ಬೇಂದ್ರೆ ಅವರ ‘ನಲ್ಲ ನಲ್ಲೆಯರ ಲಲ್ಲೆ’
ಅನಿಲ್ ತಾಳಿಕೋಟೆ

ನಲ್ಲ : ‘ನಲ್ಲೆ ! ನಿನ್ನ ಲಲ್ಲೆವಾತು
ಮುಗಳುನಗೆಯಲಲ್ಲೆ ಹೂತು
ಸೋತು,ಓತು,ಬಂತು,ಹೋ’ತು
ನಲ್ಲೆ, ನಿನ್ನ ಲಲ್ಲೆ ವಾತು’.
ನಲ್ಲೆ: ‘ನಲ್ಲ!ನಿನ್ನ ಲಲ್ಲೆ ವಾತು
ಮೀಸೆ ಕುಡಿಯಲ್ಲಲ್ಲೆ ಹೂತು
ಕುಣಿದು,ಮಣಿದು,ಬಂತು,ಹೋ’ತು
ನಲ್ಲ!ನಿನ್ನ ಲಲ್ಲೆ ವಾತು.’
ನಲ್ಲ : ‘ನಲ್ಲೆ ! ನಿನ್ನ ಲಲ್ಲೆ ವಾತು
ಕಣ್ಣ ಕಿರಣದಲ್ಲಿ ನೂತು
ನೇತು,ಜೋತು,ಬಂತು,ಹೋ’ತು
ನಲ್ಲೆ, ನಿನ್ನ ಲಲ್ಲೆ ವಾತು’.
ನಲ್ಲೆ: ‘ನಲ್ಲ!ನಿನ್ನ ಲಲ್ಲೆ ವಾತು
ಹುಬ್ಬು-ಬಿಲ್ಲಿನಲ್ಲೆ ಆತು
ಸಿಡಿದು, ಮಿಡಿದು ಬಂತು,ಹೋ’ತು
ನಲ್ಲ! ನಿನ್ನ ಲಲ್ಲೆ ವಾತು.’
ನಲ್ಲ : ‘ನಲ್ಲೆ ! ನಿನ್ನ ಮಾತಿನಲ್ಲೆ
ಹುಟ್ಟಿ ಬಂತು ಹುಟ್ಟು-ಲಲ್ಲೆ ;
ಹೂಂಗುಟ್ಟಿ ಹುದಗಬಲ್ಲೆ,
ಒಲ್ಲೆಯೆಂದು ಒಲಿಸಬಲ್ಲೆ.;
ನಲ್ಲೆ: ‘ನಲ್ಲ! ನಿನ್ನ ಮಾತಿನಲ್ಲೆ
ಎದೆ ಮೃದಂಗದೊಂದೆ ಸೊಲ್ಲೆ
ಹುಚ್ಚು ಹಿಡಿಸಿ ನುಡಿಸಬಲ್ಲೆ;
ಹಿಡಿದ ಹುಚ್ಚು ಬಿಡಿಸಬಲ್ಲೆ’
ನಲ್ಲ : ‘ನಲ್ಲೆ ! ನೀನು ಮಲೆಯ ಮೊಲ್ಲೆ
ನಿನ್ನ ಮೃದು ಸುಗಂಧ ಲಲ್ಲೆ;
ಅದರ ಸವಿಯ ಧ್ಯಾನದಲ್ಲೆ
ಏಕತಾನಮಾನವಲ್ಲೆ?’
ನಲ್ಲೆ: ‘ನಲ್ಲ! ನಿನ್ನ ಉಸಿರಿನಲ್ಲೆ
ಗಾನದೊಂದು ಗಮಕವಿಲ್ಲೆ?
ಆ ಪ್ರಾಣವಿಲ್ಲದಲ್ಲೆ
ಗಾಳಿಮಾತು ಜೊಳ್ಳು ಲಲ್ಲೆ!’
‘ಬಾನು ಬೆಳಕು ಹೂಡಿದಲ್ಲೆ
ಕಡಲಿನಲ್ಲಿ ಮೂಡಿದಲ್ಲೆ;
ನಲ್ಲ ನಲ್ಲೆ ಕೂಡಿದಲ್ಲೆ
ಹಿಗ್ಗಿಗುಂಟೆ ಮೇರೆ ಎಲ್ಲೆ?’
ಕೆದಕಿ, ಬೆದಕಿ, ಸಮರಸದಲ್ಲಿ ತೇಲುತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಸೀಮಿತ ಪರಿಧಿಯಲ್ಲಿ ನಲ್ಲ ನಲ್ಲೆಯರು ತೃಪ್ತಿಯ ಉತ್ತುಂಗಕ್ಕೆ ಏರಬಹುದು ಎನ್ನುವದಕ್ಕೆ ಉದಾಹರಣೆಯಾಗಿ ಇದಕ್ಕಿಂತ ಒಳ್ಳೆಯ ಕವಿತೆಯನ್ನು ನಾನು ಇದುವರೆಗೂ ಓದಿಲ್ಲ. ನಾಲ್ಕಾರು ದಶಕಗಳ ಹಿಂದೆ ಮನೆಯಲ್ಲಿ ಕನಿಷ್ಟ ಎಂಟೋ ಹತ್ತೋ ಸದಸ್ಯರಿರುವಲ್ಲಿ, ಕಾಂತ-ಕಾಂತೆಯರಿಗೆ ಏಕಾಂತ ಎನ್ನುವದು ಅತ್ಯಂತ ದುರ್ಲಭವಾದ ಕಾಲದಲ್ಲಿ ಸಿಕ್ಕ ಕ್ವಚಿತ್ತಾದ ಸು-ಸಂದರ್ಭದಲ್ಲಿ ಮುದ್ದಣ-ಮನೋರಮೆಯರಾಗುವದು ಅನಿವಾರ್ಯವಾಗಿರುತ್ತಿತ್ತು.
ಅತ್ಯಂತ ಸರಳವಾಗಿಯೂ ಮಹೋನ್ನತವಾಗಿ ಪರಿಣಾಮಕಾರಿಯೂ ಆಗಿರುವ ಈ ಗದ್ಯದಂತಹ ಪದ್ಯ ಬೇಂದ್ರೆಯವರ ರಸಿಕತೆಯನ್ನು ಓದುಗನಲ್ಲಿ ಎರಕ ಹೊಯ್ಯುತ್ತದೆ. ಡಿ.ವಿ.ಜಿ. ಹೇಳಿದಂತೆ ‘ಧನಿಕರಾಗುವದು ಎಲ್ಲರಿಗೂ ಸಾಧ್ಯವಿಲ್ಲ, ಕೊಂಚ ಪ್ರಯತ್ನದಿಂದ ಎಲ್ಲರೂ ರಸಿಕರಾಗಬಹುದು’. ಎಲ್ಲರಲ್ಲಿ ಹಿಗ್ಗು ಹಿಗ್ಗಿಸಲು ಇಂತಹ ಕವಿತೆ ಕಾಲ, ದೇಶಗಳ ವ್ಯಾಪ್ತಿ ಮೀರಿ ನಿಲ್ಲುತ್ತವೆ ಎಂಬ ಅಖಂಡ ನಂಬುಗೆ ನನ್ನದು. ಪ್ರೇಮ-ಕಾಮವನ್ನು ಎಲ್ಲೆಂದರಲ್ಲಿ , ಯಾವ ಎಗ್ಗಿಲ್ಲದೆ ಪ್ರದರ್ಶಿಸಬಹುದಾದ ಅಮೆರಿಕೆಯಲ್ಲಿ ಯಾವದೇ ಕಾಲದ್ದಾದರೂ ಪರವಾಗಿಲ್ಲ ಇಂತಹದೊಂದು ನವಿರಿನ ಕಾವ್ಯ ಓದಿಲ್ಲ ಎಂದಾಗ ಗೆಳತಿಯೊಬ್ಬಳು ‘ಅದು ನಿನ್ನ ಅಲ್ಪ ಓದಿನ ಪರಿಣಾಮ’ ಎಂದದ್ದನ್ನು ಶಿರಸಾ ಒಪ್ಪುತ್ತೇನೆ. ಅಂತೇಯೇ ಬೇಂದ್ರೆ ಎಂಬ ಮಹಾ ಮಾಂತ್ರಿಕ ಉದುರಿಸಿದ ಗರಿಗಳನ್ನು ಎತ್ತಿ ಹಿಡಿದು ಕಣ್ಣತ್ತ ಒಯ್ಯುವ ಅಥವಾ ಮೂಸಿ ನೋಡುವ ಸಾಮರ್ಥ್ಯ ನನಗೆ ಖಂಡಿತ ಇಲ್ಲವೆಂದು ಒತ್ತಿ ಹೇಳುತ್ತೇನೆ. ಹಾರಿ ಹೋಗುತ್ತಿರುವ ಆ ಗರಿಗಳನ್ನು ದೂರದಿಂದ ನೋಡಿ ಆನಂದಿಸಲು, ಮುಂದೆ ಎಂದಾದರೊಮ್ಮೆ ಒಂದಾದರೂ ಲಘುಸ್ಪರ್ಶ ಮಾಡಿ ನನ್ನ ಕೆನ್ನೆ ನೆವರಿಸಿ ಹೋದೀತೇನೋ ಎಂಬ ಆಶೆ ಎಂದಿನಿಂದಲೂ ಇದ್ದಿದ್ದೆ.
ಕವಿತೆಯ ಕಾಲ, ಅಂದಿನ ವಾತಾವರಣ ನಮಗೆಲ್ಲಾ ಅಷ್ಟೋ-ಇಷ್ಟೊ ಗೊತ್ತಿದ್ದದ್ದೆ ಆದ್ದರಿಂದ ಅದರ ಬಗ್ಗೆ ಜಾಸ್ತಿ ಹೇಳುವದು ಅನವಶ್ಯಕ ಎಂದುಕೊಳ್ಳುತ್ತೇನೆ. ಇಂಗ್ಲಿಷಿನ ರೋಮ್ಯಾಂಟಿಕ ಕಾವ್ಯದ ಸಾರವನ್ನೆಲ್ಲಾ ಅರೆದು ಕುಡಿದ ಕವಿಮನಸ್ಸಿಗೆ ನಲ್ಲೆಯನ್ನು ಲಲ್ಲೆಗರೆಯುವ ಆಶೆ. ‘ನಿನ್ನ ಗಂಡ ಹೇಗಿದ್ದಾನೆ?’ ಎಂದರೆ, ಫೆಸಬುಕ್ಕಿನಲ್ಲಿ ‘ಗಂಡ ಎನ್ನುವವನು ಹೇಗಿರಬೇಕೋ, ಎಲ್ಲಿರಬೇಕೋ ಅಲ್ಲೆ ಬಿದ್ದು ಕೊಂಡಿದ್ದಾನೆ’ ಎನ್ನುವ ಉತ್ತರ ಕೊಡುವ ಕಾಲವಂತೂ ಆವಾಗ ಇರಲಿಲ್ಲ. ಅದೂ ಬಿಡಿ – ಉತ್ತರ ಕರ್ನಾಟಕದಲ್ಲಿ, ಮೈಸೂರಿನವರಂತೆ ಆಗ ಹೆಂಡತಿಗೆ ಮಲ್ಲಿಗೆ ತಂದು ಮುಡಿಸಿ ಮುದ್ದುಗರೆಯುವ ಗಂಡಸರೂ ಇರಲಿಲ್ಲ -ನೂರು ಕೆಲಸದ ನಡುವೆ ಅಂತಹದೊಂದು ಬಯಕೆ ಹೆಂಡತಿಗೆ ಬರಲಿಕ್ಕೆ ಸಾಧ್ಯವೂ ಇರಲಿಲ್ಲ. ಗಂಡ ದುಸುಮುಸು ಮಾಡದೆ ಮನೆಗೆ ಬಂದರೆ ಅದೇ ಪುಣ್ಯ. ‘ಏನೇ?, ‘ಏ ಇಕಿನ’,'ಜಲ್ದಿ ಬಾರ ಇಲ್ಲಿ’,'ಕೇಳಿಸ್ತೇನ ಹೇಳಿದ್ದು?’ ಇಂಥಹದೆ ಸಂಭೋಧನೆಗಳು ಹೆಂಡತಿಗೆ. ‘ನನ್ನ ರಾಣಿ’,'ಮೆಹಬೂಬಾ’,'ಸ್ವೀಟಿ’ ಅನ್ನುವ ಶಬ್ದ ಕೇಳಿದ ಹೆಂಡದ್ರ ಇರಲಿಕ್ಕಿಲ್ಲ. ಒಂದೇ ಸಂಡಾಸು, ಸ್ನಾನದ ಮನೆಯ ಕಾಲವದು. ಇಂಥಾದರಲ್ಲಿ ಗಂಡ ಎನ್ನುವವ ಹೆಂಡತಿಗೆ ತನ್ನ ಇರಾದೆ, ಇಚ್ಚೆ ತೋರಿಸುವದದೆಂತು? ಬಯಕೆ ಅಭಿವ್ಯಕ್ತಿಸುವ ದಾರಿ ಯಾವದು? ಈ ಹಿನ್ನೇಲೆಯಲ್ಲಿ ಕವಿತೆಯನ್ನು ಅವಲೋಕಿಸಬಹುದು.
ನಿನಗಾಗಿ ಓಡೋಡಿ ಬಂದೆ ನಾನು , ಕಾಣದೆ ಮರೆಯಾಗಿ ಹೋಗಲಿಲ್ಲವಾದರೂ ನೀನು, ನನಗೆ ಬೇಕಾದದ್ದನ್ನೆನೂ ಕೊಡದೆ ಬರೀ ಮುಗಳು ನಗೆಯಿಂದ ನನ್ನ ಸಾಗ ಹಾಕುವೆ ಯಾಕೆ? ಎನ್ನುವ ಆಪಾದನೆ ಹೊತ್ತೆ ಬಂದ ನಲ್ಲ. ಆರಾಮಾಗಿ ಸೋಫಾದ ಮೇಲೆ ಕೂತು ಸೋಪ ಒಪೇರಾ ನೋಡುತ್ತ, ಚೆಲುವ ನೋಟ ಹೀರುತ್ತ, ಮುಂಗರಳ ಮೀಟುತ್ತ ‘ಅಯ್ಯೋ, ಈ ದಿನ ಹೀಗಾಯಿತು ‘ಎಂದಾಗ ನಲ್ಲೆ ಕೂದಲಲ್ಲಿ ಕೈ ಆಡಿಸುತ್ತ ‘ಹೌದಾ, ನನ್ನ ರಾಜಾ- ಬಾ ಇವತ್ತು ಸ್ಟಾರಬಕ್ಸಗೆ ಹೋಗಿ ತಾಝೊ ಚಾಯಿ ಕುಡಿಯುತ್ತ ಮಾತನಾಡೋಣ’ ಎನ್ನುತ್ತಾಳಾ? ಇಲ್ಲಾ – ಅವಳೂ ಮಹಾರಸಿಕಳೆ ಆದರೂ ಕಟ್ಟುಪಾಡು ದಾಟಲಾರಳು. ಕೆಣಕದೆ ಇರಲಾರಳು.
‘ಆಯಿತು, ನನಗೇನೋ ಇಪ್ಪತ್ತೆಂಟು ಆದ್ಯತೆ-ಬಾಧ್ಯತೆಗಳು. ನಿನ್ನ ಚಾಲಾಕಿತನ ಎಲ್ಲಿ ಹೋಯಿತು? ದೊಡ್ದದಾಗಿ ಏನೋ ಕೊಟ್ಟು, ತೊಗೊಂಡು ಹೋಗುವವನಂತೆ ಕುಣ ಕುಣಕೊಂಡು ಬಂದಿ -ಮುಂದ ಹರಿಲಿಕ್ಕಾಗಲಾರದ ಮಣಕೊಂಡು ಕುಂತಿ. ಇದೇನು ಹೊಸಾದಲ್ಲ ಬಿಡು. ಇನ್ನೊಂದ ಐದು ನಿಮಿಷ ಕೂಡು -ಚಾ ಮಾಡಿ ಕೊಡ್ತಿನಿ, ಕುಡದು ಮುಂದಿನ ಕೆಲಸ ನೋಡು’ -ಎನ್ನುವಂಥ ಕಿಲಾಡಿ ಉತ್ತರದ ಹೆಣ್ಣು.
ಅಷ್ಟಕ್ಕೆ ಬಿಟ್ಟು ಬಿಡುವವನು ಅದೆಂಥ ನಲ್ಲ? ‘ಆತು ಬಿಡು, ಮಾತಿನಾಗಂತೂ ನೀ ಏನ ವ್ಯಕ್ತ ಮಾಡು ಹಂಗ ಕಾಣಸಂಗಿಲ್ಲ -ಆ ಧವಳ, ಕವಳ ಕಾಂತಿಯ, ಹೊಳೆ ಹೊಳೆವ ಕಣ್ಣ ಒಡತಿ ನೀನು, ಕಡೀಕ ಅಲ್ಲೇ ಆ ಕಣ್ಣಾಗರ ಕಳದ ಹೋಗು ಹಂಗ ಮಾಡು ಅಂದ್ರ ಅದಕ್ಕೂ ಕಲ್ಲ ಹಾಕು ಹಂಗ ಕಾಣಸ್ಲಿಖತ್ತದಲಾ’. ಎಲ್ಲಾ ದಿವಸದಂಗ ಇವತ್ತೂ ಚಾ ಕುಡದು, ಚುನಮುರಿ ತಿಂದು ಒಂಚೂರ ಟಿ,ವಿ, ನೋಡಿ ವ್ಯಾಳ್ಯಾ ಹಾಳಮಾಡಲಿಕ್ಕೆ ಒಲ್ಯಾಗ್ಯದ ಅಂಬುದು ನಿನಗ ಹೆಂಗ ತಿಳಿಸಬೇಕು?
ನಲ್ಲೆ ಏನೂ ಕಮ್ಮಿ ಇಲ್ಲಾ -ಇಂಥಾ ಮಾತಿಗೆ. ‘ಸಿಟ್ಟ್ಯಾಕೋ, ಸಿಡುಕ್ಯಾಕೋ ನನ ಜಾಣ?’ ಬರೀ ಇದ ಚಾಟೂಕ್ತಿ ಮಾಡ್ಕೋತ ಇದ್ರ ಮನಿ ಚಾಕರಿ ಮಾಡೋರ್ಯಾರು? ‘ಸ್ವಲ್ಪ ಆ ಸ್ಟೈಲನ್ಯಾಗ ಸಿಡುಕಿದಂತೆ ಮುಖ ಮಾಡುದ ನೋಡಿದ್ರ, ಕನ್ಯಾ ನೋಡ್ಲಿಕ್ಕೆ ಬಂದಾಗ ಗುಮ್ಮನ ಗುಸಕಿನಂಗ , ಒಣಾ ಗಾಂಭಿರ್ಯದಿಂದ ಕೂತದ್ದ ನೆನಪಾಗ್ತದ ನೋಡು’
ಏನ ಹೇಳಬೇಕೋ, ಆದ್ರೂ ಏನೋ ಒಂದು ಎಳೆ ಸಿಕ್ಕಂಗಾತು -ಇದೂ ನಡೀತದ ತೋಗೊ ನಗೆಚಾಟಿಕೆಗೆ ಅನಸ್ತದ ನಲ್ಲಗ. ‘ಎಷ್ಟ ಛೊಲೊ ಅರ್ಥ ಮಾಡ್ಕೊಂಡಿ ಅಲ್ಲೆ ನನ್ನ- ಹೂಂ ಅನಕೋತ ಮರೆ ಮಾಚಬಲ್ಲಿ – ಮುರಳಿಯ ಮರಸಿ ನಟಿಸಿ ನಗಿಸುವ ಸರಸಿ ಹಂಗ. ಹೂಂ,ಹೂಂ ಅನಕೋತ, ನಾಚಗೋತ ನನ್ನ ಮನವನ್ನೆಲ್ಲಾ ಆವರಿಸಲು ಬಲ್ಲಿ’
ಮಾತಿಗಿಗೊಂದು ತಿರುವು ಸಿಕ್ಕಂಗ ಆತು ಈಗ, ನಲ್ಲೆಗೀಗ ಮತ್ತಿಷ್ಟು ಹುರುಪು. ಇಷ್ಟೊತ್ತಿಂದು ಆಲತು-ಫಾಲತು ಮಾತಿತ್ತೇನೋ. ಈಗ ಮನಸ್ನ್ಯಾಗಿಂದು ಹೇಳ್ತಿನಿ ಕೇಳು. ನಿನ್ನ ಮಾತಂದ್ರ ರಾಗ ನನಗ. ನಿನ್ನ ಜೊತೆಗಿನ ಝೇಂಕಾರ ಒಂದಿದ್ರ ಸಾಕು ಸರಸ-ವಿರಸ ಎಲ್ಲಕ್ಕೂ ಸೈ ನಾನು, ನನ್ನೊಳಗ ನಿನ್ನ ನಶೆಯೋ, ನಿನ್ನ ನಶೆಯೊಳಗ ನಾನೋ? ಈ ಮತ್ತನ್ಯಾಗ ನಾ ಯಾವಾಗ್ಲೂ ಇರಲಿ ಬಿಡು.
ಆಹಾ -ಹುರಪಿಗೆದ್ದ ಹುಡಗಿ ಮುಂದ ಈ ಪ್ರಪಂಚದಾಗ ಬ್ಯಾರೆದೆಲ್ಲಾ ಸಪ್ಪೆ. ಆದರೂ ಇಲ್ಲಿಗೆ ಎಲ್ಲಾ ಮುಗಸಿದ್ರ ಏನ ಸಾಧಿಸಿದಂಗಾತು? ಇನ್ನೂ ಸ್ವಲ್ಪ ಜಗ್ಯಾಡಬೇಕು-ಕೆಣಕಬೇಕು -ಆವಾಗ್ಲೆನೆ ಅದರ ಮಜಾ. ‘ಅದೆಲ್ಲಾ ಸರಿಯೆ, ಹೂ ಎಷ್ಟೇ ಸುಂದರ ಆದ್ರೂ ಜೀವನ ಪೂರಾ ನಮ್ಮ ತೆಕ್ಕೆ ಒಳಗ ಇಟ್ಗೊಂಡು ಇರ್ಲಿಕ್ಕಾಂಗಿಲ್ಲ. ಒಂದೇ ಶೃತಿ ಆಗಲಿಕ್ಕೆ, ವೈವಿಧ್ಯಕ್ಕ ಮತ್ತೆನೋ, ತೃಪ್ತಿಯಾಗೋದು ಬೇಕಲ್ಲ ಜೀವನದಾಗ’ ನಲ್ಲನಿಗಿನ್ನೂ ಸ್ವಲ್ಪ ಬೇಕು -ಏನೋ ಒಂದು.
ಇಡೀ ಕಾವ್ಯದ ಧಾಟಿ , ಆ ಚೆಲ್ಲುತನದ ಜೀವಾಳ ನಲ್ಲೆಗೆ ಗೊತ್ತು. ಬರಿ ಗಾಳಿ ಬೀಸಿದಂತೆ ಹೋಗುವದಕ್ಕೂ, ಗಾಳಿಯನ್ನೆ ಜೀವಾಳವಾಗಿಸಿಕೊಳ್ಳುವದಕ್ಕೂ ವ್ಯತ್ಯಾಸವಿಲ್ಲವೆ? ಅಂಥಾ ಪರಮ ಮೂಲ, ಉತೃಷ್ಟ, ಉತ್ಕ್ರಾಂತಿ ಸಿಗುತಿರುವಾಗ ಬೇರೆಯದೆಲ್ಲಾ ಏನೂ ಹುರುಳಿಲ್ಲದ ಪೊಳ್ಳು. ನಲ್ಲನ ಬಣ್ಣದ ಥಳಕು ಬಳಕು ಮಾತಿಗಿಂತ ಆತನ ನಳನಳಿಸುವ ಜೀವನ ಪ್ರೀತಿ ಬೇಕು ನಲ್ಲೆಗೆ. ಈ ಮಾಂಗಲ್ಯಕ್ಕಿಂತ, ಮಿಲನಕ್ಕಿಂತ ಮಿಗಿಲಾದುದು ಏನಾದರು ಉಂಟೆ? ಪ್ರೇಮದ ಸ್ವರೂಪವೆಂದರೆ ಯಾವತ್ತಿಗೂ ಅಸ್ಪಸ್ಟವೆ, ಸಂಪೂರ್ಣ ಅರಿವಿಗೆ ನಿಲುಕದ್ದೆ -ಹಾಗೆಯೆ ಇರಬೇಕಾದದ್ದು ಕೂಡಾ.
ಹಿಗ್ಗು ಶಬ್ದವನ್ನು ಬೇಂದ್ರೆ ಅರಳಿಸಿದಂತೆ ಪ್ರಾಯಶ ಬೇರೆ ಯಾರೂ ಉಬ್ಬಿಸಿರಲಾರರು. ಒಂದೆರಡು ಉದಾಹರಣೆ ಕೊಡುವುದಾದರೆ “ಹಿಗ್ಗ ಬೀರಿ ಹಿಗ್ಗಲಿತ್ತು”, “ಹಿಗ್ಗು ಸುಖದುಃಖಗಳ ಸುಲಿದ ತಿಳಲು”. ಎಲ್ಲೆಯಿಲ್ಲದ ಜೀವನ ಶ್ರದ್ಧೆಯನ್ನು, ಜೀವಂತ ಪ್ರೀತಿಯನ್ನು ಎರಕ ಹೊಯ್ದಂತಿದೆ ಈ ಅಪ್ರತಿಮ ಕವಿತೆ.
3 comments:
ಬೇಂದ್ರೆಯವರ ಕವನಗಳು ಹಿಗ್ಗಿಸಿದಷ್ಟೂ ಹಿಗ್ಗುವಂತಹವು; ಹಿಗ್ಗು ಕೊಡುವಂತಹವು! ಲಲ್ಲೆವಾತಿನ ಒಳಗಿನ ಹೂರಣವನ್ನು ನಿಮ್ಮ ವ್ಯಾಖ್ಯಾನದಲ್ಲಿ---ಹೋಳಿಗೆಯ ಮೇಲೆ ತುಪ್ಪ, ಹಾಲು ಹಾಕಿದಂತೆ---ಮತ್ತಷ್ಟು ಅರ್ಥಪೂರ್ಣವಾಗಿಸಿ, ಆ ಕಾಲದ ಸನ್ನಿವೇಷದ ಹಿನ್ನೆಲೆಯನ್ನು ವಿವರಿಸುತ್ತ, ಓದುಗರಿಗೆ ರಸದೌತಣ ನೀಡಿದ್ದೀರಿ. ಕವನದ ರುಚಿಯ ಜೊತೆಗೆ ನಿಮ್ಮ ವ್ಯಾಖ್ಯಾನದ ಸವಿ ಸಂಗಮಿಸಿದೆ.
ಸುನಾಥ ಅವರೆ
ಧನ್ಯವಾದಗಳು - ನಿಮ್ಮ ಈ ಪ್ರೊತ್ಸಾಹ ಯಾವಾಗಲೂ ಹೀಗೆ ಇರಲಿ.
Thanks
ಯಾವುದೋ ಕಾರಣಕ್ಕೆ ಬೇಂದ್ರೆಯವರ ಈ ಕವಿತೆಯ ಸಾಹಿತ್ಯವನ್ನು ಹುಡುಕುತ್ತಿದ್ದಾಗ ನಿಮ್ಮ ಈ ಲೇಖನ ಸಿಕ್ಕಿತು. ಎಷ್ಟು ಚೆನ್ನಾಗಿ ಬರೆದಿದ್ದೀರಿ! ಓದಿ ಖುಷಿಯಾಯ್ತು. - ಎಂ ಆರ್ ದತ್ತಾತ್ರಿ
Post a Comment