ಮೂರು ವರುಷದ ಹಿಂದಿನ
ಬೇಸಿಗೆಯಲ್ಲಿ ಎನಿಸುತ್ತದೆ ,ಮಕ್ಕಳಿಗೆಲ್ಲ ರಜೆ. ಎಲ್ಲಿಯೋ ಹೋಗುತ್ತಿರಬೇಕಾದರೆ
ನನ್ನವಳು ನಡೆಸುತ್ತಿದ್ದ ಕಾರನ್ನು ಚಕ್ಕನೆ ಒಂದು ಹಳೆಯ, ನಿರ್ಜನ ಮನೆಯೆದರು
ನಿಲ್ಲಿಸಿದಳು. ಅವಳೆಂದು ಮೊದಲೇ GPS ನೋಡದೆ, ಗಮ್ಯ ತಾಣ ತಲಪುವ ಮೊದಲೇ ಬೇರೆಲ್ಲೂ
ನಿಲ್ಲಿಸುವವಳಲ್ಲ. ಅದೂ ಹೋಗಿ ಹೋಗಿ ಹಳೆ, ನಿರ್ಜನ ಮನೆ ಎದರು - ಏನಪ್ಪಾ ಇದು
ಎನ್ನುತ್ತಾ ಇಳಿಯ ಹೋದೆ. ಒಂದು ನಾಲ್ಕು ಎಳೆಯ ಡ್ಯಾಷಹೌಂಡಗಳು (dachshund) ಕಾಲ ಬಳಿ
ಬಂದು ಅಮುಕಿಕೊಂಡವು. ತಲೆ ಎತ್ತಿ ನೋಡಿದೆ 'ಇಲ್ಲಿ ಡ್ಯಾಷಹೌಂಡ ಮಾರಲಾಗುತ್ತದೆ' ,
ಮರಕ್ಕೆ ತೂಗುಹಾಕಿದ ಮಾಸಿದ ಬೋರ್ಡು. ನಗುನಗುತ್ತ ಮಗ, ಮಗಳು ಕಾರಿನಿಂದ ಇಳಿದರು.
'ಪಪ್ಪಾ , ನಾಲ್ಕು ವರುಷದಿಂದ ಕೇಳ್ತಾ ಇದ್ದೀನಿ. ಪ್ರತಿ ಸಾರಿ ಬೇಸಿಗೆಯಲ್ಲಿ, ಶಾಲೆ ಮುಗಿದಮೇಲೆ ನೋಡುವ, ಎಂತಿದ್ದೆಯೆಲ್ಲ. ನಡಿ ಈಗ ನೋಡುವ'
ಇನ್ನೂ
ಮುಂದೆ ಹಾಕಲಾಗಲಾರದು ಎಂದು ಗೊತ್ತಾಯಿತು , ಅದಕ್ಕಿಂತ ಮಿಗಿಲಾಗಿ ಅಮ್ಮನನ್ನು ಒಪ್ಪಿಸಿ
ಕರೆತಂದ ಮಗಳ ಮೆದುಳು 'ನಿನ್ನದೇನೂ ನಡೆಯದು, ಎಲ್ಲವನ್ನು ನಿರ್ಧರಿಸಿಯಾಗಿದೆ '
ಎಂದಂತಾಗಿ,
'ನಿಮ್ಮದೇ ಮಗಳು, ಮೆದುಳು - ಅನುಭವಿಸಿ' ಎನ್ನುವಂತೆ ಮುಖ ಮಾಡಿದಳು ಮಡದಿ. ಸ್ವಲ್ಪ ಹೆಮ್ಮೆಯಾಯಿತೇನೋ?
ಮಗಳು
ಹೇಳಿದ್ದು ನಿಜ, ನಾಲ್ಕು ವರುಷದಿಂದ ಪ್ರತಿ ಸಾರಿ ಹುಟ್ಟುಹಬ್ಬಕ್ಕೆ ಏನು ಬೇಕು ಎಂದರೆ
ಸಿದ್ಧ ಉತ್ತರ 'ಒಂದು ನಾಯಿ'. ಈಗ ತನ್ನ ಜೊತೆ ತಾಯಿ, ತಮ್ಮನನ್ನು
ಕೂಡಿಸಿಕೊಂಡಿದ್ದಾಳೆಯೆಂದರೆ, ತುಂಬಾ ದಿನದಿಂದಲೇ ಮಸಲತ್ತು ಮಾಡಿದ್ದಾಳೆ. ಇದೆಲ್ಲಾ
ಆರಂಭವಾಗಿದ್ದು ಗೋವೆಯ ಅಣ್ಣನ ಮನೆಯಲ್ಲಿ ಸುಮಾರು ಐದಾರು ವರುಷಗಳ ಹಿಂದೆ ಎಂಬುವದು
ನೆನಪಾಯಿತು. ಅಣ್ಣ ನನ್ನ ಮಗಳಿಗೆ ತನ್ನಲ್ಲಿದ್ದ ಮೂರು ಮುದ್ದಾದ ನಾಯಿಗಳ ಬಗ್ಗೆ
ವಿವರಿಸುತ್ತಿದ್ದ.
'ಮೂರು ಯಾಕಂದ್ರ , ಪುಟ್ಟಾ , ನಾವು ಸಣ್ಣವರಿದ್ದಾಗ
ನಮ್ಮನೆಯೊಳಗ ನಾಯಿ ಇದ್ದಿಲ್ಲ, ನಾವು ಮೂರು ಮಂದಿಯಲಾ ಅಣ್ಣ, ತಮ್ಮಂದಿರು ಅದಕ್ಕ ಮೂರು
ಬೀದಿ ನಾಯಿ 'ಪೆಟ್ಟ' ಮಾಡ್ಕೊಂಡಿದ್ವಿ. ನಾನು ನನ್ನ ನಾಯಿಗೆ, ನನ್ನ ಅಚ್ಚುಮೆಚ್ಚಿನ
ನಾಯಕ 'ರಾಜ್ಕುಮಾರ್' ಅಂತಾ ಕರಿತ್ತಿದ್ದೆ. ಅದು ನಾ 'ರಾಜ -ಚು ಚು ಚೂ' ಅಂದ್ಕುಳ್ಲೆ
ಎಲ್ಲಿರ್ತಿತ್ತೋ ಓಡಿ ಬರ್ತಿತ್ತು. ಅದರ ಸಲುವಾಗಿ ನಾವು ಎಷ್ಟು ಜಗಳಾಡತಿದ್ವಿ ಅಂದ್ರ
ಬರೇ ನಾ ಒಬ್ಬನ ಅದರ ಹೆಸರ ಹಿಡದು ಕರಿಬೇಕು ಅಂತಾ ನನ್ನ ತಕರಾರು. ಅದಕ್ಕ ನಿಮ್ಮಪ್ಪಾ
ಇನ್ನೊಂದು ನಾಯಿ ಹುಡಕಿ ಅದಕ್ಕಾ 'ವಿಷ್ಣು' ಅಂತ ಹೆಸರು ಇಟ್ಟು, ಸಂಜೆ ಆದಕುಳ್ಳೆ ನನಕು
ಮೊದಲ ಓಡಿ ಹೋಗಿ ಚೂ, ಚೂ ಸುರು ಹಚ್ಚುಗೊತ್ತಿದ್ದಾ. ಇನ್ನಾ ನಿಮ್ಮ ಕಡಿ ಕಾಕಾ ತಾ ಅರ ಏನ
ಕಮ್ಮಿ ಅಂತಾ ಇನ್ನೊಂದ್ದಕ್ಕ 'ಅಂಬರೀಶ' ಅಂತ ಹೆಸರಿಟ್ಟು ತಾನೂ ಕೂಗಲಿಕ್ಕೆ ಶುರು
ಮಾಡ್ತಿದ್ದಾ. ನಮ್ಮವ್ವಗ ನಮಗ ಚಪಾತಿ ಮಾಡಿ ಮಾಡಿ ಸಾಕಾಗ್ತಿತ್ತು ಇನ್ನ ಆ ನಾಯಿಗಿಷ್ಟು
ಎಲ್ಲಿಂದ ತರುದು ಅಂತಾ ದಿವಸಾ ಬಯ್ಲಿಕ್ಕೆ ಸುರು ಮಾಡಿದ್ರು ನಾವೇನ ನಮ್ಮ ನಾಯಿ ಪ್ರೀತಿ
ಕಮ್ಮಿ ಮಾಡ್ಲಿಲ್ಲಾ. ಸಾಲಿಯಿಂದ ಬಂದ ಕೂಡ್ಲೆ ನಮ್ಮ ಚೂ ಚೂ ಚೂ ಕೇಳಿ ಆಜು ಬಾಜುನವರಿಗೆ
ತಲೆ ಚಿಟ್ಟ ಹಿಡಿತಿತ್ತು. ಒಂದಿವಸ ನಮ್ಮ ಓಣ್ಯಾಗಿನ ಮಂದಿ 'ಯಾಕ್ರಲೇ, ನಮ್ಮ ಫೆವರೆಟ
ಯಾಕ್ಟರಗಳ ಹೆಸರ ನಾಯಿಗೆ ಇಟ್ಟಿರ್ಯಾಲೆ' ಅಂತಾ ಜಗಳಕ್ಕ ಬಂದ್ರು, ಅವತ್ತಿಂದ ನಮ್ಮ ನಾಯಿ
ಪ್ರೀತಿ ಹಂಗ ಎದ್ಯಾಗ ಇಟಗೊಂಡು, ನಮ್ಮ ಕಾಲ ಮ್ಯಾಲೆ ನಾವು ನಿಂತ ಮ್ಯಾಗ ನಾಯಿ
ಮಡಕ್ಕೊಳುದು ಅಂತಾ ಡಿಸೈಡ ಮಾಡಿದ್ವಿ' ಅಂತಾ ಉಪ್ಪು, ಖಾರ ಹಾಕಿಧಂಗ ಕೆಚಪ್ಪು, ಸ್ವಾಸು
ಹಾಕಿ ಹೇಳಿದ್ದಾ. ಅದಕ್ಕ ನನ್ನ ಮಗಳು 'ಇನ್ನೂ ನಿನ್ನ ಕಾಲ ಮ್ಯಾಗ ನೀನು ನಿಂತಂಗ
ಕಾಣವಲ್ತು' ಅಂತಾ ಜೋಕ ಮಾಡ್ತಿದ್ಲು. ಈ ನಾಯಿ ತೊಗೊಳ್ಳೊದು ತಪ್ಪಿಸಲಾಕ್ಕ ನಾ ಪಟ್ಟ
ಪಾಡ ಅಷ್ಟಿಸ್ಟಲ್ಲಾ.
ನಾಯಿಗೆ ಪರ್ಯಾಯವಾಗಿ ಮೊದಲು ಒಂದು ಅಕ್ವೇರಿಯಂ ತಂದು
ನಾಲ್ಕು ಗೋಲ್ಡ್ ಫಿಶ್ ಇಟ್ಟೆ. ವಾರ ವಾರ ಅದನ್ನ ಕ್ಲೀನ್ ಮಾಡೇ ಮಾಡಿದೆ. ಕಂಡ ಕಂಡಾಗ
ಎಲ್ಲಾರೂ ಅವಕ್ಕ ಫಿಶ್ ಫುಡ್ಡ ಹಾಕಿ ಹಾಕಿ ಅವು ಸ್ವಲ್ಪ ದಿವಸದಾಗ ಉಬ್ಬಿ ಉಬ್ಬಿ
ಉಸಿರಾಡಲಿಕ್ಕೆ ಆಗದಷ್ಟು ಡುಬ್ಬಾ ಆದ್ವು. ಒಂದಿವಸ ತಲಿ ಖರಾಬ ಆಗಿ ಎತ್ತಿ ಒಯ್ದು
ಕೆರ್ಯಾಗ ಹಾಕಿ ಬಂದ್ವಿ. 'ಇಂಡಿಯಾಕ್ಕ ಹೋಗ್ತಿವಲ್ಲಾ , ಅವಕ್ಕ ನೋಡ್ಕೋಳ್ಳರು ಯಾರು
ಇಲ್ಲಾ' ಅಂತಾ ಹೆಂಗೋ ಕನ್ವಿನ್ಸ ಮಾಡಿದೆ ಮಗಳಿಗೆ. ಆ ಬೆಸಿಗ್ಯಾಗ ಬೀಚಗೆ ಹೋದ್ವಿ ,
ಮತ್ತ ನನ್ನ ಮಗಳ 'ಪೆಟ್ಟ' ಪ್ರೇಮ ಜಾಗ್ರತ ಆಗಿ ಬಿಟ್ತು. ಇ ಸಾರಿ ತೊಗೊಂಡಿದ್ದು ಎರಡು
ಮುದ್ದಾದ ಪುಟಾಣಿ ಆಮೆಗಳು. ತನಗೊಂದು, ಇನ್ನೊಂದು ತನ್ನ 'ಕಸಿನ್ನ' ಗೊಂದು. ಅದಕ್ಕೊಂದು
ಬಣ್ಣ ಬಣ್ಣದ 'ಕೇಜು'. ಬಹಳ ಅಂದ್ರ ಒಂದ್ನಾಲ್ಕೋ ಐದೋ ಇಂಚು ಇದ್ದಿರಬಹುದು ಅವು.
ಹೊಟ್ಟಿಮ್ಯಾಲೇ ಅಂಗಾತ ಮಕ್ಕೊಂಡಾಗ ಅದರ ಮ್ಯಾಲೆ ಒಂದು ಕೆಂಪ ಮಚ್ಚೆ ಇದ್ದದ್ದು ಅಕಿಂದು
, ಇರ್ಲಾರದ್ದು 'ಕಸಿನ'ದ್ದು ಅಂತಾ ಒಪ್ಪಂದ ಆತು. ಎರಡು ತಿಂಗಳು ಆಮೆಗಳ ಉಪಚಾರನ
ಉಪಚಾರ, ಕೈ ಮ್ಯಾಲೆ ಕೂಡಿಸಿ ಕೊಳ್ಳೋದೇನು, ಶೋ ಯಾಂಡ ಟೆಲ್ಲಿಗ ಸಾಲಿಗೆ ತೊಗೊಂಡು
ಹೋಗಿದ್ದೆ ಹೋಗಿದ್ದು, ಗಾರ್ಡೆನ್ನಿನ್ಯಾಗ ಕಲ್ಲ ಮ್ಯಾಲೆ ಒಯ್ದು ಕೂಡಿಸಿದ್ದೆ
ಕೂಡಿಸಿದ್ದು. ಯಾಕೋ ಅತಿ ಆತು ಅನಸ್ಲಿಖತ್ತು. ಅಷ್ಟರಾಗ ನಮ್ಮಕ್ಕ ಫೋನ್ ಮಾಡಿ ಮಾಡಿ
'ಅಲ್ಲೋ , ತಮ್ಮಂದ್ರು ರೇಶ್ಮಿ ಸೀರಿ ಆಹೇರಿ ಕೊಡದ ಬಿಟ್ಟು, ಆಮೆ ಯಾವಾಗಿಂದ ಕೊಡಲಿಕ್ಕೆ
ಸುರು ಮಾಡಿದ್ರು ಅನ್ಲಿಕ್ಕೆ ಸುರು ಮಾಡಿದ್ಲು' ಒಂದ ದಿವಸ ಒಂದ ಪೇಜಿನ ಉದ್ದನ
ಇಮೇಲ್ನ್ಯಾಗ ಮನ್ಯಾಗ ಆಮೆ ಇದ್ರ ಬರಬಹುದಾದ ಎಲ್ಲಾ ರೋಗ, ರುಜಿನದ ಲಿಸ್ಟ ಕಳಿಸಿ ತಾ
ಹೆಂಗ ಆಮೆ ಸಾಗ ಹಾಕಿ ಬಂದೆ ಅಂತ ಬರದಿದ್ಳು. ಅವರುರಾಗೆನೋ ರಿಸರ್ಚ್ ಸೆಂಟರ ಇತ್ತು,
ಅಲ್ಲೇ ಬಿಟ್ಟ ಬಂದಳು , ನಮ್ಮ ಊರಾಗ ಒಂದೆರಡು 'ಪೆಟ್ಟ' ಅಂಗಡಿ ಬಿಟ್ಟ್ರ ಗತಿ ಇಲ್ಲಾ.
ಹತ್ತ ಸಾರಿ ಹೋಗಿ ಮ್ಯಾನಜೆರಗ ಮಾತಾಡಿಸಿದ್ರೂ ಆಮೆ ತೊಗೊಳ್ಳಿಕ್ಕೆ ಒಪ್ಪ್ಗೊವಲ್ಲಾ.
ಅದು ಇಲ್ಲಿ ಲೀಗಲ್ ಅಲ್ಲಾ , ವಾಪಸ ಬೀಚಗೆ ಹೋಗಿ ಕೊಟ್ಟ ಬಾ ಅಂತ ಅವನ ಅಡ್ವೈಸು. ಅಲ್ಲಿ
ಹೊದ್ರ ಅಂವಾ ತೊಗೊಳ್ಳುದು ಅಸ್ಟರಾಗ ಅದ ನೀನ ಏನರ ಮಾಡು ಅಂತ ನಾನು ಅವಂಗ ಗಂಟ ಬಿದ್ದೆ.
ಒಂದಿನ ಅವಗೊಂದು ಆಮೀಷ ಒಡ್ಡಿದೆ. ಆಮೆ ಕೊಟ್ಟು ಎರಡು ಗಿಳಿ ಕೊಳ್ಳುವದು. ಅವಂಗ
ಪುಗಸೆಟ್ಟೆಯಾಗಿ ಆಮೆ, ಕೇಜು, ಕೊಟ್ಟು ಎರಡು ಗಿಳಿ, ಒಂದು ದೊಡ್ಡ ಪಂಜರಾ ತೊಗೊಂಡೆ,
ಮ್ಯಾನೆಜರ ಖುಶ ಆದ. ’ಒಂದು ಹೊತು, ಎರಡು ಬಂತು ಡುಂ, ಡುಂ’ ಎಂದು ಕುಣಿದಾಡಿದಳು ಮಗಳು.
ಎರಡು ಬಣ್ಣಬಣ್ಣದ ಗಿಳಿಗಳು, ಒಂದು ಕಡು ಹಸಿರು ಬಣ್ಣದ್ದು, ಇನ್ನೊಂದು ತೆಳು ನೀಲಿ
ಬಣ್ಣದ್ದು , ತುಂಬಾ ಮುದ್ದು ಮುದ್ದಾಗಿದ್ದವು. ದೊಡ್ಡ ಸರಳಿನ ಪಂಜರದಲ್ಲಿ ಅವಕ್ಕೆ ಆಡಲು
ಬೇಕಾದಸ್ಟು ಸರಕುಗಳು,ಮಲಗಲು ಮಚಾನುಗಳು, ನೀರು ಕುಡಿಯಲೊಂದು ನೀರಿನ ಸಣ್ಣ ತಟ್ಟೆ.ಗಿಳಿ ಮನೆಗೆ ಬಂದೊಡನೆ ಗೊಣಗಾಟ ಕೇಳಬೇಕಾಯಿತು.
'ಪಕ್ಷಿ ಮನೆಯೊಳಗೆ ತರುವ ಹಾಗಿಲ್ಲಾ, ಅಲ್ಲೇ ಗರಾಜಲ್ಲಿ ಮಡಗಿ ' ನನ್ನವಳ ಗಿಳಿಮಾತು.
ಸುಮಾರು
ವರುಷಗಳ ಹಿಂದೆ ಕಲಬುರ್ಗಿಯಲ್ಲಿ ಅವಳ ತಮ್ಮಂದಿರು ಕಾಲು ಮುರಿದುಕೊಂಡ
ಪಾರಿವಾಳವೊಂದನ್ನು ಹೇಗೋ ಮನೆಯೊಳಗೇ ತಂದು , ಅದಕ್ಕೆ ಮುಲಾಮು ಹಚ್ಚಿ, ಬ್ಯಾಂಡೇಜ ಹಾಕಿ,
ಶತ ಪ್ರಯತ್ನ ಮಾಡಿ ನೀರು ಕುಡಿಸಿ, ೮ನೆ ಕ್ಲಾಸ್ಸಿನ ಅಕ್ಕನಿಗೆ ಖುಷಿಯಿಂದ ವರದಿ
ಒಪ್ಪಿಸಿದ್ದಾರೆ. ಅಕ್ಕ ನನ್ನ ಮಡದಿ ತಮ್ಮಂದಿರಿಗೆ ಹೆದರಿಸಿ ಆ ಪಕ್ಷಿಯನ್ನು ಕೆಳಗಿನ
ಬಾಡಿಗೆದಾರರ ಮನೆಗೆ ಸಾಗಿಸಲು ಹೇಳಿದ್ದಾಳೆ - ಬಾಡಿಗೆದಾರರು ಊರಲ್ಲಿಲ್ಲದಿರುವದು
ಅನುಕೂಲಕರವಾಗಿದೆ ಹುಡುಗರಿಗೆ. ಸರಿ, ತಮ್ಮಂದಿರಿಬ್ಬರೂ ಸೇರಿ ಹಗಲು,ಸಂಜೆ - ತಂದೆ
ತಾಯಿಯ ಕಣ್ಣು ತಪ್ಪಿಸಿ ಆ ಪಕ್ಷಿಯ ಪುರಾ ದೇಖರೇಖಿ ಮಾಡಿದ್ದಾರೆ. ಬೆಳೆಗೆದ್ದು ಶಾಲೆಗೆ
ಹೋದವರು ಮನೆಗೆ ಮರಳಿ ಬರುವಷ್ಟರಲ್ಲಿ ದೊಡ್ಡ ರಾದ್ದಾಂತವೆ ಆಗಿದೆ. ಊರಿಂದ ವಾಪಸ್ಸಾದ
ಪಕ್ಕಾ ಮಡಿವಂತ ಬಾಡಿಗೆದಾರರು ಬಾಗಿಲು ತಗೆದ ತಕ್ಷಣ ಮನೆಯಲೆಲ್ಲಾ ಚದುರಿ ಬಿದ್ದ
ರೆಕ್ಕೆ,ಪುಕ್ಕ ನೋಡಿ ಹೆದರಿದವರು, ಸತ್ತು ಬಿದ್ದ ಪಾರಿವಾಳ ನೋಡಿ ಹೌಹಾರಿದ್ದಾರೆ.
ವಾಸನೆಯಂತು ಇಡೀ ಕೊಲೋನಿಗೆ ಹರಡಿ ನಿಂತಿದೆ. ಅದನ್ನು ಯಾರೋ ಬೇಕೆಂದೇ ಅಲ್ಲಿ
ಎಸೆದಿದ್ದಾರೆ ಎಂಬುವದು ಅವರ ಅಂಬೋಣ. ಮೇಲೆ ಹೋಗಿ ಮಾಲಕರ ಹತ್ತಿರ ಕೂಗಾಡಿದ್ದಾರೆ.
ಶಾಲೆಯಿಂದ ವಾಪಸ್ಸಾದ ಮಕ್ಕಳಿಗೆ ಪಾರಿವಾಳ ಸತ್ತಿರುವ ದುಃಖ ಒಂದೆಡೆ, ತಂದೆಯಿಂದ
ಸಿಗಬಹುದಾದ ಬಹುಮಾನದ ಹೆದರಿಕೆ ಇನ್ನೊಂದೆಡೆ. ಬಾಡಿಗೆದಾರನ ಬೈಗುಳ ಮತ್ತೊಂದೆಡೆ.
ಅಕ್ಕನತ್ತ ಓಡಿದರೆ ಹೋಗಿ ಕ್ಲೀನ ಮಾಡಲು ಆಜ್ಞಾಪನೆ ಬೇರೆ. ಅಂತೂ ಇಂತೂ ಕ್ಲೀನ ಮಾಡಿ,
ಅತ್ತು ಕರೆದು, ಮುಚ್ಚಿದ ಕಿಡಕಿಗಳು, ಅಲ್ಲೇ ಇದ್ದ ಕಾಳು, ಕಡ್ಡಿ, ನೀರು- ತೋರಿಸಿ
ತಮ್ಮ ಘನ ಕಾರ್ಯ ವಿವರಿಸಿ ಹೇಗೋ ಬಚಾವಾಗಿದ್ದಾರೆ ಬ್ರದರ್ಸಗಳು. ಅಂದಿನಿಂದ ಮನೆಯಲ್ಲಿ
ಪ್ರಾಣಿಗಳು ಇರಬಹುದು, ಪಕ್ಷಿಗಳಿಲ್ಲಾ. 'ಅಲ್ಲಾ , ಕಣೆ, ಮಗಳ ಜೊತೆ ಹೋಗಿ ಗಿಳಿ ಸಾಕುವ
ಪರಿಣಿತಿ ಕ್ಲಾಸ್ಸು ತೆಗೆದುಕೊಳ್ಳುತ್ತೇನೆ ಆಯಿತೆ?' ಎಂದು ಕನ್ವಿನ್ಸ
ಮಾಡಿದ್ದಾಯಿತು.'ಗರಾಜಲ್ಲಿ ಇಡುವದು ಬೇಡಾ, ಓದಿಲ್ಲವೇ ಕಾಗಿನೆಲೆ ಅವರ ವಿಲ್ಲೋ ವೈದ್ಯ
ಕಥೆ?' ನನ್ನ ಅಹವಾಲು. 'ಓಕೆ, 'ಮಡ್ಡ' ರೂಮಲ್ಲಿ ಇಡಬಹುದು' ಎಂಬ ತಾತ್ಕಾಲಿಕ
ಒಪ್ಪಂದವಾಯಿತು.
ಎರಡೋ, ನಾಕೋ ವಾರ ಕಳೆದಿರಬಹುದು. ಆಡಿಸುವವರಿಲ್ಲದೆ,
ಕೇಳುವವರಿಲ್ಲದೆ ಗಿಳಿಗಳು ಸಪ್ಪಗಾಗತೊಡಗಿದವು. ಸರಿ, ಯಾಕೋ ನಮಗೆ ಪಕ್ಷಿಗಳು ಆಗಿಬರೋಲ್ಲ
ಬಿಡು ಅನ್ಕೊಂಡು ಅವನ್ನು ಸಾಗಿಸುವ ದಾರಿ ಹುಡಕುತ್ತಿದೆ. 'ಕ್ರೆಗ್ಸ ಲಿಸ್ಟ'ಲ್ಲಿ
ಮುದ್ದಾದ ಗಿಳಿಗಳು ಪುಕ್ಕಟ್ಟೆ ಎಂದು ಜಾಹಿರಾತಿಸಿದೆ. ಯಾರೋ ಭಾರತಿಯ ಪುಣ್ಯಾತ್ಮ ಬಂದು
ಖುಷಿಯಿಂದ ತೆಗೆದುಕೊಂಡು ಹೋದ. ಮತ್ತೊಂದು ಹುಟ್ಟುಹಬ್ಬ- ಈ ಬಾರಿ ನಮ್ಮ ಪಕ್ಷಿ ಫೇಮ
'ಬಿಲ್ಲ'ನ ಬಳುವಳಿಯ ಸರದಿ. ಒಂದು ಅತಿ ದೊಡ್ಡ ಕೇಜು, ಅದರಲ್ಲಿ ಎರಡು ಟೊನಪ ಮೊಲಗಳು.
ಒಂದು ಬಿಳಿ ಮತ್ತೊಂದು ಬೂದಿ ಬಣ್ಣದು -ತಂದು ಮಡಗಿದ. ಯಥಾ ಪ್ರಕಾರ ಮೊಲಗಳನ್ನು
ಹಿಡ್ಕೊಂಡು, ಓಡ್ಯಾಡಿಸಿ ಒಂದಿಪ್ಪತ್ತು ಫೋಟೋ ತೆಗೆದಿದ್ದಾಯಿತು. ಒಂದು ವಾರ ಮೊಲಗಳ
'ಅಧ್ಯಯನ' ಅತಿ ಶಿಸ್ತಿನಿಂದ ಮನೆಮಂದಿ ಎಲ್ಲಾ ಮಾಡಿದೆವು. ಒಂದಿನ ಯಾವತ್ತೋ ಬಾಗಿಲು
ತೆರೆದಿಟ್ಟಾಗ ಮಾಯವಾದ ಮೊಲಗಳೆರಡು ಮತ್ತೆಂದು
ವಾಪಸ್ಸು ಬರಲಿಲ್ಲಾ - ಇಂದಿಗೂ ಯಾವಾಗಲು ಕಾಣುವ ಮೊಲಗಳನ್ನು ಯಾರ್ಡಿನಲ್ಲಿ
ನೋಡಿದಾಗಲೆಲ್ಲಾ ಅದೇ ಮೊಲದ ಮಾಸದ ನೆನಪುಗಳು. ಆಗಾಗ ಪೆಟ್ಸ್ ಮಾರ್ಟ್ ಗೆ ಹೋಗುವದು
ಅಲ್ಲಿರುವ ಇಲಿ, ಹಾವು, ಬೆಕ್ಕು ,ನಾಯಿ ನೋಡುವದು ಎಂದಿನಂತೆ ನಡದೇ ಇತ್ತು.
ಏನಿಲ್ಲವೆಂದರೂ ಒಂದು ಘಂಟೆ ಬರಿ ಅಕ್ವೆರಿಯಮನಲ್ಲಿಯ ವಿಧ ವಿಧ ಮೀನು ನೋಡುವದರಲ್ಲಿಯೇ
ಕಳೆಯುತ್ತಿತ್ತು - ನೋಡಲು 'ಕಿಸ ಕಾ ಕ್ಯಾ ಜಾತಾ ಹೈ' ನನ್ನ ಫಿಲಾಸಫಿ. ಅದೇನಾಯಿತೋ ಒಂದು
ದಿನ ಒಂದು ಹ್ಯಾಮಸ್ಟರ ನೋಡಿದ್ದೇ ಅದು ಬೇಕೇ ಬೇಕೆಂದು ಕೂತಳು ಮಗಳು. ಸರಿ, ನಾವಲ್ಲದೆ
ಬೇರಾವ ಪ್ರಾಣಿಯು ಮನೆಯಲ್ಲಿಲದೆ ಬಹಳ ದಿನವಾಗಿತ್ತು -ಎತಗೊಂಡು ಬಂದೆವು ಹ್ಯಾಮಸ್ಟರ,
ಮತ್ತೆ ಅದಕ್ಕೊಂದು ಕೇಜು, ಮೇಲೆ ಕೆಳೆಗೆ ಓಡಾಡಲು ಅದರಲ್ಲಿ ಬಣ್ಣ ಬಣ್ಣ ದ ಕೊಳವೆಗಳು.
ಮನೆಯಲೆಲ್ಲ ಓಡಾಡಲು ಅದಕ್ಕೊಂದು ಹ್ಯಾಮಿ ಬಾಲು. ಅಷ್ಟು ಹಿಡಿ ಗಾತ್ರದ ಆ ಹ್ಯಾಮಿಗೆ
ಎಲುಬೆ ಇರಲಿಲ್ಲವೇನೋ? ಮೈ ಮೇಲೆ ಬರಿ ರೋಮವಿತ್ತೇನೋ? ಕೇಜಿನ ಸಣ್ಣ ಬಾಗಿಲ ಕಿಂಡಿಯಿಂದಲೇ
ತಪ್ಪಿಸಿಕೊಂಡು ಓಡುತ್ತಿತ್ತು. ಬಾಲಿನಲ್ಲಿ ಹಾಕಿ ಬಿಟ್ಟರೆ ಇಡಿ ಮನೆಯಲ್ಲಿ ಪುಟು
ಪುಟನೆ ರೋಲ ಆಗುತ್ತಾ ಸುರ ಸುರನೆ ಓಡ್ಯಾಡುತಿತ್ತು. ಶ್ಯಾಲೆಗೆ ಒಯ್ದು ತೋರಿಸಿ ಅಲ್ಲಿಯೇ
ನಾಲ್ಕು ದಿನ ಇಟ್ಟು ಎಲ್ಲರಿಂದ 'ಶಬ್ಬಾಶ್' ಪಡೆದದ್ದು ಆಯಿತು. ಎಲ್ಲಾ ಉಂಡು,ತಿಂದು
ಆಡಿದ ಮೇಲೆ ಇ ಹ್ಯಾಮಿಗೊಂದು ಚಟ, ಅದೆಂದರೆ ತಪ್ಪಿಸಿಕೊಂಡು ಓಡಿ ಎಲ್ಲಿಯಾದರೂ ಕ್ಲೋಸೆಟ
ನಲ್ಲಿ ಬಚ್ಚಿಟ್ಟುಕೊಳ್ಳುವದು. ಅದನ್ನು ಪುಸಲಾಯಿಸಿ ಹೊರತರಲು ಒಂದಿಷ್ಟು ಕ್ಯಾರೆಟ್ಟಗಳ
ಸಾಲು ಸಾಲಾಗಿ ಇಡ್ತಾ ಇದ್ದೆವು. ಎಷ್ಟೋ ಸಾರಿ ಎರಡನೇ ಮಹಡಿಯಿಂದ ಅದರ ಕೇಜವರೆಗೂ ಸಾಲಾಗಿ
ಕ್ಯಾರೆಟ್ಟನ ಟ್ರೈಲ ಇರುತಿತ್ತು ಮನೆಯಲ್ಲಿ. ಹ್ಯಾಮಿ, ಮೊಲಗಳಿಗಿಂತ ಎಷ್ಟೋ
ಚೂಟಿಯಾಗಿದ್ದು, ಯಾವಾಗಲು ಏನೋ ಒಂದು ತರಲೆ ಮಾಡುತ್ತಲೇ ಇರುತಿತ್ತು. ಒಂದು ದೀರ್ಘ
ವಿಕೆಂಡು ಅಕ್ಕನಲ್ಲಿಗೆ ಹೋಗುವದೆಂದಾಯಿತು. ಆ ಹ್ಯಾಮಿನೊಂದು ಎಲ್ಲಿ ಕಟ್ಕೊಂಡು ಹೋಗುವದು
ಎಂದು ಅಂದುಕೊಂಡು ಮನೆಯಲ್ಲಿ ಅದಕ್ಕೆ ಕೇಜಿನಲ್ಲಿ ಮೂರು ದಿನದ ಆಹಾರ, ನೀರು ಇಟ್ಟು
ಎರಡೆರಡು ನೈಲಾನ್ ದಾರದಿಂದ ಅದರ ಕೇಜಿನ ಸುತ್ತ, ಸುತ್ತಿ ಬಂದೋ ಬಸ್ತ ಮಾಡಿದೆ. ಮೂರು
ದಿನದ ಮೇಲೆ ವಾಪಸ ಬಂದು ಮೊದಲು ನೋಡಿದ್ದು ಹ್ಯಾಮಿ ಕೇಜೆ. ಕೇಜಿನಲ್ಲೆ ತೆಪ್ಪಗೆ
ಕೂಡುವಷ್ಟು ಕ್ರೆಜಿಯೇ ಅದು? ಎಲ್ಲೊ ತಪ್ಪಿಸಿಕೊಂಡಿತ್ತು. ಇ ಬಾರಿ ಎಷ್ಟು ಹುಡಕಿದರೂ
ಸಿಗ್ತಾ ಇಲ್ಲಾ. ಕೊನೆಗೆ ಮಾಸ್ಟರ್ ಬೇಡ್ರೂಮನ ಕ್ಲೋಸೆಟನ ಕಾರ್ಪೆಟ್ಟಿನಲ್ಲಿ ಒಂದಡಿ
ಅಗಲದ ರಂಧ್ರ - ಪೂರ್ತಿ ಕಾರ್ಪೆಟ್ಟ ಕತ್ತರಿಸಿ ಅದರ ಕೆಳಗಿನ ಕಾರ್ಡಬೋರ್ಡ್ ನುಂಗಿ
ಹಾಕಲು ನೋಡಿದೆ ಹ್ಯಾಮಿ.
ಯಾವದೋ ಬಟ್ಟೆಯ ಸಂದಿಯಲ್ಲಿ ಅಡಗಿದ್ದ ಅದನ್ನು ಇದ್ದ ಬದ್ದ ತಲೆ ಎಲ್ಲಾ ಉಪಯೋಗಿಸಿ
ಮತ್ತೆ ಹಿಡಿದ್ದಿದಾಯಿತು. ಶಾಲೆಯಿಂದ ಒಂದು ರಿಕ್ವೆಸ್ಟು ಹ್ಯಾಮಿಯನ್ನು ಕ್ಲಾಸ್ಸಿನ
ಪೆಟ್ ಮಾಡಿ ಇಟ್ಟುಕೊಳ್ಳಬಹುದೇ ಅಂತಾ, ಖುಷಿಯಿಂದ ಅದನ್ನು ಅಲ್ಲಿ ತಳ್ಳಿದ್ದಾಯಿತು.
ಇನ್ನು ಏನಿದ್ದರು ಸಣ್ಣ ಪ್ರಾಣಿಗಳನ್ನು ಸಾಕುವದಿಲ್ಲಾ, ಸಾಕುವದಾದರೆ ದೊಡ್ಡದೆ ಎಂದಳು
ನನ್ನವಳು, ದೊಡ್ಡ ಪ್ರಾಣಿ ಸಾಕಿ ಬೇಕಾದಷ್ಟು ಅನುಭವವಿದೆ ನನಗೆ ಎಂದಳು ನನ್ನತ್ತ
ನೋಡುತ್ತಾ.
(ಮುಂದುವರಿಯುವುದು) |