Tuesday, May 20, 2014

ಹೆಣ್ಣು

ನೀನೆನಗೆ ನಾನಿನಗೆ ಒಲಿದಾಘಳಿಗೆ
ಕೆಳಬಾಗಿದ ನಿನ್ನ ಕಂಗಳಾಹ್ವಾನ
ನಡುಗುವಾ ಅಧರಗಳೇ ಆದವಾಧಾರ
ನಿನ್ನ ಮುಂಗುರುಳಲ್ಲೇ ಜೀಕಿತೆನ್ನ ಮನ
ನಿನ್ನ ಒದ್ದೆ ತುಟಿಗಳ ನಾ ಕದ್ದೆ
ಕೊಟ್ಟು ನೀ ಗೆದ್ದೆ -ಪಡೆದು ನಾನೆಂದೆ
‘ಇದು ಸ್ವರ್ಗ ನೀ ಸರಸಿ
ಅರಸಿ ಬಂದಿಹ ನಾ ರಸಿಕ’
ಮಾತು ನನ್ನದು -ಜಾಣೆ ನೀ ಮೌನಿ
ಧ್ಯಾನದ ಧನ್ಯತೆ ನಿನ್ನದು
ಅಬ್ಬರದ ಮಂತ್ರದಾರ್ಭಟ ನನ್ನದು.

 

ಹಚ್ಚ ಹಸಿರಿನ ಪಚ್ಚ ಪೈರಿನ ಬಳುಕು
ತುಳುಕಿಸಲು ನಾನೋಡಿದ ಪರಿಗೆ
ನಿನ್ನುತ್ತರವದೇ ಮಂದಹಾಸ
ಪಡೆಯುವದಕ್ಕಿಂತ ಕೊಡುವದರ ಮಹತ್ತು
ಹತ್ತತ್ತು ಸಾರಿ ನೀ ತೋರಿದೆ ಮತ್ತೆ ಮತ್ತೆ
ಕೊಳ್ಳುವದರಲ್ಲೇ ನಾ ಕಾಲ ಕಳೆದೆ
ಕೊಡುತ ಬಾಳುವದ ಕಲಿಬೇಕು ನೋಡಿನ್ನು
ಮನೆ,ಮಹಲು ಬೇಡೆಂದೆ ನೆಮ್ಮದಿ ಮನ ಬೇಕೆಂದೆ
ಮಗುವಾಗಿಸಿ ಮಡಿಲಲ್ಲಿ ತಟ್ಟಿ ಮಲಗಿಸಿದೆ
ಬಿದ್ದಾಗ ತಬ್ಬಿ ಎತ್ತಿ ಎಚ್ಚರಿಸಿದೆ
ಕವಿಯ ಕವಿತೆ ನೀನು ದೀಪದ ಹಣತೆ.

ಅರಿವಾಗದ್ದೆ ಹೆಣ್ಣೆನೋ, ಮಣ್ಣಿನ ಕಣ್ಣೆನೋ
ನೆಲ,ನದಿಯ ಸಂತಾನ ನೀನು
ನಿರಂತರ ನೀಡುವ ನಿಲುವಿನವಳು
ಛಲವ ಚೆಲುವಾಗಿಸಿ ಒರಟನಲ್ಲಿ ಒಲವಿಳಿಸಿ
ನನ್ನ ಬರಡು ಕೊರಳ ಕೊಳಲಾಗಿಸಿದವಳು
ನೋವನುಂಗಿ ಹೊತ್ತು ಹೆತ್ತು
ಭೂಮಿ ಬಗಿದು ಹೊಸತ ಚಿಗಿಸಿ
ಬಾಳನಿತ್ತು ಅನಿತು ಸುಖವ ಬಡಿಸಿದವಳು
ನಿನ್ನ ನೆನೆವವರ ಮನೆಯ ಬಿಟ್ಟು
ನನ್ನ ಗುಂಡಿಗೆಯಲ್ಲಿ ಮೊಟ್ಟೆ ಇಟ್ಟು
ಬಿಟ್ಟ ಮನೆಗೆ ಅಟ್ಟ ಕಟ್ಟಿ ಬದುಕು ಉಟ್ಟವಳು.


ಬನ್ನಣೆಗೆ ಸಿಗದ ಹೊಗಳಿಕೆಗೆ ಹಿಗ್ಗದ
ಮಲ್ಲಿಗೆಯ ಮೊಗ್ಗಿನ ಸುಗಂಧ
ಮೊಗೆದಷ್ಟೂ ಸಿಗುವ ಅಗಿದಷ್ಟೂ ಅಳಿಯದ
ರಾತ್ರಿಯ ನೀರವತೆಯಲ್ಲಿ ಬೆಳಗಿನ ನಿರೀಕ್ಷೆ
ಕತ್ತಲೆಯ ಕದದೂಡಿ ಕಾಂತಿಯಂತೆ ನಿಂತಿ
ಜ್ಞಾನದ ಕೂರ್ಜಾಣ್ಮೆ ನಿರ್ಮಲಾಂತರಂಗ
ಶ್ರೇಷ್ಠತೆಯ ವ್ಯಸನವಿಲ್ಲದ ಒಳತಿನ ಮಿತಿ
ನಗುವರಳಿಸಿ ನಕ್ಕರೆ ನಭಕೆ ಚೆಲ್ಲಿದ ಸಕ್ಕರೆ
ಹೆಣ್ಣಿಲ್ಲದ ಜಗ ಭಣ ಭಣ ಮರವಿಲ್ಲದರಣ್ಯ
ಕಣ ಕಣದಲಿ ತುಂಬಿದ ಅಂತಃಕರಣ
ನೀ ಬಳಲಿದಂದೇ ಮನುಜರ ಮರಣ.

ಹೆಣ್ಣು 

4 comments:

sunaath said...

ಬೇಂದ್ರೆಯವರು ಹೆಣ್ಣನ್ನು ‘ನಾವು ತುಳಿವ ಭೂಮಿ ನೀನು’ ಎಂದು ಕರೆದಿದ್ದಾರೆ. ಭೂಮಿಯ ಭೌಮತೆ ಗಂಡಿನ ಅರಿವಿಗೆ ಬರುವುದು ಆತ ಮಾಗಿದಾಗಲೇ!

KalavathiMadhusudan said...

anil ravare nimma chandada kavanakkaagi dhanyavadagalu.

Anil Talikoti said...

ಸುನಾಥ ಕಾಕಾ,
ಧನ್ಯವಾದಗಳು.

Anil Talikoti said...

ಕಲಾವತಿ ಮಧು,
ಧನ್ಯವಾದಗಳು.