Sunday, March 18, 2012

ಸ್ಕಿ ಎಂಬ ತತ್ವಜ್ಞಾನ

ಕೆಂಡಸಂಪಿಗೆಯಲ್ಲಿ ಪ್ರಕಟಿತ
ಗುರುವಾರ, 15 ಮಾರ್ಚ್ 2012 (03:27 IST)
ಸ್ಕಿ ಎಂಬ ತತ್ವಜ್ಞಾನ


ಸ್ಕಿ ಎಂಬ ತತ್ವಜ್ಞಾನ:ಅನಿಲ್ ತಾಳಿಕೋಟಿ ಬರಹ    
ಅನಿಲ ತಾಳಿಕೋಟಿ
ಗುರುವಾರ, 15 ಮಾರ್ಚ್ 2012 (03:27 IST)
(ಫೋಟೋಗಳು:ಲೇಖಕರವು)
ನಿನ್ನೆ ವಿಂಟರಗ್ರೀನಗೆ (ವರ್ಜಿನಿಯಾ) ಸ್ಕಿಯಿಂಗ್ ಹೋಗಿದ್ದೆ. ನಾನೇನು ಅಂತಹ ಸ್ಕೀ ಪರಿಣಿತನಲ್ಲ- ಹೋಗಿದ್ದು ಎರಡೋ, ಮೂರೋ ಸಾರಿ ಅಷ್ಟೇ. ಅದಕ್ಕೆ ಕ್ಲಿವಲ್ಯಾಂಡನಲ್ಲಿರುವ ಅಕ್ಕನಿಗೆ ಫೋನಾಯಿಸಿದೆ. ಕ್ಲಿವಲ್ಯಾಂಡನಲ್ಲಿ ವರ್ಷಕ್ಕೆ ಕನಿಷ್ಠ ನಾಲ್ಕು ತಿಂಗಳು ಹಿಮ ಬೀಳುವದರಿಂದ ಅವಳ ಪರಿಣಿತ ಅಭಿಪ್ರಾಯ ಕೇಳಬೇಕು ಎನಿಸಿತು.
"ಏನೂ ಪರವಾಗಿಲ್ಲ, ಧೈರ್ಯವಾಗಿ ಹೋಗಿ ಬಾ" ಎಂದಳು.
"ನೀನು ಎಷ್ಟು ಸಾರಿ ಹೋಗಿರುವೆ?" ಎಂದರೆ 'ಶೂನ್ಯ' ಎಂದಳು. ಮತ್ತೇಕೆ ನನಗೆ ಧೈರ್ಯವಾಗಿ ಎಂದು ಹೇಳುತ್ತಿದ್ದಿಯ ಎಂದೆ.
"ಏಕೆಂದರೆ after 40 everything is downhill ಹೆದರಿಕೊಳ್ಳಬೇಕಾದ್ದು ಏನೂ ಇಲ್ಲ" ಅವಳ ಉತ್ತರ. ಜೋರಾಗಿ ನಕ್ಕು ಬಿಟ್ಟೆ. ನನ್ನ ನಗು ಕೇಳಿ ಮಡದಿ ಬೇರೆ ರೂಮನಿಂದ ಫೋನ್ ಎತ್ತಿ ತಾನು ಮಾತನಾರಂಭಿಸಿದಳು.
"ಈ ಸಾರಿ ನಾನು ಸ್ಕೀ ಮಾಡಬೇಕು ಅಂತಿದ್ದೀನಿ"
ಅದೇ ಉತ್ತರ "ಏನೂ ಪರವಾಗಿಲ್ಲ, ಧೈರ್ಯವಾಗಿ ಹೋಗಿ ಬಾ"
"ಪ್ರತಿ ಸಾರಿ ಬರಿ ಕ್ಯಾಮೆರಾ(ವೊ)ಮೆನ್ ಆಗಿ ಬೇಜಾರಾಗಿದೆ, ಅಷ್ಟೇನು ಹೆದರಬೇಕಾದಿಲ್ಲ ಅಲ್ಲವೇ?"
"ಇಲ್ಲಾ, ಇಲ್ಲೊಬ್ಬರು ನಮ್ಮ ಫ್ರೆಂಡ್, ಕೆಲಬ್ ಅಂತ, ಅಮೆರಿಕನ್. ಮೊನ್ನೆ ಮೊನ್ನೆ ಅಷ್ಟೇ ಭಾರತೀಯಳನ್ನು ಮದುವೆಯಾಗಿದ್ದಾನೆ. ಅವನೋ ಸ್ಕೀ ರಕ್ತಗತವಾಗಿ ಪಡೆದವ, ಇವಳು ಚನ್ನೈ ಅವಳು- ಹಿಮ ಬಿಡು, ಮನೇಲೆ ಬರ್ಫ್ ಕೂಡ ಕೈಯಲ್ಲಿ ಹಿಡಿದಿಲ್ಲ ಒಂದು ದಿನವು. ಅಂಥವಳನ್ನು ಸ್ಕೀಯಿಂಗ್ ಗೆ ಕರೆದೊಯ್ದಿದ್ದ. ಅವನು ಒಂದು ಎರಡು ದಿನ ನಿಮ್ಮ ತರಹ ಹೋಗುವವನಲ್ಲ- ಪೂರಾ ಒಂದು ವಾರ, ಎಲ್ಲ ಸ್ಲೋಪಗಳಲ್ಲೂ ತೇಲುವವನು. ಮೊದಲನೇ ದಿನ, ಬೇಡ ಬೇಡವೆಂದರು ಹೆಂಡತಿಗೆ ಸ್ಕಿ ಶೂ ಹಾಕಿಸಿ, ಹುರಿದುಂಬಿಸಿ ಸರಳ ಸ್ಲೋಪಿನಲ್ಲಿ ತಳ್ಳಿದ. ಪಾಪ, ಕಣ್ಣು ಮುಚ್ಚಿ ಜಾರಿದ್ದೆ ಜಾರಿದ್ದು ಅವಳು, ಕಣ್ಣು ಬಿಟ್ಟಿದ್ದು ಆಸ್ಪತ್ರೆಯಲ್ಲಿ. ಪಕ್ಕದಲ್ಲಿ ತಲೆತಗ್ಗಿಸಿ ಕೂತ ಗಂಡ, ಎದುರಲ್ಲಿ ಡಾಕ್ಟರ. ಪಾಪ ಎನಿಸಿತೋ ಏನೋ ಅದಕ್ಕೆ ಗಂಡನಿಗೆ 'ಅಯ್ಯೋ, ಸ್ಕೀಯಿಂಗನ ಮೊದಲನೇ ದಿನವೇ ಹೀಗಾಗಬೇಕೆ? ಕೊನೆಯ ದಿನವಾದರೂ ಆಗಿದ್ದರೆ ನಡೀತಿತ್ತು" ಎಂದಳು. ಅದಕ್ಕೆ ಡಾಕ್ಟರ 'ಇದೆ ಕೊನೆ ದಿನ ಅಮ್ಮ ನಿನ್ನ ಸ್ಕೀಯಿಂಗಗೆ' ಎಂದನಂತೆ.
"ದುಡ್ಡು ಕೊಟ್ಟಾಗಿದೆ, ಸ್ನೇಹಿತರಿಗೆ ಒಪ್ಪಿಕೊಂಡಾಗಿದೆ. ಹೋಗಲೇಬೇಕು, ಅಲ್ಲವೇ" ಇವಳ ಉತ್ತರ.
"ಆರಾಮಾಗಿ ಹೋಗಿ ಬಾ, ಅನಿಲನ ಮೇಲೆ ಒಂದು ಕಣ್ಣಿಡು, ಜಾರಿ ಬಿಳುವದನ್ನು ವಿಡಿಯೋ ಮಾಡಿಕೊಳ್ಳಲು ಮರಿಯಬೇಡಾ" ಅಕ್ಕನ ಹಿತವಾದ.
"ಲಾಸ್ಟ್ ಟೈಮ್ ಅದಾಗಿದೆ, ಆವಾಗಲೇ ಇವರು 'ನಗುವೆಯಾ ಹೆಣ್ಣೇ ನಾನು ಜಾರಿ ಬೀಳುವಾಗ... ಹಾಡಿ ಆಗಿದೆ, ಅದಕ್ಕೆ ಈ ಸಾರಿ, ನನಗೂ ಹುರಿದುಂಬಿಸುತ್ತಿದ್ದಾರೆ", ಪ್ರಾಯಶ 'ಅರಿತೆಯಾ ನಡೆಯುವ ದಾರಿ ಈಗ, ಸಹಜವು ನಡೆವನು ಜಾರುವದು, ಸಹಜವು ಜಾರೋನು ಉರುಳುವದು' ಅಂತ ಹಾಡು ಮುಂದುವರೆಸೋ ಇರಾದೆ ಇದೆ ಅನಿಸುತ್ತದೆ.' ಇವಳ ಉತ್ತರ.
"ನೀವು ಹಿಮಪ್ರದೇಶದಲ್ಲಿ ಇದ್ದಿರಲ್ಲ, ನೀವ್ಯಾಕೆ ಹೋಗುವದಿಲ್ಲ ಸ್ಕಿಯಿಂಗಗೆ?" ನನ್ನ ಪ್ರಶ್ನೆ.
"ಅಯ್ಯೋ, ಅಡಿಗೆ ಮನೆಗೂ, ಬಚ್ಚಲ ಮನೆಗೂ ನಡುವೆ snow ಇಲ್ಲ ನಮ್ಮ ಮನೇಲಿ. ಇಲ್ಲಿ ಬಿದ್ದಿರುವ ಕೆಲಸವೇ ಬೇಕಾದಷ್ಟಿದೆ, ಇನ್ನು ಅಲ್ಲಿ ಹೋಗಿ ಯಾಕೆ ಬೀಳಬೇಕು, ಅಂತೀನಿ" ಸಿದ್ದ ಉತ್ತರ ಅವಳದು.
ಬೆಳ್ಳಂಬೆಳಗ್ಗೆ ನಾಲ್ಕುವರೆಗೆ ಮನೆ ಬಿಟ್ಟದ್ದಾಯಿತು. ಸುಮಾರು ೪೫ ಜನ ನಮ್ಮ ಗುಂಪಿನಲ್ಲಿ, ಚಿಳ್ಳೆ ಪಿಳ್ಳೆಗಳೇ ಜಾಸ್ತಿ, ಹೋಗುತ್ತಿರುವದು ಅವರಿಗಾಗಿಯೇ ಅಲ್ಲವೇ. ನಮ್ಮೂರು ಕ್ಯಾರಿ, ಉತ್ತರ ಕ್ಯಾರೋಲಿನಾದಿಂದ- ವಿಂಟರಗ್ರೀನ ನಾಲ್ಕು ಘಂಟೆಗಳ ದಾರಿ. ಬಸ್ಸು ನಮ್ಮದೇ ಆದ್ದರಿಂದ ತಿನ್ನುತ್ತ, ಕುಡಿಯುತ್ತ, ಹರಟುತ್ತ ಹೊರಟಿತ್ತು ನಮ್ಮ ಗುಂಪು. ನಮ್ಮ ಬಸ್ಸಿನಲ್ಲಿ ಇಬ್ಬರು ಸ್ಕೀ  ಟ್ರೈನರ್ಸ್ ಇದ್ದಿದ್ದರಿಂದ ಹಾಗು ಕೆಲವೊಬ್ಬರು ಮೊದಲನೇ ಸಾರಿ ಸ್ಕೀ ಹೋಗುತ್ತಿರುವದರಿಂದ ಮಾತುಕತೆ ಎಲ್ಲ ಸ್ಕೀ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಸ್ಕೀ ಟ್ರೈನೆರ್ ವಾಲ್ಟ ಐವತ್ತರ ಆಸುಪಾಸಿನ ಕಟ್ಟುಮಸ್ತಾದ ವ್ಯಕ್ತಿ -ನೋಡಲು ಒಳ್ಳೆ ಹಳ್ಳಿ ಗಮಾರನಂತಹ cowboy ವೇಷ, ಪೋಗದೊಸ್ತಾದ ಗಡ್ಡ, ಮೀಸೆ ಬಿಟ್ಟಿದ್ದ. ಎಳೆದೆಳೆದು ಹಾಕುವ southern accent ನಲ್ಲವನ ಮಾತು ಹಾಸ್ಯಮಯವಾಗಿದ್ದವು. ಮಾಲಗಳಲ್ಲಿ ಸಾಂತಾ ಪಾತ್ರಕ್ಕೆ ಹೇಳಿಮಾಡಿಸಿದ ಮುಖ.
"ನಿಮ್ಮನೆಲ್ಲ ನೋಡಿದರೆ ಇಂಜನಿಯರು, ಡಾಕ್ಟರಗಳು ಇದ್ದಂತಿದ್ದಿರ, ಆದ್ದರಿಂದ ನಿಮಗೆಲ್ಲರಿಗೂ ಗುರುತ್ವ, ಭೌತಶಾಸ್ತ್ರ, ಮೈಯಲ್ಲಿರುವ ಮೂಳೆಗಳ ಬಗ್ಗೆ ನಾನು ಏನೂ ಹೇಳುವ ಅವಶ್ಯಕತೆ ಇಲ್ಲಾ ಅಲ್ಲವೇ?" ಎಂದು ಹೆದರಿಸುತ್ತಿದ್ದ. ನಡು ನಡುವೆ ತಾನು ಎಷ್ಟು ಜನರ ಮೊಳೆ ಮುರಿದುದನ್ನು ನೋಡಿರುವದರ ಬಗ್ಗೆ ನಗೆಯಾಡುತಿದ್ದ.
"ವಾಲ್ಟ, ನೀನೇನು ನಮ್ಮನ್ನು ಹೆದರಿಸಬೇಕಾಗಿಲ್ಲ, ನಾವೆಲ್ಲಾ ಸಂಪೂರ್ಣವಾಗಿ ಪ್ರಿಪೇರ ಆಗಿ ಬಂದಿದ್ದೇವೆ, ಅದರ ಬಗ್ಗೆ ಹೇಳಲಾ?" ನಾನೆಂದೆ.
"ಓಹೋ, ಶ್ಯೂರ್, ಗೋ ಅಹೆಡ" ಎಂದ ವಾಲ್ಟ.
"ನೋಡು ಇವನು ಪ್ರದೀಪ, ಮೊನ್ನೆ ಕಿರಾಣಿ ಅಂಗಡಿಗೆ ಹೋದಾಗ ಅರ್ಧ ಘಂಟೆ ಫ್ರೀಜರನಲ್ಲಿ ದುಡ್ಡುಕೊಟ್ಟು ಕುಳಿತು ಬಂದಿದ್ದಾನೆ. ಅಷ್ಟೇ ಅಲ್ಲಾ, ಆಮೇಲೆ ಐಸ ಹಾಕಿ ಸ್ಟೇಡಿಯಮಗೆ ಹೋಗಿ, ಸ್ಕಿ ಬೂಟಿನಲ್ಲಿ, ಹೆಗಲಿಗೊಂದು ೨೦ ಪೌಂಡಿನ backpack ಹಾಕಿಕೊಂಡು, ಕೈಯಲ್ಲಿ ಎರಡು ಕೋಲು ಹಿಡಿದುಕೊಂಡು ಹಾಕಿ ರಿಂಕನಲ್ಲಿ ಓಡಾಡಿ, ಫೈನ ತೆತ್ತು ಬಂದಿದ್ದಾನೆ. ಇದೆಲ್ಲ ಮಾಡಿರುವದು ಸ್ಕಿಯಿಂಗ ಪ್ರಾಕ್ಟಿಸಗಾಗಿ"
ವಾಲ್ಟ "ಹೌದಾ, ಪರವಾಗಿಲ್ಲವೆ.."
ನಾನು "ಅಷ್ಟೇ ಅಲ್ಲಾ, ಇವನು ಜಯ, ಸ್ಕಿ ಬೂಟ ಮೇಲೆ ಪ್ರಾತ್ಯಕ್ಷಿಕ ಪ್ರಯೋಗ ಮಾಡಲು ತನ್ನ ಶೂಗಳೊಳಗೆ ನಾಲ್ಕು ಕಲ್ಲು ಸುತ್ತಿಗೊಂಡು ಮೇಲೆ ಕೆಳಗೆ ಮನೆಯ ಪಾವಟಿಗೆಗಳ ಮೇಲೆ ಹತ್ತು ಸಾರಿ ಹತ್ತಿ ಇಳಿದಿದ್ದಾನೆ. ಅವನ ಹೆಂಡತಿ ರಾಧಾ ಹೊಸ ನೀರು ನುಸುಳದಂತಹ ಗ್ಲೋವ್ಸ್ ತೊಗೊಂಡು ಅವನ್ನು ಅರ್ಧ ಘಂಟೆ ಫ್ರೀಜರನಲ್ಲಿಟ್ಟು, ಆಮೇಲೆ ನೀರಲ್ಲಿ ಹದಿನೈದು ನಿಮಿಷ ಮಡಗಿ ಕೈಗೇರಿಸಿಕೊಂಡಿದ್ದಾಳೆ, ಅದಾದ ಮೇಲೆ ಎರಡು ಥರ್ಮಲ, ಎರಡು ಒಳಅಂಗಿ, ಎರಡು ಹೊರ ಅಂಗಿ ಮೂರೇ ನಿಮಿಷದಲ್ಲಿ ಹಾಕಿ ತೆಗೆದು ಪ್ರಾಕ್ಟಿಸ ಮಾಡಿದ್ದಾಳೆ".
ವಾಲ್ಟ "ಹಾಕುವದು, ತೆಗೆಯುವದು ಏಕೆ ಪ್ರಾಕ್ಟಿಸ ಮಾಡಿದಳು?"
ನಾನು "ಮನುಷ್ಯ ಎಂದ ಮೇಲೆ ಬಾಥರೂಮ ಬ್ರೇಕ ಯೋಚಿಸಬೇಕಲ್ಲವೇ?"
ವಾಲ್ಟ "ಇದೆಲ್ಲ ತುಂಬಾ ಸಕ್ಕತ್ತಾಗಿವೆ, ಆದರೆ ನೀವು ಕ್ಯೂನಲ್ಲಿ ನಿಲ್ಲುವದು ಪ್ರಾಕ್ಟಿಸ ಮಾಡಿಲ್ಲವೇ?" ನಮ್ಮನ್ನು ಸಿಕ್ಕಿಸಲೆಂದೇ, ಕಾಲೆಳೆಯಲೆಂದೇ ಕೇಳಿದ.
ಜಯ "ದೊರೆಯೇ ,ನಾವೆಲ್ಲರೂ ಭಾರತೀಯರು, ಲೈನಿನಲ್ಲಿ ನಿಲ್ಲುವದು, ಮುಂದೆ ನುಗ್ಗುವದು ನಮ್ಮ DNA ಯಲ್ಲಿ ಎರಕ ಹೊಯ್ದಾಗಿದೆ. ನಾವೆಲ್ಲಾ ಗ್ರೀನಕಾರ್ಡ್ ಗೆ, ಸಿಟಿಜ್ಹನಶಿಪ್ ಗೆ ನಿಂತ ಅನುಭವದ ಮುಂದೆ- ಪ್ರಪಂಚದ ಯಾವದೇ ಲೈನು ಚಿಕ್ಕದಾಗೆ ಕಾಣುತ್ತದೆ"
ವಾಲ್ಟ "ಅದಕ್ಕೆ ಇರಬೇಕು, thanksgiving ವ್ಯಾಪಾರದಲ್ಲಿ  ಬೆಳಗ್ಗೆ ನೀವೆಲ್ಲಾ ಡಿಲಗಾಗಿ ನಿಲ್ಲುವದು ನಾನು ನೋಡಿದ್ದೇನೆ"
ಅತುಲ "ನಮ್ಮ bollywood ನಟನೊಬ್ಬ, ಅಮಿತಾಭ ಅಂತ ಅವನ ಹೆಸರು, ಕೇಳಿರಬೇಕು ನೀನು, ಅವನ ಒಂದು ಡಯಾಲಾಗ್ ತುಣುಕು ಹೀಗಿದೆ "ನಾನು ಯಾವತ್ತೂ ಲೈನ ಹಿಂದೆ ನಿಲ್ಲುವದಿಲ್ಲ, ಎಲ್ಲಿ ನಿಲ್ಲುತ್ತೇನೋ ಅಲ್ಲಿಂದಲೇ ಲೈನು ಆರಂಭವಾಗುತ್ತದೆ"
ವಾಲ್ಟ "ವಾಹ, ವಾಹ ಚೆನ್ನಾಗಿದೆ. ನೀವು ಆಹಾರದ ಬಗ್ಗೆ ಯೋಚಿಸಿದ್ದಿರಾ, ಅಲ್ಲಿ ಒಂದು ಬರ್ಗರ ಕೂಡಾ ೯ ಡಾಲರ್ ಇರುತ್ತದೆ".
ನಾನು "ನಮ್ಮ ಅತುಲಭಾಯಿ, ಮರಾಟಿಯವನು, ಒಂದೇ ಚಪಾತಿಯಲ್ಲಿ ನಾಲ್ಕು ಜನರಿಗೆ ಬಡಿಸಬಲ್ಲ. ನಾವು ಬೇಕೆಂದರೆ ಬಕಾಸುರರು ಆಗಬಹುದು, ಇಲ್ಲದಿದ್ದರೆ ಭಿಕ್ಷುಕರಂತೆಯು ತಿನ್ನಬಹುದು. ನಮ್ಮ ದೊಡ್ಡಸ್ತಿಕೆ ಎಂದರೆ ಎಲ್ಲೇ ಇದ್ದರು ನಾವು ಹೊಂದಿಕೊಂಡು ಹೋಗಬಲ್ಲೆವು, ಬದುಕಬಲ್ಲೆವು".
ವಾಲ್ಟ "ನನಗೆ ಗೊತ್ತಿತ್ತು ನಿಮ್ಮಿಂದ ಕಲಿಯುವದು ಬೇಕಾದಷ್ಟಿದೆ ಎಂದು. ನಿಮಗೆ ಗೊತ್ತಲ್ಲವೇ, ನಮ್ಮ ದೇಹದಲ್ಲಿ ೨೦೬ ಮೊಳೆಗಳಿವೆ, ನನಗೆ ತಿಳಿದ ಮಟ್ಟಿಗೆ ಅದರಲ್ಲಿ ಎರಡು ಮಾತ್ರ ಎಂದಿಗೂ ಸ್ಕಿಯಿಂಗ್ ನಲ್ಲಿ ಮುರಿದಿಲ್ಲ, ಯಾವ ಎರಡವು?" ಒಂದಾದರು ಪ್ರಶ್ನೆಗೆ ಈ ಪ್ರತಿಭಾವಂತರಿಂದ ಸೋಲು ಒಪ್ಪಿಕೊಳ್ಳುವಂತೆ ಮಾಡುವ, ಎನ್ನುವ ಪರಿಯಲ್ಲಿ ಕೇಳಿದ.
ನನ್ನ ಏಳು ವರುಷದ ಮಗನಿಂದ ಬಂತು ಮಿಂಚಿನಂತೆ ಉತ್ತರ "ಮಧ್ಯ ಕಿವಿಯ ಎರಡು ಮೊಳೆಗಳು" .
"ಓಹೋ ಓಹೋ, ನಿಮ್ಮ ಮಕ್ಕಳಂತೂ ನಿಮ್ಮನ್ನು ಮೀರಿಸುತ್ತವೆ, ಈ ದೇಶದ ಭವಿಷ್ಯಕ್ಕೆ ಮಾರಕವಿಲ್ಲ- ಮಕ್ಕಳಿಗೂ ಸ್ವಲ್ಪ ಪ್ರಶ್ನೆ ಕೇಳೋಣ" ನಗುತ್ತ ನುಡಿದ ವಾಲ್ಟ.
"ಮಕ್ಕಳೇ, ಸ್ಕಿಯಿಂಗಗೆ affect ಆಗುವ ಪ್ರಮುಖ physical force ಗಳ್ಯಾವವು?"
"gravity" ಹೇಳಿದ ಕ್ರಿಷ, ಮುಂದೆ ತೋಚಲಿಲ್ಲ ಮಕ್ಕಳಿಗೆ.
"strong force ಅಂದ್ರೆ ಸ್ಕಿಯ ಬೈಂಡಿಂಗಗಳು ತೆಗೆಯಲಾರದಷ್ಟು ಗಟ್ಟಿಯಾಗಿ ಬಿಡುವದು, weak force ಎಂದರೆ ಹೊರಳುವಾಗ ಕೈಕೊಡುವ ಕಾಲುಗಳು. ಇನ್ನು electromagnetism ಅಂದ್ರೆ ನಮ್ಮ ಈ ಬಸ್ಸಿನ ಬ್ಯಾಟರಿ ಸ್ಕಿ ಗುಡ್ಡದ ಮೇಲೆ dead ಆಗಿ ಹೋಗುವದು, ಆಗ ನಿಮ್ಮ ತಂದೆ ತಾಯಿ ಒಂದು ರಾತ್ರಿಗೆ ೨೦೦ ಡಾಲರ್ ತೆತ್ತು ಲಾಜಲ್ಲಿ ಇರಬೇಕಾಗುವದು" ಹೇಳಿದ ವಾಲ್ಟ. ನಗೆಯ ಬುಗ್ಗೆ ಎದ್ದಿತು. ಮತ್ತೆ ಅಭಾದಿತವಾಗಿ ಮುಂದುವರೆಸಿದ ವಾಲ್ಟ ಮಕ್ಕಳಿಗೆ "ನಿಮಗೆ newtonನ ಮೊದಲನೇ ನಿಯಮ ಗೊತ್ತಲ್ಲ? inertia ಅಂದರೆ ಸ್ಕಿ ಮಾಡುವವನ ಪ್ರತಿರೋಧ ಅವನು ಹೋಗುತ್ತಿರುವ ದಾರಿಗೆ ಹಾಗೂ ವೇಗಕ್ಕೆ. ಹಾಗೆಯೇ ಎರಡು ಬೇರೆ ಬೇರೆ ತೂಕದ ವ್ಯಕ್ತಿಗಳು ಮೇಲಿಂದ ಕೆಳಕ್ಕೆ ಬಿದ್ದರೆ ಅವರು ಬೀಳುವ ವೇಗೋತ್ಕರ್ಷ ಒಂದೇ ಆಗಿರುತ್ತದೆ, ಆದರೆ, ಕಮ್ಮಿ ತೂಕದ ವ್ಯಕ್ತಿಯ ಆಸ್ಪತ್ರೆಯ ಬಿಲ್ಲು ದುಬಾರಿ, ಅದರಲ್ಲೂ ಅವನ ಮೇಲೆ ಭಾರಿ ತೂಕದವನು ಬಿದ್ದರೆ- ಕಮ್ಮಿ ತೂಕದವನು ಹರೋ ಹರ"
ಒಂಭತ್ತರ ಸುಮಾರಿಗೆ ski resort ನಲ್ಲಿದ್ದೆವು. ಟಿಕೆಟ್ಟನ್ನೆಲ್ಲಾ ಮೊದಲೇ ಖರೀದಿಸಿದ್ದರೂ ತಿರುಗಾ waiver form ನಲ್ಲಿ ಗೀಚಬೇಕು. ಮಂಗನ ಬಾಲದಂತೆ ಬೆಳೆದು ನಿಂತಿದ್ದ ಕ್ಯೂ. ಸ್ಕಿ ಶೂಗೆ ಮತ್ತೊಂದು ಕ್ಯೂ. ಜೀವನದಲ್ಲಿ ಒಂದು ಸಾರಿಯಾದರೂ ಸ್ಕಿ ಶೂ ಧರಿಸಿ ಓಡಾಡಬೇಕು- ಅದನ್ನು ಕಂಡುಹಿಡಿದವನ ಶಪಿಸದೆ ಇರಲಾರಿರಿ. ಮಣಭಾರ ಎಂಬುವದು ಕೆಳಹೇಳಿಕೆ (under statement) -ಮೊದಲು ಅದರಲ್ಲಿ ಪಾದ ತಳ್ಳುವದು ಒಂದು ಸಾಹಸದ ಕೆಲಸ. ಬೆರಳುಗಳನ್ನೆಲ್ಲ ಕೆಳಮುಖ ಮಾಡಿ, ಪಾದವನ್ನು ತಳ್ಳಬೇಕು, ತಿರುಚಬೇಕು, ಮೂರೂ ಕೊಂಡಿಗಳನ್ನು (buckle) ಜಗ್ಗಿ, ಎಳೆದು. ಬಿಗಿದು ಸರಿಸಬೇಕು. ಒಂದು ಹನಿ ನೀರು ಹೋಗುವದಿಲ್ಲ ಅಂತೆಯೇ ಗಾಳಿ ಕೂಡಾ. ಅದರಲ್ಲಿ ಸ್ಕಿ ಪ್ಯಾಂಟಿನ ಒಳ ಚುಂಗನ್ನು ನುಗ್ಗಿಸಬೇಕು- ವಾಲ್ಟ ಹೇಳುವಂತೆ ಎಲ್ಲಾ ನಮ್ಮ ರಕ್ಷಣೆಗಾಗಿಯೇ. ಮುಂದೆ ಹೋಗಿ ಮತ್ತೊಂದು ಕ್ಯೂ- ಇದು ಸ್ಕಿಗಳಿಗೋಸ್ಕರ. ಕೆಲವು ಪರಿಣಿತರು ಸ್ಕಿ ಬೋರ್ಡ ಮೇಲೆ ತೇಲುತ್ತಾರೆ, ಈ ಜನ್ಮದಲ್ಲಿ ಅದು ಸಾಧ್ಯ ಎನಿಸಲಿಲ್ಲವಾದ್ದರಿಂದ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ- ಆದರೂ ಎಂದಿನಂತೆ ಪ್ರಶ್ನೆ ಎಸೆದ ಮನೋಜ "ಸ್ಕಿ ಬೋರ್ಡಗು, ರೆಗುಲರ ಸ್ಕಿಗೂ ಏನು ವ್ಯತ್ಯಾಸ?", ನನಗೆ ತಿಳಿದದ್ದು ಹೇಳಿದೆ "ಇದು, ರೋಲ್ಲರ ಸ್ಕೆಟಗೂ, ಇನ್ಲೈನ್ ಸ್ಕೆಟಗೂ ಇರುವಂತಹ ವ್ಯತ್ಯಾಸ" -ಅಷ್ಟು ರುಚಿಸಲಿಲ್ಲ ಮನೋಜನಿಗೆ -ವಾಲ್ಟಗೆ ಕೇಳಲು ಹೋದಾ. ಸ್ಕಿ ಶೂ ಅಳತೆ ನೋಡಿ, ಸ್ಕ್ಯಾನ್ ಮಾಡಿ ಸ್ಕಿಗಳನ್ನು ಹಿಡಿದುಕೊಂಡಾಯಿತು.
ಇನ್ನು ರಣಾಂಗಣಕ್ಕೆ ಇಳಿಯಬೇಕು. ಮೊದಲನೇ ಸಾರಿ ಬಂದಿದ್ದ ಒಂದಿಬ್ಬರು ಸ್ಕಿ ಹಾಕಿದ ತಕ್ಷಣ, ಸ್ಲೋಪಗೆ ಮುಖ ಮಾಡಿ ನಿಂತಿದ್ದರಿಂದ ಸೊಂಪಾಗಿ ಸ್ಲೋಪಿಸುತ್ತಾ ಮುಗ್ಗರಿಸಿದರು- ಸಹಸ್ರ ನಾಮಾರ್ಚನೆ ಮಾಡುತ್ತಾ ಏಳಲು ಪ್ರಯತ್ನಪಟ್ಟರು, ಅವರನ್ನು ಹಿಡಿಯ ಹೋಗಿ ಇನ್ನಿಬ್ಬರು ಪಾಪ ಜಾರಿ ಬಿದ್ದರು. ಸರ್ರನೆ ಜರಿಯುತ್ತ ವಾಲ್ಟ ಅವರಿಗೆ ಮೊದಲು ಸ್ಕಿ ತೆಗೆಯಲು ಹೇಳಿ, ಮೊದಲ ಬಾರಿ ಮಾಡುವವರಿಗೆ ಇರುವ ಸ್ಕಿ ಕಲಿಕೆಯ ಗುಂಪಿಗೆ ಕಳಿಸಿದ. ಮಣಭಾರದ ಆ ಸ್ಕಿಯಲ್ಲಿ ಹೋಗುತ್ತಿರುವ ಅವರು ಪ್ರಥಮ ಬಾರಿ ವಾಲ್ಟನ ಬಗ್ಗೆ ಗೌರವ ತಾಳಿದಂತಿತ್ತು. ನಾವು ಭಾರತೀಯರು ಥಿಯರಿಯಲ್ಲಿ ಎಷ್ಟೇ ಮುಂದುವರೆದವರಿದ್ದರು, ಸ್ಕಿ ಮಾಡುವಾಗ ಬರಿ ಪುಸ್ತಕದ ಬದನೆಕಾಯಿಂದ ಈಗ ಐದು ಪೈಸೆಗೆ ಇರುವಷ್ಟೇ ಉಪಯೋಗವಿದೆ! ವಾಲ್ಟ ಈಗ ಲಾಫ್ಟರನಿಂದ ಲಿಡರಾಗಿ ಬದಲಾದ. ಕೆಲವೊಂದನ್ನು ಗಮನವಿಟ್ಟು ಕೇಳಲು ಹೇಳಿದ. ಅವನ ಮೊದಲ ಮಾತು "ಈ ಸ್ಲೋಪಿನಲ್ಲಿ ಬೀಳದೆ ಕಲಿತವರು ಪ್ರಪಂಚದಲ್ಲಿಯೇ ಇಲ್ಲ, ನಿಮ್ಮೆದುರಿಗೆ ನಿಂತಿರುವ ನಾನು ಕೂಡಾ ಇಲ್ಲಿ ಬೇಕಾದಷ್ಟು ಸಾರಿ ಬಿದ್ದಿದ್ದೇನೆ", ಆದರೆ "ಸ್ಕಿಯಿಂಗ್ ಅಂದರೆ ಮೋಜು, ಮಜಾ ಸಂದೇಹವೇ ಇಲ್ಲಾ, ಕೆಲವೊಂದನ್ನು ಮಾತ್ರ ತಪ್ಪದೆ ಪಾಲಿಸಬೇಕು, ಇಲ್ಲ ಅಂದರೆ ಮೊಳೆ ಮುರಿಯೋದರಲ್ಲಿಯೂ ಸಂದೇಹವಿಲ್ಲ". ಸ್ಕಿಯನ್ನು ಹೇಗೆ ಸ್ಲೋಪಗೆ ಲಂಬವಾಗಿಟ್ಟು ಕೊಳ್ಳಬೇಕು, ಕಾಲನ್ನು ಹೇಗೆ ಮೊಣಕಾಲಿಂದ ಕೆಳಗೆ ಬಾಗಿಸಬೇಕು, ನೆರಮಾಡುವದರಿಂದ ಹೇಗೆ ಘರ್ಷಣೆ ಕಮ್ಮಿಯಾಗುತ್ತದೆ, ಎರಡು ಪಾದಗಳನ್ನು ಅಗಲಗೊಳಿಸಿ ಒಂದಕ್ಕೊಂದು ಮುಮ್ಮಖ ಮಾಡುವದರಿಂದ ಹೇಗೆ ಘರ್ಷಣೆ ಜಾಸ್ತಿ ಮಾಡಿ ನಿಲ್ಲಬಹುದು- ಸುಲಭವಾಗಿ ಮತ್ತೆ ಮತ್ತೆ ತೋರಿಸಿ ವಿವರಿಸಿದ ವಾಲ್ಟ. ಈಗ ನಿಜವಾಗಿಯೂ ಅವನೊಬ್ಬ ತತ್ವಜ್ಞಾನಿಯಂತೆಯು, ವಿಜ್ಞಾನಿಯೆಂತೆಯು ಕಾಣಿಸತೊಡಗಿದ ಕೆಲವೊಬ್ಬರಿಗೆ. ಹಾಸ್ಯ ಮಾತ್ರ ಅನವರತವಾಗಿಯೂ ಬರುತ್ತಲಿತ್ತು ಅವನಿಂದ. ನಮ್ಮಲ್ಲೇ ಮೂರು ಗುಂಪು ಮಾಡಿದ. ಒಂದನ್ನು ಇನ್ನೊಬ್ಬ ಟ್ರೈನರಗೆ ಒಪ್ಪಿಸಿ, ನಮ್ಮನ್ನು ಇನ್ನು ಸ್ವಲ್ಪ ಕಡಿದಾದ ಸ್ಲೋಪಗೆ ಬರಲು ಹುರಿದುಂಬಿಸಿದ. ಮೂರು, ನಾಲ್ಕನೆ ಸ್ಲೋಪಗೆ ಹೋಗಲು ಕನಿಷ್ಠ ಇನ್ನೆರಡು ವರುಷ ನಮಗೆ ಬೇಕು ಎಂದ. ಅದು ಕೂಡಾ ಕೆಳ ಹೇಳಿಕೆ ಎಂದು ನಮಗೆಲ್ಲ ಮನದಟ್ಟಾಯಿತು. ಬೀಳದೆ ಬೈಸಿಕಲ್ ಕಲಿಯುವದು, ಮುಳಗದೇ ಈಜು ಕಲಿಯುವದು ಎಷ್ಟು ಅಸಾಧ್ಯವೋ, ಅಷ್ಟೇ ಅಸಾಧ್ಯ ಬೀಳದೆ ಸ್ಕಿ ಮಾಡುವದು. ಒಂದು ಸಾರಿ ಗೊತ್ತಾದ ಮೇಲೆ ಅದರಷ್ಟು ಆಹ್ಲಾದಕರವಾದದ್ದು ಪ್ರಾಯಶ ಬೇರೆ ಇಲ್ಲ. ಗಾಳಿಯನ್ನು ಸೀಳುತ್ತ, ನಿತಂಬಗಳನ್ನು ಹೊರಳಿಸುತ್ತ, ಕೈಗಳೆರಡನ್ನು ಹಿಂದೆ ಮುಂದೆ ಹುಯುತ್ತ ತೇಲುವದು ಮಾಡಿಯೇ ಅನುಭವಿಸಬೇಕಾದದ್ದು. ಹೆಣ್ಣಿಗೆ ಸ್ಕಿಯಿಂಗ್ ಏಕೆ ಅತಿ ಸಹಜ ಎನ್ನುವದಕ್ಕು ಒಂದೆರೆಡು ವಯಸ್ಕ ನಗು ನುಡಿಗಳನ್ನು ಉದುರಿಸಿದ ವಾಲ್ಟ. ಬಿದ್ದಾಗಲೆಲ್ಲ ಸಹಾಯ ಮಾಡುತ್ತಾ, ಮತ್ತು ಮುಂದೆ ಮುಂದೆ ಹೋಗಲು ಉತ್ತೇಜನ ಕೊಡುತ್ತ, ನಗಿಸುತ್ತಾ, ಪಾದರಸದಂತೆ ಮುನ್ನುಗುತ್ತ, ಚಕ ಚಕನೆ ಹೊರಳುತ್ತ ವಾಲ್ಟ ನಮಗಿಂತ ಮಕ್ಕಳಿಗೆ ಜಾಸ್ತಿ ಅಚ್ಚು ಮೆಚ್ಚಿನವನಾದ. ಮಕ್ಕಳನ್ನು ನೋಡಿ ಹೇಗೆ ಯಾವದೇ ಥಿಯರಿ ಗೊತ್ತಿಲ್ಲದೇ ತಾವೇ ತಾವಾಗಿ ಬ್ಯಾಲೆನ್ಸ್ ಮಾಡುತ್ತ ಬೇಗ ಬೇಗ ಕಲಿತುಕೊಳ್ಳುತ್ತಾರೆ ಎಂದು ತಾನೂ ಅಚ್ಚರಿಗೊಂಡ. ನನ್ನ ಮಗಳಿಗೆ 'ಖಂಡಿತ, ನೀನು ಇನ್ನು ಮುಂದಿನ ಕಡಿದಾದ ಸ್ಲೋಪ ಟ್ರೈ ಮಾಡು' ಎಂದು ಹುರಿದುಂಬಿಸಿ ಕಳಿಸಿದ. ಕೆಳ ತಲುಪಿದ ಮೇಲೆ ಲಿಫ್ಟ್ ನಿಂದ ಮೇಲೆ ಬರುವಾಗ, ಎಲ್ಲಿತ್ತೋ ಅವನ ಹತ್ತಿರ- ಒಂದು nikon ಕ್ಯಾಮೆರಾ ತೆಗೆದು ಲೆನ್ಸ್ ಬದಲಿಸಿ ಚಕ ಚಕನೆ ಕ್ಲಿಕ್ಕಿಸುತ್ತ ಹೋದ.
"ವಾಲ್ಟ, ನೀನು ಪ್ರಾಯಶ ವರುಷಕ್ಕೆ ಇಪ್ಪತ್ತು ಸಾರಿಯಾದರು ಬರುತ್ತಿಯ ಇಲ್ಲಿ, ಯಾಕೆ ಬೇಕು ಇಷ್ಟು ಚಿತ್ರಗಳು ನಿನಗೆ?" ತಡೆಯಲಾಗದೆ ಕೇಳಿದೆ.
"ಉಶ್, ಉಶ್- ಆಮೇಲೆ ಹೇಳುತ್ತೇನೆ" ನನ್ನನ್ನು ಈಗ ವಿಚಲಿಸಬೇಡ ಎಂಬ ಆಜ್ಞಾ ಭಾವವಿತ್ತು ಅವನ ಧ್ವನಿಯಲ್ಲಿ.
ಎರಡು, ಮೂರು ಸಾರಿ ನಮ್ಮ ಜೊತೆ ಮೇಲೆ, ಕೆಳಗೆ ಬಂದ ವಾಲ್ಟ ಕಣ್ಮರೆಯಾದ. ಅತುಲ ಬಂದು "ಎಲ್ಲಿ ಹೋದ ವಾಲ್ಟ? ನಾವು ಕೊಟ್ಟ ದುಡ್ಡಿಗೆ ಆತ ನಮ್ಮ ಜೊತೆ ಕೊನೆವರೆಗೂ ಇರಬೇಕಲ್ಲವೇ?" ಪ್ರಶ್ನಿಸಿದ ಖಾರವಾಗಿ.
"ನಾವು ಕೊಟ್ಟಿರುವದು ಬರಿ ಬಸ್ಸಿಗಾಗಿ ಮಾತ್ರ ದುಡ್ಡು, ಅವನ ಟ್ರೇನಿಂಗಗಾಗಿ ಅಲ್ಲಾ, ಅದು ಅಲ್ಲದೆ ಇಷ್ಟು ಚೆನ್ನಾಗಿ ಹೇಳಿ ಕೊಟ್ಟಿದ್ದಾನೆ" ಎಂದೇ ನಾನು. ಏನೋ ಗೊಣಗುತ್ತ ಮಾಯವಾದ ಅತುಲ. ಮತ್ತೆ ಹತ್ತಿಪತ್ತು ಬಾರಿ ಮೇಲೆ, ಕೆಳಗೆ ಹೋಗಿ ಬಂದೆವು. ಕೈ, ಕಾಲೆಲ್ಲ ಬಿದ್ದು ಹೋಗಿದ್ದವು. ಮೇಲೆ ಮೊದಲನೇ ಸ್ಲೋಪಗೆ ಹೋಗಿ ಎಲ್ಲರೂ ಉಟಕ್ಕೆ ಹೊರಟೆವು. ವಾಲ್ಟಗೆ ಕೇಳಬೇಕೆನ್ನುವದು ಇನ್ನೂ ತಲೆಯಲ್ಲಿ ಕೊರೆಯುತ್ತಲೇ ಇತ್ತು, ಎಲ್ಲೂ ಕಾಣಲಿಲ್ಲ ವಾಲ್ಟು.
ಊಟ, ವಾಲ್ಟ ಹೇಳಿದಂತೆ ದುಬಾರಿಯಾಗಿತ್ತು. ನಮಗೆ ಬೇಕಾದ್ದು ಎಲ್ಲ ಇದ್ದಿದ್ದರಿಂದ ಅದಕ್ಕಿಂತ ಹೆಚ್ಚಾಗಿ ಎಲ್ಲರು ಹಸಿದಿದ್ದರಿಂದ ಬೇಗನೆ ಮುಗಿಯಿತು. ನಮ್ಮಲ್ಲಿ ಕೆಲವರು ಸ್ಕಿ ಮಾಡಿದ್ದು ಸಾಕೆಂದು ಟ್ಯೂಬಿಂಗಗೆ ಹೋದರು- ಇದು ಅಷ್ಟು ಪ್ರಯಾಸಕರವಾದುದಲ್ಲ- ಒಂದಕ್ಕೊಂದು ಜೋಡಿಸಿದ ನಾಲ್ಕು ಟ್ಯೂಬನಲ್ಲಿ ನಾಲ್ಕು ಜನ ಕುಳಿತುಕೊಂಡು ಇಳಿಜಾರಿನಲ್ಲಿ ಜಾರುವದು ಸ್ಕಿ ಮಾಡುವದಕ್ಕಿಂತ ಸುಲಭವಾದದ್ದು. ನಾವು ಕೆಲವರು ಮುಂದಿನ ಲೆವಲ್ ಒಂದು ಕೈ ನೋಡುವದ ಅಥವಾ ತೆಪ್ಪಗೆ ಈಗ ಮಾಡಿರುವ ಸ್ಲೋಪಗೆ ಮತ್ತೆ ಮರಳುವದಾ ಯೋಚಿಸಿದೆವು. ತಿರುಗಿ ಮತ್ತೆ ಅದೇ ಸ್ಲೋಪಗೆ ಹೋದೆವು. ತಲೆಯಲ್ಲಿ ಗೊತ್ತಿರುವದೆಲ್ಲ ದೇಹಕ್ಕೆ ಅನುಲೇಪಿಸುವದು ಅಷ್ಟು ಸುಲಭವಲ್ಲ ಎಂದು ವೇದ್ಯವಾಗಲು ಸ್ಕಿಯಿಂಗ್ ಒಳ್ಳೆ ಅಭ್ಯಾಸ. ನೂರೆಂಟು ಜನರಿರುವ, ಮಂಗನಾಟವಾಡಲು ಕಾಯುತ್ತಿರುವ ಯುವಕರ ದಂಡಿನಲ್ಲಿ ಅಪಘಾತಗಳಿಗೇನು ಕಮ್ಮಿ. ಯಾರೋ ಒಬ್ಬ ಹುಡುಗ ಬಿದ್ದು ಕೈ ಮುರಿದುಕೊಂಡಿದ್ದ- ಅವನನ್ನು ಸ್ಕಿ ಅಂಬುಲೆನ್ಸ ಬಂದು ಕರೆದೊಯ್ದಿತು.
ಘಂಟೆ ನಾಲ್ಕುವರೆಯಾದರು ಮಕ್ಕಳು ಇನ್ನು ಯಾರು ವಾಪಸ್ಸಾಗುವ ಲಕ್ಷಣ ಕಾಣುತ್ತಿಲ್ಲ. ಫೋನಂತು ಎತ್ತಿಕೊಳ್ಳುವದಿಲ್ಲ, ಇನ್ನು ಅವರನ್ನು ಹುಡುಕಿಕೊಂಡು ಮುಂದಿನ ಬೆಟ್ಟಕ್ಕೆ, ನಡೆದುಕೊಂಡು ಹೋಗುವಷ್ಟು ತಾಳ್ಮೆ, ಧೈರ್ಯ ನಮ್ಮಲ್ಲಿ ಯಾರಿಗೂ ಇರಲಿಲ್ಲ. ಸುತ್ತ ಮುತ್ತ ಎಲ್ಲೂ ವಾಲ್ಟ ಕಾಣಿಸುತ್ತಿಲ್ಲ- ಗಾಬರಿ ಎಂಬುವದು ಭಾರತೀಯ ಎಂಬುದರ ತತ್ಸಮವೋ, ತದ್ಭವವೋ ಇರಬೇಕು. ಹೋಗಿ ಅನ್ನೌನ್ಸ ಮಾಡೋಣವೆ ಎಂದುಕೊಳ್ಳುತ್ತಿರುವಾಗ ಅಲ್ಲಿ ವಾಲ್ಟನ ಜೊತೆ ಮಕ್ಕಳೆಲ್ಲ ಬರುತ್ತಿದ್ದಾರೆ. ಎಲ್ಲರೂ ಸ್ಕಿ ಬಾಡಿಗೆಗಳನ್ನೆಲ್ಲ ವಾಪಾಸು ಕೊಟ್ಟು ಬಸ್ಸಿಗೆ ದೌಡಾಯಿಸಿದೆವು. ಉಸ್ಸಪ್ಪ ಎನ್ನುತ್ತಾ ನಾವೆಲ್ಲ ಕುಳಿತರೆ, ಹಿಂದೆ ಹೋಗಿ ಕೂತ ವಾಲ್ಟ ತನ್ನ ipad ನೊಂದಿಗೆ. ಆಶ್ಚರ್ಯವಾಯಿತು ನನಗೆ. ನೋಡಲೇನೋ ಗಮಾರನಂತೆ ತೋರುತ್ತಾನಾದರೂ ಏನೋ ಇದೆ ಇವನಲ್ಲಿ ಎನಿಸಿತು, ಹೋಗಿ ಸುಮ್ಮನೆ ಅವನ ಬದಿಯ ಸೀಟಿನಲ್ಲಿ ಕುಳಿತೆ. ಮುಂಜಾನೆ ಅಷ್ಟು ಮಾತನಾಡಿದವನು ಈಗ 'ಕ್ಯಾರೆ' ಅನ್ನುತ್ತಿಲ್ಲ. ಸುಮ್ಮನೆ ನೋಡುತ್ತಾ ಕುಳಿತೆ. ಅದ್ಹೇಗೆ ಫೋಟೋಗಳನೆಲ್ಲ ipad ಗೆ upload ಮಾಡಿದ್ದನೋ, ಒಂದೊಂದೆ ನೋಡುತ್ತಾ ಏನೇನೋ ಬರೆಯುತ್ತ ಇದ್ದ. ಒಂದು  ಘಂಟೆಯವರೆಗೂ ಮಾತಿಲ್ಲ, ಸಂಪೂರ್ಣ ತಲ್ಲೀನ ಅದರಲ್ಲಿ. ಆಯಾಸವಂತು ಒಂದಿನಿತೂ ಇಲ್ಲಾ ಮುಖದಲ್ಲಿ- ನಾನೂ ಆಗಲೇ ತೂಕಡಿಸಲಾರಂಭಿಸಿದ್ದೆ. ಬಸ್ಸು ಎಲ್ಲೋ ಒಂದು ಕಡೆ ನಿಂತಿತು- ನನಗೂ ಎಚ್ಚರವಾಯಿತು- ಕೆಲಸ ಮುಗಿಸಿ ಆಗಲೇ ಸಂಜೆ ಊಟ ಮಾಡುತ್ತಿದ್ದ ವಾಲ್ಟ. ಇನ್ನು ತಡೆಯುವದು ಬೇಡ ಎಂದುಕೊಂಡು ಕೇಳಿಯೇ ಬಿಟ್ಟೆ
"ವಾಲ್ಟ, ನೀನು ತಪ್ಪು ತಿಳಿದುಕೊಳ್ಳದಿದ್ದರೆ ಒಂದು ಮಾತು ಕೇಳಲೇ?"
"ಓಹೋ, ಧಾರಾಳವಾಗಿ ಕೇಳು" ನಗುತ್ತ ನುಡಿದ ವಾಲ್ಟ.
"ಅದೇ, ಇಷ್ಟು ಸಾರಿ ಸ್ಕಿಯಿಂಗಗೆ ಬರುವ ನೀನು ಅಷ್ಟೊಂದು ಫೋಟೋ ತೆಗೆಯುವ ಅವಶ್ಯಕತೆ ಏನು?"
"ಓ, ಅದಾ, ಅದು ನನ್ನ ೧೧ ನೆ ತರಗತಿಯ ವಿದ್ಯಾರ್ಥಿಗಳಿಗಾಗಿ"
"ಓ, ನೀವು ಹಾಯ್ ಸ್ಕೂಲ ಟಿಚರ್ರ? ನಾನೆಲ್ಲೋ ನಿನ್ನ ವೃತ್ತಿ ಸ್ಕಿ ಟ್ರೈನೆರ್ ಅಂದುಕೊಂಡಿದ್ದೆ"
"ಇಲ್ಲಾ, ಇಲ್ಲಾ, ಸ್ಕಿಯಿಂಗ್ ನನ್ನ ಹಾಬಿ ಮಾತ್ರ, ನಾನು ರಾಲಿ ಅಕಾಡೆಮಿಯಲ್ಲಿ ಪ್ರಿನ್ಸಿಪಾಲ್, ಮಕ್ಕಳಿಗೆ ಕ್ಯಾಲ್ಕುಲಸ್ ಹೇಳಿಕೊಡುತ್ತೇನೆ. ಇವೆಲ್ಲ ಫೋಟೋ ಅವರಿಗೆ assignment ಕೊಡಲು ತೆಗೆದುಕೊಂಡಿರುವದು. ನೋಡಿಲ್ಲಿ ಹೇಗೆ ಇದು ಪ್ಯಾರಬೋಲ ತರಹ ಕಾಣುತ್ತದೆ ಅಲ್ಲವೇ, ಇಲ್ಲಿ ನೋಡು ಇದು ತೊಳೆ ತೊಳೆಯಾಗಿ ಬಿಡಿಸಿದ ಸೇಬಿನಂತಿಲ್ಲವೇ? ಮಕ್ಕಳಿಗೆ ಇಂತಹ assigment ಕೊಟ್ಟರೆ ಅವರಿಗೆ ಗಣಿತ ಎಲ್ಲಿ apply ಮಾಡಬೇಕು ಎಂದು ಸುಲಭವಾಗಿ ಅರಿವಿಗೆ ಬರುತ್ತದೆ ಅಲ್ಲವೇ?"
ದಿಗ್ಭ್ರಮೆಯಾಯಿತು ನನಗೆ "ಅಂದರೆ ನೀನು ಸ್ಕಿಯಿಂಗ್ ಬಂದದ್ದು ಟ್ರೈನೆರ್ ಅಂತ ಅಲ್ಲ"
"ಅಲ್ಲ, ಅದು ನಾನು ವೀಕೆಂಡ್ ಗೆ ಮಾಡುವ ಸ್ವಯಂ ಸೇವೆ"
ಇನ್ನೂ ಹೆಚ್ಚಿಗೆ ಹೇಳಿಕೊಳ್ಳುವವನಲ್ಲ ವಾಲ್ಟ ಎಂದು ಗೊತ್ತಾಯಿತು. ಕೊನೆಯ ಪ್ರಶ್ನೆ ಎಂದೆ.
"ಏನದು?"
"ಯಾವದು ನಿಮ್ಮನ್ನು ಇದನ್ನೆಲ್ಲಾ ಮಾಡಲು ಪ್ರೇರೇಪಿಸುತ್ತದೆ ವಾಲ್ಟ?"
"ಓ ಅದಾ, ಪರಂಪರಾನುಗತವಾದ ಜಡತೆಗೆ, ದಿನವಹಿ ಮಾಡುವ ಬೋಧನೆಗೆ ಸ್ವಲ್ಪ ಜಡತೆ, ತುಕ್ಕು ಹಿಡಿಯದಂತೆ ಮಾಡಲು ನಾನು ಕಂಡುಕೊಂಡಿರುವ ಸುಲಭೋಪಾಯವಿದು" ಎನ್ನುತ್ತಾ ಮತ್ತೆ ತನ್ನ ipad ನಲ್ಲಿ ಮಗ್ನನಾದ ವಾಲ್ಟ.
ರಾಲಿ ಅಕಾಡೆಮಿಗೆ ಏಕೆ ಅಷ್ಟೊಂದು ಒಳ್ಳೆ ಹೆಸರಿದೆ ಗೊತ್ತಾಯಿತಾಗ.
ದಣಿದ ಮೈಗೆ ವಿಶ್ರಾಂತಿ ಬೇಕಿತ್ತೋ ಏನೋ ಯಾವಾಗಲೋ ನಿದ್ದೆ ಹತ್ತಿತು. ಎಚ್ಚರವಾದಾಗ ಕ್ಯಾರಿ ಸಮಿಪಿಸುತಿತ್ತು. "ಬೈ, ಬೈ" ಹೇಳುತ್ತಾ ಎದ್ದು ಹೋಗುತ್ತಿದ್ದ ವಾಲ್ಟ ತನ್ನ ಕಾರ್ಡ್ ಕೊಟ್ಟು ಹೋದ. ನಾನು ಎಲ್ಲರಿಗೂ ಬೈ ಹೇಳುತ್ತಾ ಇಳಿದೆ. ನಾನೀಗ Ph.D. ಅಂದರೆ Physically Depleted ಅಥವಾ ವಾಲ್ಟನ Philosophyಗೆ ದಂಗಾದವನು  ಎಂದುಕೊಳ್ಳಲುಬಹುದು.
ಪುಟದ ಮೊದಲಿಗೆ
 
Votes:  12     Rating: 3.92    

 ನಾನೇ skiing ಮಾಡುತ್ತಿದ್ದಂತೆ ಅನಿಸಿತು. ಆಪ್ತವಾದ ಲೇಖನ. -ಸುನಾಥ...
 hm.. too much philosophy....
 Re:  and too banal a philosophy!
 the article began well but pretty soon meandered into medicority....
 Wow! You made it! This reminds me of my trip to Einsiedeln in Switzerland :-) I was so... afraid even to move my feet. Failed terribly in langlauf too, so in this tiny village I roamed about from morning to evening all 5 days, when my daughter was enjoying skiing and moving on to different slopes. I got tired of the little shops, and their most expensive wares and the shop owners just looked away when they spotted me! The saving grace was the lovely black madonna in the church who heard all my prayers/monoloues of wanting to escape from the cold and dreaming of darshini dose n coffee :-) http://www.sacred-destinations.com/switzerland/einsiedeln...
 NRI writers ಬರೆದ ಲೇಖನಗಳ ಬಗ್ಗೆ ಸುಮ್ಸುಮ್ನೆ ಕಟಕಿಯಾಡುವ ಮಂದಿಯೆಲ್ಲಾ ಮುಟ್ಟಿ ನೋಡಿ ಕೊಳ್ಳುವಷ್ಟು ಸುಪರ್ ಆಗಿದೆ ಲೇಖನ ವಂದನೆಗಳು ಅನಿಲ್ ಅವರೇ...
 ಸುಂದರ ಸುಲಲಿತ ಲೇಖನ. ತಾಲಿಕೊಟಿಯವರೇ, ನಿಮಗೆ ಭಾಷೆಯ ಮೇಲಿನ ಹಿಡಿತ ಚೆನ್ನಾಗಿದೆ.ನಾವೆಲ್ಲ ವಿಂಟರ್ ಗ್ರೀನಿಗೆ ಹೋದ ಹಾಗಾಯ್ತು. ಹೀಗೆ ಬರೀತಾ ಇರಿ. - ರಿಷಿ ಆಚಾರ್ಯ, ನಾರ್ತ್ ಕೆರೊಲೈನ....
 ಮನುಷ್ಯನು ಪ್ರಕೃತಿಯ ಗುಲಾಮ. ಪ್ರಕೃತಿ ಎಂದರೆ ನಮ್ಮ ಸುತ್ತಮುತ್ತಲಿನ ಪರಿಸರ. ಯಾರೊಬ್ಬರೂ ಕರ್ನಾಟಕದಲ್ಲಿ ಸ್ಕೀ ಮಾಡಲು ಹೋಗುತ್ತಾರೋ? ಸ್ಕೀ ಮಾಡಲು ಅತಿ ತೀಕ್ಷ್ಣ ಹಿಮ ಬಿದ್ದಿರಬೇಕು ಗುಡ್ಡಗಳಲ್ಲಿ. ಗ್ರೀನ್ ಲ್ಯಾಂಡ್, ಐಸ್ ಲ್ಯಾಂಡ್, ಸ್ವೀಡನ್, ಫಿನ್ ಲ್ಯಾಂಡ್ ಮುಂತಾದಕಡೆಗಳಲ್ಲಿ ಚಳಿಗಾಲದಲ್ಲಿ ಜನರು ಮನೆಯೊಳಗೆನೇ ಇದ್ದು ಎಷ್ಟು ಸಮಯ ನಿದ್ದೆ ಮಾಡಿರಲಿಕ್ಕೆ ಆಗುತ್ತದೆ? ಅದರಂತೆಯೇ ನಮ್ಮ ಭಾರತೀಯ ಮೂಲದವರಿಗೆ ಅಮೇರಿಕದಲ್ಲಿ ಚಳಿಗಾಲದಲ್ಲಿ ಏನಾದರೂ ಮಾಡಬೇಕೆಂದು ಅನಿಸುವುದು ಆಶ್ಚರ್ಯವಲ್ಲ. ಸ್ಕೀ ಮಾಡಲು ಹೋಗುವವನು ಚೆನ್ನಾಗಿ ಸಂಪಾದನೆ ಇದ್ದವನಾಗಿರಬೇಕು. ಅವನಿಗೆ ಒಳ್ಳೆಯ ಮೆಡಿಕಲ್ ಇನ್ಶೂರೆನ್ಸ್ ಇರಬೇಕು. ಆ ರೀತಿಯಲ್ಲಿ ಮನುಷ್ಯನು ಸಂಪತ್ತಿನ ಗುಲಾಮ ಕೂಡ. ಪ್ರಕೃತಿ ಮತ್ತು ಸಂಪತ್ತು ಎರಡೂ ಅನುಕೂಲವಾಗಿದ್ದರೆ ಮನೆಯಲ್ಲಿ ಮಾಡಲು ಬೇರೇನೂ ಕಾಣದಿದ್ದರೆ ಸ್ಕೀ ಮಾಡಲು ಹೋಗಿ ಬರಬಹುದು. ಒಂದೋ ಮನೆಗೆ; ಇಲ್ಲವಾದರೆ ಆಸ್ಪತ್ರೆಗೆ. ನಾನಾದರೋ ಸ್ಕೀ ಮಾಡಲು ಹೊರಟವರಿಗೆ ಬೈ ಬೈ ಹೋಗಿ ಬನ್ನಿ ಎಂದು ಹೇಳಿ ಒಂದು ಪುಸ್ತಕ ಹಿಡಿದು ಓದತೊಡಗುತ್ತೇನೆ.... ಮೋಹನ ಶೆಣೈ....
 ATI UTTAM LEKHANA. UR genius &continue to write U WILL BE A VERY GOOD WRITER & ESPECIALLY I AM VERY HAPPY I ALSO LIKE WRITING ALL THE BEST> HAMMANNA & WITH MY HALF_SHIRT....
 Re:  soooooooper.... kendasampigeyalle atyuttama lekhana idu...
 VOW VOW VOW..........
 sakattaagide.......
 What a beautiful excursion and so vividly described! I could feel the excitement of skiing while my mom read the article to me. Looking forward to my first Skiing Trip with eagerness. - Namita...
 excellent article anil, keep it up.........and keep writing your experience. though it sounds humorous it is also informative for the people. prashant adur...
 Re:  Thanks Prashant -Anil
 ಕೆಂಡಸಂಪಿಗೆ ಅಲ್ಲಿ ನನ್ನ ತಮ್ಮ ಅನಿಲ್ ತಾಳಿಕೋಟಿ ಬರೆದ ಲೇಖನ ಮನಸೂರೆಗೊಂಡಿತು. Cleveland ಗೆ ಬಂದಾಗಿಂದ ಸ್ಕೀಂಗ್ ಹೇಗಿರುತ್ತದೆ ಎಂದು ನೋಡಬೇಕೆನಸಿದರೂ , ಇವತ್ತಿನವರಿಗೂ ಆಗಿಲ್ಲ. ಅನಿಲನ ವೈವಿಧ್ಯ ಪೂರ್ಣವಾದ ಲೇಖನ ಓದಿ ನಾನೇ ಸ್ವತಹ ಅಲ್ಲಿ ಹೋಗಿ ಬಂದಂತಾಯಿತು. ವಾಲ್ಟ್ ಬಗ್ಗೆ ಬಹಳ ಅಭಿಮಾನವೆನಿಸಿತು. ಚಂದ್ರಿಕಾ ತೆಗೆದ ಫೋಟೋಗಳು ಬಹಳ ಆಕರ್ಷಕವಾಗಿವೆ. ಸ್ಕೀಂಗ್ ಬಗ್ಗೆ ಲೇಖನ ಓದಿ ಹೋಳಿಗೆ ತಿಂದಷ್ಟೇ ಸಂತೋಷವಾಯಿತು. ಧನ್ಯವಾದಗಳು, ಅನಿಲ್. - Chanda Sabade, Cleveland OH...
 Super Aagige , Nice article...
 lovely article...
 ಅನಿಲ್‌ ನಿಮ್ಮ ಬರಹ ನೋಡಿ ಮುಂದಿನ ಸಲ ಬಂದಾಗ ಸ್ಕೀಯಿಂಗ ಮಾಡಲು ಮನಸಾಗಿದೆ.ಹತ್ತಿರ ಹತ್ತಿರ ಎಪ್ಪತ್ತು.ಮಾರ್ಗದರ್ಶನ ನೀಡುವಿರಾಗಿ ನಂಬಿರುವೆ. ಉತ್ತಮ ಬರಹ. ಅಂದ ಹಾಗೆ ಎಷ್ಟುಸಲ ಹಿಮಶಾಯಿಯಾಗಿದ್ದಿರಿ ?-ಅಪ್ಪಾಜಿ...
 Re:  Appaji avare, neevu kanditha Ski maadi, namage adara bagge lekhana bareyuva bharavase nanagide! http://www.squidoo.com/theoldestpeoplewho Best wishes!
 Re:  ಕರಡಿ ಬೆಟ್ಟ ಹತ್ತಿ, ನ್ಯೂಯಾರ್ಕ ನಗರದಲ್ಲಿ ನಡೆದಾಡಿದ ಅಪ್ಪಾಜಿಗೆ ಸ್ಕಿಯಿಂಗ್ ಅಷ್ಟೇನೂ ಕಷ್ಟವಾಗದೆಂದು ನನ್ನ ಅನಿಸಿಕೆ. ಭಟ್ಟರು ೬೦ ಆದಮೇಲೆ ಅಲ್ಲವೇ ಬೈಸಿಕಲ್ಲಲ್ಲಿ ಭಾರತ ಸುತ್ತಿದ್ದು - ತಾವು ಆರಾಮಾಗಿ ಜಾರಬಹುದು! -ಅನಿಲ
 nice aarticle.........suman desai...
 

2 comments:

sunaath said...

ಅನಿಲರೆ,
ವೈಯಕ್ತಿಕ ಅನುಭವಗಳನ್ನು ವಿನೋದದ ನೆರವಿನಿಂದ ಸಾರ್ವತ್ರಿಕ ಆಸಕ್ತಿಯನ್ನಾಗಿ ಮಾಡುವ ಕಲೆ ನಿಮ್ಮಲ್ಲಿದೆ. ಸ್ಕೀಯಿಂಗದ ಜೊತೆಗೇ, ಲೇಖನದಲ್ಲಿರುವ ಎಲ್ಲ ಪಾತ್ರಗಳೂ ನಮಗೆ ಹತ್ತಿರದವರಾಗುತ್ತಾರೆ. ಅಭಿನಂದನೆಗಳು.

Anil Talikoti said...

ಧನ್ಯವಾದಗಳು ಸುನಾಥರೆ.
really appreciate it
-ಅನಿಲ್