ಸರ್ವರಿಗೂ ಮಹಾಶಿವರಾತ್ರಿಯ ಶುಭಾಶಯಗಳು. ಫಾಲ್ಗುಣ ಮಾಸದ, ಕೃಷ್ಣಪಕ್ಷದ ೧೩ ನೇ ರಾತ್ರಿ, ಬಿಲ್ವ ಪತ್ರಿಗಳಿಂದ ಶಿವನನ್ನು ಅರ್ಚಿಸುತ್ತ, ಬೆಳೆಗ್ಗೆಯಿಂದ ಉಪವಾಸ ಮಾಡಿ, ರಾತ್ರಿಯೆಲ್ಲಾ ಭಜನೆ ಮಾಡುವದಂತು ಆಗದ್ದು- ಕನಿಷ್ಟ, ದೇವಸ್ತಾನಕ್ಕಾದರು ಹೋಗುವ ವಿಚಾರವಿದೆ. ಜೀವನದಲ್ಲಿ ಅತಿ ಸರಳವಾಗಿ ಸುಖ ಸಿಗಬೇಕೆಂದರೆ ಬ್ಹೊಲೆನಾಥನನ್ನು ಭಜಿಸಬೇಕು. ಇಂಗ್ಲಿಷಿನಲ್ಲೊಂದು ಪದವಿದೆ -summum bonum ಎಂದು, ಅಂದರೆ ಉತ್ಕ್ರುಷ್ಟವಾದ , ಅಂತಿಮ ನಿರ್ವಾಣದ ಸ್ತಿತಿಯಂತಹ ಭಾಗ್ಯ - ಸುಮ್ಮನೆ ಬೋನಸ್ ಎಂದು ಸಿಗಬೇಕಾದರೆ , ಬೇರೆ ಯಾವತ್ತು ಮಾಡದಿದ್ದರೂ ಶಿವರಾತ್ರಿಯಂದು ಪ್ರಾರ್ಥನೆ ಮಾಡಲೇಬೇಕು. ಶಿವರಾತ್ರಿಯ ಬಗ್ಗೆ ಅನೇಕ ಐತಿಹ್ಯಗಳಿರುವದು ಪ್ರಾಯಶಃ ಎಲ್ಲರಿಗು ಗೊತ್ತು - ಅದರಲ್ಲಿ ನನಗೆ ಹಿಡಿಸುವದು ಶಿವನ ಪ್ರಳಯ ನಾಟ್ಯ( the Deluge), ಸೃಷ್ಟಿ, ಸ್ತಿಥಿ ಗಳಸ್ಟೇ ಮುಖ್ಯವಾದದ್ದು ಲಯ - ಪ್ರಳಯ - ಆದಿ ಅಥವಾ ಅಂತ್ಯ ವಿಲ್ಲದ್ದು - ಎಂದಿಗೂ ಮುಗಿಯದ ಕಾಲಚಕ್ರದ ಚಲನೆ. ವೃತ್ತವೊಂದರಲ್ಲಿ ಮೊದಲಾವದು? ಕೊನೆಯಾವದು?
ಮೊನ್ನೆ ತಾನೇ ಬೇಂದ್ರೆಯವರ ಕವಿತಾ ಸಂಗ್ರಹ ('ಅರಳು ಮರಳು' ಆದ ಮೇಲೆ ಬರೆದದ್ದು) ಓದುತ್ತಿದ್ದೆ - ಅದರಲ್ಲಿ ಬಂದಿರುವ 'ಪಿನಾಕಿ ರುದ್ರ' ತುಂಬಾ ಚೆನ್ನಾಗಿದೆ - ಅದನ್ನಿಲ್ಲಿ ಯಥಾವತ್ತಾಗಿ ಕೀಲಿಸಿದ್ದೇನೆ. ಅರ್ಥವಾಗದ್ದು ಬಹಳಿದೆ - ಮುಂದೆದೋ ಒಂದು ದಿನ ಅರ್ಥವಾಗಬಹುದು ಅಥವಾ ತಮಗೆ ಗೊತ್ತಿದ್ದರೆ ಅರ್ಥ ತಿಳಿಸಿ. ಸಿಡಿಲು, ಭೂಕಂಪ, ನೆರೆ ಹಾವಳಿ ಎಲ್ಲಾ ಒಮ್ಮೆಲೇ ಅಪ್ಪಳಿಸಿದರೆ ಆಗುವ ಪರಿಣಾಮ ಅನೂಹ್ಯ. ಡಮರಿಸುತ್ತಾ, ಪ್ರಳಯ ನೃತ್ಯ ಮಾಡುವ ಭಯಂಕರ ರುದ್ರ ಇಡೀ ಭೂಮಂಡಲವ ಅಲ್ಲೋಲ ಕಲ್ಲೋಲ ಮಾಡಿಬಿಡಬಲ್ಲ ಕ್ಷಣದಲ್ಲಿ. ನೃತ್ಯದಲ್ಲಿ ಬಾಗಿದ ಬೆನ್ನೆ ಅವನ ಬಿಲ್ಲು , ತೆರೆದ ಜೆಟೆಯೇ ಅವನ ಕ್ರೋಧಾಗ್ನಿ - ತಡೆಯುವವರುಂಟೆ ಭದ್ರನ. ನೋಡಿದೆಡೆಯೆಲ್ಲ ಆಕ್ರಂದನ, ಬೇಡನೆ ಅವನಾಗಿ ಬೇಟೆಗೆ ಹೊರಟರೆ ಉಳಿಗಾಲವೆಲ್ಲಿ? ಕಾಲಯಮನಂತೆ ಕಂಗೊಳಿಸುವ ಆತನನ್ನು ಶಾಂತ ಮಾಡುವದು ನಿರ್ಮಲ ಮನಸಿನ ಪ್ರಾರ್ಥನೆಯೊಂದೆ.
ಪಿನಾಕಿ ರುದ್ರಾ (ದ.ರಾ. ಬೇಂದ್ರೆ)
-----------------------------------
ಸಿಡಿಲಿನ ಮರಿಯೊಂದು ಸಿಡಿದಿತೊ ಅಣ್ಣಾ
ಒಡೆದಿತೊ ಚಂದ್ರನೆ
ಗಂಗೆಯು ಸೋಗು ಹಾಕಿದಳಣ್ಣಾ
ಉರುಳಿದ ಗಿರಿನಂದನೆ
ಹೊಲಹೊಲದಿಂದ ಹೊಲದವ ಬಂದ
ಹರ ಹರ ಹರಿಯುವವನೆ
ಗಿರಿಗಿರಿಯಿಂದಾ ಹರಿದಾವ ನೀರು
ತೊರೆಬಂತು ಎಂದವನೆ
ಬೆನ್ನುಲುಬೆ ಬಿಲ್ಲು, ಹಣಿಗೆಯ ಹಲ್ಲು
ಡವಿಗೆಯ ಕನ್ನಡಿಯ
ಡವಕೆಯ ಹಿಡಿಯೆ ಹಿಡಿಕೆಯ ಮಲ್ಲಿ
ಉಗಳುವೆ ನಾ ತಡಿಯೆ
ಡವಡವ ಎದೆಯಾ ಡಮರುವ ನುಡಿಸಿ
ತಾಂಡವಕ್ಕೆದ್ದವನೆ
ಓಹೋ ಭದ್ರಾ ಪಿನಾಕಿ ರುದ್ರಾ!
ಸೋಹಂ ಸೋಹಂ ಎಂದವನೆ
ಎತ್ತೆತ್ತು ಕುತ್ತಾ ಬಾಳುವುದೆತ್ತಾ
ಮಾತೆ ಮುಗ್ಗರಿಸಿದೆ
ನಿಷಾದ ಭೂಮಿಯ ಆಗಿಯೆ ಸ್ವಾಮಿ
ವಿಷಾದ ಕುಗ್ಗಿಸಿದೆ
ಋಜುವಾತು ಆಗಿ ಯಜು ಮಾತು ಬಂತು
ಯಜ ಯಜ ಎಂದವನೆ
ಭೈರವ ದೇವಾ, ಯಾಕಿ ಭಾವಾ
ಆನಂದ ಇಂಗಿದವನೆ.
--ದ.ರಾ. ಬೇಂದ್ರೆ
Wednesday, March 7, 2012
Subscribe to:
Post Comments (Atom)
2 comments:
ಪಿನಾಕಿರುದ್ರ ಎದೆಯಲ್ಲಿ ಕುಣಿದಂತೆ ಭಾಸವಾಗುವ ಕವನ. ಬೇಂದ್ರೆಯವರ ಕವನವನ್ನು ಉಣಬಡಿಸಿದ ನಿಮಗೆ ಧನ್ಯವಾದಗಳು.
ಸುನಾಥ ಕಾಕಾ
ಧನ್ಯವಾದಗಳು.
ಇದರಲ್ಲಿ 'ಹೊಲ ಹೊಲದಿಂದ ಹೊಲದವ ಬಂದ' - ಎಂದರೆ ಅರ್ಥವಾಗುತ್ತಿಲ್ಲ.
'ಆನಂದ ಇಂಗಿದವನೆ' - ಪದ ಪ್ರಯೋಗ ಎಸ್ಟು ಅರ್ಥಪೂರ್ಣವಾಗಿದೆ - ಅದರ ಗುಂಗಿನಿಂದ ಹೊರಬರಲಾಗುತ್ತಿಲ್ಲ.
-ಅನಿಲ
Post a Comment