Wednesday, July 2, 2014

ಎಮಿಲಿಯ ಒಂದೆರಡು ಕವಿತೆಗಳ ಭಾವಾನುವಾದ




ಅಮೆರಿಕದ ಎಲ್ಲ ಕಾಲಕ್ಕೂ ಸಲ್ಲುವವರಲ್ಲಿ ಒಬ್ಬಳಾದ ಕವಯತ್ರಿ ಎಂದರೆ ನಿಸ್ಸಂದೇಹವಾಗಿ ಎಮಿಲಿ ಡಿಕಿನ್‍ಸನ್(December 10, 1830 – May 15, 1886)
ಎಂದು ಹೇಳಬಹುದು. ವಿಕ್ಷಿಪ್ತತೆಗೆ ಹೆಸರಾದ ಎಮಿಲಿ ತನ್ನ ಮನೆಯಲ್ಲಿ ತಾನೆ ಕೈದಿಯಂತೆ, ಯಾರನ್ನೂ ನೋಡಲಿಚ್ಚಿಸದೆ ಗೌಪ್ಯವಾಗಿ ನೂರಾರು ಕವಿತೆಗಳನ್ನು ಹೆಣೆದವಳು.
ಎಮಿಲಿಯ ಒಂದೆರಡು ಕವಿತೆಗಳ ಭಾವಾನುವಾದದ ಚಿಕ್ಕ ಪ್ರಯತ್ನವಿದು.


ಗರಿಗೆದರುವ ಹಾರೈಕೆ
ಎಲ್ಲೆರೆದೆಯ ಬೆಚ್ಚನೆ ಗೂಡಲ್ಲಿ ತಂಗಿದ
ವಿಶ್ರಾಂತ ಗಿಳಿ – ನಂಬಿಕೆಯೆಂದರೆ.
ಅಂತ್ಯವಿಲ್ಲದ ನಿಶಬ್ಧ ಗೀತೆಯ ಗುನುಗು
ತೇಲಿಹಿವುದು ದಿಗ್ ದಿಗಂತದಲಿ.

ಬೆಚ್ಚನೆ ಭಾವ ನಮ್ಮೆದೆಯಲ್ಲಿ ಬಿಚ್ಚಿಟ್ಟ
ವಿಲ ವಿಲ ನಲುಗಿದಾಗಿಳಿಯ ದನಿ
ತೇಲಿಹುದು ಮಧುರಾತಿಮಧುರಾಗಿ
ನಾಚಿಗೆಟ್ಟ ಭಯಂಕರ ಬಿರುಗಾಳಿಯ ಮದಕೆ.

ಆ ಮಾರ್ದವತೆಯ ರುಣುರುಣಿತ ಕೇಳಿಹೆನು
ಕಾಂತಾರ ಗಿರಿ ಕಂದರ ಗುಹೆಗಳಲಿ
ನಿರ್ಮಾನುಷ ಸಾಗರದಾಳಾಂತ್ಯದಲಿ
ಬೇಕಿಲ್ಲ ಅದಕೆ ನನ್ನಿಂದ ತಟಗೂ ಗುಟುಕು.

“Hope is the thing with feathers” ನ ಭಾವಾನುವಾದ

ಜಯದಳತೆಗೋಲು
ಯಾವತ್ತಿಗೂ, ಸೋತವನು ಮಾತ್ರ
ಜಯದ ಸವಿಯಾಳ ಬಲ್ಲ
ಅಮೃತದ ದಿವ್ಯವರಿಯಲು
ಕಹಿರುಚಿಯ ಹಾಲಾಹಲದರಿವಿರಬೇಕು.

ಜಯದುಂಧುಬಿ ಮೊಳಗಿಸಿ
ಎಲ್ಲ ಸೂರೆಗೊಂಡವರಲ್ಲಬ್ಬಾನೊಬ್ಬನು
ಹೇಳಲಾರ ನೆಟ್ಟಗೆ
ವಿಜಯದ ನಿಜಾರ್ಥವ.

ಸಮರಾಂಗಣದಲಿ ಅರೇ ಜೀವವಾಗಿ
ಬಿದ್ದವನ ಕಿವಿಗಪ್ಪುವ
ರಣದುಂಧುಬಿಯ ಜಯಭೇರಿಯ
ಕರ್ಕಶ ಕೂಗೆ ಜಯದಳತೆಗೋಲು.

“Success is Counted Sweetest” ನ ಭಾವಾನುವಾದ

ನಿಸರ್ಗ
ನಿಸರ್ಗವೆಂದರೆ ರಮ್ಯತೆಯೇ-
ಎಳೆ ಮಧ್ಯಾಹ್ನ-ಬೆಟ್ಟದೊಂದು ತೊರೆ-
ಚಿಮ್ಮಿದ ಜಿಂಕೆ-ಕಾಂತಿಗೆಟ್ಟ ಸೂರ್ಯ-ಪಾತರಗಿತ್ತಿ?
ಇಲ್ಲ ಇಲ್ಲ – ನಿಸರ್ಗವೆಂದರೆ ಸ್ವರ್ಗ-
ನಿಸರ್ಗವೆಂದರೆ ನಾದಮಯ
ಕಾಜಾಣದ ಕುಹು-ಜಲಧಿತರಂಗ
ಮೇಘದಾರ್ಭಟ-ಚಿಮ್ಮುಂಡಿಯ ಕಲರವ?
ಇಲ್ಲ ಇಲ್ಲ ನಿಸರ್ಗವೆಂದರೆ ಸಾಂಗತ್ಯ-
ಅರಿವಿನಾನುಭೂತಿಗೆ ರಾಚಿದ್ದೆಲ್ಲವಲ್ಲವೆ
ಈ ಸರ್ಗಗಳ ಗುಚ್ಚಮಾತ್ರವೆ ನಿಸರ್ಗ
ಅದು ಶಬ್ದಗಳಲ್ಹಿಡಿಯಲಾಗದ ನಿಶ್ಯಬ್ದ.
ನಮ್ಮ ಜಾಣ್ಮೆಯಘವ ಮುರಿಯಲು
ನಿರ್ಮಿತವದರ ಸುಲಭ ಸುಂದರಜಾಲ
ಹುಲು ವರ್ಣನೆಗೆ ನಿಲುಕದ್ದೆಲ್ಲ ನಿಸರ್ಗವೆ.

“Nature is what we see” ನ ಭಾವಾನುವಾದ

ಅವಿನಾಶಾತ್ಮ
ಆತ್ಮದ ಅವಿನಾಶದ ದರ್ಶನ ಆಗುವದೆಂದರೆ
ಸಟಕ್ಕನೆ ಹೊಳೆದ ಮಿಂಚಿನ ಮಡಿಲಿನಲ್ಲಿ
ಕ್ಷಣಿಕವಾಗಿ ಗೋಚರಿಸುವ ಪ್ರಕೃತಿಯ ಹೊಳವಿನಂತೆ
ಒಂದೋ ಅಯಾಚಿತವಾಗಿರಬೇಕು ಇಲ್ಲವೆ
ಅಮಂಗಳಕರವಾಗಿರಬೇಕು.

“The souls distinct connection with immortality” ನ ಭಾವಾನುವಾದ

ಪರ್ವತ ರಾಜ
ಪರ್ವತ ರಾಜ ಪವಡಿಸಿದ್ದಾನೆ
ತನ್ನ ಉನ್ನತ ಆರಾಮಾಸನದಲ್ಲಿ
ಸುತ್ತೆಲ್ಲ ದೃಷ್ಟಿ ಪಸರಿಸಿ
ದಶದಿಕ್ಕುಗಳನ್ನೆಲ್ಲಾ ವ್ಯಾಪಿಸಿ.
ಋತುಗಳಾಡುತ್ತವೆ ಅವನ ಕಾಲ ಬುಡದಲ್ಲಿ
ಮಕ್ಕಳಾಡುವಂತೆ ಅಜ್ಜನ ಸುತ್ತ.
ಮಹಾ ಪಿತಾಮಹನವನು
ದಿನ ಬೆಳಗುಗಳವನ ಮೊಮ್ಮಕ್ಕಳು.

“The mountain sat upon the plain” ನ ಭಾವಾನುವಾದ

ಸೋತ ಸಾವು
ಸಾವು ಆತ್ಮ-ದೇಹವನ್ನುದ್ದೇಶಿಸಿ
ಕಳಚಿಕೋ ಎನ್ನುತ್ತದೆ-
ನಾ ಕಾಣಬೇಕಿನ್ನೊಂದು ಎನ್ನುತಾದಾತ್ಮ
ನಿನಗಿಲ್ಲ ನಂಬಿಕೆಯಂದಾದರೆ
ಅಡವಿಟ್ಟಕೋ ಈ ದೇಹವನ್ನು
ಎನ್ನುತ್ತ ಹಿಂದುರುಗಿ ನೋಡದೆ
ನಡೆದು ಬಿಡುತ್ತದೆ.

“death is the dialogue between” ನ ಭಾವಾನುವಾದ

ಎಮಿಲಿ ಡಿಕಿನ್‍ಸನ್ 

2 comments:

sunaath said...

ಅನಿಲರೆ,
ಎಮಿಲಿ ಡಿಕಿನ್‍ಸನ್ ಇವರ ಆರು ಕವನಗಳ ಭಾವಾನುವಾದವನ್ನು ಕೊಡುವ ಮೂಲಕ, ಈ ಕವಯಿತ್ರಿಯ ಪರಿಚಯ ಮಾಡಿಕೊಟ್ಟಿದ್ದೀರಿ. ಇವರ ಜೀವನದರ್ಶನನದ ಒಂದು ಹೊಳವು ಈ ಕವನಗಳಲ್ಲಿ ಇದೆ. ಧನ್ಯವಾದಗಳು.

Anil Talikoti said...

ಸುನಾಥ ಅವರೆ
ಧನ್ಯವಾದಗಳು.