Friday, October 24, 2014

ಮಹಾತ್ಮರಿಗೊಂದು ಮನವಿ

‘ಮಹಾತ್ಮರಿಗೊಂದು ಮನವಿ’ – ಅನಿಲ ತಾಳಿಕೋಟಿ ಬರೀತಾರೆ

October 4, 2014
- ಅನಿಲ ತಾಳಿಕೋಟಿ
ಕೃಷ್ಣ, ಏಸು, ಬಸವರ ಕೊನೆಯನ್ನೆ ನೋಡಿ. ಅದರೊಲ್ಲೊಂದು , ಆ ಕಾಲಕ್ಕೆ ತಕ್ಕುದಾದ, ಅವನತಿಯ, ಗತಿಗೇಡಿತನದ ಲಕ್ಷಣವಿದೆ. ಕೃಷ್ಣ ಈ ಮೂವರಲ್ಲಿ ಹಿಂದಿನವನು, ಏನೆಲ್ಲವನ್ನು ಸಾಧಿಸಿದವನು, ಗೀತೆಯಂತಹ ಉತ್ಕೃಷ್ಟ ಜೀವನ ವಿಧಾನದ ಕೈಪಿಡಿ ಅರುಹಿದವನು. ಕೊನೆಗೆ ಬೇಸತ್ತು ಈ ಒಳಜಗಳ ಬಗೆಹರಿಸಲು ನನ್ನಿಂದಾಗದು ಎಂದು, ಈ ಯಾದವಿ ಕಲಹಕ್ಕೆ ಕೊನೆಯಿಲ್ಲವೆಂದು ಕೈ ಚೆಲ್ಲಿ ಬೇಡನಿಂದ ಹತನಾಗಿ ಬೇಡಪ್ಪಾ ಇಲ್ಲಿಯವರ ಸಹವಾಸ ಎಂದು ಅವತಾರ ಸಮಾಪ್ತಿಯಾಗಿಸಿಕೊಂಡವನು.
ಏಸು ವ್ಯವಸ್ಠೆ ಬದಲಿಸಲು ಏನೆಲ್ಲಾ ಪ್ರಯತ್ನಪಟ್ಟವನು. ಜನರಿಗೆ ಕರುಣೆ,ತಾಳ್ಮೆ,ಪ್ರೀತಿ ಕಲಿಸಲು ಹೆಣಗಾಡಿ ದಣಿದವನು. ಠಕ್ಕ ದೊರೆಗಳ ಜೊತೆಗಾರರಾದ ವಂಚಕ ಪೂಜಾರಿಗಳ ನಿಲವು ಖಂಡಿಸಿದವನು. ಜನರಿಗೆ ವಿಶಾಲತೆಯ ಬೋಧನೆ ಮಾಡುತ್ತ ತನ್ನ ಶಿಷ್ಯನೆ ತನ್ನನ್ನು ಬಂಧಿಸಲು ಕಾರಣನಾಗುತ್ತಾನೆ ಎಂಬ ಅರಿವಿದ್ದವನು, ತಾನು ಬದಲಿಸಬೇಕಾದ ಜನರೇ ಕಳ್ಳನೊಬ್ಬನಿಗೆ ಕ್ಷಮೆ ತೋರಿ ತನ್ನನ್ನು ಕೊಲ್ಲು ಕಂಭಕ್ಕೆ ಬಿಗಿಯುತ್ತಾರೆಂದು ಅರಿತವನು. ತನ್ನನ್ನು ಸಮರ್ಥಿಸಿಕೊಳ್ಳಲು ಅವಕಾಶವಿದ್ದಾಗಲೂ ಜನರ ಮೌಢ್ಯಕ್ಕೆ ಮರುಕನಾಗಿ ಸಾವಿಗೀಡಾದವನು.

ಬಸವನದಂತೂ ಅತ್ಯಂತ ಕಷ್ಟದ ಜನ ಮನ ಪರಿವರ್ತನೆಯ ಕಾರ್ಯ. ಢಾಂಬಿಕತೆಯನ್ನು ನಿಷ್ಟುರವಾಗಿ ತಿರಸ್ಕರಿಸುತ್ತ, ಅಮೂರ್ತತೆಯನ್ನು ಸಾರಾಸಗಟಾಗಿ ನಿರಾಕರಿಸುತ್ತ ಮೊದಲು ಮಾನವನಾಗು, ಸಹಜೀವಿಯನ್ನು ಗೌರವದಿಂದ ಕಾಣು ಎನ್ನುವ ಪ್ರಜ್ಞೆ ಬಿತ್ತಲು ಹೆಣಗಿ ಬಿಜ್ಜಳನ ದ್ವೇಷ ಕಟ್ಟಿಕೊಂಡವನು. ತನ್ನೆಲ್ಲ ಬೋಧನೆಯ ಒಂದಂಶವನ್ನಾದರೂ ಜನರಲ್ಲಿ ಕಾಣಲು, ಜಾತಿ ಅಂತರವನ್ನು ಕೀಳಿ ಹಾಕಲು ಸಾಧ್ಯವಾಗದಕ್ಕಾಗಿ ಪರಿತಪಿಸಿದವನು. ಕಲ್ಯಾಣ ಬಿಟ್ಟು, ಶರಣರ ಆಹುತಿ ನೋಡಿ ಮರುಗಿದವನು, ಕೂಡಲಕ್ಕೆ ಬಂದು ಏಕಾಂಗಿಯಾಗಿ ನೊಂದು ಸಂಗಮವಾದವನು.
ಇಷ್ಟೆಲ್ಲಾ ಗೊತ್ತಿದ್ದು ನೀನು ಇತ್ತೀಚಿಗೆ ಬಂದವನು. ಜೀವನದುದ್ದಕ್ಕೂ ಅಹಿಂಸೆ ಅರಗಿಸಿಕೊಂಡು ಎಲ್ಲರ ನೋವನ್ನು ನುಂಗಲುದ್ಯುಕ್ತನಾದ ನೀನಗೆ ಸಿಕ್ಕಿದ್ದಾದರೂ ಏನು? ಊಟಕ್ಕಿಂತ ಉಪವಾಸ ಜಾಸ್ತಿ ಕಂಡೆ. ಮನುಜರ ಮೊದಲಿಕೆ ನೋಡಿದೆ, ಕೊನೆಗೊಂದು ಗುಂಡೇಟು ತಿಂದೆ. ಯಾರಿಗೋಸ್ಕರ, ಯಾವುದಕ್ಕಾಗಿ ಇಷ್ಟೆಲ್ಲಾ ಹೋರಾಡಿದೇಯೋ, ಕೆಲವೆ ವರುಷಗಳಲ್ಲಿ ಅದೇ ಜನರಿಂದ ನಿನ್ನೆಲ್ಲ ಮೌಲ್ಯಗಳ ವ್ಯಾಪಾರೀಕರಣ ಕಾಣಲಾರೆಯಾ? ಒಳ್ಳೆಯವರಿಗೆ ಆಗಲೂ ಕಾಲ ಒಳ್ಳೆಯದಾಗಿರಲಿಲ್ಲ, ಇಗಲೂ ಒಳ್ಳೆಯದಾಗಿಲ್ಲ. ಇನ್ನೂ ಇತ್ತೀಚಿನವರನ್ನು ನೋಡೋಣವೆಂದರೆ ಕಣ್ಣು ಕಿಸಿದರೂ ಯಾರೂ ಕಾಣುತ್ತಿಲ್ಲ.
ಮಹಾತ್ಮರೆ ಮತ್ತೆ ಮತ್ತೆ ಬರಬೇಡಿ ಇತ್ತ , ಎಲ್ಲ ಮರೆತು ತಮ್ಮ ಸ್ವಾರ್ಥದ ಕೂಪಗಳಲ್ಲಿ ಬೇಯುತ್ತಿರುವವರತ್ತ. ಮದ್ದು-ಗುಂಡು, ಬಾಂಬಗಳ ಬಿತ್ತಿ ಕಾಯುತ್ತಿದ್ದೇವೆ ನಾವೆಲ್ಲ ಇಲ್ಲಿ -ನಾಳೆಗಳ ಮುಗಿಸಲು ಸಂಚು ಹಾಕುತ್ತ.

1 comment:

sunaath said...

ಹಹ್ಹಹ್ಹಾ! ಮಹಾತ್ಮರಿಗೆ ಇದು ನಿಜಕ್ಕೂ ಒಳ್ಳೆಯ ಉಪದೇಶ. ಆದರೆ ಆ ದಡ್ಡರು ಈ ಉಪದೇಶವನ್ನು ಕೇಳುತ್ತಾರೆಯೊ?