’ಇವ ಇಂದಿನ ಅಜಮೀಳ’ – ಅನಿಲ್ ತಾಳಿಕೋಟೆ ಬರೀತಾರೆ

- ಅನಿಲ ತಾಳಿಕೋಟಿ
ನರಜನ್ಮ ಮುಗಿಯುವ ಮುನ್ನ ಒಮ್ಮೆ ಪಾಪಿ ಆಜಮೀಳ ‘ನಾರಾಯಣ’ ಎಂದು ಕಣ್ಣು ಮುಚ್ಚಿದಾಗ
ಮಿಂಚಿನಂತೆ ವಿಷ್ಣುವಿನ ಯಂತ್ರದೂತನೊಬ್ಬ ಹಾಜರಾದ. ಅದಕ್ಕೂ ಮೊದಲೇ ಅಲ್ಲಿ
ಪ್ರತ್ಯಕ್ಷನಾಗಿದ್ದ ಯಮನ ಉಕ್ಕಾಳೊಂದನ್ನು ಕಂಡೊಡನೆ ‘ಅಲಲಲಾ ತುಂಬಾ ದಿವಸವಾಯಿತಲ್ಲಯ್ಯ,
ಇಂಥ ಅವಘಡಗಳಾಗದೆ, ಲೆಟ್ ಮೀ ಮೇಕ್ ಶ್ಯೂರ್’ ಎನ್ನುತ್ತ ಆಜಮೀಳನ ಯುನಿಕ ಐಡಿ ಚೆಕ್
ಮಾಡಿದ. ಆತನ ಮಾತು ಕೇಳಿ ,ಡೆತ್ ರಿಕಾರ್ಡಿನ ಡಾಟಾಬೇಸಗಳಲ್ಲಿ ಆಗಾಗ ಆಗುತ್ತಿದ್ದ
ಮಿಸ್-ಮ್ಯಾಚಗಳನ್ನು ತಪ್ಪಿಸಲು ಭಾರತೀಯ ತಂತ್ರಾಂಶಿಗರಿಗೆ ಹೊರಗುತ್ತಿಗೆ ಮಾಡಿದ್ದ
ಅಪ್ಲಿಕೇಶನಲ್ಲಿ ಮತ್ತೊಮ್ಮೆ ತನ್ನ ರೆಕೊರ್ಡ ಪರೀಕ್ಷಿಸಿದ ಯಮನ ಉಕ್ಕಾಳು ‘ಯೆಪ್
ಪರಪೆಕ್ಟ ಮ್ಯಾಚ್ -ನನ್ನ ದತ್ತಸಂಚಯದಲ್ಲೂ ಇದೆ ‘ ಎನ್ನುತ್ತ ವಿಷ್ಣುವಿನ ಯಂತ್ರದೂತನತ್ತ
ಪ್ರಶ್ನಾರ್ಥಕ ದೃಷ್ಟಿ ಬೀರಿದ.‘ನೋಡಯ್ಯಾ, ಲಾಸ್ಟ ಅಪಡೇಟ್ ಟೈಂ ಕಾಲಂನ್ನ -ಅದರ ಪ್ರಕಾರ ಈ ಕೇಸು ನಮಗೆ ಫ್ಲಾಗ್ ಮಾಡಲಾಗಿದೆ. ಐ ವಿಲ್ ಟೇಕ್ ಕೇರ್’ ಎಂದ ಯಂತ್ರದೂತ.
‘ಅದು ಹೇಗಯ್ಯಾ ಸಾಧ್ಯ? ನಮ್ಮ ಡಾಟಾಬೇಸ ಯಾದಿಯಲ್ಲಿ ಸಾವಿರ ಸಾವಿರ ಟ್ರಾನ್ಸಾಕ್ಶನಗಳು ಬಿದ್ದಿವೆ ಇ ಪಾರ್ಟಿಗೆ. ಒಂದೇ, ಎರಡೇ ಇತನ ದುಷ್ಕರ್ಮಗಳ ಪಟ್ಟಿ -ನೋಡಿಲ್ಲಿ’ ಎನ್ನುತ್ತ ಸ್ಕ್ರೀನ ದೊಡ್ಡದಾಗಿಸಿ ತೋರಿಸಿದ ಉಕ್ಕಾಳು.
ಹೌದು ಆತ ಹೇಳುತ್ತಿರುವದು ನಿಜ. ಸಾವಿರ ಸಾವಿರ ದುಷ್ಕರ್ಮದ ಸಾಲುಗಳು. ಓವರ್ ಆಲ್ ರಿಪೊರ್ಟದತ್ತ ನೋಡಿದ. ಮೊದಲಿನ ಇಪ್ಪತ್ತು ವರುಷ ಸತ್ಕರ್ಮದ ರಿಕಾರ್ಡಗಳನ್ನು ಮೀರಿಸಿ ಕೇಕೆ ಹಾಕುತ್ತಿರುವ ಮುಂದಿನ ೬೦ ವರುಷಗಳ ಬಾರ ಗ್ರಾಫ. ಆಕಾಶದಷ್ಟು ಎತ್ತರಕ್ಕೆರಿದ ಅವನ ಕೆಟ್ಟ ಕಾರ್ಯಗಳು. ಹೈಲೈಟ್ ಐಟಂಗಳ ಮೇಲೆ ಮಾತ್ರ ಕಣ್ಣಾಡಿಸಿದ ಯಂತ್ರದೂತ. ಕೊಲೆ,ಸುಲಿಗೆ,ರೇಪು,ಭೂ ಹಗರಣ, ವಂಚನೆ,ಸುಳ್ಳು,ಅಲ್ಲಲ್ಲಿ ಆಗಾಗ ಜೈಲು ವಾಸ,ಬೇಲು ಅಬ್ಬಬ್ಬಾ, ಮದರ್ ಬೋರ್ಡ್ ಸರ್ಕಿಟು ಸುಟ್ಟು ಕರಕಲಾಗುವಷ್ಟು ಚಾರ್ಜ ಷೀಟಿನ ಸಾಲು ಸಾಲುಗಳು. ಏನೋ ಎಡವಟ್ಟಾಗಿದೆ. ಮತ್ತೊಮ್ಮೆ ತನ್ನ ಬಿ.ಐ. ಟೂಲನತ್ತ ನೋಡಿದ. ಸ್ಪಸ್ಟವಾಗಿ ಕಾರಣ ನಮೂದಿಸಲಾಗಿದೆ. ಆತ ಕೊನೆಯಲ್ಲಿ ಕೂಗಿದ ಅರ್ತ ‘ನಾರಾಯಣ’ ದಿಂದ ಕೇಸು ತಮ್ಮ ಡಾಟಾಬೇಸಗೆ ಬಂದಿದೆ. ಒಮ್ಮೆ ಬಂತೆಂದರೆ ಮುಗಿಯಿತು. ಸಿನಿಯರ ಡಿ.ಬಿ.ಎ.ನ ಸ್ಟಾಂಡಿಗ್ ಆರ್ಡರು – ಪಾಲಿಸಲೇಬೇಕು. ಏನೇ ಡಿಸ್ಕಷನ ಮಾಡುವದಿದ್ದರೂ ಕೇಸ ರಿಪೋರ್ಟ ಮಾಡಿಯೇ ತೀರಬೇಕಾದ ಅಗತ್ಯ. ಸಧ್ಯಕ್ಕಂತೂ ತನ್ನ ಕರ್ತವ್ಯ ತಾನು ಮಾಡಲೇಬೇಕು. ನಿಷ್ಟುರವಾಗುತ್ತ ನುಡಿದ ಉಕ್ಕಾಳಿಗೆ.
‘ಸಿ, ಹಿಯರ್ -ಐ ಸಿಂಪಥೈಸ ವಿತ್ ಯು, ಆದರೆ ಡಾಟಾ ಡಾಟಾನೆ, ಏನೂ ಮಾಡಲಾಗದು. ಇವನನ್ನು ನಾನು ಡಿಜಿಟೈಸ್ ಮಾಡಿ ಟ್ರಾನ್ಸಪೋರ್ಟ ಮಾಡಲೇಬೇಕು’.
‘ಏನಂತೆ ಕಾರಣ?’ ತನ್ನ ಪರಿಧಿ ಮೀರಿದ ಪ್ರಶ್ನೆಯೆನಲ್ಲಾ ಹಾಗೆ ಕೇಳುವದು ಎಂಬ ಅರಿವಿದ್ದ ಉಕ್ಕಾಳು ಕೇಳಿದ.
‘ಕಾರಣ, ಅತೀ ಸುಲಭ ಹಾಗೂ ಸೂಚ್ಯ, ಆತ ಕೊನೆ ಘಳಿಗೆಯಲ್ಲಿ ದೇವ ಸ್ಮರಣೆ ಮಾಡಿ ‘ನಾರಾಯಣ’ ಎಂದಿರುವದು.’
‘ಅಲ್ಲಯ್ಯಾ, ಈ ಯುಗದಲ್ಲಿ ಮುಂಚಿನಂತೆ ವರುಷಗಟ್ಟಳೆ ತಪಸ್ಸು ಮಾಡಬೇಕಿಲ್ಲ ಎಂದು ಗೊತ್ತು. ಇದು ಸ್ತುತಿಗೆ ದೇವನೊಲಿವ ಕಾಲವೆಂತಲೂ ಗೊತ್ತು. ಅದಾರೂ ಸಾವಿರ, ಸಾವಿರ ಹಗರಣ ಮಾಡಿ ಸಿಕ್ಕಿ ಬಿದ್ದು, ನನಗಾಗದವರಿಂದ ಮಾತ್ರ ಸಿಕ್ಕಿ ಬಿದ್ದಿದೆಂದು ವಾದಿಸಿ, ಬೇಲು ಪಡೆದು , ಬೇಲಿ ಜಿಗಿದು ಹೋಗುವವರ ಕಥೆಗಿಂತ ಕೀಳಾಯಿತಲ್ಲಯ್ಯ ಇದು. ಆತ ಕೊನೆ ಪಕ್ಷ ಭಕ್ತಿಯಿಂದ, ತಲ್ಲೀನತೆಯಿಂದ ‘ನಾರಾಯಣ’ ಎಂದಿದ್ದರೂ ಓಕೆ ಅಂದುಕೊಳ್ಳಬಹುದಿತ್ತು, ಆದರೆ, ಈ ಪಾಪಿ ಕೂಗಿದ್ದು ನಿನ್ನ ಧಣಿಯನ್ನಲ್ಲವಯ್ಯಾ- ಆತ ಕೂಗಿದ್ದು ತನ್ನ ಮಗನನ್ನು – ಅದ್ಯಾವ ಗುಟ್ಟು ಇನ್ನೂ ಬಚ್ಚಿಡುವದಿತ್ತೋ ಏನೋ? ಇದ್ಯಾವ ಸೀಮೆಯ ನ್ಯಾಯ?’ ಸಿಟ್ಟಿಗೇಳುತ್ತ ನುಡಿದ ಉಕ್ಕಾಳು.
‘ಅಯ್ಯೋ, ನಿನಗೊತ್ತಿಲ್ಲವೆ? ದಿನಾ ಬದಲಾಗುತ್ತವೆ ನಮ್ಮ ರೂಲುಗಳು. ಅದಕ್ಕೊಂದು ದೊಡ್ಡ ಡಿಪಾರ್ಟಮೆಂಟೆ ಇದೆ. ಬೆಳಗ್ಗೆಯಿಂದ , ಸಂಜೆವರೆಗೆ ನಮ್ಮ ಪ್ರಾಜೆಕ್ಟ್ ಮ್ಯಾನೇಜರಗಳು, ಡೈರೆಕ್ಟರಗಳು, ವಿ,ಪಿಗಳು ಮೀಟಿಂಗ ಮಾಡುವದೇಕೆಂದುಕೊಂಡೆ? ಕ್ಷಣಕ್ಷಣ ಬದಲಾಗುವ ವ್ಯವಸ್ಥೆ, ವ್ಯಾಲ್ಯುಗಳನ್ನು ತಾಳೆ ಹಾಕಿ, ಹೊಸ ಹೊಸ ಅಲ್ಗಾರಿತಮ್ ಹುಟ್ಟು ಹಾಕಿ -ಇಂಪ್ಲಿಮೆಂಟ, ರಿಲಿಸ ಮಾಡಿಸಿ, ಪ್ರೊಡಕ್ಷನ ಅಪಡೇಟ ಮಾಡುವದಕ್ಕಾಗಿಯೇ ಅಲ್ಲವೆ? ಅದೇ ಅವರ ಮುಂಗಾಣ್ಕೆಯ ವಿವರಣೆ ಅಲ್ಲವೆ? ಸುಮ್ಮನೆ ನನ್ನ ನ್ಯಾನೊ ಸೆಕೆಂಡಗಳನ್ನು ವೇಷ್ಟ ಮಾಡಬೇಡಯ್ಯಾ. ಒಮ್ಮೆ ಪ್ರೊಡಕ್ಷನ ಡಾಟಾಬೇಸ ಅಪಡೇಟ ಆಯಿತೆಂದರೆ ಮುಗಿಯಿತು ನಮ್ಮಂತ ಕಾಲಾಳುಗಳು ಪ್ರಶ್ನಿಸುವಂತಿಲ್ಲ. ಮೇ ಬಿ, ಈ ಕಾಲದಲ್ಲಿ ಒಂದೇ ಒಂದು ಸಾರಿಯೂ ನಿಜ ಭಕ್ತಿಯಿಂದ ನಾಲ್ಕು ಅಕ್ಷರದ ದೈವ ನಾಮ ನುಡಿಯುವವರಿಲ್ಲವೇನೋ – ಅದೆಕ್ಕೆಂದೆ ಇ ರಿವಾರ್ಡಿರಬೇಕು.’ ನಾಲ್ಕು ಬಾರಿ ಟ್ರೇನಿಂಗಿಗೆ ಹೋಗಿ ಬಂದು , ಸರ್ಟಿಪೈ ಆಗಿದ್ದ ಯಂತ್ರದೂತ ನಿಖರತೆಯಿಂದ ನುಡಿದ.

ದ್ವಂದ್ವವಿನ್ನು ಕಮ್ಮಿಯಾಗದ ಉಕ್ಕಾಳು ನುಡಿದ ‘ಆದು, ಸರಿ, ಒಪ್ಪೋಣ, ಆದರೆ ಈ ಮನುಷ್ಯ ಹೇಳಿದ ನಾಲ್ಕಕ್ಷರ ದೇವನದಲ್ಲ, ತನ್ನ ಲಫಂಗ ಮಗನದ್ದು, ಅದೇ ನನಗೆ ಬಗೆಹರಿಯದ್ದಾಗಿದೆ.’
ಕೈಯಲ್ಲಿ ಕಟ್ಟಿಕೊಂಡಿದ್ದ ಜಿಯೊಎಸನತ್ತ ನೋಡಿದ ಯಂತ್ರದೂತ. ಇವತ್ತೇನೂ ಜಾಸ್ತಿ ವರ್ಕಲೋಡ ಇದ್ದಂತಿಲ್ಲ, ಜ್ಞಾನವೆಲ್ಲ ಮಾಹಿತಿಯಲ್ಲಿ ಸೋರಿ ಹೋಗಿ, ರೋಗರುಜಿನಗಳು ಕಮ್ಮಿಯಾಗಿ, ಮೂರುದಿನ ಮುಂಚೆಯೇ ಬಿರುಗಾಳಿ, ಭೂಕಂಪ ಬರುವದೆಲ್ಲಾ ಗೊತ್ತಾಗಿ ಆಕಸ್ಮಿಕ ಕೇಸುಗಳು ಕಮ್ಮಿಯಾಗುತ್ತಿರಬಹುದೋ ಏನೋ? ಕೊನೆ ಪಕ್ಷ ಸಾಯುವ ಮೊದಲಾದರೂ ಹರಿಸ್ಮರಣೆ ಮಾಡಿದರೆ ಉಪಯೋಗ ಉಂಟೆಂದು ತೋರಿಸಲು ಇದು ಹೊಸ ನಿಯಮವೋ ಏನೋ. ಇದನ್ನೆಲ್ಲ ತಾನು ಈ ಉಕ್ಕಾಳಿನೊಂದಿಗೆ ವಿಚಾರವಿನಿಮಯ ಮಾಡಿಕೊಳ್ಳಬೇಕಾ? ಹ್ಞೂಂ, ಮೊನ್ನೆ ಟ್ರೇನಿಂಗನಲ್ಲಿ ಕೊರೆದಿರಲಿಲ್ಲವೆ ಸಿಂಬಯಾಸಿಸ್ ಎಂದು,
‘ಹೌದಯ್ಯಾ, ಅದನ್ನು ನಿರ್ಧಾರಿಸುವವರು ನೀನು ನಾನಲ್ಲ. ನಮಗಿಂತ ಜಾಸ್ತಿ ಸಂಬಳ-ಗಿಂಬಳ ಗಿಟ್ಟಿಸುವವರು, ಬ್ಯುಸಿನೆಸ ಲಾಜಿಕ್ಕೆಲ್ಲ ಅರಗಿಸಿಕೊಂಡು ಪಗಡದಸ್ತಾಗಿ ಈ ತಂತ್ರಾಂಶ ಬರೆದಿದ್ದಾರೆ. ನಮ್ಮ ಕೆಲಸ ಏನಿದ್ದರೂ ಡಾಟಾ ವೇರಿಪೈ ಮಾಡಿ, ಪಕ್ಕಾ ಮಾಡಿಕೊಂಡು ಬಾಡಿ ಡಿಜಿಟೈ ಮಾಡಿ ಟ್ರಾನ್ಸಪೋರ್ಟ ಮಾಡುವ ಥ್ಯಾಂಕ್ಸಲೆಸ ಕೆಲಸ ಅಷ್ಟೆ.’
‘ಸಂಬಳ’ದ ವಿಷಯ ಬಂದಾಕ್ಷಣ ಇಬ್ಬರೂ ಕಾಲಸೆಂಟರನ ಕೆಲಸಗಾರರಂತೆ ಒಂದು ಕ್ಷಣ ಗದ್ಗಧೀತರಾದರು. ಎಷ್ಟು ಸರಿಯಾಗಿ ಕೆಲಸ ಮಾಡಿದರೂ ತಾವೆಂದಿಗೂ ಆರ್ಕಿಟೆಕ್ಟು, ಡಿಸೈನರು ಆಗದೇ ಬರೀ ಈ ಮಾಮೂಲಿ ಹೆಣ ವಿಲೇವಾರಿ ಮಾಡುವವರಾಗಿ ಉಳಿಯುವದಕ್ಕೆ. ಇಬ್ಬರೂ ಯಂತ್ರಗಳಾಗಿದ್ದರಿಂದ ಸರಿ ಹೋಯಿತು ಇಲ್ಲದಿದ್ದರೆ ಅಲ್ಲೇ ಮುಷ್ಕರ ಒಂದು ಆರಂಭವಾಗಿ ಸೃಷ್ಟಿಯಲ್ಲ ಅಲ್ಲೊಲಕಲ್ಲೊಲವಾಗಿರುತ್ತಿತ್ತು.
‘ಈಗ ನಮಗೆ ಬಗೆಹರಿಯದಿರುವ ಪ್ರಶ್ನೆ ಎಂದರೆ ಆತ ಪ್ರಾಯಶ್ಚಿತ್ತದಿಂದ, ಆಳದ ಅರಿವಿನಿಂದ ನಾರಾಯಣ ಎಂದಿದ್ದೋ, ಅಥವಾ ವೇದನೆ, ನೋವಿನಿಂದ, ಮತ್ತೇನೋ ಮುಚ್ಚಿ ಹಾಕಲು ನಾರಾಯಣನೆಂಬ ಮಗನನ್ನು ಕೂಗಿದ್ದೋ ಅಂಬುವದಲ್ಲವೆ?’ ಸ್ವಲ್ಪ ಸುಧಾರಿಸಿಕೊಂಡು ಕೇಳಿದ ಉಕ್ಕಾಳು.
‘ಹೇಳಿದೆನಲ್ಲಯ್ಯಾ, ನಮ್ಮಲ್ಲಿ ಪ್ರಾಯಶ್ಚಿತ್ತಕ್ಕೆ ಆದ್ಯತೆ, ನಿಮ್ಮಲ್ಲಿ ಶಿಕ್ಷೆಗೆ. ನಮಗೂ -ನಿಮಗೂ ಇರುವ ವ್ಯತ್ಯಾಸ ಇಷ್ಟೇಯೇ’
‘ಹ್ಞೂಂ ನಿಮ್ಮ ಸ್ಯಾಲರಿ, ಆಪ್ಶನ್ಸ್, ವೆಕೇಷನ್ ಪ್ಯಾಕೇಜ ಮುಂದೆ ನಮ್ಮದೇನಯ್ಯಾ, ಕಂಪೇರ ಕೂಡಾ ಮಾಡಲಾಗುವದಿಲ್ಲ ಬಿಡು, ಆದರೆ ನಿನಗೊಂದು ವಿಷಯ ಗೊತ್ತೋ? ಆ ಸತ್ಯವಾನನ ಕೇಸಿನಲ್ಲಿ ಡಾಟಾ ಎಂಟ್ರಿಯಲ್ಲಿ ತಪ್ಪು ಕಂಡು ಹಿಡಿದು ತೋರಿಸಿದ ಆ ಅನಾಲಿಸ್ಟಗೆ ಸಿಕ್ಕ ಬೋನಸ ಎಷ್ಟೆಂದು? ಅದಾದ ಮೇಲೆ ಒಮ್ಮೆಯೂ ಕೆಲಸ ಮಾಡಬೇಕಾದ ಜರೂರತ್ತೆ ಬರಲಿಲ್ಲವಂತೆ ಅವನಿಗೆ. ಈಗ ಯಮನಿಗೆ ಮೆಂಟೋರ ಆಗಿ ಆರಾಂಗಿದ್ದಾನೆ ಮಜ ಮಾಡ್ಕೊಂಡು. ನನದೊಂದು ಚಿಕ್ಕ ರಿಕ್ವೆಷ್ಟು- ಒಂದು ಸಣ್ಣ ಪ್ರಯೋಗ ಮಾಡೋಣವೇನಯ್ಯಾ?’ ಸಾವಕಾಶವಾಗಿ ನುಡಿದ ಉಕ್ಕಾಳು.
‘ಏನಪ್ಪಾ ಅದು, ಪ್ರಯೋಗ ?’ ಸ್ವಲ್ಪ ಮೆತ್ತಗಾಗಿ, ಆಸಕ್ತನಾಗಿ ಕೇಳಿದ ಯಂತ್ರದೂತ.
‘ಅಂಥ ಭಾರಿ ಏನಲ್ಲ. ಇವನಿಗೆ ಒಂದೆರಡು ನ್ಯಾನೊ ಸೆಕೆಂಡುಗಳವರೆಗೆ ಮರಳಿ ಜೀವ ಬರಿಸೋಣ, ನೋಡೋಣ ಆಗ ಆತ ಕೂಗಿದ್ದು ಯಾರನ್ನು, ಏತಕ್ಕೆಂದು?’
‘ಅಯ್ಯೋ, ನಮ್ಮ ನ್ಯಾನೊ, ನಿಮ್ಮ ನ್ಯಾನೊ ಬೇರೆ ಬೇರೆ, ಅವನಿಗಂತೂ ಸೆಕೆಂಡುಗಳಸ್ಟು ಈ ಕಾಲದ ಫ್ರೇಮನಲ್ಲಿ ಗೊತ್ತಲ್ಲವೆ?’ ಬೋನಸ ಬಗ್ಗೆ ಯೋಚನೆ ಮಾಡುತ್ತ ನುಡಿದ ಯಂತ್ರದೂತ.
‘ಗೊತ್ತು, ಗೊತ್ತು, ನಿನ್ನದೇನು ರಿಸ್ಕ ಬೇಡಾ, ನನ್ನ ಕೋಟಾದಿಂದ ಮಾಡ್ತಿನೇಳು’ ಎನ್ನುತ್ತ ಯಾವದೋ ಡಿಕ್ರಿಪ್ಟ ಕೋಡ ಉದುರಿದ ಉಕ್ಕಾಳು.
‘ಅಯ್ಯಯ್ಯೋ, ಬೇಡವೋ, ಕಾಲ ಇಗಿರುವದಕ್ಕಿಂತ ಹೆಚ್ಚು ಕೆಟ್ಟು ಹೋಗುತ್ತದೋ’ ಎಂಬ ಅಳುಕಿನ ಯಂತ್ರದೂತನ ಮಾತು ಮುಗಿಯುವ ಮುಂಚೆಯೇ, ಸತ್ತಂತವನನ್ನು ಬಡೇದೆಬ್ಬಿಸಿದಂತೆ ಆಜಾಮೀಳ ಸಟಕ್ಕನೆ ಎಚ್ಚೆತ್ತು ಜೋರಾಗಿ -
‘ನಾರಾಯಣ, ನಾರಾಯಣ, ಹಾ, ಬಾ ಇಲ್ಲಿ ನಾರಾಯಣ’ ಎಂದ.
ಇಲ್ಲಿಯವರೆಗೂ ಅಳುತ್ತಾ, ತೀರ ದುಃಖಿತನಾಗಿದ್ದವನಂತಿದ್ದ ಮಗ ನಾರಾಯಣ ಗರ ಬಡಿದವನಂತೆ ತಂದೆಯ ಕೋಣೆಯತ್ತ ನೋಡಿದ,ಇದೀಗ ತಾನೆ ಎಲ್ಲರಿಗೂ ಅಪಡೇಟ ಮೆಸೇಜ ಕಳುಹಿಸುತ್ತಿದ್ದವನು ಗಾಭರಿಯಾಗಿ ಇದೇನಪ್ಪಾ ಸತ್ತ ಈತ ತಿರುಗಿ ಬಂದನಲ್ಲಾ ಎಂದು ದಿಗ್ಭ್ರಾಂತಿಯಿಂದ ನೋಡುತ್ತ ನಿಂತ.
‘ನಾರಾಯಣ, ನಾರಾಯಣ ಬಾ, ಬಾ, ನನ್ನ ಆಸ್ತಿಯೆಲ್ಲಿ ಕೊಂಚ ಯಾರಿಗೋ ಹಂಚ ಬೇಕಾಗಿದೆ ಬಾ ಬೇಗ, ಬಾ ಬೇಗ, ಬೇ..’ ಮತ್ತೆ ಕೂಗಿದ ಆಜಮೀಳ.
ಸಟಕ್ಕನೆ ಕಂಭದ ಮರೆಗೆ ಹೋಗಿ ನಿಂತ ನಾರಾಯಣ, ಮೈಯೆಲ್ಲಾ ಕಣ್ಣು, ಕಿವಿಯಾಗಿಸುತ್ತ. ಅಪ್ಪನ ಕೋಣೆಯತ್ತ ಅವನ ಧ್ಯಾನವೆಲ್ಲ. ಅವನ ಮನಸ್ಸು ತೀವ್ರವಾಗಿ ಯೋಚಿಸುತ್ತಿದೆ -ಇನ್ನೂ ಎಷ್ಟು ಹೊತ್ತು? ಮುಂದೆ ಹುಟ್ಟಬಹುದಾದ ತನ್ನ ಮಕ್ಕಳ ಹೆಸರು ನಿರ್ಧರಿಸಿಬಿಟ್ಟ ನಾರಾಯಣ ಹುಳ್ಳನೆ ನಗೆಯೊಂದಿಗೆ, ‘ಇಟ್ ಹಾಸ ಟು ಬಿ ಎ ಸಪ್ತ ಬೀಜ ಮಂತ್ರ ಫಾರ ಮ್ಯಾಕ್ಷಿಮಮ ಬೆನೆಫಿಟ’ ಎಂದುಕೊಳ್ಳುತ್ತ ಮನದಲ್ಲೆ ನಿರ್ಧರಿಸಿದ – ‘ಓಂ, ನಮೋ, ನಾರಾಯಣ’!
ವಿ.ಸೂ.
ಆಜಮೀಳ ಭಾಗವತ ಪುರಾಣದೊಂದು ಪಾತ್ರ -ಹೆಚ್ಚಿನ ಮಾಹಿತಿಗೆ ನೋಡಿ – http://en.wikipedia.org/wiki/Ajamila
ಉಕ್ಕಾಳು – Droid
ಯಂತ್ರದೂತ -Robot