Saturday, December 14, 2013

ನನಸಾದ ಹುಚ್ಚ ಖೋಡಿ ಕನಸು

ಅನಿಲ್ ತಾಳಿಕೋಟಿ

ಮನಸ್ನ್ಯಾಗ ಕುಂತಾವ ನಿನ್ನವೆ ನೆನಪs
ಜೀವದಾಗ ನಿಂತಾವ ನಿನ್ನವೆ ಭಾವ
ಕಸುವಿಗೆ ಕಸುವಿನ ಕಾವ
ಹಸುವಿಗೆ ಹಸಿವಿನ ಠೇವ
ಕ್ವಾಟಿ ಕೊತ್ತಲ ಮ್ಯಾಗೆಲ್ಲ
ಮೂಡ್ಯಾವೆ ಪಾದದ ಗುರುತs
ದಾರಿಗಂಬದ ಕೆಳಗೆ ಮುರಕೊಂಡ
ಕೂತಾವೆ ಅರೆಬಿರಿದ ಕನಸs.
ಕಲೆ : ವೆಂಕಟ್ರಮಣ ಭಟ್ಟ
ನಂಬಿಕೆ ತೇರಮ್ಯಾಗ ಪ್ರೀತಿಯ ದ್ಯಾವ್ರ
ಊರವರೆಲ್ಲಾ ಕೇಕೆ ಹಾಕ್ಕೊತ ಎಳೆದಾಡಿ
ಮಾಡ್ಯಾವ್ರ ನನ್ನುಸಿರ ಭಾರ.
ತಿಳಿಯಂಗಿಲ್ಲೇನ ಅವರಿಗೂನೂ
ಪ್ರೇಮಕ್ಕ ಬ್ಯಾಡ ನೋಡ ತೇರಿನ ಭಾರ
ದುಂಬಿಗೇನ ಬಿಚ್ಚಿ ಬಿಚ್ಚಿ ಕರ್ ಕರದ
ಕೂಗ್ತಾವಾ ಹೂ ಹೂವಿನ ಗುಚ್ಚಾ
ನಾವೇನ ನವಿಲೇನ ನವಿಲ್ಯಾಕ
ಕಂಡ ಕಂಡಾಗ ಮೋಡದ ಗೂಡಾ.

ನಡಿ ಹೋಗೊಣ ಓಡಿ
ಅಂದ್ರ ಬರಾಕ ಒಲ್ಲಿ
ನಾನ ನಿನ್ನ ಅಪ್ಪಾ ಅವ್ವಾ
ಅಂದ್ರ ನಂಬಾಕ ಒಲ್ಲಿ
ಉತ್ತಿ ಬೆಳಸಿ ಕಣ್ಣಾಗ ಕಣ್ಣಿಟ್ಟು ಕಾಪಾಡಿ
ಹಗ್ಯಾಗ ಕೂಡಿಟ್ಟು ನೆಟ್ಟಾರ ದೃಷ್ಟಿ
ಖರೇ ಅದ, ಹುಳ ಹುಪ್ಪಡಿ ಹತ್ತಬಾರದು ನೋಡs
ಹೆತ್ತವರ ಅಳಲು ಅರೀದೇನ ನನಗs
ಹುಳ ಅಲ್ಲ ಹುಡಗಿ, ನಾ ನಿನ್ನ ಹಕ್ಕಿ
ಹೆಕ್ಕಿ ಹೆಕ್ಕಿ ಹಕ್ಕಿಲೆ ಹಾರಿಸಿಕೊಂಡು ಹೊಕ್ಕಿನಿ.

ರಂಗೋಲಿ ಚುಕ್ಕಿ ಮುಕ್ಕಿ ತಿಂದಾನ ಚಂದ್ರ
ಥಳಥಳಿಸಿದ ಅಂಗಳ ನೀರ ಮಳಮಳಸ್ಯಾನ ಸೂರ್ಯ
ನಿನ್ನ ಕಾಲಿಗೆಲ್ಲ ಹಚ್ಚಿನಿ ನನ್ನವ ಕಣ್ಣ
ನೆರಳಿಲ್ಲ ಬಿಸಿಲಿಲ್ಲ ನಿನ್ನ ಬಿಟ್ಟಿಲ್ಲ ನಾನs
ಹಗೇದ ಗೊಡವಿ ಸಾಕಿನ್ನ ನಿನಗ
ಹೊಲದ ಗೊಡವಿ ಬೇಕಿನ್ನ ನಿನಗ
ನೀ ನನ್ನ ಕಾಳ-ತಿಂದ ಹಾಕಂಗಿಲ್ಲ ನಿನ್ನ ಬಾಳ
ಮಾಡೇನಿ ನಿನಗೂಡ ಚಂದದ ಬಾಳ
ನೋಡಲ್ಲಿ ನಗಾಕತ್ತಾನ ನಮ್ಮ ಬಾಳ
ಹಿಗ್ಗನ್ಯಾಗ ಹಿಗ್ಗಿ ಹಳೆ ಹಗೆತನ ಮುಚ್ಚಿ
ಹೊದ್ದೆವಿ ಒಲವ ಮತ್ತ ಬಿಚ್ಚಿ ಬಿಚ್ಚಿ.

2 comments:

sunaath said...

ಏನ್ರೀ ಅನಿಲ,
ಥೇಟ್ ಬಾಗಲಕ್ವಾಟಿ ಭಾಷಾದಾಗ ಹಾಡ ಹಾಡೀರಲ್ಲ! ಪ್ರತಿಯೊಂದು ಪದಾನ್ನ ಹಿಗ್ಗಿ ಹಿಗ್ಗಿ ಹೀರಿಕೊಂಡೆ ನಾನು. ಇನ್ನು ಈ ಕವನಾ ಯಾರಿಗಾಗಿ ಕಟ್ಟೀರಿ, ಅವರೆಷ್ಟು ಹಿಗ್ಗಿರಬಾರದು! ಛಂದ! ಛಂದ!! ಛಂದ!!!

Anil Talikoti said...

Thanks Sunaath avare - just trying to follow these lines --
From "ದಾಂಪತ್ಯಗೀತ" ಸುಮತೀಂದ್ರ ನಾಡಿಗ

"ನನಗೆ ಬೇಕೆನ್ನಿಸುವ ನನ್ನರ್ಧವೆನ್ನಿಸುವ ನನ್ನ ಪಾಲಿಗೆ ಸಿಕ್ಕ ಸ್ವರ್ಗ ನೀನು ಒಬ್ಬರಿನ್ನೊಬ್ಬರಿಗೆ ನರಕ ಸೃಸ್ಟಿಸಿದಾಗ ನಾನು ಪರಿವರ್ತಿಸಿದ ನರಕ ನೀನು ಒಟ್ಟಿನಲ್ಲಿ ಸ್ವರ್ಗವನು ಸೃಸ್ಟಿಸಿದ್ದೇ ಹೆಚ್ಚು"

"ನಾನು ಆಳುವ ಮನೆಗೆ ನಿನ್ನದೇ ಶಾಸನವು ಅಧಿಕಾರ ನನ್ನದು, ನಿನ್ನ ಸ್ವಾಮ್ಯ"