Tuesday, May 20, 2014

ದೇವನೊಲಿದ

ಮೊದಲು ಸಾರಿ ತೊದಲು ನುಡಿ ತುಟಿಗೆ ಬಂದಾಗ
ಪವಿತ್ರ ಬೆಟ್ಟವನ್ನೇರಿ ಪ್ರಾರ್ಥಿಸಿದೆ ದೇವರಿಗೆ-
'ಪ್ರಭು, ನಾ ನಿನ್ನ ಸೇವಕ -ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ'
ಬಿರುಗಾಳಿಯಂತೆ ಬೀಸಿ ಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನೀ ಕರ್ತ, ನಾ ನಿನ್ನ ಕೈ ಬೊಂಬೆ, ನನ್ನ ಅಣು ರೇಣು ತೃಣವೂ ನಿನ್ನದೆ'
ಗರಿಗೆದರಿದ ರೆಕ್ಕೆಯಂದದಿ ಹಾರಿಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನಾ ನಿನ್ನ ಕಂದ -ನೀನೆನ್ನ ತಂದೆ,ನಿನ್ನ ಕರುಣೆಯಿಂದ ಬೆಳಗಿಸುವೆ ಭುವಿಯ'
ಮಂದಾರ ಮಾರುತದಂತೆ ಮಬ್ಬಾದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ನುಡಿದೆ ದೇವರಿಗೆ-
'ನಿನ್ನಿನ ಭುವಿಯ ಬೇರು ನಾ -ನೀ ನಾಳಿನ ಕುಸುಮಾಗಸ ನನ್ನಾನಂದ, ತೇಜದಿ ಬೆಳೆವ ಬಾ ಬಾ'
ಬಾಗಿದ ದೇವ ಜಲಧಿ ಝರಿಯಪ್ಪುವ ಸಡಗರದಲ್ಲಿ ನನ್ನ ಮೆಲ್ಲನೆತ್ತಿ ತೇಲಿಸಿದ
ದಿಗ್ ದಿಗಂತದಲ್ಲಿ ನಾ ಜಾರುವಾಗ ನನ್ನೊಂದ್ದಿಗಿದ್ದ ನಾ ದೇವ.

-ಅನಿಲ್ ತಾಳಿಕೋಟಿ
(ಖಲೀಲ ಗೀಬ್ರಾನನ 'God'  ಪದ್ಯದ ಭಾವಾನುವಾದ)


ದೇವನೊಲಿದ 

1 comment:

sunaath said...

ಅನಿಲರೆ,
ಖಲೀಲ ಗಿಬ್ರಾನರ ಸುಂದರ ಕವನವನ್ನು ಸುಂದರ ಭಾವಾನುವಾದದ ಮೂಲಕ ನಮಗೆ ತಲುಪಿಸಿದ್ದೀರಿ. ಧನ್ಯವಾದಗಳು. ದೇವ ಮತ್ತು ಜೀವ ಇವರ ನಡುವಿನ ಸಂಬಂಧವನ್ನು ಹೇಳುವ ಬಸವಣ್ಣನವರ ವಚನವೊಂದು ನೆನಪಾಯಿತು: ‘ಹಳೆಯ ನಾನು, ಕೆಳೆಯ ನೀನು’!