ಎದರು - ಏನಪ್ಪಾ ಇದು ಎನ್ನುತ್ತಾ ಇಳಿಯ ಹೋದೆ. ಒಂದು ನಾಲ್ಕು ಎಳೆಯ ಡ್ಯಾಷಹೌಂಡಗಳು (dachshund)  ಕಾಲ ಬಳಿ ಬಂದು ಅಮುಕಿಕೊಂಡವು. ತಲೆ ಎತ್ತಿ ನೋಡಿದೆ 'ಇಲ್ಲಿ ಡ್ಯಾಷಹೌಂಡ ಮಾರಲಾಗುತ್ತದೆ' , ಮರಕ್ಕೆ ತೂಗುಹಾಕಿದ ಮಾಸಿದ ಬೋರ್ಡು. ನಗುನಗುತ್ತ ಮಗ, ಮಗಳು ಕಾರಿನಿಂದ ಇಳಿದರು.
'ಪಪ್ಪಾ , ನಾಲ್ಕು ವರುಷದಿಂದ ಕೇಳ್ತಾ ಇದ್ದೀನಿ. ಪ್ರತಿ ಸಾರಿ ಬೇಸಿಗೆಯಲ್ಲಿ, ಶಾಲೆ ಮುಗಿದಮೇಲೆ ನೋಡುವ, ಎಂತಿದ್ದೆಯೆಲ್ಲ. ನಡಿ ಈಗ ನೋಡುವ'
ಇನ್ನೂ ಮುಂದೆ ಹಾಕಲಾಗಲಾರದು ಎಂದು ಗೊತ್ತಾಯಿತು , ಅದಕ್ಕಿಂತ ಮಿಗಿಲಾಗಿ ಅಮ್ಮನನ್ನು ಒಪ್ಪಿಸಿ ಕರೆತಂದ ಮಗಳ ಮೆದುಳು 'ನಿನ್ನದೇನೂ ನಡೆಯದು, ಎಲ್ಲವನ್ನು ನಿರ್ಧರಿಸಿಯಾಗಿದೆ ' ಎಂದಂತಾಗಿ,
'ನಿಮ್ಮದೇ ಮಗಳು, ಮೆದುಳು - ಅನುಭವಿಸಿ' ಎನ್ನುವಂತೆ ಮುಖ ಮಾಡಿದಳು ಮಡದಿ. ಸ್ವಲ್ಪ ಹೆಮ್ಮೆಯಾಯಿತೇನೋ? 
ಮಗಳು ಹೇಳಿದ್ದು ನಿಜ, ನಾಲ್ಕು ವರುಷದಿಂದ ಪ್ರತಿ ಸಾರಿ ಹುಟ್ಟುಹಬ್ಬಕ್ಕೆ ಏನು ಬೇಕು ಎಂದರೆ ಸಿದ್ಧ ಉತ್ತರ 'ಒಂದು ನಾಯಿ'. ಈಗ ತನ್ನ ಜೊತೆ ತಾಯಿ, ತಮ್ಮನನ್ನು ಕೂಡಿಸಿಕೊಂಡಿದ್ದಾಳೆಯೆಂದರೆ, ತುಂಬಾ ದಿನದಿಂದಲೇ ಮಸಲತ್ತು ಮಾಡಿದ್ದಾಳೆ.  ಇದೆಲ್ಲಾ ಆರಂಭವಾಗಿದ್ದು ಗೋವೆಯ ಅಣ್ಣನ ಮನೆಯಲ್ಲಿ ಸುಮಾರು ಐದಾರು ವರುಷಗಳ ಹಿಂದೆ ಎಂಬುವದು ನೆನಪಾಯಿತು. ಅಣ್ಣ ನನ್ನ ಮಗಳಿಗೆ ತನ್ನಲ್ಲಿದ್ದ ಮೂರು ಮುದ್ದಾದ ನಾಯಿಗಳ ಬಗ್ಗೆ ವಿವರಿಸುತ್ತಿದ್ದ.
'ಮೂರು ಯಾಕಂದ್ರ , ಪುಟ್ಟಾ , ನಾವು ಸಣ್ಣವರಿದ್ದಾಗ ನಮ್ಮನೆಯೊಳಗ ನಾಯಿ ಇದ್ದಿಲ್ಲ, ನಾವು ಮೂರು ಮಂದಿಯಲಾ ಅಣ್ಣ, ತಮ್ಮಂದಿರು ಅದಕ್ಕ ಮೂರು ಬೀದಿ ನಾಯಿ 'ಪೆಟ್ಟ' ಮಾಡ್ಕೊಂಡಿದ್ವಿ. ನಾನು ನನ್ನ ನಾಯಿಗೆ, ನನ್ನ ಅಚ್ಚುಮೆಚ್ಚಿನ ನಾಯಕ  'ರಾಜ್ಕುಮಾರ್' ಅಂತಾ ಕರಿತ್ತಿದ್ದೆ. ಅದು ನಾ 'ರಾಜ -ಚು ಚು ಚೂ' ಅಂದ್ಕುಳ್ಲೆ ಎಲ್ಲಿರ್ತಿತ್ತೋ ಓಡಿ ಬರ್ತಿತ್ತು. ಅದರ ಸಲುವಾಗಿ ನಾವು ಎಷ್ಟು ಜಗಳಾಡತಿದ್ವಿ  ಅಂದ್ರ ಬರೇ ನಾ ಒಬ್ಬನ ಅದರ ಹೆಸರ ಹಿಡದು ಕರಿಬೇಕು ಅಂತಾ ನನ್ನ ತಕರಾರು. ಅದಕ್ಕ ನಿಮ್ಮಪ್ಪಾ ಇನ್ನೊಂದು ನಾಯಿ ಹುಡಕಿ ಅದಕ್ಕಾ 'ವಿಷ್ಣು' ಅಂತ ಹೆಸರು ಇಟ್ಟು, ಸಂಜೆ ಆದಕುಳ್ಳೆ ನನಕು ಮೊದಲ ಓಡಿ ಹೋಗಿ ಚೂ, ಚೂ ಸುರು ಹಚ್ಚುಗೊತ್ತಿದ್ದಾ. ಇನ್ನಾ ನಿಮ್ಮ ಕಡಿ ಕಾಕಾ ತಾ ಅರ ಏನ ಕಮ್ಮಿ ಅಂತಾ ಇನ್ನೊಂದ್ದಕ್ಕ 'ಅಂಬರೀಶ' ಅಂತ ಹೆಸರಿಟ್ಟು ತಾನೂ ಕೂಗಲಿಕ್ಕೆ ಶುರು ಮಾಡ್ತಿದ್ದಾ. ನಮ್ಮವ್ವಗ ನಮಗ ಚಪಾತಿ ಮಾಡಿ ಮಾಡಿ ಸಾಕಾಗ್ತಿತ್ತು ಇನ್ನ ಆ ನಾಯಿಗಿಷ್ಟು ಎಲ್ಲಿಂದ ತರುದು ಅಂತಾ ದಿವಸಾ ಬಯ್ಲಿಕ್ಕೆ ಸುರು ಮಾಡಿದ್ರು ನಾವೇನ ನಮ್ಮ ನಾಯಿ ಪ್ರೀತಿ ಕಮ್ಮಿ ಮಾಡ್ಲಿಲ್ಲಾ. ಸಾಲಿಯಿಂದ ಬಂದ ಕೂಡ್ಲೆ ನಮ್ಮ ಚೂ ಚೂ ಚೂ ಕೇಳಿ ಆಜು ಬಾಜುನವರಿಗೆ ತಲೆ ಚಿಟ್ಟ ಹಿಡಿತಿತ್ತು. ಒಂದಿವಸ ನಮ್ಮ ಓಣ್ಯಾಗಿನ ಮಂದಿ 'ಯಾಕ್ರಲೇ, ನಮ್ಮ ಫೆವರೆಟ ಯಾಕ್ಟರಗಳ ಹೆಸರ ನಾಯಿಗೆ ಇಟ್ಟಿರ್ಯಾಲೆ' ಅಂತಾ ಜಗಳಕ್ಕ ಬಂದ್ರು, ಅವತ್ತಿಂದ ನಮ್ಮ ನಾಯಿ ಪ್ರೀತಿ ಹಂಗ ಎದ್ಯಾಗ ಇಟಗೊಂಡು, ನಮ್ಮ ಕಾಲ ಮ್ಯಾಲೆ ನಾವು ನಿಂತ ಮ್ಯಾಗ ನಾಯಿ ಮಡಕ್ಕೊಳುದು ಅಂತಾ ಡಿಸೈಡ ಮಾಡಿದ್ವಿ' ಅಂತಾ ಉಪ್ಪು, ಖಾರ ಹಾಕಿಧಂಗ ಕೆಚಪ್ಪು, ಸ್ವಾಸು ಹಾಕಿ ಹೇಳಿದ್ದಾ. ಅದಕ್ಕ ನನ್ನ ಮಗಳು 'ಇನ್ನೂ ನಿನ್ನ ಕಾಲ ಮ್ಯಾಗ ನೀನು ನಿಂತಂಗ ಕಾಣವಲ್ತು'  ಅಂತಾ ಜೋಕ ಮಾಡ್ತಿದ್ಲು. ಈ ನಾಯಿ ತೊಗೊಳ್ಳೊದು  ತಪ್ಪಿಸಲಾಕ್ಕ ನಾ ಪಟ್ಟ ಪಾಡ ಅಷ್ಟಿಸ್ಟಲ್ಲಾ.
ನಾಯಿಗೆ ಪರ್ಯಾಯವಾಗಿ ಮೊದಲು ಒಂದು ಅಕ್ವೇರಿಯಂ ತಂದು ನಾಲ್ಕು ಗೋಲ್ಡ್ ಫಿಶ್ ಇಟ್ಟೆ. ವಾರ ವಾರ ಅದನ್ನ ಕ್ಲೀನ್ ಮಾಡೇ ಮಾಡಿದೆ. ಕಂಡ ಕಂಡಾಗ ಎಲ್ಲಾರೂ ಅವಕ್ಕ ಫಿಶ್ ಫುಡ್ಡ ಹಾಕಿ ಹಾಕಿ ಅವು ಸ್ವಲ್ಪ ದಿವಸದಾಗ ಉಬ್ಬಿ ಉಬ್ಬಿ ಉಸಿರಾಡಲಿಕ್ಕೆ ಆಗದಷ್ಟು ಡುಬ್ಬಾ ಆದ್ವು. ಒಂದಿವಸ ತಲಿ ಖರಾಬ ಆಗಿ ಎತ್ತಿ ಒಯ್ದು ಕೆರ್ಯಾಗ ಹಾಕಿ ಬಂದ್ವಿ. 'ಇಂಡಿಯಾಕ್ಕ ಹೋಗ್ತಿವಲ್ಲಾ , ಅವಕ್ಕ ನೋಡ್ಕೋಳ್ಳರು ಯಾರು ಇಲ್ಲಾ' ಅಂತಾ ಹೆಂಗೋ ಕನ್ವಿನ್ಸ ಮಾಡಿದೆ ಮಗಳಿಗೆ. ಆ ಬೆಸಿಗ್ಯಾಗ ಬೀಚಗೆ ಹೋದ್ವಿ , ಮತ್ತ ನನ್ನ ಮಗಳ 'ಪೆಟ್ಟ' ಪ್ರೇಮ ಜಾಗ್ರತ ಆಗಿ ಬಿಟ್ತು.  ಇ ಸಾರಿ ತೊಗೊಂಡಿದ್ದು ಎರಡು ಮುದ್ದಾದ ಪುಟಾಣಿ ಆಮೆಗಳು. ತನಗೊಂದು, ಇನ್ನೊಂದು ತನ್ನ 'ಕಸಿನ್ನ' ಗೊಂದು. ಅದಕ್ಕೊಂದು ಬಣ್ಣ ಬಣ್ಣದ 'ಕೇಜು'. ಬಹಳ ಅಂದ್ರ ಒಂದ್ನಾಲ್ಕೋ ಐದೋ ಇಂಚು ಇದ್ದಿರಬಹುದು ಅವು. ಹೊಟ್ಟಿಮ್ಯಾಲೇ  ಅಂಗಾತ ಮಕ್ಕೊಂಡಾಗ ಅದರ ಮ್ಯಾಲೆ ಒಂದು ಕೆಂಪ ಮಚ್ಚೆ ಇದ್ದದ್ದು ಅಕಿಂದು , ಇರ್ಲಾರದ್ದು 'ಕಸಿನ'ದ್ದು ಅಂತಾ ಒಪ್ಪಂದ ಆತು.  ಎರಡು ತಿಂಗಳು ಆಮೆಗಳ ಉಪಚಾರನ ಉಪಚಾರ, ಕೈ ಮ್ಯಾಲೆ ಕೂಡಿಸಿ ಕೊಳ್ಳೋದೇನು, ಶೋ ಯಾಂಡ ಟೆಲ್ಲಿಗ ಸಾಲಿಗೆ ತೊಗೊಂಡು ಹೋಗಿದ್ದೆ ಹೋಗಿದ್ದು, ಗಾರ್ಡೆನ್ನಿನ್ಯಾಗ  ಕಲ್ಲ ಮ್ಯಾಲೆ ಒಯ್ದು ಕೂಡಿಸಿದ್ದೆ ಕೂಡಿಸಿದ್ದು. ಯಾಕೋ ಅತಿ ಆತು ಅನಸ್ಲಿಖತ್ತು. ಅಷ್ಟರಾಗ ನಮ್ಮಕ್ಕ ಫೋನ್ ಮಾಡಿ ಮಾಡಿ 'ಅಲ್ಲೋ , ತಮ್ಮಂದ್ರು ರೇಶ್ಮಿ ಸೀರಿ ಆಹೇರಿ ಕೊಡದ ಬಿಟ್ಟು, ಆಮೆ ಯಾವಾಗಿಂದ ಕೊಡಲಿಕ್ಕೆ ಸುರು ಮಾಡಿದ್ರು ಅನ್ಲಿಕ್ಕೆ ಸುರು ಮಾಡಿದ್ಲು' ಒಂದ ದಿವಸ ಒಂದ ಪೇಜಿನ ಉದ್ದನ ಇಮೇಲ್ನ್ಯಾಗ ಮನ್ಯಾಗ ಆಮೆ ಇದ್ರ ಬರಬಹುದಾದ ಎಲ್ಲಾ ರೋಗ, ರುಜಿನದ ಲಿಸ್ಟ ಕಳಿಸಿ ತಾ ಹೆಂಗ ಆಮೆ ಸಾಗ ಹಾಕಿ ಬಂದೆ ಅಂತ ಬರದಿದ್ಳು.  ಅವರುರಾಗೆನೋ ರಿಸರ್ಚ್ ಸೆಂಟರ ಇತ್ತು, ಅಲ್ಲೇ ಬಿಟ್ಟ ಬಂದಳು , ನಮ್ಮ ಊರಾಗ ಒಂದೆರಡು 'ಪೆಟ್ಟ' ಅಂಗಡಿ ಬಿಟ್ಟ್ರ ಗತಿ ಇಲ್ಲಾ. ಹತ್ತ ಸಾರಿ ಹೋಗಿ ಮ್ಯಾನಜೆರಗ  ಮಾತಾಡಿಸಿದ್ರೂ ಆಮೆ ತೊಗೊಳ್ಳಿಕ್ಕೆ ಒಪ್ಪ್ಗೊವಲ್ಲಾ. ಅದು ಇಲ್ಲಿ ಲೀಗಲ್ ಅಲ್ಲಾ , ವಾಪಸ ಬೀಚಗೆ ಹೋಗಿ ಕೊಟ್ಟ ಬಾ ಅಂತ ಅವನ ಅಡ್ವೈಸು. ಅಲ್ಲಿ ಹೊದ್ರ ಅಂವಾ ತೊಗೊಳ್ಳುದು ಅಸ್ಟರಾಗ ಅದ ನೀನ ಏನರ ಮಾಡು ಅಂತ ನಾನು ಅವಂಗ ಗಂಟ ಬಿದ್ದೆ. ಒಂದಿನ ಅವಗೊಂದು ಆಮೀಷ ಒಡ್ಡಿದೆ. ಆಮೆ ಕೊಟ್ಟು ಎರಡು ಗಿಳಿ ಕೊಳ್ಳುವದು. ಅವಂಗ ಪುಗಸೆಟ್ಟೆಯಾಗಿ ಆಮೆ, ಕೇಜು, ಕೊಟ್ಟು ಎರಡು ಗಿಳಿ, ಒಂದು ದೊಡ್ಡ ಪಂಜರಾ ತೊಗೊಂಡೆ, ಮ್ಯಾನೆಜರ ಖುಶ ಆದ. ’ಒಂದು ಹೊತು, ಎರಡು ಬಂತು ಡುಂ, ಡುಂ’ ಎಂದು ಕುಣಿದಾಡಿದಳು ಮಗಳು. ಎರಡು ಬಣ್ಣಬಣ್ಣದ ಗಿಳಿಗಳು, ಒಂದು ಕಡು ಹಸಿರು ಬಣ್ಣದ್ದು, ಇನ್ನೊಂದು ತೆಳು ನೀಲಿ ಬಣ್ಣದ್ದು , ತುಂಬಾ ಮುದ್ದು ಮುದ್ದಾಗಿದ್ದವು. ದೊಡ್ಡ ಸರಳಿನ ಪಂಜರದಲ್ಲಿ ಅವಕ್ಕೆ ಆಡಲು ಬೇಕಾದಸ್ಟು ಸರಕುಗಳು,ಮಲಗಲು ಮಚಾನುಗಳು, ನೀರು ಕುಡಿಯಲೊಂದು ನೀರಿನ ಸಣ್ಣ ತಟ್ಟೆ.ಗಿಳಿ ಮನೆಗೆ ಬಂದೊಡನೆ ಗೊಣಗಾಟ ಕೇಳಬೇಕಾಯಿತು. 
'ಪಕ್ಷಿ ಮನೆಯೊಳಗೆ ತರುವ ಹಾಗಿಲ್ಲಾ, ಅಲ್ಲೇ ಗರಾಜಲ್ಲಿ ಮಡಗಿ ' ನನ್ನವಳ ಗಿಳಿಮಾತು.
ಸುಮಾರು ವರುಷಗಳ ಹಿಂದೆ ಕಲಬುರ್ಗಿಯಲ್ಲಿ  ಅವಳ ತಮ್ಮಂದಿರು ಕಾಲು ಮುರಿದುಕೊಂಡ ಪಾರಿವಾಳವೊಂದನ್ನು ಹೇಗೋ ಮನೆಯೊಳಗೇ ತಂದು , ಅದಕ್ಕೆ ಮುಲಾಮು ಹಚ್ಚಿ, ಬ್ಯಾಂಡೇಜ ಹಾಕಿ, ಶತ ಪ್ರಯತ್ನ ಮಾಡಿ ನೀರು ಕುಡಿಸಿ, ೮ನೆ ಕ್ಲಾಸ್ಸಿನ ಅಕ್ಕನಿಗೆ ಖುಷಿಯಿಂದ ವರದಿ ಒಪ್ಪಿಸಿದ್ದಾರೆ.  ಅಕ್ಕ ನನ್ನ ಮಡದಿ ತಮ್ಮಂದಿರಿಗೆ ಹೆದರಿಸಿ ಆ ಪಕ್ಷಿಯನ್ನು  ಕೆಳಗಿನ ಬಾಡಿಗೆದಾರರ ಮನೆಗೆ ಸಾಗಿಸಲು ಹೇಳಿದ್ದಾಳೆ - ಬಾಡಿಗೆದಾರರು ಊರಲ್ಲಿಲ್ಲದಿರುವದು ಅನುಕೂಲಕರವಾಗಿದೆ ಹುಡುಗರಿಗೆ. ಸರಿ, ತಮ್ಮಂದಿರಿಬ್ಬರೂ ಸೇರಿ ಹಗಲು,ಸಂಜೆ - ತಂದೆ ತಾಯಿಯ ಕಣ್ಣು ತಪ್ಪಿಸಿ ಆ ಪಕ್ಷಿಯ ಪುರಾ ದೇಖರೇಖಿ ಮಾಡಿದ್ದಾರೆ. ಬೆಳೆಗೆದ್ದು ಶಾಲೆಗೆ ಹೋದವರು ಮನೆಗೆ ಮರಳಿ ಬರುವಷ್ಟರಲ್ಲಿ ದೊಡ್ಡ ರಾದ್ದಾಂತವೆ ಆಗಿದೆ.  ಊರಿಂದ ವಾಪಸ್ಸಾದ ಪಕ್ಕಾ ಮಡಿವಂತ ಬಾಡಿಗೆದಾರರು ಬಾಗಿಲು ತಗೆದ ತಕ್ಷಣ ಮನೆಯಲೆಲ್ಲಾ ಚದುರಿ ಬಿದ್ದ ರೆಕ್ಕೆ,ಪುಕ್ಕ ನೋಡಿ ಹೆದರಿದವರು, ಸತ್ತು ಬಿದ್ದ ಪಾರಿವಾಳ ನೋಡಿ  ಹೌಹಾರಿದ್ದಾರೆ. ವಾಸನೆಯಂತು ಇಡೀ ಕೊಲೋನಿಗೆ ಹರಡಿ ನಿಂತಿದೆ.  ಅದನ್ನು ಯಾರೋ ಬೇಕೆಂದೇ ಅಲ್ಲಿ ಎಸೆದಿದ್ದಾರೆ ಎಂಬುವದು ಅವರ ಅಂಬೋಣ. ಮೇಲೆ ಹೋಗಿ ಮಾಲಕರ ಹತ್ತಿರ ಕೂಗಾಡಿದ್ದಾರೆ. ಶಾಲೆಯಿಂದ ವಾಪಸ್ಸಾದ ಮಕ್ಕಳಿಗೆ ಪಾರಿವಾಳ ಸತ್ತಿರುವ ದುಃಖ ಒಂದೆಡೆ, ತಂದೆಯಿಂದ ಸಿಗಬಹುದಾದ ಬಹುಮಾನದ ಹೆದರಿಕೆ ಇನ್ನೊಂದೆಡೆ.  ಬಾಡಿಗೆದಾರನ ಬೈಗುಳ ಮತ್ತೊಂದೆಡೆ.  ಅಕ್ಕನತ್ತ ಓಡಿದರೆ ಹೋಗಿ ಕ್ಲೀನ ಮಾಡಲು ಆಜ್ಞಾಪನೆ ಬೇರೆ. ಅಂತೂ ಇಂತೂ ಕ್ಲೀನ ಮಾಡಿ, ಅತ್ತು ಕರೆದು, ಮುಚ್ಚಿದ ಕಿಡಕಿಗಳು, ಅಲ್ಲೇ ಇದ್ದ  ಕಾಳು, ಕಡ್ಡಿ, ನೀರು- ತೋರಿಸಿ ತಮ್ಮ ಘನ ಕಾರ್ಯ ವಿವರಿಸಿ ಹೇಗೋ ಬಚಾವಾಗಿದ್ದಾರೆ ಬ್ರದರ್ಸಗಳು. ಅಂದಿನಿಂದ ಮನೆಯಲ್ಲಿ ಪ್ರಾಣಿಗಳು ಇರಬಹುದು, ಪಕ್ಷಿಗಳಿಲ್ಲಾ.  'ಅಲ್ಲಾ , ಕಣೆ, ಮಗಳ ಜೊತೆ ಹೋಗಿ ಗಿಳಿ ಸಾಕುವ ಪರಿಣಿತಿ ಕ್ಲಾಸ್ಸು ತೆಗೆದುಕೊಳ್ಳುತ್ತೇನೆ ಆಯಿತೆ?' ಎಂದು ಕನ್ವಿನ್ಸ ಮಾಡಿದ್ದಾಯಿತು.'ಗರಾಜಲ್ಲಿ ಇಡುವದು ಬೇಡಾ, ಓದಿಲ್ಲವೇ ಕಾಗಿನೆಲೆ ಅವರ ವಿಲ್ಲೋ ವೈದ್ಯ ಕಥೆ?' ನನ್ನ ಅಹವಾಲು. 'ಓಕೆ, 'ಮಡ್ಡ' ರೂಮಲ್ಲಿ ಇಡಬಹುದು' ಎಂಬ ತಾತ್ಕಾಲಿಕ ಒಪ್ಪಂದವಾಯಿತು.
ಎರಡೋ, ನಾಕೋ ವಾರ ಕಳೆದಿರಬಹುದು. ಆಡಿಸುವವರಿಲ್ಲದೆ, ಕೇಳುವವರಿಲ್ಲದೆ ಗಿಳಿಗಳು ಸಪ್ಪಗಾಗತೊಡಗಿದವು. ಸರಿ, ಯಾಕೋ ನಮಗೆ ಪಕ್ಷಿಗಳು ಆಗಿಬರೋಲ್ಲ ಬಿಡು ಅನ್ಕೊಂಡು ಅವನ್ನು ಸಾಗಿಸುವ ದಾರಿ ಹುಡಕುತ್ತಿದೆ. 'ಕ್ರೆಗ್ಸ ಲಿಸ್ಟ'ಲ್ಲಿ  ಮುದ್ದಾದ ಗಿಳಿಗಳು ಪುಕ್ಕಟ್ಟೆ ಎಂದು ಜಾಹಿರಾತಿಸಿದೆ. ಯಾರೋ ಭಾರತಿಯ ಪುಣ್ಯಾತ್ಮ ಬಂದು ಖುಷಿಯಿಂದ ತೆಗೆದುಕೊಂಡು ಹೋದ. ಮತ್ತೊಂದು ಹುಟ್ಟುಹಬ್ಬ- ಈ ಬಾರಿ ನಮ್ಮ ಪಕ್ಷಿ ಫೇಮ 'ಬಿಲ್ಲ'ನ ಬಳುವಳಿಯ ಸರದಿ.  ಒಂದು ಅತಿ ದೊಡ್ಡ ಕೇಜು, ಅದರಲ್ಲಿ ಎರಡು ಟೊನಪ ಮೊಲಗಳು. ಒಂದು ಬಿಳಿ ಮತ್ತೊಂದು ಬೂದಿ ಬಣ್ಣದು -ತಂದು ಮಡಗಿದ. ಯಥಾ ಪ್ರಕಾರ ಮೊಲಗಳನ್ನು  ಹಿಡ್ಕೊಂಡು, ಓಡ್ಯಾಡಿಸಿ ಒಂದಿಪ್ಪತ್ತು ಫೋಟೋ ತೆಗೆದಿದ್ದಾಯಿತು. ಒಂದು ವಾರ ಮೊಲಗಳ 'ಅಧ್ಯಯನ' ಅತಿ ಶಿಸ್ತಿನಿಂದ ಮನೆಮಂದಿ ಎಲ್ಲಾ ಮಾಡಿದೆವು. ಒಂದಿನ ಯಾವತ್ತೋ ಬಾಗಿಲು ತೆರೆದಿಟ್ಟಾಗ ಮಾಯವಾದ ಮೊಲಗಳೆರಡು ಮತ್ತೆಂದು ವಾಪಸ್ಸು ಬರಲಿಲ್ಲಾ - ಇಂದಿಗೂ ಯಾವಾಗಲು ಕಾಣುವ ಮೊಲಗಳನ್ನು ಯಾರ್ಡಿನಲ್ಲಿ ನೋಡಿದಾಗಲೆಲ್ಲಾ ಅದೇ ಮೊಲದ ಮಾಸದ ನೆನಪುಗಳು.  ಆಗಾಗ ಪೆಟ್ಸ್ ಮಾರ್ಟ್ ಗೆ ಹೋಗುವದು ಅಲ್ಲಿರುವ ಇಲಿ, ಹಾವು, ಬೆಕ್ಕು ,ನಾಯಿ ನೋಡುವದು ಎಂದಿನಂತೆ ನಡದೇ ಇತ್ತು. ಏನಿಲ್ಲವೆಂದರೂ ಒಂದು ಘಂಟೆ ಬರಿ ಅಕ್ವೆರಿಯಮನಲ್ಲಿಯ ವಿಧ ವಿಧ ಮೀನು ನೋಡುವದರಲ್ಲಿಯೇ ಕಳೆಯುತ್ತಿತ್ತು - ನೋಡಲು 'ಕಿಸ ಕಾ ಕ್ಯಾ ಜಾತಾ ಹೈ' ನನ್ನ ಫಿಲಾಸಫಿ. ಅದೇನಾಯಿತೋ ಒಂದು ದಿನ ಒಂದು ಹ್ಯಾಮಸ್ಟರ ನೋಡಿದ್ದೇ ಅದು ಬೇಕೇ ಬೇಕೆಂದು ಕೂತಳು ಮಗಳು. ಸರಿ, ನಾವಲ್ಲದೆ ಬೇರಾವ ಪ್ರಾಣಿಯು ಮನೆಯಲ್ಲಿಲದೆ ಬಹಳ ದಿನವಾಗಿತ್ತು -ಎತಗೊಂಡು ಬಂದೆವು ಹ್ಯಾಮಸ್ಟರ, ಮತ್ತೆ ಅದಕ್ಕೊಂದು ಕೇಜು, ಮೇಲೆ ಕೆಳೆಗೆ ಓಡಾಡಲು ಅದರಲ್ಲಿ ಬಣ್ಣ ಬಣ್ಣ ದ ಕೊಳವೆಗಳು.  ಮನೆಯಲೆಲ್ಲ ಓಡಾಡಲು ಅದಕ್ಕೊಂದು ಹ್ಯಾಮಿ ಬಾಲು. ಅಷ್ಟು ಹಿಡಿ ಗಾತ್ರದ ಆ ಹ್ಯಾಮಿಗೆ ಎಲುಬೆ ಇರಲಿಲ್ಲವೇನೋ? ಮೈ ಮೇಲೆ ಬರಿ ರೋಮವಿತ್ತೇನೋ? ಕೇಜಿನ ಸಣ್ಣ ಬಾಗಿಲ ಕಿಂಡಿಯಿಂದಲೇ ತಪ್ಪಿಸಿಕೊಂಡು ಓಡುತ್ತಿತ್ತು. ಬಾಲಿನಲ್ಲಿ ಹಾಕಿ ಬಿಟ್ಟರೆ ಇಡಿ ಮನೆಯಲ್ಲಿ ಪುಟು ಪುಟನೆ ರೋಲ ಆಗುತ್ತಾ ಸುರ ಸುರನೆ ಓಡ್ಯಾಡುತಿತ್ತು. ಶ್ಯಾಲೆಗೆ ಒಯ್ದು ತೋರಿಸಿ ಅಲ್ಲಿಯೇ ನಾಲ್ಕು ದಿನ ಇಟ್ಟು ಎಲ್ಲರಿಂದ 'ಶಬ್ಬಾಶ್' ಪಡೆದದ್ದು ಆಯಿತು.  ಎಲ್ಲಾ ಉಂಡು,ತಿಂದು ಆಡಿದ ಮೇಲೆ ಇ ಹ್ಯಾಮಿಗೊಂದು ಚಟ, ಅದೆಂದರೆ ತಪ್ಪಿಸಿಕೊಂಡು ಓಡಿ ಎಲ್ಲಿಯಾದರೂ ಕ್ಲೋಸೆಟ ನಲ್ಲಿ ಬಚ್ಚಿಟ್ಟುಕೊಳ್ಳುವದು. ಅದನ್ನು ಪುಸಲಾಯಿಸಿ ಹೊರತರಲು ಒಂದಿಷ್ಟು ಕ್ಯಾರೆಟ್ಟಗಳ ಸಾಲು ಸಾಲಾಗಿ ಇಡ್ತಾ ಇದ್ದೆವು. ಎಷ್ಟೋ ಸಾರಿ ಎರಡನೇ ಮಹಡಿಯಿಂದ ಅದರ ಕೇಜವರೆಗೂ ಸಾಲಾಗಿ ಕ್ಯಾರೆಟ್ಟನ ಟ್ರೈಲ ಇರುತಿತ್ತು ಮನೆಯಲ್ಲಿ. ಹ್ಯಾಮಿ, ಮೊಲಗಳಿಗಿಂತ ಎಷ್ಟೋ ಚೂಟಿಯಾಗಿದ್ದು, ಯಾವಾಗಲು ಏನೋ ಒಂದು ತರಲೆ ಮಾಡುತ್ತಲೇ ಇರುತಿತ್ತು.  ಒಂದು ದೀರ್ಘ ವಿಕೆಂಡು ಅಕ್ಕನಲ್ಲಿಗೆ ಹೋಗುವದೆಂದಾಯಿತು. ಆ ಹ್ಯಾಮಿನೊಂದು ಎಲ್ಲಿ ಕಟ್ಕೊಂಡು ಹೋಗುವದು ಎಂದು ಅಂದುಕೊಂಡು ಮನೆಯಲ್ಲಿ ಅದಕ್ಕೆ ಕೇಜಿನಲ್ಲಿ ಮೂರು ದಿನದ ಆಹಾರ, ನೀರು ಇಟ್ಟು ಎರಡೆರಡು ನೈಲಾನ್ ದಾರದಿಂದ ಅದರ ಕೇಜಿನ ಸುತ್ತ, ಸುತ್ತಿ ಬಂದೋ ಬಸ್ತ ಮಾಡಿದೆ.  ಮೂರು ದಿನದ ಮೇಲೆ ವಾಪಸ ಬಂದು ಮೊದಲು ನೋಡಿದ್ದು ಹ್ಯಾಮಿ ಕೇಜೆ. ಕೇಜಿನಲ್ಲೆ ತೆಪ್ಪಗೆ ಕೂಡುವಷ್ಟು ಕ್ರೆಜಿಯೇ ಅದು? ಎಲ್ಲೊ ತಪ್ಪಿಸಿಕೊಂಡಿತ್ತು. ಇ ಬಾರಿ ಎಷ್ಟು ಹುಡಕಿದರೂ ಸಿಗ್ತಾ ಇಲ್ಲಾ. ಕೊನೆಗೆ ಮಾಸ್ಟರ್ ಬೇಡ್ರೂಮನ ಕ್ಲೋಸೆಟನ ಕಾರ್ಪೆಟ್ಟಿನಲ್ಲಿ ಒಂದಡಿ ಅಗಲದ ರಂಧ್ರ - ಪೂರ್ತಿ ಕಾರ್ಪೆಟ್ಟ ಕತ್ತರಿಸಿ ಅದರ ಕೆಳಗಿನ ಕಾರ್ಡಬೋರ್ಡ್ ನುಂಗಿ ಹಾಕಲು ನೋಡಿದೆ ಹ್ಯಾಮಿ. ಯಾವದೋ ಬಟ್ಟೆಯ ಸಂದಿಯಲ್ಲಿ ಅಡಗಿದ್ದ ಅದನ್ನು  ಇದ್ದ ಬದ್ದ ತಲೆ ಎಲ್ಲಾ ಉಪಯೋಗಿಸಿ ಮತ್ತೆ ಹಿಡಿದ್ದಿದಾಯಿತು. ಶಾಲೆಯಿಂದ ಒಂದು ರಿಕ್ವೆಸ್ಟು ಹ್ಯಾಮಿಯನ್ನು ಕ್ಲಾಸ್ಸಿನ ಪೆಟ್ ಮಾಡಿ ಇಟ್ಟುಕೊಳ್ಳಬಹುದೇ ಅಂತಾ, ಖುಷಿಯಿಂದ ಅದನ್ನು ಅಲ್ಲಿ ತಳ್ಳಿದ್ದಾಯಿತು. ಇನ್ನು ಏನಿದ್ದರು ಸಣ್ಣ ಪ್ರಾಣಿಗಳನ್ನು ಸಾಕುವದಿಲ್ಲಾ, ಸಾಕುವದಾದರೆ ದೊಡ್ಡದೆ ಎಂದಳು ನನ್ನವಳು, ದೊಡ್ಡ ಪ್ರಾಣಿ ಸಾಕಿ ಬೇಕಾದಷ್ಟು ಅನುಭವವಿದೆ ನನಗೆ ಎಂದಳು ನನ್ನತ್ತ ನೋಡುತ್ತಾ.
(ಮುಂದುವರಿಯುವುದು)

ಚುಂಬಕ ಶ್ವಾನಾ


ಚುಂಬಕ ಶ್ವಾನಾ: ಅನಿಲ ತಾಳಿಕೋಟಿ ಬರೆದ ನಾಯಿಪುರಾಣ    
ಅನಿಲ ತಾಳಿಕೋಟಿ
ಬುಧವಾರ, 26 ಸೆಪ್ಟೆಂಬರ್ 2012 (01:28 IST)

ಘಂಟೆ ಗಟ್ಟಲೆ ನಡೆದು ನಡೆದು ಸುಸ್ತಾಗಿದೆ ಅವನಿಗೆ, ದಹದಹಿಸುತ್ತಿರುವ ದಾಹ, ಜೊತೆಗಿರುವ ಆಪ್ತ ಮಿತ್ರ ನಾಲಿಗೆ ಹೊರ ಚಾಚಿ ಚಾಚಿ ಇಗಲೋ ಆಗಲೋ ಬಿದ್ದುಹೊಗುವಂತಾಗಿದೆ. ಒಂದು ಹನಿ ನೀರು ಸಿಕ್ಕರೂ ಸಾಕು ಮುಗುಚಿ ಕುಡಿದು ಮಲಗುವಾಸೆ. ಕಾಲು ಎತ್ತಿಡಲಾಗದಷ್ಟು ದಣಿವು , ಇನ್ನೇನೋ ಬೀಳಬೇಕು ಅಷ್ಟರಲ್ಲಿ ಧುತ್ತನೆ  ಒಂದು ಮನೋಹರವಾದ ಬಾಗಿಲು , ಮುತ್ತು ರತ್ನದಿಂದ ಲೇಪಿತವಾಗಿ ಥಳ ಥಳ ಬಂಗಾರದಿಂದ  ಮಿರುಗುತ್ತಿದೆ ಆ ಬಿಸಿಲಿನಲ್ಲಿ. ಆಹಾ ದೇವರು ದೊಡ್ಡವನು ಎಂದಿಗೂ ಕೈ ಬಿಡುವುದಿಲ್ಲಾ. ತಲೆ ಎತ್ತಿ ಮೇಲಕ್ಕೆ ಕಣ್ಣಾಡಿಸಿದ. 'ಸ್ವರ್ಗ' ಎಂದು ಕೆತ್ತಲಾಗಿದೆ ಬಾಗಿಲ ಮೇಲೆ, ಖುಷಿಯಿದ ಬಾಗಿಲ ಬಡಿದ. ನಗುಮುಖದ ಸುಂದರ ತರುಣಿ ಬಾಗಿಲು ತೆರೆದಳು. ಇಲ್ಲಿವರೆಗೂ ಹೊಳೆಯುತ್ತಿದ್ದದ್ದು ಆ ಬಾಗಿಲೆ ಅಥಾವ ಅದರ ಹಿಂದಿದ್ದ ಆ ಬಾಲೆಯೇ?
'ಒಂದು ಗುಟುಕು ನೀರು ಸಿಗುತ್ತದೆಯೇ' ಕೇಳಿದನಾತ ದೈನ್ಯದಿಂದ.
'ಖಂಡಿತ, ಬೆಳ್ಳಿ ಬಟ್ಟಲಿನಲ್ಲಿ , ಬಿಳಿ ಬಿಳಿ ಐಸ್ ಹಾಕಿದ ತಂಪಾದ ತಣ್ಣೀರು ಇಗೋ ತಂದೆ. ಬನ್ನಿ ಒಳಗೆ' ಅದುರಿಯು ಅದರದಂತಿರುವ ತುಟಿಗಳಿಂದ ತೇಲಿ ಬಂದ ಮಾತು. 'ಧನ್ಯೋಸ್ಮಿ' ಎನ್ನುತ್ತಾ ಒಳನಡೆದ ಆತ, ಹಿಂದೆಯೇ ಅವನ ನಂಬಿಗಸ್ತ ನಾಯಿ.
'ಓ, ಇಲ್ಲಿ ನಾಯಿಗಳಿಗೆ ಅವಕಾಶವಿಲ್ಲ' ನಸು ನಗುತ್ತ ಆದರೆ ಖಂಡಿತದ ಧನಿಯಲ್ಲಿ ಉಲಿದಳು ಆ ಬಾಲೆ 'ಬರಿ ಮನುಷ್ಯರು ಮಾತ್ರ ಒಳಬರಬಹುದು'.
ಒಂದೇ ಒಂದು ಕ್ಷಣ ಕೂಡಾ ಯೋಚಿಸಲಿಲ್ಲಾ ಆತ ಸಟ್ಟಕ್ಕನೆ ಹೊರಳಿದಾ ತನ್ನ ನಾಯಿಯ ಜೊತೆ. ಮತ್ತೆ ನಡಿಗೆ, ಕಾಣದ ನಾಡಿಗೆ, ಬಳಲುತ್ತಾ, ಬಹು ಹೊತ್ತಿನ ನಂತರ ಒಂದು ಮಣ್ಣಿನ ಬೀದಿ, ಕೊನೆಯಲ್ಲೊಂದು ಮುರಿದು ಹೋದ ಗುಡಿಸಲು. ದಡಬಡಿಸುತ್ತ ಹೋದ ಆತ, ಗಿಡದಡಿಯಲ್ಲಿ ಕೆಮ್ಮುತ್ತ ನಿಂತ ಮುದುಕನಿಗೆ ಕೇಳಿದ,
'ಒಂದು ಗುಟುಕು ನೀರು ಸಿಗಬಹುದೇ?'
'ಖಂಡಿತ' ನುಡಿದ ಆ ಮುದುಕ - ಅಗೋ ಅಲ್ಲಿ ಹ್ಯಾಂಡ ಪಂಪೊಂದಿದೆ'. ನನ್ನ ಸ್ನೇಹಿತನಿಗೂ ಸಿಗಬಹುದೇ ನಾಯಿಯತ್ತ ಬೆರಳುಚಾಚುತ್ತ ಕೇಳಿದ.
'ಪಂಪ ಹತ್ತಿರ ಒಂದು ಬೋಗೋಣಿ ಇದೆ' ನುಡಿದ ಮುದುಕ. ಲಗುಬಗೆಯಿಂದ ಬೋಗೊಣಿಯಲ್ಲಿ ನೀರು ತುಂಬಿ ಗಟ ಗಟ ಕುಡಿದು, ನಾಯಿಗೂ ಕುಡಿಸಿ ದಣಿವಾರಿಸಿಕೊಳ್ಳುತ್ತ ಕೇಳಿದ ಮುದುಕನಿಗೆ 'ಇದು ಯಾವ ಜಾಗ?'. 'ಓ ಇದು ಸ್ವರ್ಗ' ನುಡಿದ' ಮುದುಕ. 'ಹೌದಾ?  ಈ ಮುಂಚೆ ಸಿಕ್ಕ ಬಾಗಿಲ ಮೇಲೂ ಸ್ವರ್ಗ ಎಂದಿತ್ತು?'.
'ಯಾವದು? ಆ ಬಂಗಾರದ ಬಾಗಿಲೆ? ಅದು ನರಕ' ನುಡಿದನಾ ಮುದುಕ.
'ಆ ತೆರನಾಗಿ ಬೇರೊಬ್ಬರು ನಿಮ್ಮ ಟ್ರೇಡ ಮಾರ್ಕ್  ಸ್ವರ್ಗ ಎಂದು ಬರೆದುಕೊಂಡರೆ, ನಿಮಗೆ ಕೋಪ ಬರೋಲ್ಲವೇ?' ಕೇಳಿದನಾತ.
'ಇಲ್ಲ, ನಿನಗೆ ಹಾಗನಿಸಬಹುದೇನೋ ? ಆದರೆ ನನಗಂತೂ ಅವರಿಂದ ಉಪಕಾರವೇ ಆಗುತ್ತಿದೆ. ನಂಬಿಗಸ್ತರನ್ನು ಹಿಂದೆ ಬಿಟ್ಟು ಹೋಗುವ ಜನರನ್ನು ಅವರು ಅಲ್ಲಿಯೇ ಉಳಿಸಿಕೊಳ್ಳುತ್ತಾರೆ'
ನಾಯಿ ಮಾನವರ ಸಂಬಂಧದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ. ನಾಯಿಗಿಂತ ನಂಬಿಗಸ್ತರಿಲ್ಲ ಎಂಬುವದೂ ನಿರ್ವಿವಾದ , ಅದಕ್ಕಿಂತ ಮಿಗಿಲಾದುದು ಅದು ನಮ್ಮನ್ನು ಅನುಕರಿಸುವ ಪರಿ - ಅನನ್ಯಮಯ. ನಮ್ಮ ಅತಿ ಸಮೀಪದ ಪೂರ್ವಜರು - ಗೊರಿಲ್ಲಾ, ಚಿಂಪಾಂಜಿ ಹಿಡಿದುಕೊಂಡು ಬೇರಾವ ಪ್ರಾಣಿಯೂ ನಮ್ಮನ್ನು ಅನುಕರಿಸುವ, ಅರ್ಥಮಾಡಿಕೊಳ್ಳುವಷ್ಟು ಬುದ್ದಿಮತ್ತೆಯನ್ನು ತೋರುವದಿಲ್ಲಾ. ನಾಯಿಗಳು ಅತೀ ನಿಷ್ಠೆಯಿಂದ ನಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರಬಲ್ಲವು. ಈ ಪ್ರಜ್ಞಾಪೂರ್ವಕ ನಡವಳಿಕೆ ಅರ್ಥ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ. ಮಾನವನ ಭಾವನೆಗಳೆನ್ನೆಲ್ಲಾ ಅರಿವು ಮಾಡಿಕೊಳ್ಳುವದು ಅನುವಂಶಿಕತೆಯೋ  ಅಥವಾ ಮಾನವನ ಜೊತೆಯ ಸಾಂಗತ್ಯದ ಫಲವೋ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ ವಿಜ್ಞಾನಿಗಳಲ್ಲಿ. ಯುನಿವರ್ಸಿಟಿ ಆಫ್ ಲಿಂಕನ್ನಲ್ಲಿ (ಯು.ಕೆ) ನಡೆದ ವೈಜ್ಞಾನಿಕ ಸಂಶೋಧನೆ eye tracking experiment ನಿಂದ ರುಜುವಾತಾಗಿದ್ದು ಇದು. ನಮ್ಮ ಮುಖದ ಬಲಭಾಗ ನಮ್ಮ ನೋವು, ಸಿಟ್ಟು-ಸೆಡವು, ಸಂತೋಷ, ತೃಪ್ತಿ ಎತ್ತಿ ತೋರಿಸುವಷ್ಟು ಎಡಭಾಗ ತೋರಿಸುವದಿಲ್ಲವಂತೆ.  ಇದರಲ್ಲೂ ವಿಜ್ಞಾನಿಗಳಿಗೆ ಸಧ್ಯಕ್ಕೆ ಸ್ವಲ್ಪ ಗೊಂದಲಗಳಿವೆ -ಇದರ ಸತ್ಯಾಸತ್ಯತೆಗಳಿಲ್ಲಿ  ಅನವಶ್ಯಕ. T20 ಯಲ್ಲಿ  ಬಾಲಾಜಿ ಕ್ಷೇತ್ರ ರಕ್ಷಣೆಯಲ್ಲಿ ನಿಧಾನತನ ತೋರಿಸಿದಾಗ ಗಂಭೀರನ ಮುಖ ನೋಡಿ. ಗೊತ್ತಿಲ್ಲದೆಯೇ ನೀವು ಗಂಭೀರನ ಮುಖದ ಬಲಭಾಗವನ್ನು ತೀಕ್ಷ್ಣವಾಗಿ, ಎಡಭಾಗಕ್ಕಿಂತ ಜಾಸ್ತಿ ಹೊತ್ತು ನೋಡುತ್ತಿರಿ. ಅವಕಾಶವಿದ್ದರೆ ಬಾಲಾಜಿ ಕೂಡಾ ನೋಡುವದು ಅದನ್ನೇ, T20 ಆಗಿರುವದರಿಂದ ನೋಡಲು ಟೈಮ ಇರುವದಿಲ್ಲ ಪಾಪ. ಇದು ನಮ್ಮ ಒಳ ಮನಸಿಗೆ ಗೊತ್ತಿರುವದರಿಂದ, ಸಾವಿರಾರು ವರುಷದ ನಮ್ಮ ವಿಕಾಸದ ಬಳುವಳಿ ಇದು, ನಮ್ಮ ಕಣ್ಣುಗಳು ಗೊತ್ತಿಲ್ಲದೆಯೇ ನಮ್ಮ ಎದುರಿನವರ  ಎಡಮುಖದಿಂದ  ಚಲಿಸಿ ಬಲಕ್ಕೆ ಸ್ಥಿರಗೊಳ್ಳುತ್ತವೆ ಅವರ ಮುಖದಿಂದ ಹೊರಬರುವ ಭಾವ ಅರಿತುಕೊಳ್ಳಲು. ಇದಕ್ಕೆ left gaze bias ಎನ್ನುತ್ತಾರೆ. ಇದು ಬರಿ ಇನ್ನೊಬ್ಬ ಮನುಷ್ಯರ  ಮುಖ ನೋಡಿದಾಗ ಮಾತ್ರ ಆಗುತ್ತದೆ ಹೊರತು ಯಾವದು ಬೇರೆ ಪ್ರಾಣಿಯ(ಭಾವ ಅಭಿವ್ಯಕ್ತ ಗೊಳಿಸಲಾರದಕ್ಕೆ) ಅಥವಾ ನಿರ್ಜಿವ ವಸ್ತುವನ್ನು ನೋಡಿದಾಗ ಆಗುವದಿಲ್ಲ.  ಏಳು ತಿಂಗಳ ಹಸುಳೆ ಕೂಡಾ ಅಮ್ಮ ಖುಷಿಯಗಿದ್ದಾಳೋ, ಸಿಟ್ಟನಲ್ಲಿದ್ದಾಳೋ ತಿಳಿದುಕೊಳ್ಳುವದು ಇದರಿಂದಲೇ.  ನಾಯಿಯೊಂದನ್ನು ಹೊರತುಪಡಿಸಿ ಪ್ರಪಂಚದ ಬೇರಾವ ಪ್ರಾಣಿಯು  ಮನುಷ್ಯನ ಮುಖ ನೋಡಿ ಭಾವ ತಿಳಿಯಲಾರದು.  Rhesus ಮಂಗಗಳು ಇದನ್ನು ಸ್ವಲ್ಪ ಮಟ್ಟಿಗೆ ಮಾಡುತ್ತವೆಯಾದರೂ ನಾಯಿ ಇದರಲ್ಲಿ ಎಲ್ಲಕ್ಕಿಂತ ಮಿಗಿಲು ಏಕೆಂದರೆ ಅದು ತನ್ನ ನೆಚ್ಚಿನ ಮಿತ್ರ ಮಾನವನಿಗೆ ಮಾತ್ರ ಇದನ್ನು ಮೀಸಲಿಟ್ಟಿದೆ. ಇನ್ನೊಂದು ನಾಯಿಯನ್ನು ನೋಡಿದರೆ ಅದು ಕ್ಯಾರೆ ಅನ್ನುವದಿಲ್ಲಾ , ಮುಖ ನೋಡಿ ಅದರ ಭಾವ ಅರಿಯಲು ಹೋಗುವದಿಲ್ಲ. ನಾಯಿಗಳು ಮನುಷ್ಯನನ್ನು ಮೀರುವದು ಬರಿ ವಾಸನೆ ಗ್ರಹಣೆ ಶಕ್ತಿಗಾಗಿ  ಅಥವಾ ಶಬ್ದ ಗ್ರಹಣೆಗಾಗಿ ಅಷ್ಟೇ ಅಲ್ಲಾ , ನಾವು ತಲೆ ಕೆಳಗೆ ಮಾಡಿ, ಶೀರ್ಷಾಸನದಲ್ಲಿ ನಿಂತರೂ ನಾಯಿಗಳು ನಮ್ಮ ಮುಖದ ಭಾವ ಅರಿಯಬಲ್ಲವು. ಫೋಟೋವೊಂದನ್ನು ಉಲ್ಟಾ ಮಾಡಿ ಹಿಡಿದರೆ ನಮಗೆ ಗ್ರಹಿಸುವದು ಕಷ್ಟವಲ್ಲವೇ? ನಾಯಿಗೆ ಅದು  ಬಿಸ್ಕತ್ತು ತಿಂದಷ್ಟೇ ಸುಲಭ. ಇದಕ್ಕೂ ಪ್ರಾಯಶಃ ಮಾನವನ ವಿಕಾಸದುದ್ದಕ್ಕೂ ನಾಯಿಗಳ ಸಖ್ಯ, ನಮಗಾಗಿ ನಾಯಿ, ನಾಯಿಗಾಗಿ ನಾವಲ್ಲಾ ಎಂಬುವದೆ ಕಾರಣ. ಮನುಷ್ಯನ ಭಾವ ಅರಿಯುವ ಅವಶ್ಯಕತೆ ನಾಯಿಗೆ ಇರುವಷ್ಟು, ಅದನ್ನು ಅರಿಯುವ ಅವಶ್ಯಕತೆ ನಮಗೆ ಇಲ್ಲದಿರುವದಕ್ಕೆ ಅದರ ಮೆದಳು ನಮ್ಮ ಮುಖ ಚಹರೆ ಅರಿಯಲು ನಮಗಿಂತಾ ಮುಂದೆ ಹೋಗಿದೆ. ಅದಕ್ಕೆಂದೇ ನಾಯಿಗಳು ಹೆಚ್ಚು ಕಡಿಮೆ ೨ ರಿಂದ ಮೂರು ವರುಷದ ಮಕ್ಕಳಷ್ಟು ಬುದ್ದಿವಂತರು ಎಂದು ಹೇಳುವದು. ೧೫೦ ರಿಂದ ೨೦೦ ಶಬ್ದಗಳು ತಿಳಿಯಬಹುದು ಅವಕ್ಕೆ ಎಂಬುದೊಂದು ಅಂದಾಜು. ಕೈ ಆಜ್ಞೆಗಳನ್ನು, ಸಂಜ್ಞೆ ಗಳನ್ನು ಬಲು ಬೇಗ ಕಲಿತುಕೊಳ್ಳಬಲ್ಲವು ಅವು. ಮಾನವ ಪರೋಪಕಾರಿ ಜೀವಿಯಾದರೆ ನಾಯಿಗಳು ಮಾನವೊಪಕಾರಿ ಜೀವಿಗಳು.
ಗಂಭೀರವಲ್ಲದವರ  ಮುಖಕ್ಕೂ ಇದು ಅನ್ವಯಿಸುತ್ತದೆ.  ಬೇಕಾದರೆ ನೀವು ಕ್ರಿಕೆಟ್ ನೋಡುವದರಲ್ಲಿ ವ್ಯಸ್ತವಾದಾಗ ಮನೆಯವಳು ಪಾತ್ರೆ ಕುಕ್ಕಿದ್ದರೆ ನಿಮಗೆ ಕೋಪ ಕಾಣುವದು ಅವಳ ಬಲಗೆನ್ನೆಯಲ್ಲೇ, ಅಂತೆಯೇ ಬೆಳೆದಿಂಗಳ ನಗೆಯು ಅಲ್ಲಿಯೇ ಕುಣಿಯುವದು. ಘಂಟೆಗಟ್ಟಲೆ ಕನ್ನಡಿ ಮುಂದೆ ಮುಗಳ್ನಕ್ಕು ಸಿಂಗರಿಸಿಕೊಂಡು ಬಂದು ಹೇಗೆ ಕಾಣಿಸುತ್ತೆ ಎಂದು ಕೇಳಿದರೆ ನೀವು ಬಿಟ್ಟಿ ಬೇಸರಿಕೆಯಿಂದ ಪರವಾಗಿಲ್ಲ ಎಂದು ಎಂದಾದರು ಹೇಳಿದ್ದರೆ ಅದಕ್ಕೂ ಈ left gaze bias ಕಾರಣ ಏಕೆಂದರೆ ನಿಮ್ಮವಳು ತನ್ನ ಶೃಂಗಾರಭರಿತ ಏಕ ಪಾತ್ರಾಭಿನಯ ಮಾಡುವಾಗ ಕನ್ನಡಿಯಲ್ಲಿ ಪ್ರಾಯಶಃ  ಬರಿ ಎಡ ಮುಖ ನೋಡಿಕೊಂಡಿರಬಹುದು - ನಿಮ್ಮ ಮೆದುಳು ಅವಳ ಬಲಕ್ಕೆ ನೋಡಿ ಅಲ್ಲಿರುವ ಭಾವದ ಮೇಲೆ ನಿಮ್ಮ ಅಭಿಪ್ರಾಯ ಹೇಳಿರುವ ಸಾಧ್ಯತೆ ಇದೆ.   ಇದೆಲ್ಲ ಬೊಗಳೆ ಪುರಾಣ  ಬದಿಗೆ ಸರಿಸಿ ನಮ್ಮ ನೆಚ್ಚಿನ 'ಅಂಚು' ಮನೆಗೆ ಬಂದದ್ದು ಹೇಗೆ ಎಂದು ಮುಂದಿನ ಕಂತಿನಲ್ಲಿ ಹೇಳುತ್ತೇನೆ.
(ಮುಂದುವರಿಯುವುದು)

ಮರೆತೆಯಾದರೆ ನನ್ನ

ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ    
ಅನಿಲ ತಾಳಿಕೋಟಿ
ಮಂಗಳವಾರ, 26 ಫೆಬ್ರವರಿ 2013 (00:00 IST)

ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು.ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ. ಆದರೆ ಇವೆಲ್ಲವೂ ಕನ್ನಡದ ಕವಿತೆಗಳು. ಒಂದಕ್ಕೊಂದು ಸವತಿಯರಂತೆ ಒಂದೇ ಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ.ಈ ದಿನ  ಅನಿಲ್ ತಾಳಿಕೋಟಿ ಅನುವಾದಿಸಿದ ಪಾಬ್ಲೋ ನೆರುದಾ ಕವಿತೆ  ನಿಮ್ಮ ಓದಿಗೆ.        
ಮರೆತೆಯಾದರೆ ನನ್ನ
ಮಾತೊಂದ ನಿನಗೆ
ತಿಳಿಸುವೆನು ನೋಡು.
ಶರತ್ಕಾಲದ ಸಂಜೆಯಲಿ
ನನ್ನೆದೆಯ ಕವಾಟದಾಚೆಯಲಿ
ಚಾಚಿದ ಕೊಂಬೆಯ ಮರೆಯಲಿ
ಮಿಂಚಿದ ಚಂದ್ರನ ತುಣಕ ನೋಡುತ
ನಾ ಚಾಚಿದ ಕೈ - ನುಣ್ಣನೆಯ  ಬೂದಿಯ
ಸವರಿ, ಸುಕ್ಕು ಸುಕ್ಕಾದ ಕೊರಡ ಮೀಟಿ,
ಸುಳಿ ಸುಳಿಯಾಗಿ ಸಾಗಿಹದು ನಿನ್ನೆಡೆಗೆ
ಇಲ್ಲಿರುವ ಎಲ್ಲಾ ಚರಾಚರ ಸುಗಂಧದ ಬೆಳಗುಗಳು
ನಾ ನಿನ್ನಲ್ಲಿಗೆ ತೇಲಿಬರಲು ಬಿಟ್ಟ ಹಾಯಿದೋಣಿಗಳು.
ಆದರೀಗ,
ಅಣು ಅಣುವಾಗಿ ನೀ ಮರೆತರೆ ನನ್ನ
ಮರೆತಂತೆ ನಾ ನಿನ್ನ ತೃಣ ತೃಣವಾಗಿ.
ನಿನೊಮ್ಮೇ  ಕಡೆಗಣಿಸೆ  ನನ್ನ
ಎಣಿಸಬೇಡಾ,  ಏನನ್ನ
ಕಾಯಲಾರೆ ನಿನಗಾಗಿ ನಾ, ಇನ್ನ.
ನನ್ನ ಭಿತ್ತಿಯ ಉದ್ದಗಲಗಳ ನಿ ಸುತ್ತಿ, ಸುತ್ತಿ
ಮಡಚಿಟ್ಟು, ಹೊರಟೇ ಹೋಗಿ ಬಿಡುವೆಯಾದರೆ
ನೆನಪಿರಲಿ -
ನೀ  ಬಿಟ್ಟ ಮರುಕ್ಷಣವೇ ನಾ ಬೈರಾಗಿ
ಕೈ ಚೆಲ್ಲಿ ಹೊರಟು ಬಿಡುವೆ
ಹುಡುಕಿ ಮತ್ತೊಂದು ನಲ್ಮೆಯ ನೆಲಯ.
ಒಂದು ವೇಳೆ, ನಿನೆನಾದರೂ
ಪ್ರತಿ ಕ್ಷಣ , ಪ್ರತಿ ಘಳಿಗೆ, ದಿನ ದಿನ
ತಣಿಸಲಾಗದ  ತೃಷೆಯಿಂದ
ನಾನೇ ನಿನ್ನ ನಿಯತಿ ಎಂದಾದರೆ,
ನನ್ನುಸಿರಿನ ಘಮಲು ನಿನ್ನೆದೆಯಲಿ
ಪಾರಿಜಾತದ ಪರಿಮಳವಾಗಿ ತೇಲಿ
ನನ್ನ ಅಂಗಾಂಗಗಳ ಮೆದುವಾಗಿ ಮೀಟಿ
ಎಂದೆಂದೂ ಮರೆಯದ, ಅಳಕಿಸಲಾಗದ
ರಾಗಾನುರಾಗವಾಗಿ ಮರುಕಳಿಸಿ,
ನನ್ನೊಲುಮೆ ನಿನ್ನ ಪ್ರೇಮ ಹೀರಿ
ಬಂಧಿಯಾಗುವದು ನಿನ್ನ ಬಾಹುಗಳಲಿ
ನನ್ನಲಿರುತ್ತಲೇ ನನ್ನನುರಕ್ತಿ.
(ಪ್ಯಾಬ್ಲೋ ನೆರೂಡಾ ನ 'ಸಿ ತು ಮಿ ಓಲ್ವಿಡಾಸ' (ಸ್ಪಾನಿಷ) ನ ,'ಇಫ್  ಯು ಫಾರ್ಗೆಟ ಮಿ'(ಇಂಗ್ಲಿಷ್) ನ ಕನ್ನಡ ರೂಪಾಂತರ.).