Tuesday, December 9, 2014

ಇಂದಿನ ಅಜಮೀಳ

’ಇವ ಇಂದಿನ ಅಜಮೀಳ’ – ಅನಿಲ್ ತಾಳಿಕೋಟೆ ಬರೀತಾರೆ

October 31, 2014

- ಅನಿಲ ತಾಳಿಕೋಟಿ
ನರಜನ್ಮ ಮುಗಿಯುವ ಮುನ್ನ ಒಮ್ಮೆ ಪಾಪಿ ಆಜಮೀಳ ‘ನಾರಾಯಣ’ ಎಂದು ಕಣ್ಣು ಮುಚ್ಚಿದಾಗ ಮಿಂಚಿನಂತೆ ವಿಷ್ಣುವಿನ ಯಂತ್ರದೂತನೊಬ್ಬ ಹಾಜರಾದ. ಅದಕ್ಕೂ ಮೊದಲೇ ಅಲ್ಲಿ ಪ್ರತ್ಯಕ್ಷನಾಗಿದ್ದ ಯಮನ ಉಕ್ಕಾಳೊಂದನ್ನು ಕಂಡೊಡನೆ ‘ಅಲಲಲಾ ತುಂಬಾ ದಿವಸವಾಯಿತಲ್ಲಯ್ಯ, ಇಂಥ ಅವಘಡಗಳಾಗದೆ, ಲೆಟ್ ಮೀ ಮೇಕ್ ಶ್ಯೂರ್’ ಎನ್ನುತ್ತ ಆಜಮೀಳನ ಯುನಿಕ ಐಡಿ ಚೆಕ್ ಮಾಡಿದ. ಆತನ ಮಾತು ಕೇಳಿ ,ಡೆತ್ ರಿಕಾರ್ಡಿನ ಡಾಟಾಬೇಸಗಳಲ್ಲಿ ಆಗಾಗ ಆಗುತ್ತಿದ್ದ ಮಿಸ್-ಮ್ಯಾಚಗಳನ್ನು ತಪ್ಪಿಸಲು ಭಾರತೀಯ ತಂತ್ರಾಂಶಿಗರಿಗೆ ಹೊರಗುತ್ತಿಗೆ ಮಾಡಿದ್ದ ಅಪ್ಲಿಕೇಶನಲ್ಲಿ ಮತ್ತೊಮ್ಮೆ ತನ್ನ ರೆಕೊರ್ಡ ಪರೀಕ್ಷಿಸಿದ ಯಮನ ಉಕ್ಕಾಳು ‘ಯೆಪ್ ಪರಪೆಕ್ಟ ಮ್ಯಾಚ್ -ನನ್ನ ದತ್ತಸಂಚಯದಲ್ಲೂ ಇದೆ ‘ ಎನ್ನುತ್ತ ವಿಷ್ಣುವಿನ ಯಂತ್ರದೂತನತ್ತ ಪ್ರಶ್ನಾರ್ಥಕ ದೃಷ್ಟಿ ಬೀರಿದ.
‘ನೋಡಯ್ಯಾ, ಲಾಸ್ಟ ಅಪಡೇಟ್ ಟೈಂ ಕಾಲಂನ್ನ -ಅದರ ಪ್ರಕಾರ ಈ ಕೇಸು ನಮಗೆ ಫ್ಲಾಗ್ ಮಾಡಲಾಗಿದೆ. ಐ ವಿಲ್ ಟೇಕ್ ಕೇರ್’ ಎಂದ ಯಂತ್ರದೂತ.
‘ಅದು ಹೇಗಯ್ಯಾ ಸಾಧ್ಯ? ನಮ್ಮ ಡಾಟಾಬೇಸ ಯಾದಿಯಲ್ಲಿ ಸಾವಿರ ಸಾವಿರ ಟ್ರಾನ್ಸಾಕ್ಶನಗಳು ಬಿದ್ದಿವೆ ಇ ಪಾರ್ಟಿಗೆ. ಒಂದೇ, ಎರಡೇ ಇತನ ದುಷ್ಕರ್ಮಗಳ ಪಟ್ಟಿ -ನೋಡಿಲ್ಲಿ’ ಎನ್ನುತ್ತ ಸ್ಕ್ರೀನ ದೊಡ್ಡದಾಗಿಸಿ ತೋರಿಸಿದ ಉಕ್ಕಾಳು.
ಹೌದು ಆತ ಹೇಳುತ್ತಿರುವದು ನಿಜ. ಸಾವಿರ ಸಾವಿರ ದುಷ್ಕರ್ಮದ ಸಾಲುಗಳು. ಓವರ್ ಆಲ್ ರಿಪೊರ್ಟದತ್ತ ನೋಡಿದ. ಮೊದಲಿನ ಇಪ್ಪತ್ತು ವರುಷ ಸತ್ಕರ್ಮದ ರಿಕಾರ್ಡಗಳನ್ನು ಮೀರಿಸಿ ಕೇಕೆ ಹಾಕುತ್ತಿರುವ ಮುಂದಿನ ೬೦ ವರುಷಗಳ ಬಾರ ಗ್ರಾಫ. ಆಕಾಶದಷ್ಟು ಎತ್ತರಕ್ಕೆರಿದ ಅವನ ಕೆಟ್ಟ ಕಾರ್ಯಗಳು. ಹೈಲೈಟ್ ಐಟಂಗಳ ಮೇಲೆ ಮಾತ್ರ ಕಣ್ಣಾಡಿಸಿದ ಯಂತ್ರದೂತ. ಕೊಲೆ,ಸುಲಿಗೆ,ರೇಪು,ಭೂ ಹಗರಣ, ವಂಚನೆ,ಸುಳ್ಳು,ಅಲ್ಲಲ್ಲಿ ಆಗಾಗ ಜೈಲು ವಾಸ,ಬೇಲು ಅಬ್ಬಬ್ಬಾ, ಮದರ್ ಬೋರ್ಡ್ ಸರ್ಕಿಟು ಸುಟ್ಟು ಕರಕಲಾಗುವಷ್ಟು ಚಾರ್ಜ ಷೀಟಿನ ಸಾಲು ಸಾಲುಗಳು. ಏನೋ ಎಡವಟ್ಟಾಗಿದೆ. ಮತ್ತೊಮ್ಮೆ ತನ್ನ ಬಿ.ಐ. ಟೂಲನತ್ತ ನೋಡಿದ. ಸ್ಪಸ್ಟವಾಗಿ ಕಾರಣ ನಮೂದಿಸಲಾಗಿದೆ. ಆತ ಕೊನೆಯಲ್ಲಿ ಕೂಗಿದ ಅರ್ತ ‘ನಾರಾಯಣ’ ದಿಂದ ಕೇಸು ತಮ್ಮ ಡಾಟಾಬೇಸಗೆ ಬಂದಿದೆ. ಒಮ್ಮೆ ಬಂತೆಂದರೆ ಮುಗಿಯಿತು. ಸಿನಿಯರ ಡಿ.ಬಿ.ಎ.ನ ಸ್ಟಾಂಡಿಗ್ ಆರ್ಡರು – ಪಾಲಿಸಲೇಬೇಕು. ಏನೇ ಡಿಸ್ಕಷನ ಮಾಡುವದಿದ್ದರೂ ಕೇಸ ರಿಪೋರ್ಟ ಮಾಡಿಯೇ ತೀರಬೇಕಾದ ಅಗತ್ಯ. ಸಧ್ಯಕ್ಕಂತೂ ತನ್ನ ಕರ್ತವ್ಯ ತಾನು ಮಾಡಲೇಬೇಕು. ನಿಷ್ಟುರವಾಗುತ್ತ ನುಡಿದ ಉಕ್ಕಾಳಿಗೆ.
‘ಸಿ, ಹಿಯರ್ -ಐ ಸಿಂಪಥೈಸ ವಿತ್ ಯು, ಆದರೆ ಡಾಟಾ ಡಾಟಾನೆ, ಏನೂ ಮಾಡಲಾಗದು. ಇವನನ್ನು ನಾನು ಡಿಜಿಟೈಸ್ ಮಾಡಿ ಟ್ರಾನ್ಸಪೋರ್ಟ ಮಾಡಲೇಬೇಕು’.
‘ಏನಂತೆ ಕಾರಣ?’ ತನ್ನ ಪರಿಧಿ ಮೀರಿದ ಪ್ರಶ್ನೆಯೆನಲ್ಲಾ ಹಾಗೆ ಕೇಳುವದು ಎಂಬ ಅರಿವಿದ್ದ ಉಕ್ಕಾಳು ಕೇಳಿದ.
‘ಕಾರಣ, ಅತೀ ಸುಲಭ ಹಾಗೂ ಸೂಚ್ಯ, ಆತ ಕೊನೆ ಘಳಿಗೆಯಲ್ಲಿ ದೇವ ಸ್ಮರಣೆ ಮಾಡಿ ‘ನಾರಾಯಣ’ ಎಂದಿರುವದು.’
‘ಅಲ್ಲಯ್ಯಾ, ಈ ಯುಗದಲ್ಲಿ ಮುಂಚಿನಂತೆ ವರುಷಗಟ್ಟಳೆ ತಪಸ್ಸು ಮಾಡಬೇಕಿಲ್ಲ ಎಂದು ಗೊತ್ತು. ಇದು ಸ್ತುತಿಗೆ ದೇವನೊಲಿವ ಕಾಲವೆಂತಲೂ ಗೊತ್ತು. ಅದಾರೂ ಸಾವಿರ, ಸಾವಿರ ಹಗರಣ ಮಾಡಿ ಸಿಕ್ಕಿ ಬಿದ್ದು, ನನಗಾಗದವರಿಂದ ಮಾತ್ರ ಸಿಕ್ಕಿ ಬಿದ್ದಿದೆಂದು ವಾದಿಸಿ, ಬೇಲು ಪಡೆದು , ಬೇಲಿ ಜಿಗಿದು ಹೋಗುವವರ ಕಥೆಗಿಂತ ಕೀಳಾಯಿತಲ್ಲಯ್ಯ ಇದು. ಆತ ಕೊನೆ ಪಕ್ಷ ಭಕ್ತಿಯಿಂದ, ತಲ್ಲೀನತೆಯಿಂದ ‘ನಾರಾಯಣ’ ಎಂದಿದ್ದರೂ ಓಕೆ ಅಂದುಕೊಳ್ಳಬಹುದಿತ್ತು, ಆದರೆ, ಈ ಪಾಪಿ ಕೂಗಿದ್ದು ನಿನ್ನ ಧಣಿಯನ್ನಲ್ಲವಯ್ಯಾ- ಆತ ಕೂಗಿದ್ದು ತನ್ನ ಮಗನನ್ನು – ಅದ್ಯಾವ ಗುಟ್ಟು ಇನ್ನೂ ಬಚ್ಚಿಡುವದಿತ್ತೋ ಏನೋ? ಇದ್ಯಾವ ಸೀಮೆಯ ನ್ಯಾಯ?’ ಸಿಟ್ಟಿಗೇಳುತ್ತ ನುಡಿದ ಉಕ್ಕಾಳು.
‘ಅಯ್ಯೋ, ನಿನಗೊತ್ತಿಲ್ಲವೆ? ದಿನಾ ಬದಲಾಗುತ್ತವೆ ನಮ್ಮ ರೂಲುಗಳು. ಅದಕ್ಕೊಂದು ದೊಡ್ಡ ಡಿಪಾರ್ಟಮೆಂಟೆ ಇದೆ. ಬೆಳಗ್ಗೆಯಿಂದ , ಸಂಜೆವರೆಗೆ ನಮ್ಮ ಪ್ರಾಜೆಕ್ಟ್ ಮ್ಯಾನೇಜರಗಳು, ಡೈರೆಕ್ಟರಗಳು, ವಿ,ಪಿಗಳು ಮೀಟಿಂಗ ಮಾಡುವದೇಕೆಂದುಕೊಂಡೆ? ಕ್ಷಣಕ್ಷಣ ಬದಲಾಗುವ ವ್ಯವಸ್ಥೆ, ವ್ಯಾಲ್ಯುಗಳನ್ನು ತಾಳೆ ಹಾಕಿ, ಹೊಸ ಹೊಸ ಅಲ್ಗಾರಿತಮ್ ಹುಟ್ಟು ಹಾಕಿ -ಇಂಪ್ಲಿಮೆಂಟ, ರಿಲಿಸ ಮಾಡಿಸಿ, ಪ್ರೊಡಕ್ಷನ ಅಪಡೇಟ ಮಾಡುವದಕ್ಕಾಗಿಯೇ ಅಲ್ಲವೆ? ಅದೇ ಅವರ ಮುಂಗಾಣ್ಕೆಯ ವಿವರಣೆ ಅಲ್ಲವೆ? ಸುಮ್ಮನೆ ನನ್ನ ನ್ಯಾನೊ ಸೆಕೆಂಡಗಳನ್ನು ವೇಷ್ಟ ಮಾಡಬೇಡಯ್ಯಾ. ಒಮ್ಮೆ ಪ್ರೊಡಕ್ಷನ ಡಾಟಾಬೇಸ ಅಪಡೇಟ ಆಯಿತೆಂದರೆ ಮುಗಿಯಿತು ನಮ್ಮಂತ ಕಾಲಾಳುಗಳು ಪ್ರಶ್ನಿಸುವಂತಿಲ್ಲ. ಮೇ ಬಿ, ಈ ಕಾಲದಲ್ಲಿ ಒಂದೇ ಒಂದು ಸಾರಿಯೂ ನಿಜ ಭಕ್ತಿಯಿಂದ ನಾಲ್ಕು ಅಕ್ಷರದ ದೈವ ನಾಮ ನುಡಿಯುವವರಿಲ್ಲವೇನೋ – ಅದೆಕ್ಕೆಂದೆ ಇ ರಿವಾರ್ಡಿರಬೇಕು.’ ನಾಲ್ಕು ಬಾರಿ ಟ್ರೇನಿಂಗಿಗೆ ಹೋಗಿ ಬಂದು , ಸರ್ಟಿಪೈ ಆಗಿದ್ದ ಯಂತ್ರದೂತ ನಿಖರತೆಯಿಂದ ನುಡಿದ.

ದ್ವಂದ್ವವಿನ್ನು ಕಮ್ಮಿಯಾಗದ ಉಕ್ಕಾಳು ನುಡಿದ ‘ಆದು, ಸರಿ, ಒಪ್ಪೋಣ, ಆದರೆ ಈ ಮನುಷ್ಯ ಹೇಳಿದ ನಾಲ್ಕಕ್ಷರ ದೇವನದಲ್ಲ, ತನ್ನ ಲಫಂಗ ಮಗನದ್ದು, ಅದೇ ನನಗೆ ಬಗೆಹರಿಯದ್ದಾಗಿದೆ.’
ಕೈಯಲ್ಲಿ ಕಟ್ಟಿಕೊಂಡಿದ್ದ ಜಿಯೊಎಸನತ್ತ ನೋಡಿದ ಯಂತ್ರದೂತ. ಇವತ್ತೇನೂ ಜಾಸ್ತಿ ವರ್ಕಲೋಡ ಇದ್ದಂತಿಲ್ಲ, ಜ್ಞಾನವೆಲ್ಲ ಮಾಹಿತಿಯಲ್ಲಿ ಸೋರಿ ಹೋಗಿ, ರೋಗರುಜಿನಗಳು ಕಮ್ಮಿಯಾಗಿ, ಮೂರುದಿನ ಮುಂಚೆಯೇ ಬಿರುಗಾಳಿ, ಭೂಕಂಪ ಬರುವದೆಲ್ಲಾ ಗೊತ್ತಾಗಿ ಆಕಸ್ಮಿಕ ಕೇಸುಗಳು ಕಮ್ಮಿಯಾಗುತ್ತಿರಬಹುದೋ ಏನೋ? ಕೊನೆ ಪಕ್ಷ ಸಾಯುವ ಮೊದಲಾದರೂ ಹರಿಸ್ಮರಣೆ ಮಾಡಿದರೆ ಉಪಯೋಗ ಉಂಟೆಂದು ತೋರಿಸಲು ಇದು ಹೊಸ ನಿಯಮವೋ ಏನೋ. ಇದನ್ನೆಲ್ಲ ತಾನು ಈ ಉಕ್ಕಾಳಿನೊಂದಿಗೆ ವಿಚಾರವಿನಿಮಯ ಮಾಡಿಕೊಳ್ಳಬೇಕಾ? ಹ್ಞೂಂ, ಮೊನ್ನೆ ಟ್ರೇನಿಂಗನಲ್ಲಿ ಕೊರೆದಿರಲಿಲ್ಲವೆ ಸಿಂಬಯಾಸಿಸ್ ಎಂದು,
‘ಹೌದಯ್ಯಾ, ಅದನ್ನು ನಿರ್ಧಾರಿಸುವವರು ನೀನು ನಾನಲ್ಲ. ನಮಗಿಂತ ಜಾಸ್ತಿ ಸಂಬಳ-ಗಿಂಬಳ ಗಿಟ್ಟಿಸುವವರು, ಬ್ಯುಸಿನೆಸ ಲಾಜಿಕ್ಕೆಲ್ಲ ಅರಗಿಸಿಕೊಂಡು ಪಗಡದಸ್ತಾಗಿ ಈ ತಂತ್ರಾಂಶ ಬರೆದಿದ್ದಾರೆ. ನಮ್ಮ ಕೆಲಸ ಏನಿದ್ದರೂ ಡಾಟಾ ವೇರಿಪೈ ಮಾಡಿ, ಪಕ್ಕಾ ಮಾಡಿಕೊಂಡು ಬಾಡಿ ಡಿಜಿಟೈ ಮಾಡಿ ಟ್ರಾನ್ಸಪೋರ್ಟ ಮಾಡುವ ಥ್ಯಾಂಕ್ಸಲೆಸ ಕೆಲಸ ಅಷ್ಟೆ.’
‘ಸಂಬಳ’ದ ವಿಷಯ ಬಂದಾಕ್ಷಣ ಇಬ್ಬರೂ ಕಾಲಸೆಂಟರನ ಕೆಲಸಗಾರರಂತೆ ಒಂದು ಕ್ಷಣ ಗದ್ಗಧೀತರಾದರು. ಎಷ್ಟು ಸರಿಯಾಗಿ ಕೆಲಸ ಮಾಡಿದರೂ ತಾವೆಂದಿಗೂ ಆರ್ಕಿಟೆಕ್ಟು, ಡಿಸೈನರು ಆಗದೇ ಬರೀ ಈ ಮಾಮೂಲಿ ಹೆಣ ವಿಲೇವಾರಿ ಮಾಡುವವರಾಗಿ ಉಳಿಯುವದಕ್ಕೆ. ಇಬ್ಬರೂ ಯಂತ್ರಗಳಾಗಿದ್ದರಿಂದ ಸರಿ ಹೋಯಿತು ಇಲ್ಲದಿದ್ದರೆ ಅಲ್ಲೇ ಮುಷ್ಕರ ಒಂದು ಆರಂಭವಾಗಿ ಸೃಷ್ಟಿಯಲ್ಲ ಅಲ್ಲೊಲಕಲ್ಲೊಲವಾಗಿರುತ್ತಿತ್ತು.
‘ಈಗ ನಮಗೆ ಬಗೆಹರಿಯದಿರುವ ಪ್ರಶ್ನೆ ಎಂದರೆ ಆತ ಪ್ರಾಯಶ್ಚಿತ್ತದಿಂದ, ಆಳದ ಅರಿವಿನಿಂದ ನಾರಾಯಣ ಎಂದಿದ್ದೋ, ಅಥವಾ ವೇದನೆ, ನೋವಿನಿಂದ, ಮತ್ತೇನೋ ಮುಚ್ಚಿ ಹಾಕಲು ನಾರಾಯಣನೆಂಬ ಮಗನನ್ನು ಕೂಗಿದ್ದೋ ಅಂಬುವದಲ್ಲವೆ?’ ಸ್ವಲ್ಪ ಸುಧಾರಿಸಿಕೊಂಡು ಕೇಳಿದ ಉಕ್ಕಾಳು.
‘ಹೇಳಿದೆನಲ್ಲಯ್ಯಾ, ನಮ್ಮಲ್ಲಿ ಪ್ರಾಯಶ್ಚಿತ್ತಕ್ಕೆ ಆದ್ಯತೆ, ನಿಮ್ಮಲ್ಲಿ ಶಿಕ್ಷೆಗೆ. ನಮಗೂ -ನಿಮಗೂ ಇರುವ ವ್ಯತ್ಯಾಸ ಇಷ್ಟೇಯೇ’
‘ಹ್ಞೂಂ ನಿಮ್ಮ ಸ್ಯಾಲರಿ, ಆಪ್ಶನ್ಸ್, ವೆಕೇಷನ್ ಪ್ಯಾಕೇಜ ಮುಂದೆ ನಮ್ಮದೇನಯ್ಯಾ, ಕಂಪೇರ ಕೂಡಾ ಮಾಡಲಾಗುವದಿಲ್ಲ ಬಿಡು, ಆದರೆ ನಿನಗೊಂದು ವಿಷಯ ಗೊತ್ತೋ? ಆ ಸತ್ಯವಾನನ ಕೇಸಿನಲ್ಲಿ ಡಾಟಾ ಎಂಟ್ರಿಯಲ್ಲಿ ತಪ್ಪು ಕಂಡು ಹಿಡಿದು ತೋರಿಸಿದ ಆ ಅನಾಲಿಸ್ಟಗೆ ಸಿಕ್ಕ ಬೋನಸ ಎಷ್ಟೆಂದು? ಅದಾದ ಮೇಲೆ ಒಮ್ಮೆಯೂ ಕೆಲಸ ಮಾಡಬೇಕಾದ ಜರೂರತ್ತೆ ಬರಲಿಲ್ಲವಂತೆ ಅವನಿಗೆ. ಈಗ ಯಮನಿಗೆ ಮೆಂಟೋರ ಆಗಿ ಆರಾಂಗಿದ್ದಾನೆ ಮಜ ಮಾಡ್ಕೊಂಡು. ನನದೊಂದು ಚಿಕ್ಕ ರಿಕ್ವೆಷ್ಟು- ಒಂದು ಸಣ್ಣ ಪ್ರಯೋಗ ಮಾಡೋಣವೇನಯ್ಯಾ?’ ಸಾವಕಾಶವಾಗಿ ನುಡಿದ ಉಕ್ಕಾಳು.
‘ಏನಪ್ಪಾ ಅದು, ಪ್ರಯೋಗ ?’ ಸ್ವಲ್ಪ ಮೆತ್ತಗಾಗಿ, ಆಸಕ್ತನಾಗಿ ಕೇಳಿದ ಯಂತ್ರದೂತ.
‘ಅಂಥ ಭಾರಿ ಏನಲ್ಲ. ಇವನಿಗೆ ಒಂದೆರಡು ನ್ಯಾನೊ ಸೆಕೆಂಡುಗಳವರೆಗೆ ಮರಳಿ ಜೀವ ಬರಿಸೋಣ, ನೋಡೋಣ ಆಗ ಆತ ಕೂಗಿದ್ದು ಯಾರನ್ನು, ಏತಕ್ಕೆಂದು?’
‘ಅಯ್ಯೋ, ನಮ್ಮ ನ್ಯಾನೊ, ನಿಮ್ಮ ನ್ಯಾನೊ ಬೇರೆ ಬೇರೆ, ಅವನಿಗಂತೂ ಸೆಕೆಂಡುಗಳಸ್ಟು ಈ ಕಾಲದ ಫ್ರೇಮನಲ್ಲಿ ಗೊತ್ತಲ್ಲವೆ?’ ಬೋನಸ ಬಗ್ಗೆ ಯೋಚನೆ ಮಾಡುತ್ತ ನುಡಿದ ಯಂತ್ರದೂತ.
‘ಗೊತ್ತು, ಗೊತ್ತು, ನಿನ್ನದೇನು ರಿಸ್ಕ ಬೇಡಾ, ನನ್ನ ಕೋಟಾದಿಂದ ಮಾಡ್ತಿನೇಳು’ ಎನ್ನುತ್ತ ಯಾವದೋ ಡಿಕ್ರಿಪ್ಟ ಕೋಡ ಉದುರಿದ ಉಕ್ಕಾಳು.
‘ಅಯ್ಯಯ್ಯೋ, ಬೇಡವೋ, ಕಾಲ ಇಗಿರುವದಕ್ಕಿಂತ ಹೆಚ್ಚು ಕೆಟ್ಟು ಹೋಗುತ್ತದೋ’ ಎಂಬ ಅಳುಕಿನ ಯಂತ್ರದೂತನ ಮಾತು ಮುಗಿಯುವ ಮುಂಚೆಯೇ, ಸತ್ತಂತವನನ್ನು ಬಡೇದೆಬ್ಬಿಸಿದಂತೆ ಆಜಾಮೀಳ ಸಟಕ್ಕನೆ ಎಚ್ಚೆತ್ತು ಜೋರಾಗಿ -
‘ನಾರಾಯಣ, ನಾರಾಯಣ, ಹಾ, ಬಾ ಇಲ್ಲಿ ನಾರಾಯಣ’ ಎಂದ.
ಇಲ್ಲಿಯವರೆಗೂ ಅಳುತ್ತಾ, ತೀರ ದುಃಖಿತನಾಗಿದ್ದವನಂತಿದ್ದ ಮಗ ನಾರಾಯಣ ಗರ ಬಡಿದವನಂತೆ ತಂದೆಯ ಕೋಣೆಯತ್ತ ನೋಡಿದ,ಇದೀಗ ತಾನೆ ಎಲ್ಲರಿಗೂ ಅಪಡೇಟ ಮೆಸೇಜ ಕಳುಹಿಸುತ್ತಿದ್ದವನು ಗಾಭರಿಯಾಗಿ ಇದೇನಪ್ಪಾ ಸತ್ತ ಈತ ತಿರುಗಿ ಬಂದನಲ್ಲಾ ಎಂದು ದಿಗ್ಭ್ರಾಂತಿಯಿಂದ ನೋಡುತ್ತ ನಿಂತ.
‘ನಾರಾಯಣ, ನಾರಾಯಣ ಬಾ, ಬಾ, ನನ್ನ ಆಸ್ತಿಯೆಲ್ಲಿ ಕೊಂಚ ಯಾರಿಗೋ ಹಂಚ ಬೇಕಾಗಿದೆ ಬಾ ಬೇಗ, ಬಾ ಬೇಗ, ಬೇ..’ ಮತ್ತೆ ಕೂಗಿದ ಆಜಮೀಳ.
ಸಟಕ್ಕನೆ ಕಂಭದ ಮರೆಗೆ ಹೋಗಿ ನಿಂತ ನಾರಾಯಣ, ಮೈಯೆಲ್ಲಾ ಕಣ್ಣು, ಕಿವಿಯಾಗಿಸುತ್ತ. ಅಪ್ಪನ ಕೋಣೆಯತ್ತ ಅವನ ಧ್ಯಾನವೆಲ್ಲ. ಅವನ ಮನಸ್ಸು ತೀವ್ರವಾಗಿ ಯೋಚಿಸುತ್ತಿದೆ -ಇನ್ನೂ ಎಷ್ಟು ಹೊತ್ತು? ಮುಂದೆ ಹುಟ್ಟಬಹುದಾದ ತನ್ನ ಮಕ್ಕಳ ಹೆಸರು ನಿರ್ಧರಿಸಿಬಿಟ್ಟ ನಾರಾಯಣ ಹುಳ್ಳನೆ ನಗೆಯೊಂದಿಗೆ, ‘ಇಟ್ ಹಾಸ ಟು ಬಿ ಎ ಸಪ್ತ ಬೀಜ ಮಂತ್ರ ಫಾರ ಮ್ಯಾಕ್ಷಿಮಮ ಬೆನೆಫಿಟ’ ಎಂದುಕೊಳ್ಳುತ್ತ ಮನದಲ್ಲೆ ನಿರ್ಧರಿಸಿದ – ‘ಓಂ, ನಮೋ, ನಾರಾಯಣ’!

ವಿ.ಸೂ.
ಆಜಮೀಳ ಭಾಗವತ ಪುರಾಣದೊಂದು ಪಾತ್ರ -ಹೆಚ್ಚಿನ ಮಾಹಿತಿಗೆ ನೋಡಿ – http://en.wikipedia.org/wiki/Ajamila
ಉಕ್ಕಾಳು – Droid
ಯಂತ್ರದೂತ -Robot

Friday, October 24, 2014

ಬೆಳಗು

‘ಬೆಳಗೆಂದರೆ ಮತ್ತೊಂದು ಮುಂಜಾವಿಗಾಗಿ ಕಾದು ಕೂಡುವದು’ – ಅನಿಲ ತಾಳಿಕೋಟಿ

October 23, 2014
ಬೆಳಗು

ಅನಿಲ ತಾಳಿಕೋಟಿ
ಮುಗುಚಿ ಹಾಕಲೋ ಎಂಬಂತಿರುವ, ನಾಲ್ಕೂ ಬದಿಯಿಂದಲೂ ಎದ್ದೆದ್ದು ಬರುತ್ತಿರುವ ಅಲೆಗಳ ಆರ್ಭಟ. ಅದನ್ನು ಎದುರುಗೊಳ್ಳುವೆ, ಅಪ್ಪಿಕೊಳ್ಳುವೆ ಆದರೆ ಅಹಂಕಾರದಿಂದ ಎದುರಿಸುವದಿಲ್ಲಾ. ಅದನ್ನು ಚಾಲಕ ಶಕ್ತಿಯಾಗಿ ಬಳಸುವೆ -ಆದರೆ ಅತ್ಯಾಶೆಯಿಂದ ಸ್ವಾಹಾ ಮಾಡಿಕೊಳ್ಳುವದಿಲ್ಲ ಎನ್ನುವ ಪಾಠ ಕಲಿಯಲು ಸಮುದ್ರಯಾನ ಅತ್ಯಂತ ಉಪಯುಕ್ತವಾದದ್ದು. ನಮ್ಮನ್ನು ಕ್ಷುದ್ರರಾಗಿಸುವದಿಲ್ಲವಾದರೂ ನಮ್ಮ ಸ್ಥಾನಮಾನವನ್ನರಹದೆ ಬಿಡುವದಿಲ್ಲ. ನಮ್ಮನ್ನು ವಿನೀತರಾಗಿಸುತ್ತ, ತಗ್ಗಿ ಬಗ್ಗಿ ನಡೆಯಲು ಪ್ರೇರೇಪಿಸುತ್ತದೆ-ಸಾಗರ.
ಕಾಲು ಚಾಚಿ, ಕಣ್ಣು ಮುಚ್ಚಿ ನನ್ನನ್ನು ನೀನು ಸ್ವಲ್ಪ ಮಟ್ಟಿಗೆ ಅರಿಯಬಲ್ಲೆ. ನಿನ್ನ ಮೈ ಮನಸಿನಲ್ಲಿ ಮಗ್ನನಾಗಿಸಬಲ್ಲಿಯಾದರೆ ನನ್ನ ಬಳಿ ಬರಬಲ್ಲಿ ಎಂಬ ತಿಳವಳಿಕೆ ನೀಡುವ ಬೆಳಗು. ನೀನಗೇನೆಲ್ಲಾ ಅವಕಾಶ ಕೊಟ್ಟಿದ್ದೇನೆ -ತಿಳವಳಿಕೆ ತಂದೆ -ತಾಯಿ ನೀಡಿದರೆ, ಸಂಸಾರ ಸುಖ,ಶಾಂತಿ ನೀಡಿದೆ. ಮಿತ್ರರು ನಿನ್ನ ಮಹತ್ತರಿತಿದ್ದಾರೆ, ಸುಖಿಯೊ ಅಸುಖಿಯೊ ನೀನು ಎಂಬುವದು ನಿನ್ನ ಮನದಲ್ಲಿದೆ, ನಿನ್ನ ಕೈಯಲ್ಲಿದೆ. ಥಳ ಥಳ ಹೊಳೆಸಿ ತೊಳೆಸಿದ್ದೇನೆ ನಿಮ್ಮೆಲ್ಲರಿಗಾಗಿ ಅನುದಿನ. ನೋಡುವ ಭಾಗ್ಯ ಕರುಣಿಸಿದ್ದೇನೆ ಅದಕ್ಕೆಂದೆ. ನೋಡದೆ ಮಲಗುವ, ಮತ್ತೇನೋ ಮಾಡುವ ಸ್ವಾತಂತ್ರವನ್ನೂ ನಿಮಗೆ ಬಿಟ್ಟಿದ್ದೇನೆ. ಆಯ್ಕೆ ನಿನ್ನದು ಕಂದ ಎನ್ನುವ ವಾತ್ಸಲ್ಯಮಯಿ ಭಾಸ್ಕರ – ಕರ್ತವ್ಯದ ಕರೆಗಾರ. ಆರಾಮಾಗಿ ಕಾಲುಚೆಲ್ಲಿ ನನ್ನ ಬಗ್ಗೆ ಯೋಚಿಸಲು ನೀನು ಕಷ್ಟಪಡುತ್ತಿರುವೆಯಾದರೆ ಆ ಅಧಿಕಾರ ನಿನ್ನದು ಎಂಬ ಔದಾರ್ಯವಂತನಾತ. ಪ್ರಪಂಚದ ಯಾವ ತಂದೆ, ತಾಯಿಗೂ ತಮ್ಮ ಮಕ್ಕಳ ಅಭ್ಯುದಯಯದ ಹೊರತಾಗಿ ಮತ್ತೇನೋ ಬೇಕಾಗಿರಬಹುದೆ ಎಂಬ ಭಾವ ಬಂದ ದಿನ ಮನುಜನ ಜನ್ಮ ಅರ್ಥ ಕಳೆದುಕೊಂಡಂತೆ. ಹಾಗೆಯೇ ಕರ್ತವ್ಯ ಎಚ್ಚರಿಸುವದು ಅವನ ನಿಯೋಜಿತ ಕೆಲಸ ಅಲ್ಲ ಎಂದುಕೊಂಡ ದಿನ ನಮ್ಮ ಪಿತೃ ಋಣ ಹರಿದಂತೆ.

ಅಗಣಿತ ಅರಿವಿನ ಗಣಿಯಿದು, ಗಣಿತದಂತಹ ಸಲಕರಣೆ ನೀನು ಆವಿಷ್ಕರಿಸಬಲ್ಲೆಯಾದರೆ , ಸರ್ವ ಜನಾಂಗದ ಏಳಿಗೆ ಬಯಸುವೆಯಾದರೆ ಇಗೋ ಈ ಬೆಳಗಿನ ಉಡುಗೊರೆ ನಿನಗೆ. ಕಣ್ಣು ಮುಚ್ಚಿ ಕುಳಿತರೂ ಕುಣಿಯುವದು ಅರುಣರಾಗ ಕಣ್ಣ ಮುಂದೆ. ಹಗುರಾಗಿ ಉಸಿರಾಡುತ್ತ ಮನಸು ಪ್ರಶಾಂತ ವಾಗಿಸಿಕೊಳ್ಳುತ್ತ ನಿನ್ನ ನೀನೆ ಮರೆಯಬಲ್ಲೆಯಾದರೆ ನಿನ್ನ ಮೈಗೆ ತಂಗಾಳಿಯಾಗಿ ಬಾ ನೀಡುವೆ ಸಾಥಿ ಎಂಬ ಆಶ್ವಾಸನೆ ಅವನದು.
ಇದೇ ಧ್ಯಾನದ ವ್ಯಾಖ್ಯಾನವೋ ಎಬ ಸಂದಿಗ್ಧತೆ ಬೇಡಾ. ಮರೆಯುವದೆ, ತನ್ನನ್ನು ತಾನೆ ಮರೆತು ಆಚೆ-ಇಚೆಯ ಅರಿವಿಲ್ಲದೆ ನಿರುದ್ವಿಗ್ನನಾಗಿ ಘಂಟೆ ಎರಡು ಕಳೆಯಬಲ್ಲೆಯಾದರೆ ಅದೇ ಧ್ಯಾನ. ಯಾವ ಮಂತ್ರ, ತಂತ್ರಗಳು ಬೇಕಿಲ್ಲ.ಯಾವ ಅಖಂಡ ನಂಬುಗೆಗಳ ಅವಶ್ಯಕತೆ ಇಲ್ಲಾ. ನಾಡು ನುಡಿಗಳ ಗೊಂದಲವಿಲ್ಲ. ಆನಂದಿಸು ಈ ಕ್ಷಣ, ಈ ದಿನ, ಇಲ್ಲಿ ನೀನೆಲ್ಲಿರುವೆಯೋ ಅಲ್ಲಿ. ಈ ದಿನದ ಪ್ರತಿ ಘಳಿಗೆಯೂ ಅಮೂಲ್ಯ, ಪ್ರತಿ ಹಗಲು ಸುದಿನವೆ, ಪ್ರತಿ ಅಲೆಯೂ ಸಮಸ್ತದ ಮೂಟೆ ಹೊತ್ತಿರುವ ಸಂಚಲನವೆ. ಈ ಚಲನೆಯೆ ಜೀವಾಳ. ವೃತ್ತದ ಚಲನೆ ಜೀವನವೆಂದರೆ. ಕೊನೆ ಮೊದಲಿಲ್ಲದ ಅಥವಾ ಕೊನೆ ಮೊದಲಿಂದಲೆ ತುಂಬಿದ ಬಾಳಿದು. ನಿನಗೆ ಮಾತ್ರ ಗೊತ್ತು ಯಾವುದು ಆರಂಭ ಯಾವುದು ಕೊನೆ ಎಂಬುವದು. ನಿನ್ನ ವ್ಯಾಸವೂ ನಿನ್ನದೆ ಪ್ರತಿಬಿಂಬ. ಎಷ್ಟು ಬೇಕೋ ಅಷ್ಟು ಹಿಗ್ಗಿಸಿಕೊಳ್ಳಬಹುದು, ಆಕುಂಚಿಸಿಕೊಳ್ಳಲೂಬಹುದು. ಹಿಗ್ಗಿಸಿಕೊಂಡು ಯಾರನ್ನು ತಾಗಿಸಿಕೊಳ್ಳಬಹುದು ಎಂಬುವದು ನಮಗೆ ಬಿಟ್ಟಿದ್ದು. ಕುಗ್ಗಿಸಿಕೊಳ್ಳುತ್ತ ಎಷ್ಟು ಏಕಾಂಗಿಯಾಗಗಬಲ್ಲೆವು ಎಂಬುವದು ಕೂಡಾ ನಮಗೆ ಬಿಟ್ಟಿದ್ದು. ನಿನ್ನ ವೃತ್ತದ ಗಾತ್ರ ನಿಂತಿರುವದು ಅದರ ವ್ಯಾಸದ ಮೇಲಲ್ಲ ಬದಲಾಗಿ ಅದರ ಪರಿಧಿಯಿಂದ ಎಷ್ಟು ಜನ ಖುಷಿಯಾಗಿದ್ದಾರೆ ಎಂಬುವದರ ಮೇಲೆ. ಬೇರೆಯವರ ಖುಷಿಯೇ ಅದರ ಸಾಂದ್ರತೆಯ ಅಳತೆಗೋಲು. ಪ್ರತಿಯೊಬ್ಬರಿಗೆ ನೀನು ನೀಡಿದ ಸಂತಸ ಅವರಿಂದ ಪಡೆದ ನಲಿವನ್ನು ಕಳೆದೂ ಸಕಾರಾತ್ಮಕವಾಗಿ ಉಳಿಯಬಲ್ಲದಾದರೆ ಅದು ನಿನ್ನ ವೃತ್ತದ ಸಾಂದ್ರತೆಗೆ ಸೇರಿಕೆ ಆಗುತ್ತ ಹೋಗುವದು. ಸಾಂದ್ರವಾದಷ್ಟು ಸುಂದರವಾಗುತ್ತ ಸಾಗುವ ಬದುಕಿದು. ಆ ಸಾಂದ್ರತೆ ಇಟ್ಟುಕೊಂಡು ಬೆಳೆಯಬಲ್ಲೆಯಾದರೆ ಅದುವೆ ಜೀವನದ ಗುರಿ. ಆದರೆ ಎಚ್ಚರವಿರಲಿ , ಜಾಸ್ತಿ ಜನರಾದಷ್ಟು ಸಾಂದ್ರತೆ ಕಮ್ಮಿಯಾಗುತ್ತ ಹೋಗುವದು ಜಗ ನಿಯಮ. ನಮ್ಮ ಅಂತಿಮ ಗುರಿ ಎಷ್ಟು ಸಾಧ್ಯವಗುತ್ತದೋ ಅಷ್ಟು ಇತರರನ್ನು ಮುಟುತ್ತ ನಾವು ಏಕಾಂಗಿಯಾಗಿ ಏಳಿಗೆಯಾಗುತ್ತ ಎಷ್ಟು ಸಾಂದ್ರವಾಗಿರಬಲ್ಲೆಯೋ ಅಷ್ಟು ಸಾಂದ್ರವಾಗಲು ಪ್ರಯತ್ನಿಸುವದು.
ಈ ಸಾಂದ್ರತೆಯ ಅಳತೆಗೋಲು ಅನೇಕ. ಬೆಳೆದಂತೆಲ್ಲ ಬದಲಾಗುವ ಬಾಬತಿದು -ನಮ್ಮ ದ್ರವ್ಯದ ಮೊತ್ತ ನಾವಲ್ಲದೆ ಮತ್ಯಾರು ನಿರ್ಧರಿಸಬಲ್ಲರು? ಹುಟ್ಟಿದಾಗ ಪರಿಪೂರ್ಣ ಒಂದು ನಮ್ಮ ಸಾಂದ್ರತೆಯ ಸಂಖ್ಯೆ. ನೂರು ಪ್ರತಿಶತ ಇದ್ದಂತೆ ಇದು. ಪ್ರತಿಯೊಬ್ಬರಿಗೂ ಜೀವನ ಒಡ್ಡುವ ಸವಾಲಿದು. ನಿನಗೊಂದು ಆಯುಸ್ಸೆಂಬ ನಿನ್ನ ಕೈ ಮೀರಿದ ಅಸ್ಥಿರವಾದ ಧಾತು ಒಂದನ್ನು ಅಳವಡಿಸಿದ್ದೇನೆ. ಅಲ್ಲಿಯವರೆಗೂ ಬದುಕಿ ನಿನ್ನ ಆರಂಭದ ಶೇಕಡಾ ನೂರಿನಿಂದ ಎಷ್ಟು ದೂರ ಸಾಗಿ ಹೋಗುತ್ತಿಯೋ ನೋಡೋಣ ಎಂಬ ಸವಾಲು. ಅಂತಹ ನೂರಾರು ಜನುಮಗಳ, ಯುಗ ಯುಗಾಂತರದ ಜನನ ಮರಣಗಳ ಪಟ್ಟಿ ಹರಡಿದ್ದೇನೆ ಈ ಜಗದಲ್ಲಿ. ಸುಖ-ಶಾಂತಿಯನ್ನು ಅರಿಸುವ ಅಗತ್ಯವಿಲ್ಲ. ಇನ್ನೂ ವರೆಗೂ ಈ ನೂರನ್ನು ತ್ರೇತಾಯುಗದಿಂದ ಇಲ್ಲಿಯವರೆಗೂ ಎಷ್ಟು ಮಾನವ ಜನ್ಮಗಳು ಮುಟ್ಟಿವೆಯೋ ನನಗಂತೂ ಗೊತ್ತಿಲ್ಲ. ಇಗಿರುವ ಜಗದ ಸ್ಥಿತಿ ನೋಡಿದರೆ ನಾವಿನ್ನೂ ಕ್ರಮಿಸುವ ದಾರಿ ಬಹಳ ದೂರವಿದ್ದಂತನಿಸುವದಿಲ್ಲವೆ?
ಯಾವ ಕ್ರಮವಿಲ್ಲದೆ, ವೈಜ್ನಾನಿಕವಲ್ಲದ, ಸ್ವೇಚ್ಛಾನುಸಾರದ ಮಾದರಿಯೊಂದನ್ನು ಸುಮ್ಮನೆ ನೋಡೋಣ. ನನಗೆ ಅನಿಸುವಂತೆ ಬುದ್ದ, ಬಸವ, ಏಸುಗಳನ್ನು ಬದಿಗಿರುಸುವಾ. ರಾಮ, ಕೃಷ್ಣ -ಅವತಾರ ಗಳ ಬಗ್ಗೆ ಗೊತ್ತಿರುವದಕ್ಕಿಂತ ಹೆಚ್ಚು ಗೊತ್ತಿಲ್ಲದ್ದು – ಅವರನ್ನು ಬಿಟ್ಟು ಬಿಡುವಾ, ನನ್ನ ಅಲ್ಪ ಮತಿಗೆ ಗೊತ್ತಿರುವ ಏಕ ಮಾತ್ರ ಉದಾಹರಣೆ ಎಂದರೆ ಮಹಾತ್ಮನದು, ನನ್ನ ವೈಯಕ್ತಿಕ ದೃಷ್ಟಿಯಲ್ಲಿ ಆತ ಪ್ರಾಯಶಃ ಶೇಕಡಾ ೮೫ ಅನಿಸುತ್ತದೆ. ‘A’ (ಉದಾತ್ತ ಮಾನವ) ಗಿಂತ ಸ್ವಲ್ಪ ಕಮ್ಮಿ. ಆದರೆ ಉದಾತ್ತತೆಯತ್ತ ಖಂಡಿತವಾಗಿ ಹೊರಟವನು, ಇಲ್ಲಿಯವರೆಗೆ ಎಷ್ಟು ಜನ ಯಾವ ಯಾವ ಪೆರ್ಸೆಂಟ ಗಳಿಸಿದ್ದಾರೋ ಅದನ್ನು ವರ್ಗಿಕರಿಸುವ ಗುರು ಎಂದು ಬರುತ್ತಾನೋ ನನಗಂತೂ ಗೊತ್ತಿಲ್ಲ -ಕಾಯುವ ತಾಳ್ಮೆ ಇದ್ದುದಾದರೆ ಅದುವೆ ದೊಡ್ಡ ಬಹುಮಾನ ಇ ಜೀವನದ್ದು. ಗಾಂಧಿಯನ್ನು ಮೀರಿಸುವ ಇನ್ನೊಬ್ಬ ಮಾನವ ಬಂದೇ ಬರುತ್ತಾನೆ – ಪ್ರಶ್ನೆ ಅದಲ್ಲ – ನಾವು ಅಳೆಯುವ ಮಾನದಂಡ ಎಷ್ಟು ಕಳಂಕ ರಹಿತವಾಗಿರಬಲ್ಲದು ಎಂಬುವದು ನಿಜದ ಪ್ರಶ್ನೆ. ಇವತ್ತಿನ ಸೋಶಿಯಲ ಮೀಡಿಯಾಗಳು, ಮಾರುಕಟ್ಟೆಯ ದ್ವಂದ್ವಗಳು, ಬದಲಾಗುತ್ತಿರುವ ನಮ್ಮ ಮೌಲ್ಯಗಳು, ಸಂವೇದನೆಗಳು ನನಗೇನೋ ಇನ್ನೊಬ್ಬ ಮಹಾತ್ಮನನ್ನು ಅಳೆಯಲು ನಾವು ಅಸಮರ್ಥರಾಗಿರುತ್ತೇವೆ ಎನಿಸುತ್ತದೆ. ಕೆಡುವುದೇ ಕಾಲದ ನಿಯಮ -ಕೆಡುವುದಲ್ಲದೆ ನಾವು ಒಳ್ಳೆಯದನ್ನು ಕಟ್ಟಲಾರೆವೂ ಏನೋ? ಕೆಡುವುದರ ಸವಾಲೆಂದರೆ ಅಂತಿಮ ಕೆಡುವಿಕೆ ಏನೆಂಬ ಅರಿವಿರಲಾರದ್ದು. ಆಟದ ವಿನ್ಯಾಸ ನಾವು ನಿರ್ಮಿಸಿದ್ದಲ್ಲವಾದ್ದರಿಂದ ಮುಕ್ತಾಯ ನಮ್ಮ ಅರಿವಿನಾಚೆಯದು. ಅದೇ ಪ್ರಾಯಶ ನಮ್ಮನ್ನು ಆಟದಿಂದ ವಿಮುಖರಾಗಿ ಓಡಿಹೋಗದಂತೆ ಪ್ರಚೋದಿಸುತ್ತಿರುವದು. ಬೆಳಗೆಂದರೆ ಅದೇ -ಬದುಕಿನ ಮತ್ತೊಂದು ಮುಂಜಾವಿಗಾಗಿ ಕಾದು ಕೂಡುವದು, ಹೊಸ ಹುರುಪಿನೊಂದಿಗೆ ಹೊಸ ಆಶೆಯಿಂದ.

ಮಹಾತ್ಮರಿಗೊಂದು ಮನವಿ

‘ಮಹಾತ್ಮರಿಗೊಂದು ಮನವಿ’ – ಅನಿಲ ತಾಳಿಕೋಟಿ ಬರೀತಾರೆ

October 4, 2014
- ಅನಿಲ ತಾಳಿಕೋಟಿ
ಕೃಷ್ಣ, ಏಸು, ಬಸವರ ಕೊನೆಯನ್ನೆ ನೋಡಿ. ಅದರೊಲ್ಲೊಂದು , ಆ ಕಾಲಕ್ಕೆ ತಕ್ಕುದಾದ, ಅವನತಿಯ, ಗತಿಗೇಡಿತನದ ಲಕ್ಷಣವಿದೆ. ಕೃಷ್ಣ ಈ ಮೂವರಲ್ಲಿ ಹಿಂದಿನವನು, ಏನೆಲ್ಲವನ್ನು ಸಾಧಿಸಿದವನು, ಗೀತೆಯಂತಹ ಉತ್ಕೃಷ್ಟ ಜೀವನ ವಿಧಾನದ ಕೈಪಿಡಿ ಅರುಹಿದವನು. ಕೊನೆಗೆ ಬೇಸತ್ತು ಈ ಒಳಜಗಳ ಬಗೆಹರಿಸಲು ನನ್ನಿಂದಾಗದು ಎಂದು, ಈ ಯಾದವಿ ಕಲಹಕ್ಕೆ ಕೊನೆಯಿಲ್ಲವೆಂದು ಕೈ ಚೆಲ್ಲಿ ಬೇಡನಿಂದ ಹತನಾಗಿ ಬೇಡಪ್ಪಾ ಇಲ್ಲಿಯವರ ಸಹವಾಸ ಎಂದು ಅವತಾರ ಸಮಾಪ್ತಿಯಾಗಿಸಿಕೊಂಡವನು.
ಏಸು ವ್ಯವಸ್ಠೆ ಬದಲಿಸಲು ಏನೆಲ್ಲಾ ಪ್ರಯತ್ನಪಟ್ಟವನು. ಜನರಿಗೆ ಕರುಣೆ,ತಾಳ್ಮೆ,ಪ್ರೀತಿ ಕಲಿಸಲು ಹೆಣಗಾಡಿ ದಣಿದವನು. ಠಕ್ಕ ದೊರೆಗಳ ಜೊತೆಗಾರರಾದ ವಂಚಕ ಪೂಜಾರಿಗಳ ನಿಲವು ಖಂಡಿಸಿದವನು. ಜನರಿಗೆ ವಿಶಾಲತೆಯ ಬೋಧನೆ ಮಾಡುತ್ತ ತನ್ನ ಶಿಷ್ಯನೆ ತನ್ನನ್ನು ಬಂಧಿಸಲು ಕಾರಣನಾಗುತ್ತಾನೆ ಎಂಬ ಅರಿವಿದ್ದವನು, ತಾನು ಬದಲಿಸಬೇಕಾದ ಜನರೇ ಕಳ್ಳನೊಬ್ಬನಿಗೆ ಕ್ಷಮೆ ತೋರಿ ತನ್ನನ್ನು ಕೊಲ್ಲು ಕಂಭಕ್ಕೆ ಬಿಗಿಯುತ್ತಾರೆಂದು ಅರಿತವನು. ತನ್ನನ್ನು ಸಮರ್ಥಿಸಿಕೊಳ್ಳಲು ಅವಕಾಶವಿದ್ದಾಗಲೂ ಜನರ ಮೌಢ್ಯಕ್ಕೆ ಮರುಕನಾಗಿ ಸಾವಿಗೀಡಾದವನು.

ಬಸವನದಂತೂ ಅತ್ಯಂತ ಕಷ್ಟದ ಜನ ಮನ ಪರಿವರ್ತನೆಯ ಕಾರ್ಯ. ಢಾಂಬಿಕತೆಯನ್ನು ನಿಷ್ಟುರವಾಗಿ ತಿರಸ್ಕರಿಸುತ್ತ, ಅಮೂರ್ತತೆಯನ್ನು ಸಾರಾಸಗಟಾಗಿ ನಿರಾಕರಿಸುತ್ತ ಮೊದಲು ಮಾನವನಾಗು, ಸಹಜೀವಿಯನ್ನು ಗೌರವದಿಂದ ಕಾಣು ಎನ್ನುವ ಪ್ರಜ್ಞೆ ಬಿತ್ತಲು ಹೆಣಗಿ ಬಿಜ್ಜಳನ ದ್ವೇಷ ಕಟ್ಟಿಕೊಂಡವನು. ತನ್ನೆಲ್ಲ ಬೋಧನೆಯ ಒಂದಂಶವನ್ನಾದರೂ ಜನರಲ್ಲಿ ಕಾಣಲು, ಜಾತಿ ಅಂತರವನ್ನು ಕೀಳಿ ಹಾಕಲು ಸಾಧ್ಯವಾಗದಕ್ಕಾಗಿ ಪರಿತಪಿಸಿದವನು. ಕಲ್ಯಾಣ ಬಿಟ್ಟು, ಶರಣರ ಆಹುತಿ ನೋಡಿ ಮರುಗಿದವನು, ಕೂಡಲಕ್ಕೆ ಬಂದು ಏಕಾಂಗಿಯಾಗಿ ನೊಂದು ಸಂಗಮವಾದವನು.
ಇಷ್ಟೆಲ್ಲಾ ಗೊತ್ತಿದ್ದು ನೀನು ಇತ್ತೀಚಿಗೆ ಬಂದವನು. ಜೀವನದುದ್ದಕ್ಕೂ ಅಹಿಂಸೆ ಅರಗಿಸಿಕೊಂಡು ಎಲ್ಲರ ನೋವನ್ನು ನುಂಗಲುದ್ಯುಕ್ತನಾದ ನೀನಗೆ ಸಿಕ್ಕಿದ್ದಾದರೂ ಏನು? ಊಟಕ್ಕಿಂತ ಉಪವಾಸ ಜಾಸ್ತಿ ಕಂಡೆ. ಮನುಜರ ಮೊದಲಿಕೆ ನೋಡಿದೆ, ಕೊನೆಗೊಂದು ಗುಂಡೇಟು ತಿಂದೆ. ಯಾರಿಗೋಸ್ಕರ, ಯಾವುದಕ್ಕಾಗಿ ಇಷ್ಟೆಲ್ಲಾ ಹೋರಾಡಿದೇಯೋ, ಕೆಲವೆ ವರುಷಗಳಲ್ಲಿ ಅದೇ ಜನರಿಂದ ನಿನ್ನೆಲ್ಲ ಮೌಲ್ಯಗಳ ವ್ಯಾಪಾರೀಕರಣ ಕಾಣಲಾರೆಯಾ? ಒಳ್ಳೆಯವರಿಗೆ ಆಗಲೂ ಕಾಲ ಒಳ್ಳೆಯದಾಗಿರಲಿಲ್ಲ, ಇಗಲೂ ಒಳ್ಳೆಯದಾಗಿಲ್ಲ. ಇನ್ನೂ ಇತ್ತೀಚಿನವರನ್ನು ನೋಡೋಣವೆಂದರೆ ಕಣ್ಣು ಕಿಸಿದರೂ ಯಾರೂ ಕಾಣುತ್ತಿಲ್ಲ.
ಮಹಾತ್ಮರೆ ಮತ್ತೆ ಮತ್ತೆ ಬರಬೇಡಿ ಇತ್ತ , ಎಲ್ಲ ಮರೆತು ತಮ್ಮ ಸ್ವಾರ್ಥದ ಕೂಪಗಳಲ್ಲಿ ಬೇಯುತ್ತಿರುವವರತ್ತ. ಮದ್ದು-ಗುಂಡು, ಬಾಂಬಗಳ ಬಿತ್ತಿ ಕಾಯುತ್ತಿದ್ದೇವೆ ನಾವೆಲ್ಲ ಇಲ್ಲಿ -ನಾಳೆಗಳ ಮುಗಿಸಲು ಸಂಚು ಹಾಕುತ್ತ.

Wednesday, July 2, 2014

ಎಮಿಲಿಯ ಒಂದೆರಡು ಕವಿತೆಗಳ ಭಾವಾನುವಾದ




ಅಮೆರಿಕದ ಎಲ್ಲ ಕಾಲಕ್ಕೂ ಸಲ್ಲುವವರಲ್ಲಿ ಒಬ್ಬಳಾದ ಕವಯತ್ರಿ ಎಂದರೆ ನಿಸ್ಸಂದೇಹವಾಗಿ ಎಮಿಲಿ ಡಿಕಿನ್‍ಸನ್(December 10, 1830 – May 15, 1886)
ಎಂದು ಹೇಳಬಹುದು. ವಿಕ್ಷಿಪ್ತತೆಗೆ ಹೆಸರಾದ ಎಮಿಲಿ ತನ್ನ ಮನೆಯಲ್ಲಿ ತಾನೆ ಕೈದಿಯಂತೆ, ಯಾರನ್ನೂ ನೋಡಲಿಚ್ಚಿಸದೆ ಗೌಪ್ಯವಾಗಿ ನೂರಾರು ಕವಿತೆಗಳನ್ನು ಹೆಣೆದವಳು.
ಎಮಿಲಿಯ ಒಂದೆರಡು ಕವಿತೆಗಳ ಭಾವಾನುವಾದದ ಚಿಕ್ಕ ಪ್ರಯತ್ನವಿದು.


ಗರಿಗೆದರುವ ಹಾರೈಕೆ
ಎಲ್ಲೆರೆದೆಯ ಬೆಚ್ಚನೆ ಗೂಡಲ್ಲಿ ತಂಗಿದ
ವಿಶ್ರಾಂತ ಗಿಳಿ – ನಂಬಿಕೆಯೆಂದರೆ.
ಅಂತ್ಯವಿಲ್ಲದ ನಿಶಬ್ಧ ಗೀತೆಯ ಗುನುಗು
ತೇಲಿಹಿವುದು ದಿಗ್ ದಿಗಂತದಲಿ.

ಬೆಚ್ಚನೆ ಭಾವ ನಮ್ಮೆದೆಯಲ್ಲಿ ಬಿಚ್ಚಿಟ್ಟ
ವಿಲ ವಿಲ ನಲುಗಿದಾಗಿಳಿಯ ದನಿ
ತೇಲಿಹುದು ಮಧುರಾತಿಮಧುರಾಗಿ
ನಾಚಿಗೆಟ್ಟ ಭಯಂಕರ ಬಿರುಗಾಳಿಯ ಮದಕೆ.

ಆ ಮಾರ್ದವತೆಯ ರುಣುರುಣಿತ ಕೇಳಿಹೆನು
ಕಾಂತಾರ ಗಿರಿ ಕಂದರ ಗುಹೆಗಳಲಿ
ನಿರ್ಮಾನುಷ ಸಾಗರದಾಳಾಂತ್ಯದಲಿ
ಬೇಕಿಲ್ಲ ಅದಕೆ ನನ್ನಿಂದ ತಟಗೂ ಗುಟುಕು.

“Hope is the thing with feathers” ನ ಭಾವಾನುವಾದ

ಜಯದಳತೆಗೋಲು
ಯಾವತ್ತಿಗೂ, ಸೋತವನು ಮಾತ್ರ
ಜಯದ ಸವಿಯಾಳ ಬಲ್ಲ
ಅಮೃತದ ದಿವ್ಯವರಿಯಲು
ಕಹಿರುಚಿಯ ಹಾಲಾಹಲದರಿವಿರಬೇಕು.

ಜಯದುಂಧುಬಿ ಮೊಳಗಿಸಿ
ಎಲ್ಲ ಸೂರೆಗೊಂಡವರಲ್ಲಬ್ಬಾನೊಬ್ಬನು
ಹೇಳಲಾರ ನೆಟ್ಟಗೆ
ವಿಜಯದ ನಿಜಾರ್ಥವ.

ಸಮರಾಂಗಣದಲಿ ಅರೇ ಜೀವವಾಗಿ
ಬಿದ್ದವನ ಕಿವಿಗಪ್ಪುವ
ರಣದುಂಧುಬಿಯ ಜಯಭೇರಿಯ
ಕರ್ಕಶ ಕೂಗೆ ಜಯದಳತೆಗೋಲು.

“Success is Counted Sweetest” ನ ಭಾವಾನುವಾದ

ನಿಸರ್ಗ
ನಿಸರ್ಗವೆಂದರೆ ರಮ್ಯತೆಯೇ-
ಎಳೆ ಮಧ್ಯಾಹ್ನ-ಬೆಟ್ಟದೊಂದು ತೊರೆ-
ಚಿಮ್ಮಿದ ಜಿಂಕೆ-ಕಾಂತಿಗೆಟ್ಟ ಸೂರ್ಯ-ಪಾತರಗಿತ್ತಿ?
ಇಲ್ಲ ಇಲ್ಲ – ನಿಸರ್ಗವೆಂದರೆ ಸ್ವರ್ಗ-
ನಿಸರ್ಗವೆಂದರೆ ನಾದಮಯ
ಕಾಜಾಣದ ಕುಹು-ಜಲಧಿತರಂಗ
ಮೇಘದಾರ್ಭಟ-ಚಿಮ್ಮುಂಡಿಯ ಕಲರವ?
ಇಲ್ಲ ಇಲ್ಲ ನಿಸರ್ಗವೆಂದರೆ ಸಾಂಗತ್ಯ-
ಅರಿವಿನಾನುಭೂತಿಗೆ ರಾಚಿದ್ದೆಲ್ಲವಲ್ಲವೆ
ಈ ಸರ್ಗಗಳ ಗುಚ್ಚಮಾತ್ರವೆ ನಿಸರ್ಗ
ಅದು ಶಬ್ದಗಳಲ್ಹಿಡಿಯಲಾಗದ ನಿಶ್ಯಬ್ದ.
ನಮ್ಮ ಜಾಣ್ಮೆಯಘವ ಮುರಿಯಲು
ನಿರ್ಮಿತವದರ ಸುಲಭ ಸುಂದರಜಾಲ
ಹುಲು ವರ್ಣನೆಗೆ ನಿಲುಕದ್ದೆಲ್ಲ ನಿಸರ್ಗವೆ.

“Nature is what we see” ನ ಭಾವಾನುವಾದ

ಅವಿನಾಶಾತ್ಮ
ಆತ್ಮದ ಅವಿನಾಶದ ದರ್ಶನ ಆಗುವದೆಂದರೆ
ಸಟಕ್ಕನೆ ಹೊಳೆದ ಮಿಂಚಿನ ಮಡಿಲಿನಲ್ಲಿ
ಕ್ಷಣಿಕವಾಗಿ ಗೋಚರಿಸುವ ಪ್ರಕೃತಿಯ ಹೊಳವಿನಂತೆ
ಒಂದೋ ಅಯಾಚಿತವಾಗಿರಬೇಕು ಇಲ್ಲವೆ
ಅಮಂಗಳಕರವಾಗಿರಬೇಕು.

“The souls distinct connection with immortality” ನ ಭಾವಾನುವಾದ

ಪರ್ವತ ರಾಜ
ಪರ್ವತ ರಾಜ ಪವಡಿಸಿದ್ದಾನೆ
ತನ್ನ ಉನ್ನತ ಆರಾಮಾಸನದಲ್ಲಿ
ಸುತ್ತೆಲ್ಲ ದೃಷ್ಟಿ ಪಸರಿಸಿ
ದಶದಿಕ್ಕುಗಳನ್ನೆಲ್ಲಾ ವ್ಯಾಪಿಸಿ.
ಋತುಗಳಾಡುತ್ತವೆ ಅವನ ಕಾಲ ಬುಡದಲ್ಲಿ
ಮಕ್ಕಳಾಡುವಂತೆ ಅಜ್ಜನ ಸುತ್ತ.
ಮಹಾ ಪಿತಾಮಹನವನು
ದಿನ ಬೆಳಗುಗಳವನ ಮೊಮ್ಮಕ್ಕಳು.

“The mountain sat upon the plain” ನ ಭಾವಾನುವಾದ

ಸೋತ ಸಾವು
ಸಾವು ಆತ್ಮ-ದೇಹವನ್ನುದ್ದೇಶಿಸಿ
ಕಳಚಿಕೋ ಎನ್ನುತ್ತದೆ-
ನಾ ಕಾಣಬೇಕಿನ್ನೊಂದು ಎನ್ನುತಾದಾತ್ಮ
ನಿನಗಿಲ್ಲ ನಂಬಿಕೆಯಂದಾದರೆ
ಅಡವಿಟ್ಟಕೋ ಈ ದೇಹವನ್ನು
ಎನ್ನುತ್ತ ಹಿಂದುರುಗಿ ನೋಡದೆ
ನಡೆದು ಬಿಡುತ್ತದೆ.

“death is the dialogue between” ನ ಭಾವಾನುವಾದ

ಎಮಿಲಿ ಡಿಕಿನ್‍ಸನ್ 

Monday, June 9, 2014

ಬೇಂದ್ರೆ -ನಲ್ಲ ನಲ್ಲೆಯರ ಲಲ್ಲೆ

ಬೇಂದ್ರೆ ಅವರ ‘ನಲ್ಲ ನಲ್ಲೆಯರ ಲಲ್ಲೆ’ 

June 9, 2014
ಅನಿಲ್ ತಾಳಿಕೋಟೆ


ನಲ್ಲ : ‘ನಲ್ಲೆ ! ನಿನ್ನ ಲಲ್ಲೆವಾತು
ಮುಗಳುನಗೆಯಲಲ್ಲೆ ಹೂತು
ಸೋತು,ಓತು,ಬಂತು,ಹೋ’ತು
ನಲ್ಲೆ, ನಿನ್ನ ಲಲ್ಲೆ ವಾತು’.

ನಲ್ಲೆ: ‘ನಲ್ಲ!ನಿನ್ನ ಲಲ್ಲೆ ವಾತು
ಮೀಸೆ ಕುಡಿಯಲ್ಲಲ್ಲೆ ಹೂತು
ಕುಣಿದು,ಮಣಿದು,ಬಂತು,ಹೋ’ತು
ನಲ್ಲ!ನಿನ್ನ ಲಲ್ಲೆ ವಾತು.’

ನಲ್ಲ : ‘ನಲ್ಲೆ ! ನಿನ್ನ ಲಲ್ಲೆ ವಾತು
ಕಣ್ಣ ಕಿರಣದಲ್ಲಿ ನೂತು
ನೇತು,ಜೋತು,ಬಂತು,ಹೋ’ತು
ನಲ್ಲೆ, ನಿನ್ನ ಲಲ್ಲೆ ವಾತು’.

ನಲ್ಲೆ: ‘ನಲ್ಲ!ನಿನ್ನ ಲಲ್ಲೆ ವಾತು
ಹುಬ್ಬು-ಬಿಲ್ಲಿನಲ್ಲೆ ಆತು
ಸಿಡಿದು, ಮಿಡಿದು ಬಂತು,ಹೋ’ತು
ನಲ್ಲ! ನಿನ್ನ ಲಲ್ಲೆ ವಾತು.’

ನಲ್ಲ : ‘ನಲ್ಲೆ ! ನಿನ್ನ ಮಾತಿನಲ್ಲೆ
ಹುಟ್ಟಿ ಬಂತು ಹುಟ್ಟು-ಲಲ್ಲೆ ;
ಹೂಂಗುಟ್ಟಿ ಹುದಗಬಲ್ಲೆ,
ಒಲ್ಲೆಯೆಂದು ಒಲಿಸಬಲ್ಲೆ.;

ನಲ್ಲೆ: ‘ನಲ್ಲ! ನಿನ್ನ ಮಾತಿನಲ್ಲೆ
ಎದೆ ಮೃದಂಗದೊಂದೆ ಸೊಲ್ಲೆ
ಹುಚ್ಚು ಹಿಡಿಸಿ ನುಡಿಸಬಲ್ಲೆ;
ಹಿಡಿದ ಹುಚ್ಚು ಬಿಡಿಸಬಲ್ಲೆ’

ನಲ್ಲ : ‘ನಲ್ಲೆ ! ನೀನು ಮಲೆಯ ಮೊಲ್ಲೆ
ನಿನ್ನ ಮೃದು ಸುಗಂಧ ಲಲ್ಲೆ;
ಅದರ ಸವಿಯ ಧ್ಯಾನದಲ್ಲೆ
ಏಕತಾನಮಾನವಲ್ಲೆ?’

ನಲ್ಲೆ: ‘ನಲ್ಲ! ನಿನ್ನ ಉಸಿರಿನಲ್ಲೆ
ಗಾನದೊಂದು ಗಮಕವಿಲ್ಲೆ?
ಆ ಪ್ರಾಣವಿಲ್ಲದಲ್ಲೆ
ಗಾಳಿಮಾತು ಜೊಳ್ಳು ಲಲ್ಲೆ!’
‘ಬಾನು ಬೆಳಕು ಹೂಡಿದಲ್ಲೆ
ಕಡಲಿನಲ್ಲಿ ಮೂಡಿದಲ್ಲೆ;
ನಲ್ಲ ನಲ್ಲೆ ಕೂಡಿದಲ್ಲೆ
ಹಿಗ್ಗಿಗುಂಟೆ ಮೇರೆ ಎಲ್ಲೆ?’

ಕೆದಕಿ, ಬೆದಕಿ, ಸಮರಸದಲ್ಲಿ ತೇಲುತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಸೀಮಿತ ಪರಿಧಿಯಲ್ಲಿ ನಲ್ಲ ನಲ್ಲೆಯರು ತೃಪ್ತಿಯ ಉತ್ತುಂಗಕ್ಕೆ ಏರಬಹುದು ಎನ್ನುವದಕ್ಕೆ ಉದಾಹರಣೆಯಾಗಿ ಇದಕ್ಕಿಂತ ಒಳ್ಳೆಯ ಕವಿತೆಯನ್ನು ನಾನು ಇದುವರೆಗೂ ಓದಿಲ್ಲ. ನಾಲ್ಕಾರು ದಶಕಗಳ ಹಿಂದೆ ಮನೆಯಲ್ಲಿ ಕನಿಷ್ಟ ಎಂಟೋ ಹತ್ತೋ ಸದಸ್ಯರಿರುವಲ್ಲಿ, ಕಾಂತ-ಕಾಂತೆಯರಿಗೆ ಏಕಾಂತ ಎನ್ನುವದು ಅತ್ಯಂತ ದುರ್ಲಭವಾದ ಕಾಲದಲ್ಲಿ ಸಿಕ್ಕ ಕ್ವಚಿತ್ತಾದ ಸು-ಸಂದರ್ಭದಲ್ಲಿ ಮುದ್ದಣ-ಮನೋರಮೆಯರಾಗುವದು ಅನಿವಾರ್ಯವಾಗಿರುತ್ತಿತ್ತು.

ಅತ್ಯಂತ ಸರಳವಾಗಿಯೂ ಮಹೋನ್ನತವಾಗಿ ಪರಿಣಾಮಕಾರಿಯೂ ಆಗಿರುವ ಈ ಗದ್ಯದಂತಹ ಪದ್ಯ ಬೇಂದ್ರೆಯವರ ರಸಿಕತೆಯನ್ನು ಓದುಗನಲ್ಲಿ ಎರಕ ಹೊಯ್ಯುತ್ತದೆ. ಡಿ.ವಿ.ಜಿ. ಹೇಳಿದಂತೆ ‘ಧನಿಕರಾಗುವದು ಎಲ್ಲರಿಗೂ ಸಾಧ್ಯವಿಲ್ಲ, ಕೊಂಚ ಪ್ರಯತ್ನದಿಂದ ಎಲ್ಲರೂ ರಸಿಕರಾಗಬಹುದು’. ಎಲ್ಲರಲ್ಲಿ ಹಿಗ್ಗು ಹಿಗ್ಗಿಸಲು ಇಂತಹ ಕವಿತೆ ಕಾಲ, ದೇಶಗಳ ವ್ಯಾಪ್ತಿ ಮೀರಿ ನಿಲ್ಲುತ್ತವೆ ಎಂಬ ಅಖಂಡ ನಂಬುಗೆ ನನ್ನದು. ಪ್ರೇಮ-ಕಾಮವನ್ನು ಎಲ್ಲೆಂದರಲ್ಲಿ , ಯಾವ ಎಗ್ಗಿಲ್ಲದೆ ಪ್ರದರ್ಶಿಸಬಹುದಾದ ಅಮೆರಿಕೆಯಲ್ಲಿ ಯಾವದೇ ಕಾಲದ್ದಾದರೂ ಪರವಾಗಿಲ್ಲ ಇಂತಹದೊಂದು ನವಿರಿನ ಕಾವ್ಯ ಓದಿಲ್ಲ ಎಂದಾಗ ಗೆಳತಿಯೊಬ್ಬಳು ‘ಅದು ನಿನ್ನ ಅಲ್ಪ ಓದಿನ ಪರಿಣಾಮ’ ಎಂದದ್ದನ್ನು ಶಿರಸಾ ಒಪ್ಪುತ್ತೇನೆ. ಅಂತೇಯೇ ಬೇಂದ್ರೆ ಎಂಬ ಮಹಾ ಮಾಂತ್ರಿಕ ಉದುರಿಸಿದ ಗರಿಗಳನ್ನು ಎತ್ತಿ ಹಿಡಿದು ಕಣ್ಣತ್ತ ಒಯ್ಯುವ ಅಥವಾ ಮೂಸಿ ನೋಡುವ ಸಾಮರ್ಥ್ಯ ನನಗೆ ಖಂಡಿತ ಇಲ್ಲವೆಂದು ಒತ್ತಿ ಹೇಳುತ್ತೇನೆ. ಹಾರಿ ಹೋಗುತ್ತಿರುವ ಆ ಗರಿಗಳನ್ನು ದೂರದಿಂದ ನೋಡಿ ಆನಂದಿಸಲು, ಮುಂದೆ ಎಂದಾದರೊಮ್ಮೆ ಒಂದಾದರೂ ಲಘುಸ್ಪರ್ಶ ಮಾಡಿ ನನ್ನ ಕೆನ್ನೆ ನೆವರಿಸಿ ಹೋದೀತೇನೋ ಎಂಬ ಆಶೆ ಎಂದಿನಿಂದಲೂ ಇದ್ದಿದ್ದೆ.
ಕವಿತೆಯ ಕಾಲ, ಅಂದಿನ ವಾತಾವರಣ ನಮಗೆಲ್ಲಾ ಅಷ್ಟೋ-ಇಷ್ಟೊ ಗೊತ್ತಿದ್ದದ್ದೆ ಆದ್ದರಿಂದ ಅದರ ಬಗ್ಗೆ ಜಾಸ್ತಿ ಹೇಳುವದು ಅನವಶ್ಯಕ ಎಂದುಕೊಳ್ಳುತ್ತೇನೆ. ಇಂಗ್ಲಿಷಿನ ರೋಮ್ಯಾಂಟಿಕ ಕಾವ್ಯದ ಸಾರವನ್ನೆಲ್ಲಾ ಅರೆದು ಕುಡಿದ ಕವಿಮನಸ್ಸಿಗೆ ನಲ್ಲೆಯನ್ನು ಲಲ್ಲೆಗರೆಯುವ ಆಶೆ. ‘ನಿನ್ನ ಗಂಡ ಹೇಗಿದ್ದಾನೆ?’ ಎಂದರೆ, ಫೆಸಬುಕ್ಕಿನಲ್ಲಿ ‘ಗಂಡ ಎನ್ನುವವನು ಹೇಗಿರಬೇಕೋ, ಎಲ್ಲಿರಬೇಕೋ ಅಲ್ಲೆ ಬಿದ್ದು ಕೊಂಡಿದ್ದಾನೆ’ ಎನ್ನುವ ಉತ್ತರ ಕೊಡುವ ಕಾಲವಂತೂ ಆವಾಗ ಇರಲಿಲ್ಲ. ಅದೂ ಬಿಡಿ – ಉತ್ತರ ಕರ್ನಾಟಕದಲ್ಲಿ, ಮೈಸೂರಿನವರಂತೆ ಆಗ ಹೆಂಡತಿಗೆ ಮಲ್ಲಿಗೆ ತಂದು ಮುಡಿಸಿ ಮುದ್ದುಗರೆಯುವ ಗಂಡಸರೂ ಇರಲಿಲ್ಲ -ನೂರು ಕೆಲಸದ ನಡುವೆ ಅಂತಹದೊಂದು ಬಯಕೆ ಹೆಂಡತಿಗೆ ಬರಲಿಕ್ಕೆ ಸಾಧ್ಯವೂ ಇರಲಿಲ್ಲ. ಗಂಡ ದುಸುಮುಸು ಮಾಡದೆ ಮನೆಗೆ ಬಂದರೆ ಅದೇ ಪುಣ್ಯ. ‘ಏನೇ?, ‘ಏ ಇಕಿನ’,'ಜಲ್ದಿ ಬಾರ ಇಲ್ಲಿ’,'ಕೇಳಿಸ್ತೇನ ಹೇಳಿದ್ದು?’ ಇಂಥಹದೆ ಸಂಭೋಧನೆಗಳು ಹೆಂಡತಿಗೆ. ‘ನನ್ನ ರಾಣಿ’,'ಮೆಹಬೂಬಾ’,'ಸ್ವೀಟಿ’ ಅನ್ನುವ ಶಬ್ದ ಕೇಳಿದ ಹೆಂಡದ್ರ ಇರಲಿಕ್ಕಿಲ್ಲ. ಒಂದೇ ಸಂಡಾಸು, ಸ್ನಾನದ ಮನೆಯ ಕಾಲವದು. ಇಂಥಾದರಲ್ಲಿ ಗಂಡ ಎನ್ನುವವ ಹೆಂಡತಿಗೆ ತನ್ನ ಇರಾದೆ, ಇಚ್ಚೆ ತೋರಿಸುವದದೆಂತು? ಬಯಕೆ ಅಭಿವ್ಯಕ್ತಿಸುವ ದಾರಿ ಯಾವದು? ಈ ಹಿನ್ನೇಲೆಯಲ್ಲಿ ಕವಿತೆಯನ್ನು ಅವಲೋಕಿಸಬಹುದು.

ನಿನಗಾಗಿ ಓಡೋಡಿ ಬಂದೆ ನಾನು , ಕಾಣದೆ ಮರೆಯಾಗಿ ಹೋಗಲಿಲ್ಲವಾದರೂ ನೀನು, ನನಗೆ ಬೇಕಾದದ್ದನ್ನೆನೂ ಕೊಡದೆ ಬರೀ ಮುಗಳು ನಗೆಯಿಂದ ನನ್ನ ಸಾಗ ಹಾಕುವೆ ಯಾಕೆ? ಎನ್ನುವ ಆಪಾದನೆ ಹೊತ್ತೆ ಬಂದ ನಲ್ಲ. ಆರಾಮಾಗಿ ಸೋಫಾದ ಮೇಲೆ ಕೂತು ಸೋಪ ಒಪೇರಾ ನೋಡುತ್ತ, ಚೆಲುವ ನೋಟ ಹೀರುತ್ತ, ಮುಂಗರಳ ಮೀಟುತ್ತ ‘ಅಯ್ಯೋ, ಈ ದಿನ ಹೀಗಾಯಿತು ‘ಎಂದಾಗ ನಲ್ಲೆ ಕೂದಲಲ್ಲಿ ಕೈ ಆಡಿಸುತ್ತ ‘ಹೌದಾ, ನನ್ನ ರಾಜಾ- ಬಾ ಇವತ್ತು ಸ್ಟಾರಬಕ್ಸಗೆ ಹೋಗಿ ತಾಝೊ ಚಾಯಿ ಕುಡಿಯುತ್ತ ಮಾತನಾಡೋಣ’ ಎನ್ನುತ್ತಾಳಾ? ಇಲ್ಲಾ – ಅವಳೂ ಮಹಾರಸಿಕಳೆ ಆದರೂ ಕಟ್ಟುಪಾಡು ದಾಟಲಾರಳು. ಕೆಣಕದೆ ಇರಲಾರಳು.

‘ಆಯಿತು, ನನಗೇನೋ ಇಪ್ಪತ್ತೆಂಟು ಆದ್ಯತೆ-ಬಾಧ್ಯತೆಗಳು. ನಿನ್ನ ಚಾಲಾಕಿತನ ಎಲ್ಲಿ ಹೋಯಿತು? ದೊಡ್ದದಾಗಿ ಏನೋ ಕೊಟ್ಟು, ತೊಗೊಂಡು ಹೋಗುವವನಂತೆ ಕುಣ ಕುಣಕೊಂಡು ಬಂದಿ -ಮುಂದ ಹರಿಲಿಕ್ಕಾಗಲಾರದ ಮಣಕೊಂಡು ಕುಂತಿ. ಇದೇನು ಹೊಸಾದಲ್ಲ ಬಿಡು. ಇನ್ನೊಂದ ಐದು ನಿಮಿಷ ಕೂಡು -ಚಾ ಮಾಡಿ ಕೊಡ್ತಿನಿ, ಕುಡದು ಮುಂದಿನ ಕೆಲಸ ನೋಡು’ -ಎನ್ನುವಂಥ ಕಿಲಾಡಿ ಉತ್ತರದ ಹೆಣ್ಣು.

ಅಷ್ಟಕ್ಕೆ ಬಿಟ್ಟು ಬಿಡುವವನು ಅದೆಂಥ ನಲ್ಲ? ‘ಆತು ಬಿಡು, ಮಾತಿನಾಗಂತೂ ನೀ ಏನ ವ್ಯಕ್ತ ಮಾಡು ಹಂಗ ಕಾಣಸಂಗಿಲ್ಲ -ಆ ಧವಳ, ಕವಳ ಕಾಂತಿಯ, ಹೊಳೆ ಹೊಳೆವ ಕಣ್ಣ ಒಡತಿ ನೀನು, ಕಡೀಕ ಅಲ್ಲೇ ಆ ಕಣ್ಣಾಗರ ಕಳದ ಹೋಗು ಹಂಗ ಮಾಡು ಅಂದ್ರ ಅದಕ್ಕೂ ಕಲ್ಲ ಹಾಕು ಹಂಗ ಕಾಣಸ್ಲಿಖತ್ತದಲಾ’. ಎಲ್ಲಾ ದಿವಸದಂಗ ಇವತ್ತೂ ಚಾ ಕುಡದು, ಚುನಮುರಿ ತಿಂದು ಒಂಚೂರ ಟಿ,ವಿ, ನೋಡಿ ವ್ಯಾಳ್ಯಾ ಹಾಳಮಾಡಲಿಕ್ಕೆ ಒಲ್ಯಾಗ್ಯದ ಅಂಬುದು ನಿನಗ ಹೆಂಗ ತಿಳಿಸಬೇಕು?

ನಲ್ಲೆ ಏನೂ ಕಮ್ಮಿ ಇಲ್ಲಾ -ಇಂಥಾ ಮಾತಿಗೆ. ‘ಸಿಟ್ಟ್ಯಾಕೋ, ಸಿಡುಕ್ಯಾಕೋ ನನ ಜಾಣ?’ ಬರೀ ಇದ ಚಾಟೂಕ್ತಿ ಮಾಡ್ಕೋತ ಇದ್ರ ಮನಿ ಚಾಕರಿ ಮಾಡೋರ್ಯಾರು? ‘ಸ್ವಲ್ಪ ಆ ಸ್ಟೈಲನ್ಯಾಗ ಸಿಡುಕಿದಂತೆ ಮುಖ ಮಾಡುದ ನೋಡಿದ್ರ, ಕನ್ಯಾ ನೋಡ್ಲಿಕ್ಕೆ ಬಂದಾಗ ಗುಮ್ಮನ ಗುಸಕಿನಂಗ , ಒಣಾ ಗಾಂಭಿರ್ಯದಿಂದ ಕೂತದ್ದ ನೆನಪಾಗ್ತದ ನೋಡು’

ಏನ ಹೇಳಬೇಕೋ, ಆದ್ರೂ ಏನೋ ಒಂದು ಎಳೆ ಸಿಕ್ಕಂಗಾತು -ಇದೂ ನಡೀತದ ತೋಗೊ ನಗೆಚಾಟಿಕೆಗೆ ಅನಸ್ತದ ನಲ್ಲಗ. ‘ಎಷ್ಟ ಛೊಲೊ ಅರ್ಥ ಮಾಡ್ಕೊಂಡಿ ಅಲ್ಲೆ ನನ್ನ- ಹೂಂ ಅನಕೋತ ಮರೆ ಮಾಚಬಲ್ಲಿ – ಮುರಳಿಯ ಮರಸಿ ನಟಿಸಿ ನಗಿಸುವ ಸರಸಿ ಹಂಗ. ಹೂಂ,ಹೂಂ ಅನಕೋತ, ನಾಚಗೋತ ನನ್ನ ಮನವನ್ನೆಲ್ಲಾ ಆವರಿಸಲು ಬಲ್ಲಿ’

ಮಾತಿಗಿಗೊಂದು ತಿರುವು ಸಿಕ್ಕಂಗ ಆತು ಈಗ, ನಲ್ಲೆಗೀಗ ಮತ್ತಿಷ್ಟು ಹುರುಪು. ಇಷ್ಟೊತ್ತಿಂದು ಆಲತು-ಫಾಲತು ಮಾತಿತ್ತೇನೋ. ಈಗ ಮನಸ್ನ್ಯಾಗಿಂದು ಹೇಳ್ತಿನಿ ಕೇಳು. ನಿನ್ನ ಮಾತಂದ್ರ ರಾಗ ನನಗ. ನಿನ್ನ ಜೊತೆಗಿನ ಝೇಂಕಾರ ಒಂದಿದ್ರ ಸಾಕು ಸರಸ-ವಿರಸ ಎಲ್ಲಕ್ಕೂ ಸೈ ನಾನು, ನನ್ನೊಳಗ ನಿನ್ನ ನಶೆಯೋ, ನಿನ್ನ ನಶೆಯೊಳಗ ನಾನೋ? ಈ ಮತ್ತನ್ಯಾಗ ನಾ ಯಾವಾಗ್ಲೂ ಇರಲಿ ಬಿಡು.

ಆಹಾ -ಹುರಪಿಗೆದ್ದ ಹುಡಗಿ ಮುಂದ ಈ ಪ್ರಪಂಚದಾಗ ಬ್ಯಾರೆದೆಲ್ಲಾ ಸಪ್ಪೆ. ಆದರೂ ಇಲ್ಲಿಗೆ ಎಲ್ಲಾ ಮುಗಸಿದ್ರ ಏನ ಸಾಧಿಸಿದಂಗಾತು? ಇನ್ನೂ ಸ್ವಲ್ಪ ಜಗ್ಯಾಡಬೇಕು-ಕೆಣಕಬೇಕು -ಆವಾಗ್ಲೆನೆ ಅದರ ಮಜಾ. ‘ಅದೆಲ್ಲಾ ಸರಿಯೆ, ಹೂ ಎಷ್ಟೇ ಸುಂದರ ಆದ್ರೂ ಜೀವನ ಪೂರಾ ನಮ್ಮ ತೆಕ್ಕೆ ಒಳಗ ಇಟ್ಗೊಂಡು ಇರ್ಲಿಕ್ಕಾಂಗಿಲ್ಲ. ಒಂದೇ ಶೃತಿ ಆಗಲಿಕ್ಕೆ, ವೈವಿಧ್ಯಕ್ಕ ಮತ್ತೆನೋ, ತೃಪ್ತಿಯಾಗೋದು ಬೇಕಲ್ಲ ಜೀವನದಾಗ’ ನಲ್ಲನಿಗಿನ್ನೂ ಸ್ವಲ್ಪ ಬೇಕು -ಏನೋ ಒಂದು.

ಇಡೀ ಕಾವ್ಯದ ಧಾಟಿ , ಆ ಚೆಲ್ಲುತನದ ಜೀವಾಳ ನಲ್ಲೆಗೆ ಗೊತ್ತು. ಬರಿ ಗಾಳಿ ಬೀಸಿದಂತೆ ಹೋಗುವದಕ್ಕೂ, ಗಾಳಿಯನ್ನೆ ಜೀವಾಳವಾಗಿಸಿಕೊಳ್ಳುವದಕ್ಕೂ ವ್ಯತ್ಯಾಸವಿಲ್ಲವೆ? ಅಂಥಾ ಪರಮ ಮೂಲ, ಉತೃಷ್ಟ, ಉತ್ಕ್ರಾಂತಿ ಸಿಗುತಿರುವಾಗ ಬೇರೆಯದೆಲ್ಲಾ ಏನೂ ಹುರುಳಿಲ್ಲದ ಪೊಳ್ಳು. ನಲ್ಲನ ಬಣ್ಣದ ಥಳಕು ಬಳಕು ಮಾತಿಗಿಂತ ಆತನ ನಳನಳಿಸುವ ಜೀವನ ಪ್ರೀತಿ ಬೇಕು ನಲ್ಲೆಗೆ. ಈ ಮಾಂಗಲ್ಯಕ್ಕಿಂತ, ಮಿಲನಕ್ಕಿಂತ ಮಿಗಿಲಾದುದು ಏನಾದರು ಉಂಟೆ? ಪ್ರೇಮದ ಸ್ವರೂಪವೆಂದರೆ ಯಾವತ್ತಿಗೂ ಅಸ್ಪಸ್ಟವೆ, ಸಂಪೂರ್ಣ ಅರಿವಿಗೆ ನಿಲುಕದ್ದೆ -ಹಾಗೆಯೆ ಇರಬೇಕಾದದ್ದು ಕೂಡಾ.
ಹಿಗ್ಗು ಶಬ್ದವನ್ನು ಬೇಂದ್ರೆ ಅರಳಿಸಿದಂತೆ ಪ್ರಾಯಶ ಬೇರೆ ಯಾರೂ ಉಬ್ಬಿಸಿರಲಾರರು. ಒಂದೆರಡು ಉದಾಹರಣೆ ಕೊಡುವುದಾದರೆ “ಹಿಗ್ಗ ಬೀರಿ ಹಿಗ್ಗಲಿತ್ತು”, “ಹಿಗ್ಗು ಸುಖದುಃಖಗಳ ಸುಲಿದ ತಿಳಲು”. ಎಲ್ಲೆಯಿಲ್ಲದ ಜೀವನ ಶ್ರದ್ಧೆಯನ್ನು, ಜೀವಂತ ಪ್ರೀತಿಯನ್ನು ಎರಕ ಹೊಯ್ದಂತಿದೆ ಈ ಅಪ್ರತಿಮ ಕವಿತೆ.

Tuesday, May 20, 2014

ಹೆಣ್ಣು

ನೀನೆನಗೆ ನಾನಿನಗೆ ಒಲಿದಾಘಳಿಗೆ
ಕೆಳಬಾಗಿದ ನಿನ್ನ ಕಂಗಳಾಹ್ವಾನ
ನಡುಗುವಾ ಅಧರಗಳೇ ಆದವಾಧಾರ
ನಿನ್ನ ಮುಂಗುರುಳಲ್ಲೇ ಜೀಕಿತೆನ್ನ ಮನ
ನಿನ್ನ ಒದ್ದೆ ತುಟಿಗಳ ನಾ ಕದ್ದೆ
ಕೊಟ್ಟು ನೀ ಗೆದ್ದೆ -ಪಡೆದು ನಾನೆಂದೆ
‘ಇದು ಸ್ವರ್ಗ ನೀ ಸರಸಿ
ಅರಸಿ ಬಂದಿಹ ನಾ ರಸಿಕ’
ಮಾತು ನನ್ನದು -ಜಾಣೆ ನೀ ಮೌನಿ
ಧ್ಯಾನದ ಧನ್ಯತೆ ನಿನ್ನದು
ಅಬ್ಬರದ ಮಂತ್ರದಾರ್ಭಟ ನನ್ನದು.

 

ಹಚ್ಚ ಹಸಿರಿನ ಪಚ್ಚ ಪೈರಿನ ಬಳುಕು
ತುಳುಕಿಸಲು ನಾನೋಡಿದ ಪರಿಗೆ
ನಿನ್ನುತ್ತರವದೇ ಮಂದಹಾಸ
ಪಡೆಯುವದಕ್ಕಿಂತ ಕೊಡುವದರ ಮಹತ್ತು
ಹತ್ತತ್ತು ಸಾರಿ ನೀ ತೋರಿದೆ ಮತ್ತೆ ಮತ್ತೆ
ಕೊಳ್ಳುವದರಲ್ಲೇ ನಾ ಕಾಲ ಕಳೆದೆ
ಕೊಡುತ ಬಾಳುವದ ಕಲಿಬೇಕು ನೋಡಿನ್ನು
ಮನೆ,ಮಹಲು ಬೇಡೆಂದೆ ನೆಮ್ಮದಿ ಮನ ಬೇಕೆಂದೆ
ಮಗುವಾಗಿಸಿ ಮಡಿಲಲ್ಲಿ ತಟ್ಟಿ ಮಲಗಿಸಿದೆ
ಬಿದ್ದಾಗ ತಬ್ಬಿ ಎತ್ತಿ ಎಚ್ಚರಿಸಿದೆ
ಕವಿಯ ಕವಿತೆ ನೀನು ದೀಪದ ಹಣತೆ.

ಅರಿವಾಗದ್ದೆ ಹೆಣ್ಣೆನೋ, ಮಣ್ಣಿನ ಕಣ್ಣೆನೋ
ನೆಲ,ನದಿಯ ಸಂತಾನ ನೀನು
ನಿರಂತರ ನೀಡುವ ನಿಲುವಿನವಳು
ಛಲವ ಚೆಲುವಾಗಿಸಿ ಒರಟನಲ್ಲಿ ಒಲವಿಳಿಸಿ
ನನ್ನ ಬರಡು ಕೊರಳ ಕೊಳಲಾಗಿಸಿದವಳು
ನೋವನುಂಗಿ ಹೊತ್ತು ಹೆತ್ತು
ಭೂಮಿ ಬಗಿದು ಹೊಸತ ಚಿಗಿಸಿ
ಬಾಳನಿತ್ತು ಅನಿತು ಸುಖವ ಬಡಿಸಿದವಳು
ನಿನ್ನ ನೆನೆವವರ ಮನೆಯ ಬಿಟ್ಟು
ನನ್ನ ಗುಂಡಿಗೆಯಲ್ಲಿ ಮೊಟ್ಟೆ ಇಟ್ಟು
ಬಿಟ್ಟ ಮನೆಗೆ ಅಟ್ಟ ಕಟ್ಟಿ ಬದುಕು ಉಟ್ಟವಳು.


ಬನ್ನಣೆಗೆ ಸಿಗದ ಹೊಗಳಿಕೆಗೆ ಹಿಗ್ಗದ
ಮಲ್ಲಿಗೆಯ ಮೊಗ್ಗಿನ ಸುಗಂಧ
ಮೊಗೆದಷ್ಟೂ ಸಿಗುವ ಅಗಿದಷ್ಟೂ ಅಳಿಯದ
ರಾತ್ರಿಯ ನೀರವತೆಯಲ್ಲಿ ಬೆಳಗಿನ ನಿರೀಕ್ಷೆ
ಕತ್ತಲೆಯ ಕದದೂಡಿ ಕಾಂತಿಯಂತೆ ನಿಂತಿ
ಜ್ಞಾನದ ಕೂರ್ಜಾಣ್ಮೆ ನಿರ್ಮಲಾಂತರಂಗ
ಶ್ರೇಷ್ಠತೆಯ ವ್ಯಸನವಿಲ್ಲದ ಒಳತಿನ ಮಿತಿ
ನಗುವರಳಿಸಿ ನಕ್ಕರೆ ನಭಕೆ ಚೆಲ್ಲಿದ ಸಕ್ಕರೆ
ಹೆಣ್ಣಿಲ್ಲದ ಜಗ ಭಣ ಭಣ ಮರವಿಲ್ಲದರಣ್ಯ
ಕಣ ಕಣದಲಿ ತುಂಬಿದ ಅಂತಃಕರಣ
ನೀ ಬಳಲಿದಂದೇ ಮನುಜರ ಮರಣ.

ಹೆಣ್ಣು 

ದೇವನೊಲಿದ

ಮೊದಲು ಸಾರಿ ತೊದಲು ನುಡಿ ತುಟಿಗೆ ಬಂದಾಗ
ಪವಿತ್ರ ಬೆಟ್ಟವನ್ನೇರಿ ಪ್ರಾರ್ಥಿಸಿದೆ ದೇವರಿಗೆ-
'ಪ್ರಭು, ನಾ ನಿನ್ನ ಸೇವಕ -ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ'
ಬಿರುಗಾಳಿಯಂತೆ ಬೀಸಿ ಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನೀ ಕರ್ತ, ನಾ ನಿನ್ನ ಕೈ ಬೊಂಬೆ, ನನ್ನ ಅಣು ರೇಣು ತೃಣವೂ ನಿನ್ನದೆ'
ಗರಿಗೆದರಿದ ರೆಕ್ಕೆಯಂದದಿ ಹಾರಿಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನಾ ನಿನ್ನ ಕಂದ -ನೀನೆನ್ನ ತಂದೆ,ನಿನ್ನ ಕರುಣೆಯಿಂದ ಬೆಳಗಿಸುವೆ ಭುವಿಯ'
ಮಂದಾರ ಮಾರುತದಂತೆ ಮಬ್ಬಾದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ನುಡಿದೆ ದೇವರಿಗೆ-
'ನಿನ್ನಿನ ಭುವಿಯ ಬೇರು ನಾ -ನೀ ನಾಳಿನ ಕುಸುಮಾಗಸ ನನ್ನಾನಂದ, ತೇಜದಿ ಬೆಳೆವ ಬಾ ಬಾ'
ಬಾಗಿದ ದೇವ ಜಲಧಿ ಝರಿಯಪ್ಪುವ ಸಡಗರದಲ್ಲಿ ನನ್ನ ಮೆಲ್ಲನೆತ್ತಿ ತೇಲಿಸಿದ
ದಿಗ್ ದಿಗಂತದಲ್ಲಿ ನಾ ಜಾರುವಾಗ ನನ್ನೊಂದ್ದಿಗಿದ್ದ ನಾ ದೇವ.

-ಅನಿಲ್ ತಾಳಿಕೋಟಿ
(ಖಲೀಲ ಗೀಬ್ರಾನನ 'God'  ಪದ್ಯದ ಭಾವಾನುವಾದ)


ದೇವನೊಲಿದ 

Wednesday, April 16, 2014

ಕಬಳಿಸೋ ಮಗನ ಕಬಳಿಸು

                ಕಬಳಿಸೋ ಮಗನ ಕಬಳಿಸು

ಹೂ, ಗಿಡ, ಹಣ್ಣು, ಹಕ್ಕಿಯಿಂದ ಕಲಿಲಿಕ್ಕೆ ಸಾಧ್ಯ ಇಲ್ಲಾ
ಅದ ಅಂತ ಹೇಳಿದವರ ಬಾಯಿ ಮೊದಲ ಹೊಲಿ.
ಮುಗಿಲು,ಮೋಡ,ಚಂದ್ರ,ಸೂರ್ಯ ಇವೆಲ್ಲಾ
ನಾಲಾಯಕ್ಕ ಅವತರ ಗೂಡಾ ನಡಿಬ್ಯಾಡ-ಫಾಯ್ದಾ ಇಲ್ಲಾ.
ನದಿಯಂತ, ಮೇಘಚುಂಬಿ,ಗುಡಿ,ಗುಂಡಾರಂತ ಎಲ್ಲಾ ಸುಳ್ಳು
ಆತ್ಮ, ಮೋಕ್ಷ, ನರಕ, ಸ್ವರ್ಗ ಎಲ್ಲಾ ಪೂರಾಕೆಪೂರಾ ಮೇಡಪ್ಪು.
ಇರಬಿ ನೋಡಿ ಕೆಲಸ ಕಲಿಲಿಕ್ಕಾಂಗಗಿಲ್ಲಾ.
ಗಡಿಯಾರಾ ನೋಡಿ ಬದಕು ನಿಖರಾಗಂಗಿಲ್ಲಾ.
ಅದು ಇದು ಅವರಿವರು ಬರೆದಿದ್ದು ಓದಿ
ಸಾಧನಿ ಮಾಡುದು ಅಶಕ್ಯ ಐತಿ ತಿಳ್ಕೊ ಮಗನ.

ನಮ್ದು ಮಿಡ್ಲ ಕ್ಲಾಸು -ಯಾವಾಗ್ಲೂ ಖಾಲಿ ಅರ್ಧಾ ಗ್ಲಾಸು.
ಅವುಡಗಚ್ಚಿ ಓದು ಮಗನ – ಅದ ನಿನ್ನ ರಹದಾರಿ
ಇನ್ನೊಂದು ದಾರಿ ಯಾರು ತೋರಿಸಿಲ್ಲಾ ಇನ್ನೂನು.
ಹೊಡಿ,ಬಡಿ,ರಕ್ತಾ ಸುರಿಸ್ಲಾರ್ದ ಏನಾದರೂ ಮಾಡ್ಲಿಕ್ಕಾದ್ರ
ಮಾಡು-ಡೌಟೈತಿ ನನಗೇನೋ, ಆದ್ರೂ ಒಂದ್ಸಾರಿ ನೋಡು.
ಹೆಂಗರ ಮಾಡಿ ಮ್ಯಾಲೆ ಬರಬೇಕು ಮಗನ.
ಮರಿಬ್ಯಾಡ ನ್ಯೂಟನನ ಕಥಿ
ಎಷ್ಟು ತುಳಿತಿಯೋ ಅಷ್ಟು ಪುಟಿತಿ.
ಎಲ್ಲಾರ ಅಂಡಿಗೆ ಕಟ್ಟಿ ಐರನ್ ಉಂಡಿ
ನೀ ಮಡಿಕೋ ನಿನ್ನದೊಂದೆ ಧುಮಕು ಕೊಡಿ.

ಕಂಡದ್ದು ತಿನ್ನು, ಸಿಕ್ಕದ್ದು ಕುಡಿ-ಸಿಕ್ಕವರ ಜೋಡಿ
ಫಸ್ಟ ಮುವತ್ತರಾಗ ರಿಚ್ಚೆಸ್ಟ ಲಿಸ್ಟನ್ಯಾಗ ಹೆಸರ ಜಡಿ.
ನೆಕ್ಷ್ಟ ಮುವತ್ತರಾಗ ನೀ ಕುಂಡಿ ಊರಿದ್ದು, ನಿಂತದ್ದು
ಎದ್ದದ್ದು, ಮಲಗಿದ್ದು ಆಗಬೇಕು – ಸುದ್ದಿಯೋ ಸುದ್ದಿ.
ಹುಚ್ಚೆದ್ದು ಮುಗಿ ಮುಗಿದು ಬೀಳಬೇಕು ಪರಪಂಚದ
ಮೂಲೆ ಮೂಲೆ ಮಂದಿ, ನೀ ತಗದರ ಬಾಯಿ -
ಟಕ ಟಕಾ ತಗಿಬೇಕು ಬಿಲಿಯನ ಕಿವಿ.
ಎತ್ತಿದರ ನೀ ನಿಂದೊಂದು ಬಟ್ಟೂ
ಕೋಟಿ ಜನ ನಿಲ್ಲಬೇಕು ಬಿಟಗೊಂಡು ಬಟ್ಟು.
ಆಗ್ಬೇಕು ನಡದದ್ದ ಹಾದಿ – ಬಂಗಾರ ನಿನ್ನ ಲದ್ದಿ.

ಮುಂದಿನ ಮುವತ್ತು ಕುಂತಿ ಹಂಗ, ಖಬರಗೇಡಿ,
ಅಪ್ಪಾ, ಅವ್ವಾ, ಬಂಧು, ಹೇಣತಿ-ಮಕ್ಕಳ ಮರಿ.
ಜಗತ್ತಿನ್ಯಾಗ ಏನೆನೈತಿ ಅದರ್ಮ್ಯಾಗ ನಿನ್ನ ಹಕ್ಕೈತಿ
ಕಬಳಿಸು ಏನೂ ಉಳಿಸದಂಗ-ನಿರಂಕುಶಮತಿಯಾಗು.
ಸ್ವಂತೊದ್ಧಾರ ಆಗಿರಲಿ ನಿನ್ನ ಮಂತ್ರೊದ್ಧಾರ
ಢರಕಿ ಬರ್ಲಿ ಹಂ ಅಹಂ ಅಂತ ಢುಸಕಿ ಹೊಡ್ದೊಡದು.
ಹಾರ್ಟನ್ಯಾಗಿಲ್ಲ ಭಾವಾ, ಮೆದುಳಾಗಿಲ್ಲ ಮೋಹಾ -
ಇರ್ಬೇಕು ಜಿಟ್ಟೀಯ ಹುಳದಂಗ-ತಿನ್ಕೋತ ಸುತ್ತಲಿಂದು
ಏನಾರ ಉಳಿಸಿದ್ಯಾದ್ರ ನೋಡು ನನ್ಮ್ಯಾಲಾಣಿ
ನೀ ಹೋಗುಕ್ಮೊದ್ಲು ಹೋಗೀರ್ಬೇಕು ಹ್ಯೂಮ್ಯಾನಿಟಿ.

'ಅವಧಿ' ಯಲ್ಲಿ ಪ್ರಕಟಿತ --
http://avadhimag.com/2014/04/16/%E0%B2%A8%E0%B2%AE%E0%B3%8D%E0%B2%A6%E0%B3%81-%E0%B2%AE%E0%B2%BF%E0%B2%A1%E0%B3%8D%E0%B2%B2-%E0%B2%95%E0%B3%8D%E0%B2%B2%E0%B2%BE%E0%B2%B8%E0%B3%81-%E0%B2%AF%E0%B2%BE%E0%B2%B5%E0%B2%BE%E0%B2%97/


Monday, March 17, 2014

ಕಂಭಕ್ಕಾತು ನಿಲ್ಲುವದಿಲ್ಲ

ಕಂಭಕ್ಕಾತು ನಿಲ್ಲುವದಿಲ್ಲ

ಅನಿಲ ತಾಳಿಕೋಟಿ

ಮೊದಲಾದರೆ ನೀ ಬರುವ
ಪರಿಮಳವದೆಂತೋ ಪತ್ತೆ ಹಚ್ಚಿ
ಇದ್ದೊಂದ ಪೌಂಡ್ಸ ಪೌಡರನ
ಒಂದೆರಡು ಗ್ರಾಂಗಳ ಮೆತ್ತಿ
ನಗುವರಳಿಸಿ ನಾ ಕಾಯುತ್ತಿದ್ದೆ.

ಕಾಯದ ಪ್ರಭಾವವೋ ಗಾಯದ್ದೋ
ಈಗೀಗ ಕಂಭಕ್ಕಾತು ನಿಲ್ಲುವದಿಲ್ಲ
ಕಮ್ಮಿಯಾಗಿರುವದು ಕಂಭಗಳೇನಲ್ಲ
ಎನ್ನುವದ ನೀ ಅರಿಯದವಳೇನಲ್ಲ
ಸಂಧಿಗೊಂದಿಗಳಲ್ಲಿ ಆಕಸ್ಮಿಕವಾಗಿ
ಸಂದಿಸುತ್ತಿದ್ದದ್ದು ನಿನಗೂತ್ತೆಂಬುವದು ನನಗೊತ್ತು.

ಕಳ್ಳ ಬೆಕ್ಕು ನಿನ್ನ ಕುಡಿನೋಟಕ್ಕೆ ಸೊಕ್ಕು
ಬೀದಿ ನಾಯಿಯಾಗಿ ಸುತ್ತಿದ್ದು
ಛಪ್ಪನ್ನಾರು ಊರುಗಳಿಗೆಲ್ಲ ಗೊತ್ತು
ಮಜವಿತ್ತು, ಮುದವಿತ್ತು ಹೂರಿ
ನೋಟಗಳ ಹೊಯ್ದಾಟ ಚೆಲುವಾಗಿತ್ತು
ತಂಗಾಳಿ ಕೂಟ ನಮ್ಮೂಟ
ಮಟ ಮಟ ಮಧ್ಯಾಹ್ನಗಳ ಮಸ್ತಾಗಿಸುತ್ತಿತ್ತು.

ಆ ತಿರುವುಗಳು ಮರೆಯಾಗಿವೆ
ನಿನ್ನ ಕರುಳಬಳ್ಳಿಗಳ ದಿಕ್ಕು ಬದಲಾಗಿವೆ
ಮರೆಯೆಂದರೆ ಮರೆಯಲ್ಹೆಂಗೆ
ಮೇರೆಯಿಲ್ಲದ ನುಗ್ಗಿ ಬರುವ ತೊರೆ
ನೆರೆ ಮುಗಿದಾದ ಮೇಲೆ ಬರೀ ನೊರೆ
ನಾರಿ ನಾರೀ ನೀನಾರೇ ನಾರೀ ನಾರೀ
ಎನದಿರು ಸೋ ಸ್ವಾರಿ ಸ್ವಾರೀ ರೀ ಸ್ವಾರೀ
ಮಾಗಿ ಮೆರೆಯುತ್ತಿದ್ದಿದ್ದೆಲ್ಲಾ
ಬಾಗಿ ಬೆಂದು ಮರೆಯಾಗಿವೆ
ಪರಿಚಿತ ದಾರಿಯಲ್ಲಿ ಅಪರಿಚಿತರ
ಪಾತ್ರ ಪ್ರಪಂಚ ಮುಂದುವರಿಯುತ್ತಿದೆ.

ಕಂಭಕ್ಕಾತು ನಿಲ್ಲುವದಿಲ್ಲ 

ಸಮಾನತೆಗಾಗಿ

        ಸಮಾನತೆಗಾಗಿ
ರಾಮಕೃಷ್ಣ ಗರ್ಭದ ಕಲ್ಲಾದ
ಬುದ್ದ ಬಸವಳಿದು ಬಿದ್ದ
ಅಲ್ಲಮ ಮೆಲ್ಲನೆದ್ದು ಹೋದ
ಮೋಹನದಾಸನಾಶಿಸುತ್ತ ಅಸುನೀಗಿದ
ವಿವೇಕ ಬಾಬಾ ನಿಟ್ಟುಸಿರಿಟ್ಟು ನಡೆದ
ಮಳೆ ಸುರಿಯಿತು ಮರುಭೂಮಿಯ ಮೇಲೆ
ಕೊಳೆ ಬೆಳೆಯಿತು ಮನುಜರರಿವಿನೊಳಗೆ
ಬರಬೇಕಾದವರೆಲ್ಲಾ ಬಂದು ಹೋದರು
ಕೊಡಬೇಕಾದದ್ದೆಲ್ಲಾ ಕೊಟ್ಟು ಕಂಗೆಟ್ಟರು
ಎಲ್ಲರನ್ನಟ್ಟಿ ಇನ್ನೂ ನಿಂತಿಹರು ದಾರಿಗೆಟ್ಟವರು.
ನ ಹನ್ಯತೆ ಅಸಮಾನತೆ
ಕೊಲ್ಲಬಂದವರೆಲ್ಲಾ ಕಾಲವಾದರೂ
ಕಾಲೂರಿಕೊಂಡ ಕೊಳೆತದ ನಾತ
ನೈನಂ ಛಿಂದಂತಿ ಶಸ್ತ್ರಾಣಿ ಈ ಜಾತಿಯತೆ
ಬದಲಾಗಬೇಕಾದದ್ದು ಬೆಂಕಿ ಗಾಳಿ ಮಳೆಯಲ್ಲ
ಮನೆ ಮನೆಗಳಲ್ಲಿ ಮುದುಡಿದ ಮನಗಳು
ತೆರೆ ತೆರೆದ ಕಿಂಡಿಗಳಿಂದ ಹೊರ ಹೊರಡಲಿ
ಕುಲ ಕುಲವೆನ್ನುವ ಕಾರಿರುಳು
ಒಳ ಹರಡಲಿ ಕಾಂತಿಯ ಸುಡುನೆರಳು
ಸಹಜಾತಿ ಸುಖಕಿಂತ ಮಿಗಿಲು ಮಾನವೀಯತೆ
ಮೂರನೂರು ಉಂಡ ಹೊಟ್ಟೆಗಳ
ತಣಿಸುವದಕ್ಕಿಂತ ಮಿಗಿಲು
ಮೂರು ದಣಿದ ಮೈಗಳಿಗೆ
ಸಂತೈಸುವೆರೆಡು ಕೈಗಳು
ಸಾವಿರ ಪುಟಗಳ ಸಮೃದ್ಧ
ಸಮಾನತೆಯ ಸಾಹಿತ್ಯಕ್ಕಿಂತವಧಿಕ
ಒಬ್ಬ ಬಡವನ ಕಣಿವೆಯೊಡಲಲ್ಲಿ
ಬೆಳೆ ನಳಿನಳಿಸುವದು
ಬವಣೆಯ ಕಳೆ ಕೀಳುವದು
ಬನ್ನಿ ಜಗದೊಧ್ಧಾರಕರ ಅನಗತ್ಯವಾಗಿಸುವ.

 ಸಮಾನತೆಗಾಗಿ

Wednesday, January 29, 2014

ಪಾಪ ಪಪ್ಪಾಯ


ಮೂಕಜ್ಜನ ಸೋಲು - ಭಾಗ ೨

                                                             ಮೂಕಜ್ಜನ ಸೋಲು - ಭಾಗ ೨

 ಯಾವದೇ ಪ್ರಚಲಿತ ಸಮಸ್ಯೆಗೆ ಒಂದು ಆರೋಗ್ಯಪೂರ್ಣ ಚರ್ಚೆಯಿಂದ ಸಮಾಧಾನ ಕಂಡುಕೊಳ್ಳಬೇಕು ಅನ್ನುವದು ಮೂಲ ಉದ್ದೇಶ - ಅಂತೆಯೇ ಮುಕ್ತ ಮನಸ್ಸಿನ ಮಾತುಕಥೆ ಅಗತ್ಯವಾದದು. ಇಲ್ಲೊಂದೆರಡು ಅಗತ್ಯವಾಗಿ ಮನನವಾಗಬೇಕಾದ ವಿಷಯಗಳು. ಮನಸ್ಸು ಎಲ್ಲ ಸ್ವಭಾವಗಳಿಗೂ ಮೂಲ. ಸ್ವಭಾವ ಬೇಕಾಗಿಯೋ ಬೇಡವಾಗಿಯೋ ಸಂಸ್ಕಾರ,ಸಂಸ್ಕ್ರತಿಯಿಂದ ಪ್ರಭಾವಿತವಾಗಿರುತ್ತದೆ. ಈ ಸಂಸ್ಕ್ರತಿ ಕೂಡಾ ಮಾನವನ ಒಟ್ಟೂ ವಿಕಾಸದ ಮಜಲೆ. ಆ ನಿಟ್ಟಿನಲ್ಲಿ   ಪ್ರಪಂಚದ ಎಲ್ಲ ಸಂಸ್ಕ್ರತಿಗಳ ಮೂಲವೂ ಒಂದೆ. ಪ್ರಾಣಿ ಸಹಜ ಮೂಲ ಪ್ರವೃತ್ತಿಯಿಂದ ಸ್ವಲ್ಪ ಮೇಲೆ ಬಂದು ಸಮಾಜಮುಖಿಯಾದ ಮಾನವನ ದೃಷ್ಟಿಯಿಂದ ನೋಡಿದಾಗ ಈ ನಿಟ್ಟಿನಲ್ಲಿ ನಿಚ್ಚಳವಾಗಿ ಗೋಚರಿಸುವ ಕೆಲವು ಸತ್ಯಗಳಿವು. 

೧) ತಮ್ಮಂತಿರದ ಬೇರೆಲ್ಲರ ಬೇಕು ಬೇಡಗಳನ್ನು ಒಂದು ಸರ್ವಸಮ್ಮತ  ಚೌಕಟ್ಟಿನಲ್ಲಿ  ಗೌರವಿಸುವದು.
೨) ಎಲ್ಲ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತವಾದದ್ದು, ಲೈಂಗಿಕತೆ ಅತ್ಯಂತ ಖಾಸಗಿಯಾದದ್ದು.
೩) ಇನ್ನೊಬ್ಬರ ಹಕ್ಕು, ಅವಕಾಶ ಎಗರಿಸುವ ವ್ಯವಸ್ಥೆ ವಿರುದ್ದ ನಾವೆಲ್ಲ ಸೆಟೆದೇಳುವದು ಮಾನವೀಯತೆಯ ಲಕ್ಷಣ.
೪) ಪ್ರಕೃತಿದತ್ತವಾದ ಯಾವದೇ ವಿಷಯಕ್ಕೂ ಶಿಕ್ಷೆ ವಿಧಿಸುವ ಅಥವಾ ಹತೋಟಿಯ ಹಕ್ಕು ನ್ಯಾಯಾಲಯಗಳಿಗಿಲ್ಲ.

ನಮಗೆ ಇಲ್ಲಿಯವರೆಗೂ ಗೊತ್ತಿರುವ ಎಲ್ಲ ಮೂಲಗಳಿಂದ ನೋಡುವದಾದರೆ ಸಲಿಂಗಕಾಮ ಮನೋರೋಗವಲ್ಲ, ಅನಾರೋಗ್ಯವೂ ಅಲ್ಲ. ಸಲಿಂಗ ವಂಶ ವಾಹಿಗಳಿನ್ನು ಯಾರು ಇನ್ನೂವರೆಗೆ ಕಂಡುಹಿಡಿಯಲಾಗದಿದ್ದರೂ ಅದರ ಮೂಲ ಜೀವವಿಜ್ಞಾನದ ಸೆಲೆಯಲ್ಲಿ ಇದೆ ಎಂಬುವದು ನಿರ್ವಿವಾದ. ಸಲಿಂಗ ಕಾಮಿಗಳಿಗೂ ಎಲ್ಲರಂತೆ ಗೌರವಯುತವಾಗಿ ಬಾಳುವ ಹಕ್ಕು ಸಂವಿಧಾನದಲ್ಲಿ, ಸಮಾಜದಲ್ಲಿ ಇರಲೇಬೇಕು. ಇವೆಲ್ಲವೂ ಪ್ರಶ್ನಾತೀತವಾಗಿ ದೊರಕಲೆ ಬೇಕಾದ ಪರಭಾರೆ ಮಾಡಲಾಗದ ಹಕ್ಕುಗಳು.

 ಮೊನ್ನೆ ಓ.ಎಲ್.ನಾಗಭೂಷಣ ಅವರ ಲೇಖನವೊಂದನ್ನು ಓದುತ್ತಿದ್ದೆ. ಅದನ್ನಿಲ್ಲಿ ಈ ಸಮಸ್ಯೆಗೆ ಹೊಂದಿಸಿಕೊಂಡು ನೆನೆಪಿದ್ದಷ್ಟು  ಉದ್ದರಿಸಿದರೆ ತಪ್ಪಾಗಲಿಕ್ಕಿಲ್ಲ ಎನಿಸುತ್ತದೆ. ತೋರಿಕೆಯೇ ಧರ್ಮವಾಗಿದೆ ಈಗ. ಅಲ್ಲಮ ಹೇಳಿದಂತೆ 'ಆಚಾರವನೆ ಕಂಡರು, ವಿಚಾರವನೆ ಕಾಣರು', ಇದರ ನೇರ ಪರಿಣಾಮದ ಫಲಶ್ರುತಿಯೇ ಈ ಅತೀ ಸ್ವಾತಂತ್ರ್ಯಕ್ಕೆ, ಸ್ವೇಚ್ಛಾಚಾರಕ್ಕೆ ಕಾರಣವೇನೋ ಅನಿಸುತ್ತದೆ ಕೆಲವೊಮ್ಮೆ. ತನಗೆಲ್ಲ ಗೊತ್ತು ಎಂಬ ಅಹಂ ತನ್ನ ಅನುಭವವೆ ಅನುಭಾವವೆಂದು ತಪ್ಪಾಗಿಸಿಕೊಳ್ಳುತ್ತದೆ. ಎಲ್ಲ ಘಟನೆಗಳು, ಕಾರ್ಯಕಾರಣಗಳು ತನ್ನನ್ನು ಮೀರಿ ಇಲ್ಲ ಎಂಬ ಭಾವನೆ ಬಲವಾದಗ ಅಲ್ಲಿ ನಂಬಿಕೆ ಕಮ್ಮಿಯಾಗಿ ಅಲ್ಲೊಂದು ನಿರ್ವಾತ ಸ್ತಿತಿ ಉದ್ಭವಿಸಿ ಬಾಹ್ಯ ಒತ್ತಡಗಳು ಅದನ್ನು ಆಕ್ರಮಿಸಿಕೊಳ್ಳುತ್ತವೆ ಎಂಬ ಎಚ್ಚರ ನಮಗಿರಬೇಕಾದದ್ದು ಅತ್ಯಗತ್ಯ. ಇದನ್ನು ಇನ್ನೂ ಒಂದು ಬದಿಯಿಂದ ನೋಡಬಹುದು - ಅಲ್ಲಮನ ಮಾತಿನಂತೆ 'ತನು ಒಂದು ದ್ವೀಪ, ಮನ ಒಂದು ದ್ವೀಪ, ಆಪ್ಯಾಯನ ಒಂದು ದ್ವೀಪ'. ದೇಹ, ಮನಸು, ತೃಪ್ತಿ ಎಂಬ ಮೂರು ವೆಕ್ಟರಗಳು (vector) ಒಂದನ್ನೊಂದು ಬೇರೆ ಬೇರೆ ದಿಕ್ಕಿನಲ್ಲಿ ಹಿಗ್ಗಾ ಮುಗ್ಗಾ ಎಳೆದಾಡುತ್ತ ನಮ್ಮ ಬದುಕು ಈ ಮೂರು 'ಬಲ' ಗಳ ಒಟ್ಟೂ ಫಲಿತಾಂಶದಿಂದ ಸ್ವಯಂ ನಮ್ಮ ಅಂಕೆ ಮೀರಿ - ಯಾವ ಕ್ಷಣದಲ್ಲಿ , ಎಲ್ಲಿ ಏನು ಮಾಡುತ್ತಿದ್ದೇವೆ ಎಂಬುವದು ಕೂಡಾ ಮರೆಯಾಗಿ - ಪ್ರವಾಹಕ್ಕೆ ಸಿಕ್ಕ ತರಗಲತೆಯಂತೆ ಸುತ್ತುತ್ತಲಿದ್ದೇವೋ ಎನಿಸಬಹುದು. ತನು, ಮನ,ತೃಪ್ತಿ ಮನುಷ್ಯರ ಬಾಳನ್ನು ನಿರ್ಧರಿಸುವ ಮೂರು ಮುಖ್ಯ ಧಾರೆಗಳು - ತನುವಿನ ಬಯಕೆ ಆಶೆ, ಆಕಾಂಕ್ಷೆ , ಲೌಕಿಕವೂ, ಐಹಿಕವೂ ಆದರೆ ಮನದ್ದು ದೇವ-ಧರ್ಮದ್ದು,ನಂಬಿಕೆಯದು, ಮಾನವ ಪ್ರೇಮದ್ದು. ತೃಪ್ತಿ ವಿಚಾರ, ತರ್ಕ, ಆಧ್ಯಾತ್ಮಿಕ ಅರಿವು ಕಾಣುವ ಯತ್ನ. ಹಟಕ್ಕೆ, ಅಹಂಗೆ ಇದು ಕಾರಣ. ಇದು ಒಂದು ಥರದಲ್ಲಿ ಹೆಚ್ಚುಗೆಯಿಂದ (affluenza) ಉದ್ಭವಿಸಿದ ಸಮಸ್ಯೆಯೇ ಹೊರತು ಸಮೃದ್ಧಿಯ ಅಭಾವದಿಂದಾದದ್ದಲ್ಲ -ಅದ್ದರಿಂದಲೆ ಇದನ್ನು ಸರಿಯಾಗಿ ಗುರುತಿಸುವದು ಗುರುತರವಾದದ್ದು -ಇಲ್ಲದಿದ್ದರೆ ಪರಿಹಾರ ಅಸಾಧ್ಯ. ಎಲ್ಲದಕ್ಕೂ ದೊಡ್ಡಣ್ಣ ಅಮೆರಿಕವನ್ನು ಅನುಸರಿಸುವದರಿಂದ ಆಮದಾಗಬಹುದಾದ ಸಮಸ್ಯೆಗಳನ್ನು ನಮ್ಮ ನೆಲೆದಿಂದ, ನೆಲೆಯಿಂದ ಅರಿತುಕೊಳ್ಳುವದು ಅಗತ್ಯ. ನಮ್ಮ ದೇಹ, ಬುದ್ಧಿ, ಮನಸ್ಸುಗಳನ್ನು ತಿದ್ದಿಕೊಳ್ಳುತ್ತ, ಹೊಸದನ್ನು ತಾಳ್ಮೆಯಿಂದ ಪರಿಷ್ಕರಿಸುತ್ತಾ ನಾವೀಗ ಮುನ್ನಡೆಯಬೇಕು ಇಲ್ಲದಿದ್ದರೆ ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ ಆಗಬಹುದು ನಮ್ಮ ಪರಿಸ್ಥಿತಿ.

 ಅತೀ ಸ್ವೇಚ್ಛಾಚಾರ, ವ್ಯಕ್ತಿ ಸ್ವಾತಂತ್ರ್ಯಕ್ಕೂ - ಸ್ವಾಸ್ಥ್ಯಸಮಾಜದ ನಡುವಳಿಕೆಗೂ ನಡುವಿರುವ ತೆಳು ಗೆರೆಯನ್ನು ಕಾಲಿನುಂದುಜ್ಜಿ ಮುಕ್ತತೆಯನ್ನು ವೈಭವಿಕರಿಸುವ ಈ ಚಾಳಿ ಹೊಸದೇನಲ್ಲ.  ಯಾವದೋ ಒಂದು ಲೇಬಲ ಹಚ್ಚಿ ಸಲಿಂಗಕಾಮವನ್ನು ಮುಖ್ಯ ಧಾರೆಗೆ ಎಳೆದು ತರುವ ಪ್ರಯತ್ನ ಅವಿರತವಾಗಿ ನಡೆಯುತ್ತಲಿದೆ. ಅದರ ಹೆಚ್ಚಳವನ್ನು ಸ್ವಲ್ಪ ಮಾತ್ರವೂ ಪ್ರಶ್ನಿಸುವವರನ್ನು ಪ್ರತಿಗಾಮಿ ಎಂದೆ ಜರಿಯಲಾಗುತ್ತದೆ ಈ ಹೆಚ್ಚಳವನ್ನು ಪ್ರಶ್ನಿಸುವದು ಕೂಡಾ ನಮ್ಮ ಜವಾಬುದಾರಿಯೆ. ಮೊನ್ನೆ ಕನ್ನಡದ ಹೆಸರಾಂತ ಲೇಖಕಿಯ ಒಳ್ಳೆಯ, ಮಾನವೀಯತೆಯ ಕಥೆ ಓದುತ್ತಲಿದ್ದೆ - ಒಬ್ಬ ಅಜ್ಜ ಮೊಮ್ಮಗಳ ಮಧ್ಯದ ಆಪ್ತ ಕಥೆ. ಕೊನೆ ಮುಟ್ಟುವವರೆಗೂ  ಎಲ್ಲಿ ಆ ಅಜ್ಜನ ಇನ್ನೊಂದು ಮಗ್ಗಲು ತೋರಿಸಲು, ಲೇಖಕಿಯ ಅದ್ಭುತ ಕಾಣ್ಕೆ ತೋರಿಸಿಕೊಳ್ಳಲು, ಪ್ರಗತಿಪರವೆಂದು ಬಿಂಬಿಸಿಕೊಳ್ಳಲು ಇಲ್ಲ ಸಲ್ಲದ್ದೆಲ್ಲವನ್ನೂ ಎಳೆದು ತರಲಾಗುತ್ತದೋ ಎಂದು ಆತಂಕಿತನಾಗಿದ್ದೆ. ಎಲ್ಲಿ ಇದರಲ್ಲಿ  ಕಪೋಲಕಲ್ಪಿತ ವಿಚಾರಧಾರೆಗಳನ್ನು ನುಸಳಿಸಿ ತಮ್ಮ ದೃಷ್ಟಿಯೇ ಸರ್ವಶ್ರೇಷ್ಟ, ಮಾನವತಾವಾದಿ ಎಂದು ಬೀಗುತ್ತಾರೋ ಎಂದು ಹೆದರಿದ್ದೆ.ಅಬ್ಬಾ ಅಂತಹದೇನೂ ಇಲ್ಲವಲ್ಲ ಎಂದು ನಿಬ್ಬೆರಗಾಗಿ ನಿಸೂರಾದೆ. ಕಾರಂತರ ಮೂಕಜ್ಜಿಯಂತೆ ಎಲ್ಲ ಕಾಣುವ ದಿವ್ಯ ಚಕ್ಷುವಿನ ಸವಾಲಿದು.  ಇಲ್ಲಿನ ಸವಾಲೆಂದರೆ ಯಾವದನ್ನು ಅಕ್ಕರೆ, ಒಲವು, ಒಲುಮೆ, ವಾತ್ಸಲ್ಯ, ಮಮತೆ ಎಂದುಕೊಳ್ಳುತ್ತಿದ್ದೆವೋ ಅದನ್ನು ವ್ಯವಸ್ಥಿತವಾಗಿ ಹೊಸಕಿ ಹಾಕಿ ಎಲ್ಲದಕ್ಕೂ ನಮಗೆ ತಿಳಿಯಲೇಬೇಕಾದ ಕಾರಣವನ್ನು ಭೂತಕನ್ನಡಿ ಇಟ್ಟು ಹುಡುಕಿ ಆಹಾ ನಾನು ಹೇಳಿರಲಿಲ್ಲವೆ ಇದು ಹೀಗೆ ಎಂದು ಕುಣಿದಾಡುವ ಪರಿ -ಇನ್ನೂ ಕೆಲವರು ಇನ್ನೂ ಮುಂದುವರಿದು ಸಲಿಂಗಕಾಮವನ್ನು ಸ್ವಲ್ಪ ಪ್ರಶ್ನಿಸಿದರೂ ಕೂಡಾ ಅದನ್ನು ನಮ್ಮ ಅರಿವಿನ ಕುಂದೆಂದೂ ನೂರೋ, ಇನ್ನೂರೋ ವರುಷದ ಹಿಂದೆ ಕೂಡಾ ಹೀಗೆಯೇ ನಾವು ಅಸ್ಪೃಶ್ಯತೆಯ ಬಗ್ಗೆ, ದಾಸ್ಯದ ಬಗ್ಗೆ ತಪ್ಪು ಭಾವಿಸಿರಲಿಲ್ಲವೆ ಎಂದು ತಪ್ಪು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಇಲ್ಲಿ ನಮಗೆ ಜೊಳ್ಳನ್ನು ಗಟ್ಟಿಯಿಂದ ಬೇರ್ಪಡಿಸುವ ಎಚ್ಚರವಿರಬೇಕಾದದ್ದು ಅತ್ಯಗತ್ಯ.

 ಎಲ್ಲ ಸತ್ಯಗಳಿಗೂ ಅತ್ಯಂತ ಕಿರು ಮುಗಿತಾಯ (short shelf life) ದ ಕಾಲದಲ್ಲಿದ್ದೇವೆ ನಾವೀಗ. ನನ್ನ ದನಿಯೂ ಸಾಮಾಜಿಕ ಬಹು ಜನರ ನುಡಿಯೊಡನೆ ತಾಳೆಯಾದರೆ ಮಾತ್ರ ಸರಿ ಇಲ್ಲದಿದ್ದರೆ ತಪ್ಪಿದ ಶೃತಿಯಾಗಬಹುದು ಎನ್ನುವ ಹೆದರಿಕೆಯಲ್ಲಿ ಮಾಡಿಕೊಳ್ಳುವ ಒಪ್ಪಂದದಂತೆ ಪ್ರತಿಯೊಬ್ಬರು ಯೋಚಿಸುತ್ತಿದ್ದಾರೆ. ಇದು ಸಮಾಜಮುಖಿಯಾಗುವದರ ಜೀವಾಳ, ತಿರುಳು ಎಂಬ ಹುಸಿ ಕಲ್ಪನೆ. ಯಾರನ್ನೂ, ಯಾಕೆ ನೋಯಿಸಬೇಕು ಅಥವಾ ಯಾರನ್ನೂ ನೋವಿಸದವರ ಥರಹ ಕಾಣಿಸಿಕೊಳ್ಳುವದು ಹೇಗೆ ಎಂಬ ಹಪಾಪಿತನ. ಸಮ ಹಕ್ಕಿನ ವಿಲೋಮ ಪ್ರಯೋಗವಿದು. ಅಮೆರಿಕೆಯಲ್ಲಿ ತುಂಬಿ ತುಳುಕಾಡುವ ಬಂದೂಕಿನ ಸಮಸ್ಯೆಗೆ ಎನ.ಆರ.ಎ.(National Rifle Association) ಗಳ ತಲೆತಿರುಕ ಸಲಹೆಗಳಂತಿರುತ್ತವೆ ಇವು. ಅದಕ್ಕಾಗಿ ತಮ್ಮೆಲ್ಲ ಶಕ್ತಿಯನ್ನು ವ್ಯಯಿಸುವ, ಹಣ ಖರ್ಚು ಮಾಡುವ ಅನೇಕರಿದ್ದಾರೆ. ನೈತಿಕವಾದ ಯಾವದು ಇವರಿಗೆ ಸಲ್ಲದ್ದು - ಅದೆಲ್ಲ ಗೊಡ್ಡು ಸಂಪ್ರದಾಯ ಹಾಗೂ ಮುರಿಯಲೇ ಬೇಕಾದದ್ದಾಗಿ ಕಾಣುತ್ತವೆ ಇವರಿಗೆ. ಇವರೆಲ್ಲಾ ನೂರಕ್ಕೆ ಎಪ್ಪತ್ತರಷ್ಟು ಒಳ್ಳೆಯವರೆ, ಒಳ್ಳೆಯ ಸದುದ್ದೇಶದಿಂದ ಕೂಡಿದವರೆ -ಸಂದೇಹವಿಲ್ಲ. ಯಾವದನ್ನು ನಮ್ಮಿಂದ ತಡೆಗಟ್ಟುವದು ಅಸಾಧ್ಯವೋ ಅದರ ಬಗ್ಗೆ ತಟಸ್ಥವಾಗಿರುವದು ಜಾಣತನವಷ್ಟೆ ಅಲ್ಲ, ಅದೂ ನಮ್ಮ ಕರ್ತವ್ಯ ಕೂಡಾ ಎಂಬ ನಿಲುವಿನವರಿವರು. ಇಲ್ಲಿ ವಿವೇಚನಾ ಪ್ರಜ್ನಾವಂತಿಕೆಯೆಂದರೆನೆಂದು ಹೇಳುವದು ಕಷ್ಟವಾದರೂ ಸ್ವಲ್ಪ ಮಾತ್ರವು ವ್ಯವಹಾರ ಪ್ರಜ್ಞೆಯಿರುವವರು ಇದರ ಪಥಕರಣದ ಅಂತಿಮತೆ ಗುರುತಿಸದೆ ಇರಲಾರರು. ದೊಡ್ಡ ಬೆಳಕೆಂದು ಸೂರ್ಯನ ನಿರೂಕಿಸುತ್ತ ಇದ್ದ ಕಣ್ಣುಗಳನ್ನು ಕುರುಡಾಗಿಸಿಕೊಂಡತ್ತಲ್ಲವೆ ಇದು?  ಸ್ವಾನುಭವವನ್ನು ನಮ್ಮ ಸಂಪ್ರದಾಯಕ್ಕೆ ಒಗ್ಗಿಸುವ ಕೆಲಸವನ್ನು ನಾವು ತುರ್ತಾಗಿ ಮಾಡಬೇಕಾಗಿದೆ.

 ಅಂದ ಹಾಗೆ ಈ ಮೊದಲು ಹೇಳಿದ ಶಿಖರಭಾನು ಎಂದೂ ಯಾವ ಗುಡ್ಡ, ಬೆಟ್ಟ, ಗಿರಿ, ಪರ್ವತ ಏರಿಲ್ಲ, ಏರುವ ಇರಾದೆಯಿರುವವನು, ಯಾರೋ ಏರಿದ್ದನ್ನು ಕೇಳಿದವನು ಮಾತ್ರ.

 

Wednesday, January 15, 2014

ಮೂಕಜ್ಜನ ಸೋಲು – ಭಾಗ ೧

ಅವಧಿಯಲ್ಲಿ ಪ್ರಕಟಿತ 'ಸಲಿಂಗರತಿ' ಯ ಬಗ್ಗೆ -- ಮೊದಲ ಭಾಗ

ಸಲಿಂಗರತಿಯನ್ನು ಅಪರಾಧೀಕರಿಸಿ ಐಪಿಸಿ ಸೆ.377ರ ಮೇಲೆ ನೀಡಿರುವ ತೀರ್ಪನ್ನು ಪುನರ್‌ವಿಮರ್ಶಿಸುವಂತೆ ಎಲ್ಲೆಡೆಯಿಂದಲೂ ಕೂಗು ಕೇಳಿಬರುತ್ತಿದೆ.  ಹಾಗೆಯೇ ಸಲಿಂಗರತಿ ಅನೈಸರ್ಗಿಕ, ಹಾಗಾಗಿ ಅದು ಶಿಕ್ಷಾರ್ಹ ಅಪರಾಧ ಎನ್ನುವ ವಾದವೂ ಇದೆ. ಅದೇನೆ ಇರಲಿ ಈ ಬಗ್ಗೆ ಒಂದು ಗಂಭಿರವಾದ ಚರ್ಚೆ ಆಗಬೇಕಾಗಿರುವುದಂತೂ ನಿಜ.
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ, ಆದರೆ ಇದು ಲೇವಡಿ ಮಾಡುವ, ಯಾರನ್ನೋ ನಿಂದಿಸುವ ವೇದಿಕೆ ಅಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ. ನಿಮ್ಮ ವಾದ ಎಲ್ಲೂ ವೈಯಕ್ತಿಕ ನಿಂದನೆ ಆಗದಿರಲಿ..

ಮೂಕಜ್ಜನ ಸೋಲು – ಭಾಗ ೧
ಅನಿಲ ತಾಳಿಕೋಟಿ
ಆತನೊಬ್ಬ ಉತ್ಸಾಹಿ ಮಾನವ. ತನ್ನ ವಿಸಿಟಿಂಗ ಕಾರ್ಡನಲ್ಲಿ ಹೆಸರಿನಷ್ಟೆ ದೊಡ್ಡದಾಗಿ ಪರ್ವತಾರೋಹಿ ಎಂದು ಹೆಮ್ಮೆಯಿಂದ ನಮೂದಿಸಿಕೊಂಡಾತ. ಕನಿಷ್ಟ ಐದು ವರುಷದಿಂದ ತಾನು ಏರಬೇಕಾದ ಪ್ರಪಂಚದ ಅತ್ಯುನ್ನತ ಶಿಖರದ ಅನುಭವವನ್ನು ಹರಳುಗಟ್ಟುವಂತೆ, ಕಿರಿ ಹಿರಿಯರೆಲ್ಲರೂ ಓದಿ ನಿಬ್ಬೆರಗಾಗುವಂತೆ ಬರೆಯುತ್ತಲಿದ್ದಾನೆ. ಆತ ತಿರುಗು ಹಾಕದ ಆಕರಗಳೊಂದು ಉಳಿದಿಲ್ಲ, ಮೂಸದ ಜ್ಞಾನಶಾಖೆಗಳಿಲ್ಲ. ಆತ ಭೇಟಿ ಕೊಡದ ಜಾಲಪ್ರಪಂಚದ ಒಂದೇ ಒಂದು ಮಿನ್ನೆಲೆ ಉಳಿದಿಲ್ಲ ಎನ್ನಬಹುದು. ಆತ ಮಾತನಾಡಿಸದ,ಸಂದರ್ಶಿಸದ ಪರ್ವತಾರೋಹಿಗಳು ಇಲ್ಲವೆ ಇಲ್ಲ ಎಂದರೂ ಆದೀತು. ಸಧ್ಯಕ್ಕೆ ಉಸಿರಾಡಿಸುವವರಾಗಿದ್ದರೆ ಅವರ ಜೀವನದ ಎಲ್ಲ ಕೊಂಡಿಗಳನ್ನು ಅವನು ಸಮಗ್ರವಾಗಿ ಪರಿಶೀಲಿಸಿ-ಪ್ರತಿಯೊಂದನ್ನೂ ತಾಳ್ಮೆಯಿಂದ, ಆಸಕ್ತಿಯಿಂದ ತೀರ ನಾಜೂಕಾಗಿ ಪರಿಷ್ಕರಿಸಿ ಪೇರಿಸಿದ್ದಾನೆ.  ಹಿಂದಣ ಲೇಖಕರ ತೊತ್ತನ್ನು ತುತ್ತು ತುತ್ತು ಮಾಡಿ ನುಂಗಿ ಮುಕ್ಕಿದ್ದಾನೆ. ಮುಂದಣ ಬರಹಗಾರರ ಮನದಾಳ ಬಗಿದು ಶೋಧಿಸಿ, ಜರಡಿ ಹಿಡಿದು ಹೊಳೆ ಹೊಳೆವ ಹೊನ್ನ ಭಿನ್ನವಾಗಿಸಿ ಉಜ್ಜಿ ಚೊಕ್ಕಟ ಮಾಡಿ ಮಾಡಿ ದಣಿದಿದ್ದಾನೆ. ಆತ ಕೇಳದ, ನೋಡದ, ಓದದ ಗ್ರಂಥಗಳ್ಯಾವವೂ ಉಳಿದಿಲ್ಲ.

ಈ ಚಿಕ್ಕ ಪ್ರಪಂಚದಲ್ಲಿ ಮಿಲಿಯಗಟ್ಟಲೆ ಹಿಂದಣ ಜೀವ ಜಂತುಗಳನ್ನು ಆಳವಾಗಿ ಅಭ್ಯಸಿಸಿದ್ದಾನೆ. ಹತ್ತು ಸಾವಿರದಿಂದೀಚೆ ಮಾನವ ನಿರ್ಮಿಸಿದ ಎಲ್ಲ ಬಗೆಯ ಸಾಹಿತ್ಯ ಅವನಿಗೆ ಕರತಲಾಮಲಕ -ಅದೂ ತಾಳೆಯ ಗರಿಯದ್ದಾಗಿದ್ದಿರಬಹುದು, ಕಲ್ಲಿನಲ್ಲಿ ಕೆತ್ತಿದ್ದಾಗಿರಬಹುದು, ತಾಮ್ರದಲ್ಲಿ ಕೊರೆದಿದ್ದಾಗಿರಬಹುದು, ಹಾಳೆಯಲ್ಲಿ ಮೂಡಿಸಿದ್ದಾಗಿರಬಹುದು, ಯಾವದೋ ಸರ್ವರಿನಲ್ಲಿ ಹಾಯಾಗಿ ಮಲಗಿದ್ದ ನುಡಿ ತಂತುಗಳಾಗಿರಬಹುದು, ಯಾರದೋ ಮನದಾಳದಲ್ಲಿ, ಮಿದುಳಿನಲ್ಲಿ ಅಮೂರ್ತವಾಗಿ ಕುಳಿತಿರುವ ತತ್ತಿ ಒಡೆದು ಹೊರಬರದ, ತಂಗಾಳಿಗಿನ್ನೂ ಪುಳಕಗೊಳ್ಳದ ಜೀವಿಯ ಭಾವವಾಗಿರಬಹುದು -ಅವನ್ನೆಲ್ಲಾ ಆತ ಖುದ್ದು ಖಾಸಗಿಯಾಗಿ ಅನುಭವಿಸಿ ತನ್ನ ಅಪಾರ ಜಾಣ್ಮೆಯ ಮೂಸೆಯಲ್ಲಿ ನಿಗಿ ನಿಗಿ ಕೆಂಡದಲ್ಲಿ ಕಾಯಿಸಿ ನೋಡಿದ್ದಾನೆ. ಮೈ-ಮನಸುಗಳ ಸಂಕೀರ್ಣ ಆವರಣವನ್ನು ಅನಾವರಣ ಮಾಡಿದ್ದಾನೆ. ಆತ ಶೋಧಿಸದ ಸತ್ಯವೆಂತಹದು? ಕೂಲಂಕಷವಾದ  ಪ್ರಯೋಗವಾದ್ದರಿಂದ ಸುಳ್ಳಾಗಿರುವದು ಅಶಕ್ಯ. ತಾಲಮೂಡ, ಬೈಬಲ್ ಹಿಡಿದು ವೇದ,ಉಪನಿಷತ್ ಒಡಲ ಬಗೆದು , ಪ್ರತಿಯೊಂದು ಧರ್ಮಗ್ರಂಥಗಳ ಒಳಹೊಕ್ಕು, ವೈಜ್ನಾನಿಕ ನಿಯತಕಾಲಿಕೆಗಳನ್ನು ತೂಕ ಮಾಡಿ ನೋಡಿ, ಮನೋವಿಜ್ಞಾನ, ಮನಃಶಾಸ್ತ್ರದ  ಒಳಗಿನರಿಮೆ ಅರಿದು. ಪ್ರಖರ ವೈದ್ಯಕೀಯ ನೋಟಗಳಾಚೆ ಹೊಳಪು ಕಂಗಳಿಂದ ವಿವೇಚಿಸಿ -ಅನೂಚಾನವಾಗಿ ಬಂದ-ನ್ಯಾಯ, ಸಂಪ್ರದಾಯ, ಪದ್ದತಿ, ಸಂಸೃತಿಯ ಅಂತರ್ಗತಗಳನ್ನರಿತಿದ್ದಾನೆ. ನಿರಂಕುಶ ಮೂಢನಂಬಿಕೆ ಅಲ್ಲಗೆಳೆದು ಸತ್ಯವನ್ನು ಸುಳ್ಳಿನ ಕಬಂಧ ಬಾಹುವಿನಿಂದ ಸೆಳೆದು ಬೇರ್ಪಡಿಸಿದ್ದಾನೆ.
ಇತ್ಯಾತ್ಮಕ ನೇತ್ಯಾತ್ಮಕ ವಿಷಯಗಳನ್ನು ಅರಿತು ಚಿತ್ತ, ಧ್ಯೇಯದ ಸಿದ್ಧಿ ಗಳಿಸಿದ್ದಾನೆ. ಮನುಷ್ಯನ ಮೂಲ ದ್ರವ್ಯದ ಧಾತು ಯಾವುದೆಂದು ಅರಿತಿದ್ದಾನೆ.   ಭಿನ್ನ ಅಭಿವ್ಯಕ್ತಿ ಸ್ವರೂಪಗಳ ಅನಿವಾರ್ಯತೆ ಮನಗೊಂಡಿದ್ದಾನೆ. ಮಾನವನ ಎಲ್ಲ ಗುದುಮುರಿ ತರಿದು ಎಸಿದಿದ್ದಾನೆ.  ತತ್ವಶಾಸ್ತ್ರದ ಮೂಲಕ ಬದುಕಿನ ಹಸಿಹಸಿ ಸತ್ಯಗಳನ್ನು, ಅಪರಿಹಾರ್ಯವಾದ ತಥ್ಯಗಳನ್ನು ಅನ್ವೇಷಿಸಿದ್ದಾನೆ. ಆತ್ಮವ್ಯವಸಾಯ ಮಾಡಿ ಕಳೆ ತೆಗೆದು ಹಾಕಿ ಬೆಳೆ ಬೆಳೆದಿದ್ದಾನೆ. ಭ್ರಾಂತಿಯ ಬೇರ ಒಡೆದು ದೇವನನ್ನೊಲಿಸುವ ಅಸಂಖ್ಯ ದಾರಿಗಳನ್ನು ಕಂಡುಕೊಂಡಿದ್ದಾನೆ. ಇಲ್ಲಿಯವೆರೆಗಿನ ಮಾನವ ಪ್ರಗತಿಯಯನ್ನು, ಎಲ್ಲಾ ವಿಕಸನಗಳನ್ನು ಕಡಿದಾದ ಶಿಖರವೆನ್ನುವದಾದರೆ ಆತ ಅದೆಲ್ಲವನ್ನು ಅನಿರ್ವಚನೀಯ ಮೋಡಿಯಿಂದ ಮೆಟ್ಟಿ ನಿಂತು, ಹಳೆಯ ಪಾದಧೂಳಿಗಳೆಲ್ಲವನ್ನು ಮರುಸ್ಪರ್ಶಿಸಿ, ಮರುಸೃಜಿಸಿ – ಕನಿಷ್ಟ ವೇಳೆಯಲ್ಲಿ ಗರಿಷ್ಟವೇಗದಲ್ಲಿ ಬೆಟ್ಟದ ತುಟ್ಟತುದಿ ತಲುಪಿ ಇದೀಗ ಒಂದು ನಿಡಿದಾದ ನಿಸೂರಿನ ಭಾವದಿಂದ ತಲೆ ಎತ್ತಿ ನೋಡಿದ್ದಾನೆ -ಎಲ್ಲಾ ದೊರೆತಾದ ಮೇಲೆ ಬರುವ ನಿತಾಂತವಾದ ಕ್ಷೆಭೆಯಿಂದ.  ಆಗ ಕಾಣಿಸಿದೆ  ಶಿಖರದ ನೆತ್ತಿಯ ಮೇಲೆ ಸುಡು ಸುಡುವ ಸೂರ್ಯ. ಕೊಟ್ಟ ಕೊನೆಯ, ಉಕ್ಕಡದ ಆ ತುತ್ತ ತುದಿಯ ಮೊಣಚು ಕಲ್ಲಿನ ನೆತ್ತಿಯ ಮೇಲೆ ತನ್ನ ಎಡಗಾಲು ಊರಿ ಕೆಳಗೆ ಬಾಗಿ ನೋಡಿದ್ದಾನೆ – ಆ ನೇಸರನಡಿಯಲ್ಲಿ ಕಣ್ಣಿಗೆ ರಾಚುವಂತೆ ಅಗಲಗಲ ಜಗದಗಲ ಲಿಪಿಯಲ್ಲಿ, ಸ್ಪಸ್ಟವಾಗಿ, ನಿಷ್ಕಳಂಕವಾದ, ಯಾವದೇ ಸಂದೇಹಕ್ಕನಿತೂ ಆಸ್ಪದವಿಲ್ಲದಂತೆ ಒಡಮೂಡಿದ ಅಕ್ಷರಗಳಿವು – ‘ಕೃತ್ರಿಮ’.
ನಾವು ಕೊನೆಮೊದಲಿಲ್ಲದಂತೆ ಕಾಣುವ ವರ್ತುಲ ಬೆಟ್ಟದ ಕೊಟ್ಟ ಕೊನೆಯನ್ನು ಅರಿಸುತ್ತ ಕೃತಕ ಕಲ್ಲಿನ ಮೇಲೆ ಕಾಲು ಚಾಚಿ ಆಯಾಸದಿಂದ ಕುಳಿತ್ತಿದ್ದೇವೇನೋ ಅನಿಸುತ್ತದೆ ನನಗೆ. ಪಾವಕ ಕಾಣುವದಕ್ಕಾಗಿ ಶಿಲೆಯ ಹುಡುಕಾಟ, ಕವಿತೆ ಬರೆಯುವದಕ್ಕಾಗಿ ಅನುಭವದ ತಿರುಗಾಟ, ಫೆಸಬುಕ್ಕನ ಗೋಡೆಯ ಮೇಲೆ ಸದ್ಯದ ಪ್ರಾಮುಖ್ಯ ಸಮಾಚಾರ ಅವ್ಯತನಗೊಳಿಸಲು ನೆನೆಪುಗಳ ಪುನರ್ಪರಿಶೀಲನೆ. ಇದೀಗ ತೋರಿಸಬೇಕೆಂದೆ ನಿರ್ಮಿಸುತ್ತಿರುವ ಬ್ರೆಕಿಂಗ ವಾರ್ತೆಯ ತುಂಡುಗಳು. ಸರೀಕರನ್ನು ದಂಗು ಬಡಿಸಲೆಂದೇ ಪ್ರಕಟಿಸುವ ಆವಿಷ್ಕಾರಗಳು, ತಮ್ಮ ಹೊಳಹುಗಳನ್ನು ಬೆಳಗಿಸಲೆಂದೆ ಮಾಡುತ್ತಿರುವ ವೈಜ್ನಾನಿಕ ಸಂಶೋಧನೆ,ಅನ್ವೇಷಣ,  ಗವೇಷಣಗಳು. ಎಲ್ಲರೂ ರೂಪದರ್ಶಿಗಳೆ, ಕಲಾವಿದರೆ, ಸದಾ ಅನುಕರಣೀಯರೆ. ಅಮೂರ್ತವದದ್ದನ್ನು, ಹೇಳಲಾಗದ್ದನ್ನು, ಹೇಳಬಾರದನ್ನು ತಿಳಿ ಹೇಳುವ ಕೈಪಿಡಿಗಳ ರಾಶಿ ರಾಶಿ ಗುಚ್ಚಗಳು. ಎಲ್ಲರಿಗೂ, ಎಲ್ಲವನ್ನೂ ಹಿಡಿದಿಡುವ ಆದಮ್ಯ ಬಯಕೆ. ಅದನ್ನು ಎಲ್ಲರೆದುರಿಗೆ ಬಿಚ್ಚಿಡಬೇಕೆಂಬ ಚಟ, ತನಗೆ ಕಾಣದ್ದು, ತಾ ನೋಡದ್ದು ಅಸತ್ಯವೆಂಬ ಅಖಂಡ ನಂಬುಗೆ ಇದರ ಬುನಾದಿ. ಸಾಮೂಹಿಕ ತಳಮನಸ್ಸಿನಲ್ಲಡಗಿರುವ ಭೀತಿಗೆ ಭಿತ್ತಿಯನ್ನು ಎತ್ತಿ ಕೊಟ್ಟಂತೆ, ಗರಬಡಿದು ತಿನ್ನುವ ಆಳದ ಪಾಪಪ್ರಜ್ಞೆ – ಸ್ವಕೇಂದ್ರಿತ ಅಹಂಕಾರ – ಅದೇ  ಸೃಜನಶೀಲತೆ ಎಂಬ ಅಹಂ. ಇದರ ಆಯಾಮಗಳು ಅನೇಕ, ಪರಿಣಾಮಗಳು ಘನಘೋರ  – ಯಾವದನ್ನೋ ಉಳಿಸಿಕೊಳ್ಳಲು ಹೋಗಿ ಮುಖ್ಯವಾದದ್ದನ್ನೆ ಮರೆತುಬಿಡುವ ಪ್ರವೃತ್ತಿ.
ಆಳ ಅರಿಯುವದಕ್ಕಾಗಿಯೇ ಎಸೆಯುತ್ತಿರುವ ಕಲ್ಲೆಂದ ಮೇಲೆ ತಪ್ಪೆಂದು ಹೇಳುವವ ಮೂರ್ಖ ಶಿಖಾಮಣಿ. ಮೂರು ಲೋಕ ಕಂಡವನ ಭುಜಬಲದ ಪರಾಕ್ರಮ ನೀನಗೇನು ತಿಳಿದಿದೆಯೋ ಎಂಬ ಠೇಂಕಾರ. ಅಬ್ಬರಿಸಿ ಬೊಬ್ಬಿಡುತ್ತಿರುವ ಮಾಧ್ಯಮ, ಮಧ್ಯಮ ಪಾಂಡವನ ಅಪರಾವತಾರವೆ. ಮದುವೆ ಎನ್ನುವದು ಗಂಡು ಹೆಣ್ಣಿನ ನಡುವಿನದೊಂದು ಸಾಂಸ್ಕೃತಿಕ ಆಯಾಮವೆಂದಾದರೆ ಈ LGBT (ಎಲ್ಜಿಬಿಟಿ) ಎಂಬುವದು ತೋರ್ಪಡಿಕೆಯ ಇನ್ನೊಂದು ಮಗ್ಗುಲೇನೋ? ಇವರಿಗಿರುವ ಸಧ್ಯದ ಒಂದೆ ಒಂದು ಎಲ್ಜಿಬಿಲಿಟಿ ಎಂದರೆ ಸಂತಾನೋತ್ಪತ್ತಿ ಮಾಡಲಾಗದ್ದೋ ಏನೋ? ಜನಸಂಖ್ಯೆ ನಿಯಂತ್ರಿಸಲು ಪ್ರಕೃತಿ ಹೇರುತ್ತಿರುವ ನಿರ್ಬಂಧವೇನೋ ಇದು. ಪ್ರಾಯಶ ಅದೇ ಸಧ್ಯದ ಸುದೈವವೋ?

Monday, January 6, 2014

ಸೀತಾ-ಬರೆದೆ ನೀನು ನಿನ್ನ ಹೆಸರ

 ಸೀತಾ

ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೊ ಏನೊ
ನನ್ನ ಮನದ ಗುಡಿಯಲಿ||
ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ
ಬೆರೆತು ಹೂದೆ ಮರೆತು ನಿಂತೆ
ಅದರ ಮಧುರ ಸ್ವರದಲಿ||
ಕಂಗಳಲ್ಲಿ ಕವನ ಬರೆದು
ಕಳಿಸಿದೆ ನೀ ಇಲ್ಲಿಗೆ
ಅಂಗಳದೆ ಅರಳಿತಾಗ
ನನ್ನ ಒಲವ ಮಲ್ಲಿಗೆ||
ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೆ
ಬಂಧಿಸಿದೆ ನನ್ನನಿಂದು
ನಿನ್ನ
ಪ್ರೇಮ ಪಾಶದೆ||

ಬರೆದೆ ನೀನು ನಿನ್ನ ಹೆಸರ 

ಕಸ್ತೂರಿ ನಿವಾಸ - ನೀ ಬಂದು ನಿಂತಾಗ ನಿಂತು ನೀ ನಕ್ಕಾಗ

ಕಸ್ತೂರಿ ನಿವಾಸ

ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ

ವಾಸಂತಿ ನಲಿದಾಗ
ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋಕಾಗ ಮನವೆರಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೆ ಅನುರಾಗ... ಬಾರಾ

ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ

ಜೇನಂಥ ಮಾತಲ್ಲಿ
ಜೇನಂಥ ಮಾತಲ್ಲಿ ಕುಡಿಗಣ್ಣ ಸಂಚಲ್ಲಿ
ನಗುವೆಂಬ ಹೂಚಲ್ಲಿ ನಿಂತೆ ನೀ ಮನದಲ್ಲಿ
ಯೆದುರಾದೆ ಹಗಲಲ್ಲಿ ಮರೆಯಾದೆ ಇರುಳಲ್ಲಿ
ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ
ಬಲು ದೂರ ನೀ ಹೋಗೆ ನಾ ತಾಳೆ ಈ ಬೇಗೆ
ಬಾ ಬಾರೆ ಚೆಲುವೆ ಬಾರೆ ಒಲವೆ ...ಬಾರಾ

ಬಾಳೆಂಬ ಪಥದಲ್ಲಿ
ಬಾಳೆಂಬ ಪಥದಲ್ಲಿ ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ ನನಸೆಲ್ಲ ಸೊಗಸಾಗಿ
ಯುಗವೊಂದು ದಿನವಾಗಿ ದಿನವೊಂದು ಚಣವಾಗಿ
ನಮ್ಮಾಸೆ ಹೂವಾಗಿ ಇಂಪಾದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
ಎಂದೆಂದು ಜೊತೆಯಾಗಿ ನಡೆವಾ ಒಂದಾಗಿ ಬಾರಾ

ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ


ನೀ ಬಂದು ನಿಂತಾಗ ನಿಂತು ನೀ ನಕ್ಕಾಗ